ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ಓಮಿಕ್ರಾನ್‌’ ತಳಿಯ ಕಳವಳ; ಪ್ರತಿಕ್ಷಣವೂ ಇರಲಿ ಪೂರ್ಣ ಎಚ್ಚರ

Last Updated 28 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಓಮಿಕ್ರಾನ್‌ ರೂಪಾಂತರ ತಳಿ ಹರಡುವಿಕೆಯ ತೀವ್ರತೆ ಮತ್ತು ಲಸಿಕೆಯ ರಕ್ಷಣೆ ಇಲ್ಲದಿರುವಿಕೆಯು ಜಗತ್ತಿನಲ್ಲಿ ಮತ್ತೊಂದು ಬಿಕ್ಕಟ್ಟಿಗೆ ಕಾರಣವಾಗಬಹುದು ಎಂಬ ಎಚ್ಚರ ಎಲ್ಲರಲ್ಲಿಯೂ ಇರಬೇಕು

ಕೋವಿಡ್‌–19 ಸಾಂಕ್ರಾಮಿಕದ ಬಗ್ಗೆ ಉದಾಸೀನ ಸಲ್ಲದು ಎಂಬುದು ಮತ್ತೆ ಮತ್ತೆ ನಿಚ್ಚಳವಾಗುತ್ತಿದೆ. ಕೋವಿಡ್‌ ನಿರೋಧಕ ಲಸಿಕೆ, ಕೋವಿಡ್‌ ಹರಡುವಿಕೆ ತಡೆ ಮಾರ್ಗಸೂಚಿ ಪಾಲನೆ ಮುಂತಾದ ಕ್ರಮಗಳ ಬಳಿಕವೂ ಸಾಂಕ್ರಾಮಿಕಕ್ಕೆ ಲಗಾಮು ಹಾಕುವುದು ಸಾಧ್ಯವಾಗುತ್ತಿಲ್ಲ. ಯುರೋಪ್‌ ಖಂಡವು ಸಾಂಕ್ರಾಮಿಕದ ಹೊಡೆತದಿಂದ ಮತ್ತೆ ತತ್ತರಿಸಿದೆ. ಅಮೆರಿಕದಲ್ಲಿ ಕೂಡ ಇತ್ತೀಚಿನ ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಮೆರಿಕ, ಯುರೋಪ್‌ನ ಆಸ್ಪತ್ರೆ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಅತೀವವಾದ ಒತ್ತಡ ಸೃಷ್ಟಿಯಾಗಿದೆ. ಈ ಮಧ್ಯೆ, ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನ, ಹಾಂಗ್‌ಕಾಂಗ್‌ ದೇಶಗಳಲ್ಲಿ ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ‘ಓಮಿಕ್ರಾನ್‌’ ಪತ್ತೆಯಾಗಿದೆ. ಬಳಿಕ, ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಈ ಓಮಿಕ್ರಾನ್‌ ಪ್ರಕರಣಗಳು ವರದಿಯಾಗಿವೆ. ಈಗ ವ್ಯಾಪಕವಾಗಿರುವ ಡೆಲ್ಟಾ ತಳಿಗಿಂತ ಬಹಳ ವೇಗವಾಗಿ ಹರಡುವ ಸಾಮರ್ಥ್ಯವನ್ನು ಈ ತಳಿಯು ಹೊಂದಿದೆ; ಈಗ ಇರುವ ಕೋವಿಡ್‌ ನಿರೋಧಕ ಲಸಿಕೆಗಳು ಈ ತಳಿಯಿಂದ ರಕ್ಷಣೆ ಕೊಡುವುದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ, ಓಮಿಕ್ರಾನ್‌ ತಳಿಯು ಇಡೀ ಜಗತ್ತು ತಲ್ಲಣಗೊಳ್ಳುವಂತೆ ಮಾಡಿದೆ. ಸೋಂಕು ಪತ್ತೆಯಾದ ದೇಶಗಳ ಮೇಲೆ ಅಮೆರಿಕ, ಬ್ರಿಟನ್‌, ಐರೋಪ್ಯ ಒಕ್ಕೂಟದ ದೇಶಗಳು ಸೇರಿ ಹಲವು ದೇಶಗಳು ಪ್ರಯಾಣ ನಿರ್ಬಂಧ ಹೇರಿವೆ. ವೈರಾಣುವಿನ ಹೊಸ ತಳಿಯು ಪತ್ತೆಯಾದ ಬಳಿಕ ಜಗತ್ತಿನ ಪ್ರಮುಖ ದೇಶಗಳ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದೆ. ಹೊಸ ತಳಿಯು ಎಷ್ಟು ಅಪಾಯಕಾರಿ ಎಂಬುದನ್ನು ಈ ಕುಸಿತವೇ ವಿವರಿಸುತ್ತದೆ. ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ತೀವ್ರ ಹಿನ್ನಡೆ ಅನುಭವಿಸಿದ್ದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುವ ಹೊತ್ತಿನಲ್ಲಿಯೇ ಪತ್ತೆಯಾದ ವೈರಾಣು ಕಳವಳಕ್ಕೆ ಕಾರಣವಾಗಿದೆ. ಯುರೋಪ್, ಅಮೆರಿಕದಲ್ಲಿ ಪ್ರಕರಣಗಳ ಏರಿಕೆಯು ಆ ಪ್ರದೇಶಕ್ಕೆ ಮಾತ್ರ ಕಳವಳಕಾರಿ ಸಂಗತಿ ಅಲ್ಲ; ಓಮಿಕ್ರಾನ್‌ ರೂಪಾಂತರ ತಳಿ ಪತ್ತೆಯಾಗಿರುವುದನ್ನು ಕೂಡ ಅದು ಪತ್ತೆಯಾದ ದೇಶಗಳಿಗೆ ಸೀಮಿತವಾದ ಸಮಸ್ಯೆ ಎಂದು ಪರಿಗಣಿಸುವಂತಿಲ್ಲ. ಹರಡುವಿಕೆಯ ತೀವ್ರತೆ ಮತ್ತು ಲಸಿಕೆಯ ರಕ್ಷಣೆ ಇಲ್ಲದಿರುವಿಕೆಯು ಜಗತ್ತಿನಲ್ಲಿ ಮತ್ತೊಂದು ಬಿಕ್ಕಟ್ಟಿಗೆ ಕಾರಣವಾಗಬಹುದು ಎಂಬ ಎಚ್ಚರ ಎಲ್ಲರಲ್ಲಿಯೂ ಇರಬೇಕು.

ಜಗತ್ತಿನಲ್ಲಿ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳು ಮತ್ತು ಸಾವಿನ ಪೈಕಿ ಶೇ 60ರಷ್ಟು ಯುರೋಪ್‌ನಲ್ಲಿಯೇ ವರದಿಯಾಗುತ್ತಿವೆ. ಹಲವು ದೇಶಗಳಲ್ಲಿ ಲಾಕ್‌ಡೌನ್‌ ಮತ್ತು ಇತರ ರೀತಿಯ ನಿರ್ಬಂಧಗಳು ಮತ್ತೆ ಜಾರಿಗೆ ಬಂದಿವೆ. ಚಳಿಗಾಲ ಹೊಸ್ತಿಲಲ್ಲಿದೆ. ಥಂಡಿ ಹವಾಮಾನದಲ್ಲಿ ವೈರಾಣುವಿನ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ ಎಂಬುದು ಈಗಾಗಲೇ ದೃಢಪಟ್ಟಿದೆ. ಯುರೋಪ್‌ ಮತ್ತು ಮಧ್ಯ ಏಷ್ಯಾದಲ್ಲಿ ಮುಂದಿನ ಮಾರ್ಚ್‌ ಹೊತ್ತಿಗೆ ಏಳು ಲಕ್ಷಕ್ಕೂ ಹೆಚ್ಚು ಜನರು ಕೋವಿಡ್‌ನಿಂದ ಮೃತರಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಡೆಲ್ಟಾ ರೂಪಾಂತರ ತಳಿಯು ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಕೋವಿಡ್‌–19ರ ಎರಡನೇ ಅಲೆಗೆ ಕಾರಣವಾಗಿತ್ತು. ಈಗ, ಯುರೋಪ್‌ ಮತ್ತು ಅಮೆರಿಕದ ಸಂಕಷ್ಟದ ಹಿಂದೆಯೂ ಈ ರೂಪಾಂತರ ತಳಿ ಇದೆ. ಜನಸಂಖ್ಯೆಯ ಶೇ 70ರಷ್ಟು ಭಾಗಕ್ಕೆ ಪೂರ್ಣ ಲಸಿಕೆ ಹಾಕಲಾಗಿರುವ ದೇಶಗಳಲ್ಲಿಯೇ ಪ್ರಕರಣಗಳ ಏರಿಕೆ ತೀವ್ರಗೊಂಡಿದೆ ಎಂಬುದು ಆತಂಕ ಹೆಚ್ಚಿಸಿದೆ. ಲಸಿಕೆ ಹಾಕಿಸಿಕೊಳ್ಳದವರಲ್ಲಿಯೇ ಹೊಸ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಆದರೆ, ಲಸಿಕೆಯ ಎರಡೂ ಡೋಸ್‌ ಹಾಕಿಸಿಕೊಂಡವರಲ್ಲಿಯೂ ಸೋಂಕು ಕಾಣಿಸಿಕೊಂಡದ್ದು ಕಳವಳಕಾರಿ ಅಂಶ. ಹಾಗಾಗಿಯೇ ಲಸಿಕೆಯ ಬೂಸ್ಟರ್‌ ಡೋಸ್‌ಗೆ ಜಗತ್ತಿನ ವಿವಿಧ ಭಾಗಗಳಲ್ಲಿ ಬೇಡಿಕೆ ಹೆಚ್ಚಿದೆ. ಲಸಿಕೆಯು ಎರಡು ಸ್ತರದ ಜನವಿಭಾಗಗಳನ್ನು ಸೃಷ್ಟಿಸಿದೆ. ಸೈದ್ಧಾಂತಿಕ ಮತ್ತು ಚಾರಿತ್ರಿಕ ಕಾರಣಗಳನ್ನು ಮುಂದಿಟ್ಟು ಲಸಿಕೆ, ಮುನ್ನೆಚ್ಚರಿಕೆ ಮತ್ತು ನಿರ್ಬಂಧಗಳನ್ನು ವಿರೋಧಿಸುವ ಒಂದು ವರ್ಗ ಇದೆ. ಇದು ಸಾಂಕ್ರಾಮಿಕ ಸ್ಥಿತಿ ಉಲ್ಬಣಗೊಳ್ಳಲು ಕಾರಣವಾಗಬಹುದು. ಲಸಿಕೆ ಪ್ರತಿರೋಧವನ್ನು ನಿಭಾಯಿಸಲು, ಪ್ರಜಾಸತ್ತಾತ್ಮಕ ಪರಂಪರೆಯಿಂದಾಗಿ ಸರ್ಕಾರಗಳಿಗೂ ಕಷ್ಟವಾಗುತ್ತಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಬಹುದು.

