ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೇಂದ್ರದ ಹಸ್ತಕ್ಷೇಪ; ಒಕ್ಕೂಟ ವ್ಯವಸ್ಥೆಗೆ ಬಲ ತುಂಬಿದ ‘ಸುಪ್ರೀಂ’ ತೀರ್ಪು

Published 12 ಮೇ 2023, 19:32 IST
Last Updated 12 ಮೇ 2023, 19:32 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ಎರಡು ಸಂವಿಧಾನ ಪೀಠಗಳು ನೀಡಿರುವ ಎರಡು ತೀರ್ಪುಗಳು ದೇಶದ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ್ದಾಗಿವೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ ಆಘಾಡಿ ನೇತೃತ್ವದ ಸರ್ಕಾರದ ಪತನ ಮತ್ತು ಶಿವಸೇನಾದ ಇಬ್ಭಾಗಕ್ಕೆ ಸಂಬಂಧಿಸಿ ನೀಡಲಾದ ತೀರ್ಪು, ಆಗ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರಿಗೆ ಸಿಕ್ಕ ನೈತಿಕ ಜಯ.

ಉದ್ಧವ್ ನೇತೃತ್ವದ ಸರ್ಕಾರ ಪತನವಾಗಿ ಏಕನಾಥ ಶಿಂದೆ ನೇತೃತ್ವದ ಸರ್ಕಾರ ರಚನೆಯಾಗುವ ಪ್ರಕ್ರಿಯೆಯಲ್ಲಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಮತ್ತು ಸ್ಪೀಕರ್‌ ರಾಹುಲ್ ನಾರ್ವೇಕರ್‌ ಅವರು ನಡೆದುಕೊಂಡ ರೀತಿಯು ಲೋಪದಿಂದ ಕೂಡಿತ್ತು ಎಂದು ನ್ಯಾಯಪೀಠವು ಸ್ಪಷ್ಟವಾಗಿ ಮತ್ತು ದೃಢವಾಗಿ ಹೇಳಿದೆ.

ರಾಜಕೀಯ ಪಕ್ಷವೊಂದರ ಆಂತರಿಕ ವಿಚಾರಗಳು, ರಾಜಕೀಯ ಪಕ್ಷಗಳ ನಡುವಣ ತಿಕ್ಕಾಟಗಳಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತಿಲ್ಲ, ಇದಕ್ಕೆ ಸಂಬಂಧಿಸಿ ಸಾಂವಿಧಾನಿಕ ಅವಕಾಶ ಅಥವಾ ಕಾನೂನು ಇಲ್ಲ, ಹಾಗಾಗಿ, ರಾಜ್ಯಪಾಲರ ನಡವಳಿಕೆ ಅಸಾಂವಿಧಾನಿಕ ಎಂದು ನ್ಯಾಯಾಲಯ ಹೇಳಿದಂತಾಗಿದೆ. ಹಾಗಿದ್ದರೂ ಶಿಂದೆ ನೇತೃತ್ವದ ಶಿವಸೇನಾ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರವು ಮುಂದುವರಿಯಬಹುದು ಎಂದೂ ಹೇಳಿದೆ. ಈ ತೀರ್ಪಿನಿಂದಾಗಿ ಮಹಾರಾಷ್ಟ್ರದ ಈಗಿನ ಸರ್ಕಾರದ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ, ತೀರ್ಪಿನಲ್ಲಿ ಹೇಳಿದ ಅಂಶಗಳು, ಮುಂದೆ ಇಂತಹ ಸನ್ನಿವೇಶ ಸೃಷ್ಟಿಯಾದಾಗ ರಾಜ್ಯಪಾಲರು ಮತ್ತು ಸ್ಪೀಕರ್‌ ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ಮಾರ್ಗಸೂಚಿಗಳಾಗಿವೆ. 

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತದ ನಿಜವಾದ ಅಧಿಕಾರವು ಚುನಾಯಿತ ಸರ್ಕಾರದ ಕೈಯಲ್ಲಿಯೇ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಶಾಸನ ರೂಪಿಸುವ ಅಧಿಕಾರ ಇರುವ ವಿಚಾರಗಳಲ್ಲಿ ಕೇಂದ್ರದ ಕಾರ್ಯಕಾರಿ ಅಧಿಕಾರವು ಸೀಮಿತವಾಗಿರಬೇಕು. ಇಲ್ಲದೇಹೋದರೆ ರಾಜ್ಯಗಳ ಅಧಿಕಾರವೂ ಕೇಂದ್ರದ ಕೈಸೇರಿಬಿಡುವ ಅಪಾಯ ಇದೆ. ಹೀಗಾದರೆ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಾತಿನಿಧಿಕ ಪ್ರಜಾತಂತ್ರವು ಕಳೆದುಹೋಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ಸೃಷ್ಟಿಯಾಗಿದ್ದ ವಿವಾದದ ವಿಚಾರಣೆ ನಡೆಸಿದ ಸಂವಿಧಾನ ಪೀಠವು ಹೀಗೆ ಹೇಳಿದೆ.

ಆಡಳಿತದ ಅಧಿಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ಗೆ ಇರುವ ಅಧಿಕಾರದ ಕುರಿತಂತೆ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರವಾಗಿ ಸಂಘರ್ಷ ನಡೆದುಬಂದಿದೆ. ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪು ಈ ಕಿತ್ತಾಟಕ್ಕೆ ಕೊನೆ ಹಾಡಬಲ್ಲದು. ದೆಹಲಿಯು ರಾಷ್ಟ್ರದ ರಾಜಧಾನಿ ಆಗಿರುವುದರಿಂದ ಅಧಿಕಾರಿಗಳನ್ನು ವರ್ಗಾಯಿಸುವ ಅಧಿಕಾರವು ತನ್ನಲ್ಲಿಯೇ ಇರಬೇಕು ಎಂದು ಕೇಂದ್ರ ಸರ್ಕಾರವು ವಾದಿಸಿತ್ತು. ಆದರೆ, ಈ ವಾದವನ್ನು ನ್ಯಾಯಾಲಯವು ಒಪ್ಪಿಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಕ್ಕೆ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ಇಲ್ಲದೇಹೋದರೆ, ಉತ್ತರದಾಯಿತ್ವದ ತತ್ವವೇ ಅರ್ಥಹೀನವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಅಧಿಕಾರವೆಲ್ಲವೂ ಕೇಂದ್ರ ಸರ್ಕಾರದ ಬಳಿಯೇ ಕೇಂದ್ರೀಕೃತವಾಗಬೇಕು ಎಂಬ ವಾದವೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕ.

ಸುಪ್ರೀಂ ಕೋರ್ಟ್‌ ನೀಡಿರುವ ಎರಡೂ ತೀರ್ಪುಗಳು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್‌ ಗವರ್ನರ್‌ಗಳಿಗೆ ಸಂಬಂಧಿಸಿದ್ದಾಗಿವೆ. ರಾಜ್ಯಗಳಲ್ಲಿ ಕೇಂದ್ರದ ಪ್ರತಿನಿಧಿಯಾಗಿರುವ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್‌ ಗವರ್ನರ್‌ಗಳು ಕೇಂದ್ರದ ಆಡಳಿತಾರೂಢ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಾರೆ ಎಂಬ ಆರೋಪ ಇತ್ತೀಚಿನ ದಿನಗಳಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಅಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಹೆಚ್ಚಿನ ಮಹತ್ವ ಇದೆ. ರಾಜ್ಯಗಳ ಆಡಳಿತದಲ್ಲಿ ಹಸ್ತಕ್ಷೇಪವಾಗುತ್ತಿದೆ ಎಂಬ ಆರೋಪದ ಕುರಿತು ಆಡಳಿತಾರೂಢ ಪಕ್ಷದ ನಾಯಕರು ಮತ್ತು ರಾಜ್ಯಪಾಲರಾಗಿ ಕೆಲಸ ಮಾಡುತ್ತಿರುವವರು ಕೂಡ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ.

ರಾಜ್ಯಪಾಲರ ಮೂಲಕವಾಗಲಿ ಕಾನೂನು ರಚನೆಯ ಮೂಲಕವಾಗಲಿ ಅಥವಾ ಇನ್ನಾವುದೇ ರೀತಿಯಲ್ಲಿ ಆಗಲಿ ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಕೇಂದ್ರ ನಡೆಸುವ ಪ್ರಯತ್ನವು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೆ ಕೊಡಲಿ ಪೆಟ್ಟು ಕೊಡುತ್ತದೆ. ಹಾಗೆಯೇ ಚುನಾಯಿತ ಸರ್ಕಾರವೊಂದರ ಅಧಿಕಾರವನ್ನು ಮೊಟಕು ಮಾಡುವ ಯತ್ನ ಕೂಡ ಪ್ರಜಾ‍ಪ್ರಭುತ್ವ ವ್ಯವಸ್ಥೆಯಲ್ಲಿ ತರವಲ್ಲ. ದೆಹಲಿ ಸರ್ಕಾರಕ್ಕೆ ಸಂವಿಧಾನದತ್ತವಾಗಿ ದಕ್ಕಿರುವ ಅಧಿಕಾರವನ್ನು ಚಲಾಯಿಸಲು ಕೇಂದ್ರವಾಗಲಿ ಲೆಫ್ಟಿನೆಂಟ್‌ ಗವರ್ನರ್‌ ಆಗಲಿ ಅಡ್ಡಿಯಾಗಬಾರದು. ರಾಜ್ಯಪಾಲರನ್ನು ಬಳಸಿಕೊಂಡು ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸುವ ಪರಿಪಾಟವು ಸರಿಯಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಸಂದೇಹಕ್ಕೆ ಎಡೆ ಇಲ್ಲದಂತೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT