ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟ ಶಮನಕ್ಕೆ ರಿಸರ್ವ್ ಬ್ಯಾಂಕಿನ ದಿಟ್ಟ ಕ್ರಮ

ಹಿಂದೆಂದೂ ಕಂಡರಿಯದ ಬಿಕ್ಕಟ್ಟು ಎದುರಾಗಿದೆ. ಪರಿಸ್ಥಿತಿ ವಿಷಮಿಸಿದರೆ ಮತ್ತಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಆರ್‌ಬಿಐ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು
Last Updated 29 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಆರ್ಥಿಕ ಪ್ರಗತಿಯು ಅತ್ಯಂತ ನಿಧಾನಗತಿಯಲ್ಲಿರುವ ಸಂದರ್ಭದಲ್ಲಿಯೇ ಕೊರೊನಾ–2 ವೈರಾಣು ಪಿಡುಗಿನ ಆಘಾತ ಎದುರಾಗಿದೆ. ಇದು, ಆರೋಗ್ಯ ಕ್ಷೇತ್ರದ ಮೇಲಷ್ಟೇ ಅಲ್ಲ, ಆರ್ಥಿಕತೆಯ ಮೇಲೂ ಬಹುದೊಡ್ಡ ಒತ್ತಡ ಉಂಟು ಮಾಡಿದೆ. ಪ್ರಗತಿಯ ಮಂದಗತಿ ಇನ್ನಷ್ಟು ಗಾಢವಾಗಲಿದೆ. ಇಂತಹ ಸಂಕಷ್ಟವನ್ನು ಎದುರಿಸುವುದಕ್ಕಾಗಿ ಅರ್ಥ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೈಗೊಂಡಿರುವ ಉಪಕ್ರಮಗಳು ಸ್ವಾಗತಾರ್ಹ.

ದೇಶಿ ಆರ್ಥಿಕತೆಯು ಬಿಕ್ಕಟ್ಟಿನಿಂದ ಪಾರಾಗಲು ಮತ್ತು ಚೇತರಿಕೆಯ ಹಾದಿಗೆ ಹೊರಳಲು ಈ ಕೊಡುಗೆಯು ದೀರ್ಘಾವಧಿ ಪರಿಣಾಮ ಬೀರಲಿದೆ. ದೇಶಿ ಆರ್ಥಿಕತೆಗೆ ಸಂಬಂಧಿಸಿದ ತಳಮಳ ಮತ್ತು ಕಳವಳವನ್ನು ಉಪಶಮನಗೊಳಿಸಲು ