ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪುನಶ್ಚೇತನಕ್ಕೆ ಮುಖಂಡರ ಪ್ರತಿಷ್ಠೆಯೇ ಅಡ್ಡಿ

ಸಂಪಾದಕೀಯ
Last Updated 27 ಜನವರಿ 2020, 19:45 IST
ಅಕ್ಷರ ಗಾತ್ರ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇಮಕ ಕಗ್ಗಂಟಾಗಿ ಕುಳಿತಿದೆ. ಇದರ ಪರಿಣಾಮ ನೇರವಾಗಿ ಪಕ್ಷದ ಜಿಲ್ಲಾ ಘಟಕಗಳು ಮತ್ತು ಕಾರ್ಯಕರ್ತರ ಮೇಲೆ ಆಗುತ್ತಿದೆ.ರಾಜ್ಯದ ಹಲವು ಮುಖಂಡರನ್ನು ಪಕ್ಷದ ಹೈಕಮಾಂಡ್‌ ಎರಡು– ಮೂರು ಸಲ ದೆಹಲಿಗೆ ಕರೆಸಿ ಚರ್ಚೆ ನಡೆಸಿದರೂ ಅಧ್ಯಕ್ಷರ ಆಯ್ಕೆಯ ಬಗ್ಗೆ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.

ಡಿ.ಕೆ.ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್‌ ಸಿದ್ಧವಿದೆ ಎನ್ನುವ ವರದಿಗಳು ಬಂದು ತಿಂಗಳುಗಳೇ ಕಳೆದವು. ಆದರೆ, ಈ ಪ್ರಸ್ತಾವಕ್ಕೆ ಸಿದ್ದರಾಮಯ್ಯ ಸಹಿತ ಹಲವು ಹಿರಿಯ ನಾಯಕರ ವಿರೋಧವಿದೆ ಎನ್ನಲಾಗಿದೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ದಿಸೆಯಲ್ಲಿ ಎಂ.ಬಿ.ಪಾಟೀಲರ ಹೆಸರನ್ನು ಸಿದ್ದರಾಮಯ್ಯ ಬಣ ತೇಲಿಬಿಟ್ಟಿದೆ. ಅದಕ್ಕೂ ಪಕ್ಷದ ಒಂದು ವರ್ಗದಿಂದ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ, ಸಿದ್ದರಾಮಯ್ಯ ಹೊಂದಿರುವ ಶಾಸಕಾಂಗ ಪಕ್ಷದ ನಾಯಕ ಮತ್ತು ವಿಧಾನಸಭೆಯ ವಿರೋಧಪಕ್ಷದ ನಾಯಕ ಹುದ್ದೆಗಳಲ್ಲಿ ಒಂದನ್ನು ಬೇರೆ ನಾಯಕರಿಗೆ ಬಿಟ್ಟುಕೊಡಬೇಕು ಎನ್ನುವುದು ಪಕ್ಷದ ಹಲವು ಹಿರಿಯ ಮುಖಂಡರ ಬೇಡಿಕೆ.

ಪಕ್ಷದಲ್ಲಿರುವ ಎಲ್ಲ ಹಿರಿಯ ಮುಖಂಡರನ್ನು ಸಮಾಧಾನಪಡಿಸಲು ನಾಲ್ಕು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವವನ್ನೂ ಕೆಲವರು ಮುಂದಿಟ್ಟಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ಅವಧಿಗೆ ಆಡಳಿತ ನಡೆಸಿದ ಪಕ್ಷವೊಂದು ರಾಜ್ಯ ಘಟಕದ ಪದಾಧಿಕಾರಿಗಳ ನೇಮಕಕ್ಕೆ ಇಷ್ಟೊಂದು ಕಷ್ಟಪಡುತ್ತಿರುವುದನ್ನು ನೋಡಿದರೆ, ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ವಿಷಯದಲ್ಲಿ ಬಿಜೆಪಿ ನಾಯಕರಲ್ಲಿ ಗೊಂದಲ, ಅಸಮಾಧಾನ ಇವೆ. ಆದರೆ, ಆ ಪಕ್ಷದ ರಾಜ್ಯ ಘಟಕಕ್ಕೆ ಅಧ್ಯಕ್ಷರ ನೇಮಕವು ಗೊಂದಲ ಇಲ್ಲದೆ ನಡೆಯಿತು. ಪಕ್ಷದ ವರಿಷ್ಠರು ಕೈಗೊಂಡ ನಿರ್ಧಾರವನ್ನು ಬಿಜೆಪಿಯ ಎಲ್ಲ ನಾಯಕರೂ ಮರುಮಾತಿಲ್ಲದೆ ಒಪ್ಪಿಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಪರಿಸ್ಥಿತಿ ನೋಡಿದರೆ ಹೈಕಮಾಂಡ್‌ ಕೂಡಾ ಈ ವಿಷಯದಲ್ಲಿ ನಿಸ್ಸಹಾಯಕವಾಗಿದೆ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಪಕ್ಷದ ಪ್ರಮುಖ ನಾಯಕರು ಸ್ವಪ್ರತಿಷ್ಠೆಯಿಂದ ಒಂದೊಂದು ದಿಕ್ಕಿಗೆ ಮುಖ ಮಾಡಿ ಕುಳಿತಿರುವ ಹಿನ್ನೆಲೆಯಲ್ಲಿ, ಪಕ್ಷದ ಭವಿಷ್ಯದ ಬಗ್ಗೆ ಕಾರ್ಯಕರ್ತರಲ್ಲಿ ಚಿಂತೆ ಆವರಿಸುವುದು ಸಹಜವೇ.

