ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹಣದುಬ್ಬರ ನಿಯಂತ್ರಣ: ಅಗ್ಗದ ಕಚ್ಚಾ ತೈಲದ ನೆರವು ಪಡೆಯಿರಿ

Last Updated 6 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಡಿಸೆಂಬರ್‌ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವು ಯಾವ ಮಟ್ಟದಲ್ಲಿ ಇತ್ತು ಎಂಬುದರ ಅಂಕಿ–ಅಂಶವನ್ನು ಫೆಬ್ರುವರಿ ಅಂತ್ಯದಲ್ಲಿ ಬಿಡುಗಡೆ ಮಾಡಿದೆ. 2022ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವು ಶೇಕಡ 4.4ರಷ್ಟು ಮಾತ್ರ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 13.19ರಷ್ಟು ಇತ್ತು. ಎರಡನೆಯ ತ್ರೈಮಾಸಿಕದಲ್ಲಿ ಅದು ಶೇ 6.28ಕ್ಕೆ ಇಳಿಕೆ ಕಂಡಿತು. ಈಗ ಮೂರನೆಯ ತ್ರೈಮಾಸಿಕದಲ್ಲಿ ಶೇ 4.4ಕ್ಕೆ ಬಂದಿದೆ. ಜಿಡಿಪಿ ಬೆಳವಣಿಗೆ ಪ್ರಮಾಣವು ಕುಸಿತ ಕಂಡಿರುವುದಕ್ಕೆ ಕೆಲವು ಕಾರಣಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ.

ಮಿತಿಯನ್ನು ಮೀರಿ ನಿಂತಿರುವ ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2022ರ ಮೇ ತಿಂಗಳಿನಿಂದ ರೆಪೊ ದರವನ್ನು ಹೆಚ್ಚಿಸುತ್ತ ಬಂದಿದೆ. ಇದರ ನೇರ ಪರಿಣಾಮವಾಗಿ ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಾಗಿದೆ. ದುಬಾರಿ ಬಡ್ಡಿ ದರವು ಸಾಲದ ಕಂತುಗಳ ಮೊತ್ತವನ್ನು ಹೆಚ್ಚಿಸಿದ್ದು, ಖರ್ಚಿಗೆ ಇರಿಸಿಕೊಳ್ಳಬಹುದಾಗಿದ್ದ ಹಣದ ಮೊತ್ತವನ್ನು ತಗ್ಗಿಸಿದೆ. ಇದು ಮಾರುಕಟ್ಟೆಯಲ್ಲಿ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿಯೂ ಆರ್ಥಿಕ ಬೆಳವಣಿಗೆಯ ಪ್ರಮಾಣವು ಇಳಿಕೆ ಕಂಡಿರುವಂತಿದೆ. ತಯಾರಿಕಾ ವಲಯದ ಉತ್ಪಾದನೆಯು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ (–)1.1ಕ್ಕೆ ಕುಸಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವಲಯದಲ್ಲಿ ಶೇ 1.3ರಷ್ಟು ಏರಿಕೆ ದಾಖಲಾಗಿತ್ತು. ಒಟ್ಟು ಜಿಡಿಪಿ ಬೆಳವಣಿಗೆ ದರವು ಇಳಿಕೆ ಕಂಡಿರುವುದಕ್ಕೆ ತಯಾರಿಕಾ ವಲಯದಲ್ಲಿನ ಕುಸಿತವೂ ಒಂದು ಕಾರಣ ಎಂದು ತಜ್ಞರು ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರವನ್ನು ಆರ್‌ಬಿಐ ಸತತವಾಗಿ ಹೆಚ್ಚಿಸುತ್ತ ಬಂದಿದ್ದರೂ, ಹಣದುಬ್ಬರ ಪ್ರಮಾಣವು ಜನವರಿ ತಿಂಗಳಿನಲ್ಲಿ ಮತ್ತೆ ಶೇ 6ರ ಗಡಿಯನ್ನು ದಾಟಿ ಬೆಳೆದಿದೆ. ಅದಕ್ಕೂ ಹಿಂದಿನ ಎರಡು ತಿಂಗಳುಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಕಡಿಮೆ ಆಗಿತ್ತು. ಹಣದುಬ್ಬರ ಪ್ರಮಾಣವು ನಿಯಂತ್ರಣಕ್ಕೆ ಬರುತ್ತಿರಬಹುದು ಎಂದು ಅನಿಸುತ್ತಿರುವಾಗಲೇ, ಅದು ಮತ್ತೆ ಮಿತಿಯನ್ನು ಮೀರಿ ನಿಂತಿರುವುದು ನೀತಿ ನಿರೂಪಕರ ತಲೆಬಿಸಿಯನ್ನು ಇನ್ನಷ್ಟು ಹೆಚ್ಚಿಸಿರಬಹುದು.

ಬಡ್ಡಿ ದರ ಹೆಚ್ಚಳ ಮಾಡುವುದರಿಂದ, ಹಣಕಾಸು ವ್ಯವಸ್ಥೆಯಲ್ಲಿ ಹಣದ ಚಲಾವಣೆ ಕಡಿಮೆ ಆಗಬೇಕು. ಆ ಮೂಲಕ ಬೇಡಿಕೆ ತುಸು ತಗ್ಗಿ, ಹಣದುಬ್ಬರ ಏರಿಕೆಯು ನಿಯಂತ್ರಣಕ್ಕೆ ಬರಬೇಕು ಎಂಬ ಉದ್ದೇಶ ಕೇಂದ್ರೀಯ ಬ್ಯಾಂಕ್‌ಗಳಿಗೆ ಇರುತ್ತದೆ. ಅಂದರೆ, ಹಣದುಬ್ಬರ ಏರಿಕೆಯನ್ನು ತಡೆಯುವ ಉದ್ದೇಶದ ಬಡ್ಡಿ ಏರಿಕೆಯ ಒಂದು ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳ ವೇಗ ತಗ್ಗುವುದು ನಿರೀಕ್ಷಿತವೇ. ಆದರೆ, ಈಗ ಆರ್ಥಿಕತೆಯ ವೇಗ ತಗ್ಗಿದೆ. ಆದರೆ ಹಣದುಬ್ಬರ ಪ್ರಮಾಣವು ಮತ್ತೆ ನಿಯಂತ್ರಣ ಮೀರಿದೆ. ಇದು ಹೆಚ್ಚು ಕಳವಳ ಮೂಡಿಸುವಂತಹ ವಿಚಾರ. ಅಂದರೆ, ಬಡ್ಡಿ ದರ ಏರಿಕೆಯು ನಿರೀಕ್ಷಿತ ಫಲವನ್ನು ನೀಡುತ್ತಿಲ್ಲವೇ? ಅಥವಾ, ಹಣದುಬ್ಬರ ನಿಯಂತ್ರಿಸಲು ಆರ್‌ಬಿಐಗೆ ಸಾಧ್ಯವಾಗುತ್ತಿಲ್ಲವೇ? ಅದಕ್ಕೆ ಸರ್ಕಾರದ ನೆರವಿನ ಅಗತ್ಯವಿದೆಯೇ? ಈ ಬಗ್ಗೆ ನೀತಿ ನಿರೂಪಕರು ಹೆಚ್ಚು ಗಮನ ನೀಡಬೇಕು.

ಕಡಿಮೆ ಬೆಳವಣಿಗೆ ದರ ಹಾಗೂ ಹೆಚ್ಚು ಹಣದುಬ್ಬರದ ಸ್ಥಿತಿಯು ಅಪಾಯಕಾರಿ. ಈ ಸ್ಥಿತಿ ಹೆಚ್ಚು ದಿನ ಮುಂದುವರಿಯಲು ಅವಕಾಶ ಕೊಡಲೇಬಾರದು. ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ಆರಂಭವಾದ ನಂತರದಲ್ಲಿ, ಭಾರತಕ್ಕೆ ರಷ್ಯಾದಿಂದ ಕಚ್ಚಾ ತೈಲವು ಬಹಳ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಇದರ ಬೆಲೆ ಎಷ್ಟು ಎಂಬುದನ್ನು ಕೇಂದ್ರ ಸರ್ಕಾರ ಅಥವಾ ತೈಲ ಮಾರಾಟ ಕಂಪನಿಗಳು ಸ್ಪಷ್ಟಪಡಿಸಿಲ್ಲ. ಬೇರೆ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಬೆಲೆ ಕೆಲವು ತಿಂಗಳುಗಳಿಂದ ಅಸ್ಥಿರವಾಗಿಲ್ಲ. ಅದೇನೇ ಇರಲಿ, ಕಡಿಮೆ ದರಕ್ಕೆ ಕಚ್ಚಾ ತೈಲಸಿಗುತ್ತಿರುವುದರ ಪ್ರಯೋಜನವನ್ನು ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈಗಲಾದರೂ ಜನರಿಗೆ ವರ್ಗಾವಣೆ ಮಾಡಬೇಕು. ಹಾಗೆ ಮಾಡಿದಾಗ, ಚಿಲ್ಲರೆ ಹಣದುಬ್ಬರ ದರವು ಗಣನೀಯವಾಗಿ ನಿಯಂತ್ರಣಕ್ಕೆ ಬರುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT