ಪಶ್ಚಿಮ ಬಂಗಾಳದ ವಿಧಾನಸಭೆಗೆ ಏಪ್ರಿಲ್ 29ರಂದು ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆದ ನಂತರ, ಎಲ್ಲರ ಗಮನ ಇಂದಿನ (ಮೇ 4ರ) ಮತಎಣಿಕೆ ಪ್ರಕ್ರಿಯೆಯತ್ತ ಹೊರಳಿದೆ. ಫಲಿತಾಂಶ ಏನೇ ಆಗಿರಲಿ, ಈ ಚುನಾವಣೆಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ನಡೆಸಿದ ರೀತಿಯೇ ಗಮನಸೆಳೆಯುವಂತಿದೆ ಹಾಗೂ ಈ ಚುನಾವಣೆಯು ಆಯೋಗದ ತಟಸ್ಥ ಧೋರಣೆ, ಕಾರ್ಯನಿರ್ವಹಣೆಯಲ್ಲಿನ ಪಾರದರ್ಶಕತೆ ಹಾಗೂ ಪ್ರಜಾಪ್ರಭುತ್ವದ ಅತ್ಯುನ್ನತ ಪ್ರಕ್ರಿಯೆಯಲ್ಲಿ ಮತದಾರರ ಭಾಗವಹಿಸುವಿಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂವಿಧಾನದ 324ನೇ ವಿಧಿಯು ಆಯೋಗಕ್ಕೆ ಚುನಾವಣೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರಗಳನ್ನು ನೀಡಿದೆ. ಮತದಾರರ ಪಟ್ಟಿಯನ್ನು ತಯಾರಿಸುವ ಅಧಿಕಾರವೂ ಇದರಲ್ಲಿ ಸೇರಿದೆ. ಚುನಾವಣೆ ನಡೆಯಬೇಕಾದ ರಾಜ್ಯಗಳಲ್ಲಿ ‘ಇಸಿಐ’ ಕಳೆದ ವರ್ಷ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಆರಂಭಿಸಿತು. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ನಡೆಸಿದ ಈ ಪ್ರಕ್ರಿಯೆಯ ವಿನ್ಯಾಸ ಮತ್ತು ಅನುಷ್ಠಾನವು ಮತದಾರರ ಪಟ್ಟಿಯಿಂದ ದೊಡ್ಡ ಸಂಖ್ಯೆಯ ನೈಜ ಮತದಾರರನ್ನು ಹೊರಗೆ ಹಾಕಿದೆ. ಪಶ್ಚಿಮ ಬಂಗಾಳದಲ್ಲಿ ‘ಎಸ್ಐಆರ್’ ಮತ್ತಷ್ಟು ತೀವ್ರ ಸ್ವರೂಪ ಪಡೆಯುವುದರೊಂದಿಗೆ, ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮೇಲೆ ಕರಿನೆರಳು ಆವರಿಸಿಕೊಂಡಿದೆ.

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿದ್ದ 7.66 ಕೋಟಿ ಹೆಸರುಗಳು, ಡಿಸೆಂಬರ್ನಲ್ಲಿ ಇಸಿಐ ಪ್ರಕಟಿಸಿದ ಮೊದಲ ಕರಡು ಪಟ್ಟಿಯಲ್ಲಿ 7.08 ಕೋಟಿಗೆ ಇಳಿದವು. ಈ ಸಂಖ್ಯೆ ಈ ವರ್ಷದ ಫೆಬ್ರುವರಿಯಲ್ಲಿ ಪ್ರಕಟಗೊಂಡ ಅಂತಿಮ ಪಟ್ಟಿಯಲ್ಲಿ 6.44 ಕೋಟಿಗೆ ಇಳಿಯಿತು. ಅಂದರೆ, ರಾಜ್ಯದ ಒಟ್ಟು ಮತದಾರರಲ್ಲಿ
ಶೇ 15ಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಯಿತು. ಅಂತಿಮ ಪಟ್ಟಿಯಲ್ಲಿ ಸುಮಾರು 60 ಲಕ್ಷ ಮತದಾರರ ಹೆಸರುಗಳನ್ನು ಅರ್ಹ ಮತದಾರರು ಎನ್ನುವ ಸ್ಥಿತಿಯನ್ನು ನಿರ್ಣಯಿಸುವುದಕ್ಕಾಗಿ ಹೊರಗಿಡಲಾಯಿತು. ಹೆಸರುಗಳಲ್ಲಿ ಅಥವಾ ಇತರೆ ವಿವರಗಳಲ್ಲಿ ಸ್ವಲ್ಪ ಅಕ್ಷರ ವ್ಯತ್ಯಾಸಗಳಿದ್ದ ಮತದಾರರನ್ನು ಆಯೋಗ ಪ್ರತ್ಯೇಕವಾಗಿ ಗುರ್ತಿಸಿತು. ರಾಜ್ಯದಲ್ಲಿ ಸುಮಾರು 8,000 ಮೈಕ್ರೊ ಅಬ್ಸರ್ವರ್ಗಳನ್ನು ನೇಮಿಸುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಅರ್ಹ ಮತದಾರರು ಎಂದು ನಿರ್ಣಯಿಸಲಿಕ್ಕಾಗಿ ಮಾಡಲಾಗಿದ್ದ ಪಟ್ಟಿಯಿಂದ 27 ಲಕ್ಷ ಹೆಸರುಗಳನ್ನು ಸಾರಾಸಗಟಾಗಿ ಅಳಿಸಿ ಹಾಕಲಾಯಿತು. ಹೀಗೆ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾದ ಬಹುತೇಕ ಹೆಸರುಗಳು ಮುಸ್ಲಿಂ ಸಮುದಾಯದ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಿಗೆ ಸೇರಿದ್ದವು. ಮತದಾನದ ಹಕ್ಕು ಕಳೆದುಕೊಂಡಿರುವ ಮತದಾರರ ಅರ್ಜಿಗಳನ್ನು ಪರಿಶೀಲಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ಹತ್ತೊಂಬತ್ತು ಮೇಲ್ಮನವಿ ನ್ಯಾಯಮಂಡಳಿಗಳನ್ನು ರಚಿಸಿದರೂ, ಆ ಮಂಡಳಿಗಳು ಅತ್ಯಂತ ವಿಳಂಬವಾಗಿ ರೂಪುಗೊಂಡವು ಹಾಗೂ ಅವುಗಳ ಕಾರ್ಯನಿರ್ವಹಣೆಗೆ ನಿರ್ದಿಷ್ಟ ಕಾಲಮಿತಿ ಗೊತ್ತುಪಡಿಸಿರಲಿಲ್ಲ ಎನ್ನುವುದು ಗಮನಾರ್ಹ. 27 ಲಕ್ಷ ಅರ್ಜಿಗಳಲ್ಲಿ ನ್ಯಾಯಮಂಡಳಿಗಳು ಮೊದಲ ಹಂತದ ಚುನಾವಣೆಯ ವೇಳೆಗೆ ಬರೀ 139 ಹೆಸರುಗಳನ್ನಷ್ಟೇ ಮತದಾರರ ಪಟ್ಟಿಗೆ ಸೇರಿಸಿದರೆ, ಎರಡನೇ ಹಂತದ ಮತದಾನದ ವೇಳೆಗೆ 1,468 ಹೆಸರುಗಳನ್ನು ಸೇರ್ಪಡೆ ಮಾಡಿದವು. ಈ ಮಂಡಳಿಗಳ ಕಾರ್ಯವೈಖರಿ ಗೊಂದಲದಿಂದಲೂ ಹಾಗೂ ಪಾರದರ್ಶಕತೆಯ ಕೊರತೆಯಿಂದಲೂ ಕೂಡಿತ್ತು. ತಿರಸ್ಕರಿಸಲಾದ ಅರ್ಜಿಗಳ ಸಂಖ್ಯೆ ಎಷ್ಟೆನ್ನುವುದೂ ಸ್ಪಷ್ಟವಾಗಿಲ್ಲ. ನ್ಯಾಯಮಂಡಳಿಗಳ ಈಗಿನ ವೇಗವೇ ಮುಂದುವರಿದರೆ, ಬಾಕಿ ಉಳಿದಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ವರ್ಷಗಳೇ ಬೇಕಾಗಬಹುದು. ಇದರ ಅರ್ಥ, ಲಕ್ಷಾಂತರ ಜನರ ಮತದಾರದ ಹಕ್ಕುಗಳು ವರ್ಷಗಳ ಕಾಲ ಸ್ಥಗಿತಗೊಳ್ಳಲಿವೆ; ಮುಂದಿನ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ ಅವರ ಮತದಾನದ ಅನರ್ಹತೆ ಮುಂದುವರಿಯಲಿದೆ.

27 ಲಕ್ಷ ಜನರಿಗೆ, ಅಂದರೆ ಒಟ್ಟು ಮತದಾರರಲ್ಲಿ ಶೇ 4ರಷ್ಟು ಜನರಿಗೆ ತಮ್ಮದಲ್ಲದ ತಪ್ಪಿಗಾಗಿ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗಿಲ್ಲ. ನ್ಯಾಯಯುತವಾಗಿ ಹಾಗೂ ಆದಷ್ಟೂ ಹೆಚ್ಚು ಮತದಾರರು ಭಾಗಿಯಾಗುವ ಅವಕಾಶಗಳನ್ನು ಕಲ್ಪಿಸಿ ಚುನಾವಣೆಗಳನ್ನು ನಡೆಸುವುದು ಆಯೋಗದ ಸಾಂವಿಧಾನಿಕ ಕರ್ತವ್ಯವಾಗಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಆಯೋಗ ತನ್ನ ಪರಮಾಧಿಕಾರ ಬಳಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಮಾನದ ಲಾಭವನ್ನು ಮತದಾರರಿಗೆ ನೀಡುವ ಮೂಲಕ ಅವರನ್ನು ಮತದಾರರ ಪಟ್ಟಿಯಲ್ಲಿ ಉಳಿಸಬೇಕಾಗಿತ್ತು. ಆದರೆ, ಬಿಜೆಪಿಯ ರಾಜಕೀಯ ಹಿತಾಸಕ್ತಿಗೆ ಅನುಕೂಲವಾಗುವಂತೆ ‘ಎಸ್ಐಆರ್’ ಪ್ರಕ್ರಿಯೆಯನ್ನು ಆಯೋಗ ನಡೆಸಿದೆ. ಒಟ್ಟು ಮತದಾರರಲ್ಲಿ ಶೇ 4ರಷ್ಟು ಜನರನ್ನು ಹೊರಗಿಟ್ಟು ನಡೆಸುವ ಚುನಾವಣೆ ಪ್ರಹಸನವೇ ಸರಿ. ಪಟ್ಟಿಯಿಂದ ಹೊರಗುಳಿದ ಮತದಾರರ ಸಂಖ್ಯೆಯು ಕೆಲವು ಕ್ಷೇತ್ರಗಳಲ್ಲಿ ಸೋಲು ಮತ್ತು ಗೆಲುವಿನ ಅಂತರವನ್ನು ನಿರ್ಣಯಿಸುವಷ್ಟು ಗಣನೀಯವಾಗಿದೆ.

‘ಎಸ್ಐಆರ್’ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಬಿಹಾರದಲ್ಲಿ ನಡೆಸಿದಾಗ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಪೌರತ್ವದ ಪರೀಕ್ಷೆಯಾಗಿ ಪರಿವರ್ತಿಸಲು ಆಯೋಗವು ಪ್ರಯತ್ನಿಸಿತು. ಆದರೆ, ಮತದಾರರ ಗುರುತಿನ ಪುರಾವೆಯಾಗಿ ಆಧಾರ್ ಅನ್ನು ಸ್ವೀಕರಿಸುವಂತೆ, ಹೆಸರು ಅಳಿಸುವ ಸಂದರ್ಭದಲ್ಲಿ ಕಾರಣಗಳನ್ನು ಬಹಿರಂಗಪಡಿಸಲು ಹಾಗೂ ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿರುವುದನ್ನು ಖಾತರಿಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳು, ಆಯೋಗಕ್ಕೆ ಕಡಿವಾಣ ಹಾಕಿದವು ಹಾಗೂ ಎಸ್ಐಆರ್ ಪ್ರಕ್ರಿಯೆಯ ಕಾಠಿಣ್ಯತೆಯನ್ನು ಕುಗ್ಗಿಸಿದವು. ಆದರೆ, ಪಶ್ಚಿಮ ಬಂಗಾಳದ ಸಂದರ್ಭದಲ್ಲಿ ಮತದಾರರನ್ನು ಕೋರ್ಟ್ ನಿರಾಶೆಗೊಳಿಸಿತು. ಆಯೋಗಕ್ಕೆ ಹೆಚ್ಚಿನ ಸ್ವಾತಂತ್ರ್ಯ ನೀಡಿತು; ಆ ಮೂಲಕ ಪ್ರಕ್ರಿಯೆ ವಿಳಂಬಗೊಳ್ಳಲು ಹಾಗೂ ಲಕ್ಷಾಂತರ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಒಪ್ಪಿಗೆ ನೀಡಿದಂತಾಯಿತು. ನಾಗರಿಕರ ಹಕ್ಕುಗಳು ನಿರಾಕರಣೆಗೊಳಗಾದಾಗ ಮಧ್ಯಪ್ರವೇಶಿಸುವುದು ನ್ಯಾಯಾಲಯದ ಕರ್ತವ್ಯ. ಆ ಕರ್ತವ್ಯ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆ ಪಾಲನೆಯಾಗಲಿಲ್ಲ. ಆದಾಗ್ಯೂ, ಕೆಲವೊಮ್ಮೆ ವಿಷಯಕ್ಕೆ ಸಂಬಂಧಿಸಿದಂತೆ ಸರಿಯಾದ ಅವಲೋಕನ ಹಾಗೂ ಸಾಂಕೇತಿಕ ನಿರ್ಧಾರಗಳನ್ನು ಸುಪ್ರೀಂ ಕೋರ್ಟ್ ತೆಗೆದುಕೊಂಡರೂ, ಆಯೋಗವು ಅನ್ಯರಂತೆ ನಡೆಸಿಕೊಂಡ ಮತದಾರರ ಆತಂಕಗಳಿಗೆ ಸಮರ್ಪಕವಾಗಿ ಸ್ಪಂದಿಸಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಆಯೋಗ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಮುಖ್ಯ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇಡೀ ಆಡಳಿತಯಂತ್ರವನ್ನು ಬದಲಿಸಿ, ಆ ಸ್ಥಾನಗಳಲ್ಲಿ ತನ್ನ ಆಯ್ಕೆಯ ಅಧಿಕಾರಿಗಳನ್ನು ನೇಮಿಸಿತು. 2.4 ಲಕ್ಷ ಕೇಂದ್ರ ಭದ್ರತಾ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಗಳ ವಾಹನಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ನಾಯಕರ ವಿರುದ್ಧದ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯ ದೂರುಗಳನ್ನು ನಿರ್ಲಕ್ಷಿಸಿತು. ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಿಸಿದಂತೆ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಹಾಗೂ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾದವು. ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಅಶಕ್ತವಾದುದಕ್ಕೆ ಹಾಗೂ ಅದನ್ನು ತಡೆಯಲು ಸುಪ್ರೀಂ ಕೋರ್ಟ್ ವಿಫಲವಾದುದಕ್ಕೆ ಸಂಕೇತವಾಗಿ ಪಶ್ಚಿಮ ಬಂಗಾಳದ ಚುನಾವಣೆಯು ಭಾರತದ ಚುನಾವಣಾ ಚರಿತ್ರೆಯಲ್ಲಿ ಉಳಿಯಲಿದೆ. ಮತದಾರರನ್ನು ಕೇಂದ್ರದಲ್ಲಿ ಇರಿಸಿಕೊಂಡು ಚುನಾವಣೆ ನಡೆಸಬೇಕಾದ ಆಯೋಗವು, ತನ್ನನ್ನೇ ಕೇಂದ್ರ ಪಾತ್ರವನ್ನಾಗಿ ಬಿಂಬಿಸಿಕೊಂಡಿತು. ಈ ದಿನದ ಮತಎಣಿಕೆಯಲ್ಲಿ ಹೊರಬೀಳುವ ಅಂಕಿಅಂಶಗಳು ಏನೇ ಇರಲಿ, ಅವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶುಭಸೂಚಕವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.