ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೊರೊನಾ ನಿಯಂತ್ರಣ; ಗೊಂದಲ ಬದಿಗಿರಿಸಿ ಸರ್ಕಾರ ಸ್ಪಷ್ಟ ನಿಲುವು ತಳೆಯಲಿ

Last Updated 18 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕಾಗಿದೆ. ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವೂ ಇದೆ.

ಇಡೀ ಜಗತ್ತು ತತ್ತರಿಸುವಂತೆ ಮಾಡಿರುವ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ, ದೇಶದಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಸೋಂಕು ಹರಡುವಿಕೆಯು ಇನ್ನಷ್ಟು ಹೆಚ್ಚುವುದನ್ನು ತಡೆಯುವುದಕ್ಕಾಗಿ ದೇಶದ ಕೆಲವು ಸ್ಥಳಗಳಲ್ಲಿ ಲಾಕ್‍ಡೌನ್ ಮತ್ತು ಕರ್ಫ್ಯೂ ವಿಧಿಸಲಾಗಿದೆ. ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್‍ಡೌನ್ ಮತ್ತು ಕರ್ಫ್ಯೂ ಹೇರಿಕೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಂದರೆ, ಇಲ್ಲಿನ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂಬುದು ಇದರ ಅರ್ಥವಲ್ಲ. ಬುಧವಾರ 1,275 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು, ಕಳೆದ ಮೂರು ತಿಂಗಳ ಗರಿಷ್ಠ ಸಂಖ್ಯೆ. ಈಗ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಮೂರು ವಾರಗಳಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸೋಂಕು ಏರಿಕೆ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೈಕೋರ್ಟಿನ ವಿಭಾಗೀಯ ಪೀಠ ಎಚ್ಚರಿಸಿದೆ. ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರವು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಮತ್ತೆ ಪ್ರಕಟಿಸಿದೆ. ಮದುವೆ, ಜನ್ಮದಿನ ಆಚರಣೆ ಸಹಿತ ಎಲ್ಲ ರೀತಿಯ ಒಳಾಂಗಣ ಕಾರ್ಯಕ್ರಮಗಳಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ. ‘ಸಭಾಂಗಣಗಳ ಒಳಗೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆಗೆ ಮಿತಿ ಹೇರಲಾಗಿದೆ; ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಹೊರಾಂಗಣ ಕಾರ್ಯಕ್ರಮಗಳಿಗೆ ನಿರ್ಬಂಧ ಇಲ್ಲ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಲಾಕ್‌ಡೌನ್‌ ಹೇರದೇ ಇರುವ ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಆದರೆ, ಒಳಾಂಗಣದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಒಂದು ನೀತಿ ಮತ್ತು ಹೊರಾಂಗಣದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಇನ್ನೊಂದು ನೀತಿಯು ಸರ್ಕಾರದ ಗೊಂದಲವನ್ನು ಸೂಚಿಸುವುದಿಲ್ಲವೇ?

ಈಗ ಜಾತ್ರೆಗಳ ಸಮಯ. ಜಾತ್ರೆಗಳಲ್ಲಿ ಸಾವಿರಾರು, ಕೆಲವೆಡೆ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆಗಳಲ್ಲಿ ಜನರು ಸಂಭ್ರಮದ ಗುಂಗಿನಲ್ಲಿಇರುತ್ತಾರೆ. ಹಾಗಾಗಿ, ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಸಂಬಂಧಿಸಿ ಜನರು ನಿರ್ಲಕ್ಷ್ಯ ತೋರುವ ಸಾಧ್ಯತೆ ಹೆಚ್ಚು. ಕೋವಿಡ್‌ ಹರಡುವುದನ್ನು ತಡೆಯುವುದರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಬುಧವಾರ ವಿಡಿಯೊ ಸಂವಾದ ನಡೆಸಿದ್ದಾರೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಸೋಂಕು ವ್ಯಾಪಿಸುವುದನ್ನು ಗಮನಕ್ಕೆ ತಂದು ಎಚ್ಚರಿಸಿದ್ದಾರೆ. ಈ ನಗರಗಳಿಂದ ಸೋಂಕು ಹಳ್ಳಿಗಳಿಗೆ ವ್ಯಾಪಿಸುವುದು ಸುಲಭ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಕೋವಿಡ್‌ ಆರೈಕೆ ಕೇಂದ್ರಗಳನ್ನು ಬೆಂಗಳೂರಿನಲ್ಲಿ ಪುನರಾರಂಭಿಸುವ ಜೊತೆಯಲ್ಲೇ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಆರಂಭಿಸಬೇಕು ಎಂಬ ನೆಲೆಯಲ್ಲಿ ಪ್ರಧಾನಿಯವರ ಎಚ್ಚರಿಕೆಯ ಮಾತನ್ನು ಅರ್ಥ ಮಾಡಿಕೊಳ್ಳಬಹುದು. ಈ ಮಧ್ಯೆ, ಉಪಚುನಾವಣೆಗಳು ಕೂಡ ಬಂದಿರುವುದರಿಂದ ಚುನಾವಣಾ ಪ್ರಚಾರದ ನೆಪದಲ್ಲಿ ಜನರ ಗುಂಪುಗೂಡುವಿಕೆಯೂ ಹೆಚ್ಚಾಗುತ್ತದೆ. ಹೊರಾಂಗಣದ ಇಂತಹ ಕಾರ್ಯಕ್ರಮಗಳ ಮೇಲೆಯೂ ಕಠಿಣ ನಿರ್ಬಂಧಗಳನ್ನು ವಿಧಿಸಿ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ನಿಯಮ ಪಾಲನೆಯ ಬಗ್ಗೆ ಮಾದರಿ ಆಗಬೇಕಿರುವ ರಾಜಕಾರಣಿಗಳೇ ಬಹಿರಂಗ ಸಮಾವೇಶಗಳಲ್ಲಿ ಭಾಗವಹಿಸುತ್ತಿರುವುದು ವಿಪರ್ಯಾಸದ ಸಂಗತಿ. ಕೋವಿಡ್ ತಡೆಯ ನಿಯಮ ಪಾಲನೆಗಳಲ್ಲಿ ಅಧಿಕಾರಸ್ಥರಿಗೆ ವಿನಾಯಿತಿ ಕೊಡುವುದು ಎಳ್ಳಷ್ಟೂ ಸರಿಯಲ್ಲ. ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ನಗರ - ಗ್ರಾಮೀಣ ಎನ್ನದೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT