ಮಂಗಳವಾರ, ಮಾರ್ಚ್ 21, 2023
30 °C
ಕೊರೊನಾ ಸೋಂಕಿತರ ಚಿಕಿತ್ಸೆಗೆ ಈಗ ಬೇರೆ ವ್ಯವಸ್ಥೆಗಳಿವೆ. ಹಾಗಾಗಿ, ಮಿಂಟೊ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕಾಗಿದೆ

ಕೊರೊನಾ: ಇತರ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಗಮನ ಕೊಡಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಇತರ ಚಿಕಿತ್ಸೆಗಳನ್ನು ಆರು ತಿಂಗಳಿನಿಂದ ಸ್ಥಗಿತಗೊಳಿಸಿದ್ದರಿಂದ ಸಾವಿರಾರು ರೋಗಿಗಳು ತೊಂದರೆಗೆ ಒಳಗಾಗಿದ್ದಾರೆ ಎಂಬುದು ಆತಂಕದ ಸಂಗತಿ. ಕೋವಿಡ್‌–19 ಕಾರಣಕ್ಕಾಗಿ ಈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಇಲ್ಲಿನ 100 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಸರ್ಕಾರ ಮೀಸಲಿಟ್ಟಿದೆ. ಆದರೆ, ಕೊರೊನಾ ಸೋಂಕಿಗೆ ಒಳಗಾದವರು ಯಾರೊಬ್ಬರೂ ಇಲ್ಲಿ ದಾಖಲಾಗಿಲ್ಲ! ಕಣ್ಣಿನ ಶಸ್ತ್ರಚಿಕಿತ್ಸೆ ತುರ್ತಾಗಿ ಆಗಬೇಕಾದ ಕೆಲಸ. ಚಿಕಿತ್ಸೆ ಮುಂದೂಡಿದರೆ ರೋಗಿಗಳು ಜೀವನಪರ್ಯಂತ ನೋವು ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇದೆ. ಅನಿವಾರ್ಯ ಸಂದರ್ಭಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಶಸ್ತ್ರಚಿಕಿತ್ಸೆ ಮುಂದೂಡುವುದು ಸರಿ. ಆದರೆ, ಆರೇಳು ತಿಂಗಳ ಕಾಲ ಮುಂದೂಡುವುದು ಖಂಡಿತಾ ಸಾಧುವಲ್ಲ. ತಜ್ಞರೇ ಇರುವ ಟಾಸ್ಕ್‌ಫೋರ್ಸ್ ಕೂಡ ಇದನ್ನು ಈವರೆಗೆ ರಾಜ್ಯ ಸರ್ಕಾರದ ಗಮನಕ್ಕೆ ತರದಿರುವುದು ಸೋಜಿಗವೇ ಸರಿ. ಲಾಕ್‌ಡೌನ್‌ ಸಮಯದಲ್ಲಿ ರಾಜ್ಯದ ಕೆಲ ಕ್ಯಾನ್ಸರ್‌ ಆಸ್ಪತ್ರೆಗಳಲ್ಲೂ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದವರಿಗೆ ಸಕಾಲದಲ್ಲಿ ಚಿಕಿ‌ತ್ಸೆ ದೊರೆಯದ ನಿದರ್ಶನಗಳು ವರದಿಯಾಗಿವೆ. ಅವರೆಲ್ಲ ಈಗ ರೋಗದ ಮುಂದಿನ ಹಂತ ದಾಟಿಬಿಟ್ಟಿದ್ದಾರೆ. ಹಾಗಾಗಿ ಚಿಕಿತ್ಸೆಯು ಇನ್ನಷ್ಟು ಕ್ಲಿಷ್ಟವೂ ಜಟಿಲವೂ ಆಗಿದೆ ಎಂಬುದು ತಜ್ಞ ವೈದ್ಯರ ಕಳವಳ. ಕಣ್ಣಿನ ಶಸ್ತ್ರಚಿಕಿತ್ಸೆ ವಿಷಯದಲ್ಲೂ ಇದೇ ಪರಿಸ್ಥಿತಿ ಸೃಷ್ಟಿಯಾಗುವ ಅಪಾಯ ಗೋಚರಿಸುತ್ತಿದೆ. ಕಣ್ಣಿನ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಿದ್ದರಿಂದ ಮಿಂಟೊ ಆಸ್ಪತ್ರೆಯಲ್ಲಿ ಈಗಾಗಲೇ 12 ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಇವರೊಂದಿಗೆ ದಿನನಿತ್ಯದ ರೋಗಿಗಳನ್ನೂ ಸೇರಿಸಿಕೊಂಡರೆ ಈ ಎಲ್ಲರಿಗೂ ಶಸ್ತ್ರಚಿಕಿತ್ಸೆ ನಡೆಸಲು ಮೂರ್ನಾಲ್ಕು ವರ್ಷಗಳ ಸುದೀರ್ಘ ಅವಧಿಯೇ ಬೇಕಾಗಬಹುದು ಎಂದು ವರದಿಯಾಗಿದೆ. ಇದು, ತುಂಬಾ ಆತಂಕಕಾರಿ ವಿಚಾರ.

ಮಿಂಟೊ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗಾಗಿ ಮೀಸಲಿಟ್ಟಿರುವ ಹಾಸಿಗೆಗಳನ್ನು ಕಣ್ಣಿನ ಶಸ್ತ್ರಚಿಕಿತ್ಸೆಗೆ ದಾಖಲಾಗುವವರಿಗೆ ಬಳಸಲು ಅವಕಾಶ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಆಸ್ಪತ್ರೆಯ ನಿರ್ದೇಶಕರು ಈಗಾಗಲೇ ಪತ್ರ ಬರೆದಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಬೇಕು. ರಾಜ್ಯದ ಇನ್ನೂ ಕೆಲ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಕೂಡ ಇಂತಹ ಸಮಸ್ಯೆಗಳಿಂದ ಹೊರತಾಗಿಲ್ಲ. ಅಲ್ಲೆಲ್ಲ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟಿದ್ದರೂ ಅವು ಬಳಕೆಯಾಗಿದ್ದು ವಿರಳ ಎಂಬ ವರದಿಗಳಿವೆ. ಇದರಿಂದಾಗಿ, ಬೇರೆ ಬೇರೆ ಬಗೆಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರು ಪರಿತಪಿಸುವಂತಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಈಗ ಬೇರೆ ವ್ಯವಸ್ಥೆಗಳಿರುವುದರಿಂದ ಇಂತಹ ಆಸ್ಪತ್ರೆಗಳನ್ನು ಆ ನಿರ್ದಿಷ್ಟ ರೋಗಿಗಳಿಗೆ ಮುಕ್ತವಾಗಿಸುವ ನೆಲೆಯಲ್ಲಿ ಯೋಚಿಸಬೇಕಾಗಿದೆ. ಸದ್ಯಕ್ಕೆ ಕೋವಿಡ್‌ನೊಂದಿಗೇ ಬದುಕು ನಡೆಸಬೇಕಾದುದು ಅನಿವಾರ್ಯ. ಅದು ಸೋಕದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ವಹಿಸುವುದರೊಂದಿಗೆ ಇತರ ಆರೋಗ್ಯ ಸಮಸ್ಯೆಗಳ ನಿವಾರಣೆ ಮತ್ತು ಚಿಕಿತ್ಸೆಗಳತ್ತಲೂ ಕಾಳಜಿ ವಹಿಸಬೇಕಾಗಿದೆ. ಬೇರೆ ಬೇರೆ ರೋಗಗಳಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಲ್ಲಿ ಅದಕ್ಕೆ ಹೇಗೆ ಸ್ಪಂದಿಸಬೇಕು ಎಂಬುದರ ಬಗ್ಗೆ ಮಾರ್ಗೋಪಾಯಗಳನ್ನು ಶೋಧಿಸಬೇಕು. ಶಸ್ತ್ರಚಿಕಿತ್ಸೆಗಳನ್ನು ಪುನರಾರಂಭಿಸಲು ಸಿದ್ಧರಿದ್ದೇವೆ ಎಂದು ಮಿಂಟೊ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ನಿರ್ದೇಶಕರು ಹೇಳಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಈಗ ತಕ್ಷಣ ನಿರ್ಧಾರ ಕೈಗೊಳ್ಳಬೇಕು. ಈ ಸಂಬಂಧ ತಜ್ಞರ ಜತೆ ಈಗಾಗಲೇ
ಚರ್ಚಿಸಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ. ಸಾಧಕ–ಬಾಧಕ ಕುರಿತು ಟಾಸ್ಕ್‌ಫೋರ್ಸ್ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ, ತ್ವರಿತ ನಿರ್ಧಾರ ಕೈಗೊಳ್ಳುವುದು ದೃಷ್ಟಿ ಸಮಸ್ಯೆಗಳಿಗೆ ಒಳಗಾದವರ ಹಿತದೃಷ್ಟಿಯಿಂದ ಅತ್ಯಗತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು