ಶುಕ್ರವಾರ, ನವೆಂಬರ್ 15, 2019
27 °C

ನಗರ ಪ್ರದಕ್ಷಿಣೆಯೇನೊ ಸರಿ ಕೆಲಸ ಆಗುವುದು ಯಾವಾಗ?

Published:
Updated:
Prajavani

ರಾಜಧಾನಿ ಬೆಂಗಳೂರಿನಲ್ಲಿ ಕಾಮಗಾರಿಗಳ ವಿಳಂಬದಿಂದಾಗಿ ನಾಗರಿಕರು ಅನುಭವಿಸುತ್ತಿರುವ ಚಿತ್ರಹಿಂಸೆ ಎಂತಹುದು ಎನ್ನುವುದು ಮುಖ್ಯಮಂತ್ರಿಯವರ ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಎದ್ದುಕಂಡಿದೆ. ಬಹುತೇಕ ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿಯುವುದೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ನಗರದ ಯಾವ ದಿಕ್ಕಿನಲ್ಲಿ ಹೊರಟರೂ ಕುಂಟುತ್ತಾ, ತೆವಳುತ್ತಾ ಸಾಗಿರುವ ಕಾಮಗಾರಿಗಳು ಸಾಲು ಸಾಲಾಗಿ ನಮ್ಮನ್ನು ಎದುರುಗೊಳ್ಳುತ್ತವೆ. ರಸ್ತೆ ವಿಸ್ತರಣೆ, ಮೇಲ್ಸೇತುವೆ, ಮೆಟ್ರೊ ಮಾರ್ಗ ನಿರ್ಮಾಣದಂತಹ ಯೋಜನೆಗಳ ಅನುಷ್ಠಾನಕ್ಕಾಗಿ ರಸ್ತೆ ಅಗೆಯುವುದು, ಅದರ ಪಕ್ಕದಲ್ಲೇ ನಿರ್ಮಾಣ ಸಾಮಗ್ರಿ ಗುಡ್ಡೆ ಹಾಕುವುದು, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೇ ರಾಶಿ ಸುರಿಯುವುದು... ಇಂತಹ ನಾನಾ ಕಾರಣಗಳಿಂದ ಹಲವೆಡೆ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಸ್ಥಳವೇ ಇಲ್ಲದಂತಾಗಿದೆ. ಸಂಚಾರ ದಟ್ಟಣೆಯಿಂದ ಮಾನವ ಸಂಪನ್ಮೂಲದ ಅಮೂಲ್ಯ ಸಮಯ ರಸ್ತೆಯಲ್ಲೇ ಅಪವ್ಯಯವಾಗುತ್ತದೆ. ದಟ್ಟಣೆ ಕಾರಣದಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ನಾಲ್ಕೂ ದಿಕ್ಕುಗಳಲ್ಲಿ ಸಾವಿರಾರು ವಾಹನಗಳು ಬಹುಹೊತ್ತು ನಿಂತಲ್ಲೇ ನಿಲ್ಲುವುದರಿಂದ, ಈ ವೃತ್ತವನ್ನು ಜಗತ್ತಿನ ಅತಿದೊಡ್ಡ ಪಾರ್ಕಿಂಗ್‌ ಪ್ರದೇಶ ಎಂದು ಕುಹಕದಿಂದ ಕರೆಯಲಾಗುತ್ತದೆ. ರಾಜಧಾನಿಯ ವಿವಿಧ ರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ ಎಷ್ಟೋ ಸಮಸ್ಯೆಗಳು ಸುಲಭವಾಗಿ ಬಗೆಹರಿದು, ಜನ ನಿಟ್ಟುಸಿರು ಬಿಟ್ಟು ಓಡಾಡುವಂತಾಗುತ್ತದೆ. ಆದರೆ, ಯೋಜನೆಗಳನ್ನು ರೂಪಿಸುವಲ್ಲಿ ಆತುರ– ಉತ್ಸಾಹ ತೋರುವ ಸರ್ಕಾರ, ಅನುಷ್ಠಾನದ ಹಂತದಲ್ಲಿ ಅಂತಹ ಇಚ್ಛಾಶಕ್ತಿ ಹಾಗೂ ಕರ್ತೃತ್ವ ಶಕ್ತಿಯನ್ನುಪ್ರದರ್ಶಿಸುವುದಿಲ್ಲ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು, ಉಪಮುಖ್ಯಮಂತ್ರಿಯಾಗಿದ್ದವರು ಇದೇ ರೀತಿ ನಗರ ಪ್ರದಕ್ಷಿಣೆ ನಡೆಸಿದ್ದರು. ಆಗಲೂ ‘ಕಾಲಮಿತಿಯೊಳಗೆ ಕಾಮಗಾರಿ ಪೂರೈಸದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಗುತ್ತಿಗೆದಾರರಿಗೆ ಖಡಕ್‌ ಎಚ್ಚರಿಕೆ ಹೋಗಿತ್ತು. ಅಲ್ಲಿಂದ ಇಲ್ಲಿಯತನಕ ಕಾಮಗಾರಿ ಪ್ರಕ್ರಿಯೆ ಹೆಚ್ಚಿನ ವೇಗವನ್ನೇನೂ ಪಡೆದುಕೊಂಡಿಲ್ಲ. ಖಡಕ್‌ ಎಚ್ಚರಿಕೆಯು ಯಾವುದೇ ಕಿಮ್ಮತ್ತನ್ನು ಉಳಿಸಿಕೊಂಡಿಲ್ಲ. ಅಧಿಕಾರಸ್ಥರು ಬಾಯಿ ಚಪಲಕ್ಕೆ ಗುಡುಗುವುದು, ಗುತ್ತಿಗೆದಾರರು ಕತ್ತು ಕೆಳಗೆ ಹಾಕಿ, ಒಳಗೊಳಗೆ ಒಂದು ಅರ್ಥವತ್ತಾದ ನಗೆ ಬೀರುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಈಗಿನ ಮುಖ್ಯಮಂತ್ರಿಯವರ ನಗರ ಪ್ರದಕ್ಷಿಣೆ ಕೂಡ ಹಿಂದಿನ ಪ್ರದಕ್ಷಿಣೆಗಳಂತೆ ಆಗಬಾರದು. ರಸ್ತೆ ವಿಸ್ತರಣೆಗೆ ಸಂಬಂಧಿಸಿದ ಬಹುಪಾಲು ಕಾಮಗಾರಿಗಳು ಸ್ಥಗಿತಗೊಂಡಿರುವುದು ಭೂಸ್ವಾಧೀನ ಪ್ರಕ್ರಿಯೆಯಲ್ಲಾದ ವಿಳಂಬದ ಕಾರಣಕ್ಕಾಗಿ. ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ಯೋಜನೆ ಕುರಿತು ನಿರ್ಧಾರ ಆಗಬೇಕಿರುವುದು ಸರ್ಕಾರದ ಮಟ್ಟದಲ್ಲಿ. ಟಿಡಿಆರ್‌ ಸಮಸ್ಯೆ ಇತ್ಯರ್ಥವಾಗದೆ ಭೂಸ್ವಾಧೀನ ಸಾಧ್ಯವಿಲ್ಲ. ಭೂಸ್ವಾಧೀನವಾಗದೆ ಕಾಮಗಾರಿಯನ್ನು ಪೂರ್ಣಗೊಳಿಸಲು ಆಗುವುದಿಲ್ಲ. ಇದು ವಾಸ್ತವ. ಕಾಮಗಾರಿಗೆ ಹಣ ಬಿಡುಗಡೆ ಆಗದಿರುವುದೂ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣ. ಮುಖ್ಯಮಂತ್ರಿಯವರು ಮುಂದಿನ ಸಲ ನಗರ ಪ್ರದಕ್ಷಿಣೆಗೆ ಹೊರಡುವ ಮುನ್ನ ನಗರದ ಯೋಜನೆಗಳ ಅನಷ್ಠಾನದಲ್ಲಿ ನೀತಿ ನಿರೂಪಣೆ ಹಂತದ ಅಡೆತಡೆಗಳನ್ನು ಮೊದಲು ನಿವಾರಣೆ ಮಾಡಬೇಕು. ಆ ಬಳಿಕ, ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡುವ, ಉಪಗುತ್ತಿಗೆ ನೀಡಿ ಮೈಮರೆಯುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಯೋಜನೆಗಳ ಮೇಲೆ ನಿಗಾ ಇಟ್ಟು, ಅದಕ್ಕೆ ಎದುರಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜೀರೊ ಟ್ರಾಫಿಕ್‌ ಸೌಲಭ್ಯದೊಂದಿಗೆ ನಡೆಯುವ ನಗರ ಪ್ರದಕ್ಷಿಣೆ, ಜನಸಾಮಾನ್ಯರ ಪಾಲಿಗೆ ಇನ್ನಷ್ಟು ಕಿರಿಕಿರಿ ನೀಡುವ ರೋಡ್‌ ಷೋ ಆಗುವುದೇ ಹೊರತು ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗದು.

ಪ್ರತಿಕ್ರಿಯಿಸಿ (+)