ಚುನಾವಣೆ ಹೊತ್ತಿನ ರಾಜಕೀಯವನ್ನು ಯುದ್ಧಕಾಲ ಎಂದು ರಾಜಕೀಯ ಪಕ್ಷಗಳು ಭಾವಿಸುತ್ತವೆ. ಹಾಗೆ ನೋಡಿದರೆ ರಾಜಕೀಯವಾಗಿ ಈಗ ರಾಜ್ಯದಲ್ಲಿರುವುದು ಶಾಂತಿಕಾಲ. ಅದೂ ಅಲ್ಲದೆ ಕಾಂಗ್ರೆಸ್‌ ಈಗ ಅಧಿಕಾರದಲ್ಲಿ ಇಲ್ಲ. ಇಂತಹ ಸಂದರ್ಭದಲ್ಲೂ ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇಮಕಕ್ಕೆ ಪಕ್ಷ ಇಷ್ಟೊಂದು ಒದ್ದಾಡುವ ಅಗತ್ಯವಿದೆಯೇ?

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತವು ಜನರ ನಿರೀಕ್ಷೆಯ ಮಟ್ಟಕ್ಕೆ ಏರಿಲ್ಲ. ತೆರಿಗೆ ಸಂಗ್ರಹದಲ್ಲಿ ಹಿನ್ನಡೆ, ಆರ್ಥಿಕ ಹಿಂಜರಿತ, ಪ್ರವಾಹಪೀಡಿತ ಜನರಿಗೆ ನೆರವಾಗಲಾರದ ಅಸಹಾಯಕತೆ, ಸಂಪುಟ ವಿಸ್ತರಣೆಗೆ ಒದ್ದಾಟ... ಹೀಗೆ ಬಿಜೆಪಿ ಎದುರಿಸುತ್ತಿರುವ ಸವಾಲುಗಳು ಹಲವು. ಆಳುವ ಪಕ್ಷದ ಇಂತಹ ಹಿನ್ನಡೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಬೇಕಾದ ವಿರೋಧಪಕ್ಷವು ನಾಯಕತ್ವದ ಕೊರತೆಯಿಂದ ಕುಂಟುತ್ತಿರುವುದು ವಿಪರ್ಯಾಸ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಸುವಂತೆ ಪಕ್ಷದ ರಾಜ್ಯ ಘಟಕಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದೆ. ರಾಜ್ಯದಲ್ಲಿ ಸಾವಿರಾರು ಜನ ಸ್ವಯಂಪ್ರೇರಣೆಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ಪಾಳೆಯ ಹೀಗೆ ನಾಯಕತ್ವದ ಬಿಕ್ಕಟ್ಟನ್ನು ಚರ್ಚಿಸುತ್ತಾ ಕುಳಿತಿರುವುದು ಪಕ್ಷ ತಲುಪಿರುವ ದುಃಸ್ಥಿತಿಯನ್ನು ಸೂಚಿಸುವಂತಿದೆ.

ಪೌರತ್ವ ಕಾಯ್ದೆಯ ಪರವಾಗಿ ಆಡಳಿತಾರೂಢ ಬಿಜೆಪಿಯ ಕಾರ್ಯಕರ್ತರು ಮನೆಮನೆಗೆ ತೆರಳಿ ಜನರ ಮನವೊಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುವ ನಾಯಕರಿಲ್ಲದ ಸ್ಥಿತಿ ಎದುರಾಗಿದೆ. ರಾಜಕೀಯವಾಗಿ ಮಹತ್ವದ್ದು ಎನ್ನಲಾದ ಪೌರತ್ವ ತಿದ್ದುಪಡಿ ಕಾಯ್ದೆಯ ಸಾಧಕಬಾಧಕಗಳ ಬಗ್ಗೆ ಸ್ವತಃ ತಮ್ಮ ಪಕ್ಷದ ಕಾರ್ಯಕರ್ತರಿಗೇ ದಾರಿ ತೋರಲಾಗದಂತಹ ಸ್ಥಿತಿಗೆ ಕಾಂಗ್ರೆಸ್‌ ನಾಯಕತ್ವ ತಲುಪಿದೆ. ರಾಜ್ಯದ ಆಡಳಿತದ ಅರೆಕೊರೆಗಳನ್ನು ಎತ್ತಿತೋರಿಸಿ, ಆಳುವವರ ತಪ್ಪು ನಡೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಕರ್ತವ್ಯ. ಕಾಂಗ್ರೆಸ್‌ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಶೀಘ್ರ ಬಗೆಹರಿಸಿಕೊಳ್ಳಬೇಕು. ವಿರೋಧ ಪಕ್ಷದ ಜವಾಬ್ದಾರಿ ಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಈ ವಿಚಾರದಲ್ಲಿ ಹೈಕಮಾಂಡ್‌ ಕೂಡ ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ದೃಢ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT