ಶುಕ್ರವಾರ, ಆಗಸ್ಟ್ 23, 2019
25 °C

‘ಚಂದ್ರಯಾನ–2’ ಯಶಸ್ವಿ ಉಡಾವಣೆ; ಭಾರತದ ಹಿರಿಮೆ ಹೆಚ್ಚಿಸಿದ ‘ಇಸ್ರೊ’

Published:
Updated:
Prajavani

ಹನ್ನೊಂದು ವರ್ಷಗಳ ಹಿಂದೆ ಉಡಾವಣೆಯಾದ ‘ಚಂದ್ರಯಾನ–1’, ಚಂದ್ರನಿಂದ ಹಲವು ಮಹತ್ವದ ಮಾಹಿತಿಗಳನ್ನು ರವಾನಿಸಿತ್ತು. ಇದೀಗ ಸೋಮವಾರ ಮಧ್ಯಾಹ್ನ ಶಕ್ತಿಶಾಲಿ ರಾಕೆಟ್‌ ಜಿಎಸ್‌ಎಲ್‌ವಿ ಮಾರ್ಕ್ 3– ಎಂ1 ಮೂಲಕ  ‘ಚಂದ್ರಯಾನ–2’ರ ಉಡಾವಣೆ ಯಶಸ್ವಿಯಾಗಿರುವುದು ‘ಇಸ್ರೊ’ಗೆ ಮತ್ತೊಂದು ಗರಿ. ಈ ಉಡಾವಣೆ ಈ ತಿಂಗಳ 15ರಂದೇ ನಡೆಯಬೇಕಿತ್ತು. ಆದರೆ, ಉಡಾವಣೆಗೆ ಬರೀ 56 ನಿಮಿಷಗಳ ಮುನ್ನ ಇಂಧನ ಸೋರಿಕೆ ಪತ್ತೆಯಾದ ಕಾರಣ ಉಡಾವಣೆಯನ್ನು ಮುಂದಕ್ಕೆ ಹಾಕಲಾಗಿತ್ತು. ಬಳಿಕ ಒಂದೇ ವಾರದಲ್ಲಿ ನ್ಯೂನತೆ ಸರಿಪಡಿಸಿ, ಯಾವುದೇ ಗೊಂದಲ ಇಲ್ಲದೆ ಕರಾರುವಾಕ್ಕಾಗಿ ಉಡಾವಣೆ ಮಾಡಿರುವುದು ಇಸ್ರೊ ವಿಜ್ಞಾನಿಗಳ ದಕ್ಷತೆಗೆ ಹಿಡಿದ ಕನ್ನಡಿ. ‘ಇಂದಿನ ಉಡಾವಣೆಯು ಚಂದ್ರನ ಅನ್ವೇಷಣೆ ಕಾರ್ಯಕ್ರಮದಲ್ಲಿ ಭಾರತವು ಬರೆದ ಹೊಸ ಭಾಷ್ಯ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಬಣ್ಣಿಸಿದ್ದಾರೆ. ಚಂದ್ರಯಾನ–2ರ ಪ್ರಮುಖ ಘಟಕವಾದ ವಿಕ್ರಂ ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಸುವ ಮುನ್ನ ಹದಿನೈದು ಕ್ಲಿಷ್ಟಕರ ಕಾರ್ಯಾಚರಣೆಗಳನ್ನು ಮಾಡಬೇಕಾಗುತ್ತದೆ. ಇದು, ಅತಿ ನಾಜೂಕಿನ ವಿಚಾರ’ ಎಂದಿದ್ದಾರೆ ಅವರು. ‘ಇದುವರೆಗೆ ಯಾವುದೇ ಅನ್ವೇಷಣೆ ನಡೆಯದ ದಕ್ಷಿಣ ಧ್ರುವದಲ್ಲಿ ಚಂದ್ರನ ಬಗ್ಗೆ ಹೊಸ ಮಾಹಿತಿ ದೊರಕಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. 3,850 ಕೆ.ಜಿ. ತೂಕದ ಚಂದ್ರಯಾನ–2 ಅನ್ನು ಕೇವಲ 16 ನಿಮಿಷಗಳಲ್ಲಿ ಭೂಕಕ್ಷೆಗೆ ಸೇರಿಸಲಾಗಿದೆ. ಇದು, ಕೆಲವು ದಿನ ಭೂಕಕ್ಷೆಯನ್ನು ಸುತ್ತುತ್ತಾ ನಂತರ ಚಂದ್ರನ ಕಕ್ಷೆಗೆ ಸೇರಲಿದೆ. ಈಗಿನ ಮಾಹಿತಿ ಪ್ರಕಾರ, ಸೆಪ್ಟೆಂಬರ್‌ 7ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಇಳಿಯಲಿದೆ. ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದೇ ಖ್ಯಾತರಾದ ಡಾ. ವಿಕ್ರಂ ಸಾರಾಭಾಯ್‌ ಅವರ ಹೆಸರನ್ನು ಲ್ಯಾಂಡರ್‌ ನೌಕೆಗೆ ಇಡಲಾಗಿದೆ. ಇದು ಇಳಿದ ನಂತರ ಒಳಗಿರುವ ಆರು ಚಕ್ರಗಳ 27 ಕೆ.ಜಿ. ತೂಕದ ‘ಪ್ರಜ್ಞಾನ್‌ ರೋವರ್‌’, ಚಂದ್ರನ ಮೇಲೆ ತಿರುಗಾಡಿ ಮಾಹಿತಿ ಸಂಗ್ರಹಿಸಿ, ಅದನ್ನು ವಿಕ್ರಂಗೆ ರವಾನಿಸಲಿದೆ. ಮಾಹಿತಿಯು ಇಸ್ರೊಗೆ ತಲುಪಿದ ಬಳಿಕವೇ ಈ ಯೋಜನೆಯನ್ನು ಸಂಪೂರ್ಣ ಯಶಸ್ವಿ ಎಂದು ಹೇಳಬಹುದು. ಸೋಮವಾರದ ಉಡಾವಣೆಯು ಯಶಸ್ಸಿನ ಮೊದಲ ಹಂತ.

ಹೆಚ್ಚು ಭಾರವಿರುವ ಉಪಕರಣಗಳನ್ನು ಭೂಮಿಯ ಕಕ್ಷೆಯ ಆಚೆಗೆ ಒ‌ಯ್ಯುವ ಸಾಮರ್ಥ್ಯ ಇರುವ ಜಿಎಸ್‌ಎಲ್‌ವಿ ಮಾರ್ಕ್–3 ರಾಕೆಟ್‌ನಲ್ಲಿ ಕ್ರಯೋಜನಿಕ್‌ ಎಂಜಿನ್‌ ಬಳಸಲಾಗಿದೆ. ಈ ತಂತ್ರಜ್ಞಾನ ವರ್ಗಾವಣೆಯನ್ನು ಅಮೆರಿಕ ಮತ್ತು ರಷ್ಯಾ ಒಂದು ಕಾಲದಲ್ಲಿ ನಿರಾಕರಿಸಿದ್ದವು. ಇದನ್ನು ಸವಾಲಾಗಿ ಪರಿಗಣಿಸಿ, ಇಸ್ರೊ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಚಂದ್ರಯಾನದಲ್ಲಿ ಪ್ರಯೋಜನಕ್ಕೆ ಬಂದಿದೆ. ಇದೇ ತಂತ್ರಜ್ಞಾನ ಮುಂಬರುವ ಮಂಗಳಯಾನದಲ್ಲೂ ಬಳಕೆಯಾಗಲಿದೆ. ಚಂದ್ರಯಾನ–2 ಯೋಜನೆಯಲ್ಲಿ ಶೇ 30ರಷ್ಟು ಮಹಿಳಾ ವಿಜ್ಞಾನಿಗಳಿದ್ದಾರೆ ಮತ್ತು ಯೋಜನೆಯ ಮುಂದಾಳತ್ವವನ್ನು ಮಹಿಳೆಯರೇ ವಹಿಸಿದ್ದರು ಎಂಬುದು ವಿಶೇಷ. ಚಂದ್ರನಲ್ಲಿ ನೀರಿನ ಕಣಗಳಿವೆ ಎನ್ನುವ ಮಹತ್ವದ ಅಂಶವನ್ನು ಚಂದ್ರಯಾನ–1ರ ಮೂಲಕ ದಾಖಲಿಸಲಾಗಿತ್ತು. ಜೊತೆಗೆ ಟೈಟಾನಿಯಂ. ಕ್ಯಾಲ್ಸಿಯಂ, ಮೆಗ್ನೀಷಿಯಂ, ಅಲ್ಯುಮಿನಿಯಂ ಮತ್ತು ಕಬ್ಬಿಣದ ಅಂಶಗಳಿವೆ ಎನ್ನುವುದೂ ಪತ್ತೆಯಾಗಿತ್ತು. ಚಂದ್ರನಲ್ಲಿ ನೀರಿನ ಕಣಗಳಿವೆ ಎಂಬ ವಿಚಾರವು ಮುಂದುವರಿದ ರಾಷ್ಟ್ರಗಳು ನಡೆಸಿದ ಅನ್ವೇಷಣೆಗಳಿಗೆ ನಿಲುಕಿರಲಿಲ್ಲ. ಇದುವರೆಗೂ ಯಾವುದೇ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅನ್ವೇಷಣೆ ನಡೆಸದ ದಕ್ಷಿಣ ಧ್ರುವವನ್ನು ಇಸ್ರೊ ಈಗ ಆಯ್ಕೆ ಮಾಡಿಕೊಂಡಿದೆ. ಈ ಭಾಗ ಸದಾ ನೆರಳಿನಿಂದ ಆವರಿಸಿದ್ದು, ನೀರಿನ ಪಸೆ ಇರುವ ಸಾಧ್ಯತೆ ಹೆಚ್ಚು. ಚಂದ್ರಯಾನ–1ರ ರೀತಿಯಲ್ಲೇ ಈ ಸಲವೂ ಹಲವು ಹೊಸ ಅಂಶಗಳು ಚಂದ್ರನಿಂದ ಪತ್ತೆಯಾಗುವ ಸಾಧ್ಯತೆ ಇದೆ ಎಂಬುದು ಇಸ್ರೊ ನಿರೀಕ್ಷೆ. ಚಂದ್ರಯಾನ–2ರ ಭಾಗವಾಗಿ ಯುರೋಪ್‌ನ ಮೂರು, ಅಮೆರಿಕದ ಎರಡು ಹಾಗೂ ಬಲ್ಗೇರಿಯಾದ ಒಂದು... ಹೀಗೆ 13 ಉಪಕರಣಗಳನ್ನು ಕಳುಹಿಸಲಾಗಿದೆ. ‘ನಾಸಾ’ ಕಳುಹಿಸಿರುವ ಉಪಕರಣವು ಭೂಮಿ ಮತ್ತು ಚಂದ್ರನ ನಡುವಿನ ಚಲನಾತ್ಮಕ ಸಂಬಂಧದ ಬಗ್ಗೆ ವಿಶ್ಲೇಷಣೆ ನಡೆಸಲಿದೆ. ಚಂದ್ರಯಾನ–2 ಯೋಜನೆಯನ್ನು ಬರೀ
₹ 978 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುತ್ತಿರುವ ಇಸ್ರೊ ಸಾಧನೆ ಶ್ಲಾಘನೀಯ.

Post Comments (+)