ಈಗ ಸೃಷ್ಟಿಯಾಗಿರುವ ಪರಿಸ್ಥಿತಿಯಲ್ಲಿ ಭಾರತಕ್ಕೆ ಹಲವು ಪಾಠಗಳಿವೆ. ದೇಶದ ಒಟ್ಟು ಜನಸಂಖ್ಯೆಯ ಶೇ 30ಕ್ಕಿಂತ ಸ್ವಲ್ಪ ಹೆಚ್ಚಿನ ಭಾಗಕ್ಕಷ್ಟೇ ಲಸಿಕೆಯ ಎರಡೂ ಡೋಸ್‌ ಹಾಕಲಾಗಿದೆ. ಅಂದರೆ, ಜನಸಂಖ್ಯೆಯ ಬಹುಭಾಗಕ್ಕೆ ಲಸಿಕೆಯ ರಕ್ಷಣೆ ಸಿಕ್ಕಿಲ್ಲ. ಇಷ್ಟೊಂದು ದೊಡ್ಡ ವರ್ಗಕ್ಕೆ ಲಸಿಕೆಯ ರಕ್ಷಣೆ ಇಲ್ಲದೇ ಇರುವುದು ಬಹುದೊಡ್ಡ ಅಪಾಯಕ್ಕೆ ಕಾರಣ ಆಗಬಹುದು. 12 ಕೋಟಿಗೂ ಹೆಚ್ಚು ಜನರು ಲಸಿಕೆಯ ಎರಡನೇ ಡೋಸ್‌ ಅನ್ನು ನಿಗದಿತ ಅವಧಿಯಲ್ಲಿ ಪಡೆಯದೆ ತಪ್ಪಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ಇತ್ತೀಚೆಗೆ ಹೇಳಿದ್ದರು. ರಾಜ್ಯದಲ್ಲಿ 45 ಲಕ್ಷ ಮಂದಿ ಎರಡನೇ ಡೋಸ್‌ ಹಾಕಿಸಿಕೊಂಡಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವರು ಹೇಳಿದ್ದಾರೆ. ಇವರೆಲ್ಲರಿಗೂ ಆದಷ್ಟು ಬೇಗ ಎರಡನೇ ಡೋಸ್‌ ಲಸಿಕೆ ಹಾಕಿಸುವುದು ಜರೂರಾಗಿ ಆಗಬೇಕಿರುವ ಕೆಲಸ. ಜತೆಗೆ, ಲಸಿಕೆಯ ರಕ್ಷಣೆ ಇಲ್ಲದ ಓಮಿಕ್ರಾನ್ ರೂಪಾಂತರ ತಳಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಜನರು ಗಂಭೀರವಾಗಿ ಪರಿಗಣಿಸಬೇಕಿದೆ. ಓಮಿಕ್ರಾನ್‌ ರೂಪಾಂತರ ತಳಿಯು ಭಾರತದಲ್ಲಿ ಪತ್ತೆಯಾಗಿಲ್ಲ ಎಂಬುದು ನೆಮ್ಮದಿಯ ವಿಚಾರ. ಹಾಗಿದ್ದರೂ ಮುನ್ನೆಚ್ಚರಿಕೆ ಅಗತ್ಯ. ಮುಖಗವಸು ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಆಗಾಗ ಕೈ ಸ್ವಚ್ಛಗೊಳಿಸುವುದು ಮಾತ್ರ ಓಮಿಕ್ರಾನ್‌ನಿಂದ ರಕ್ಷಣೆ ಪಡೆಯಲು ಇರುವ ದಾರಿ ಎಂಬುದನ್ನು ಜನರು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಸಂದರ್ಭ ಇದು. ದೇಶದಲ್ಲಿ ಪ್ರಕರಣಗಳು ಕಡಿಮೆ ಆಗಿವೆ ಎಂಬುದು ಸರ್ಕಾರ ಮತ್ತು ಜನರಲ್ಲಿ ಅಸಡ್ಡೆ ಸೃಷ್ಟಿಸಿದರೆ ದೊಡ್ಡ ಗಂಡಾಂತರ ಎದುರಾದೀತು. ಧಾರವಾಡ ಮತ್ತು ಬೆಂಗಳೂರಿನ ಒಂದೆರಡು ಶಾಲಾ–ಕಾಲೇಜುಗಳ ಕೆಲವು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ ಆಗಿರುವುದು ಎಚ್ಚರಿಕೆಯ ಗಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT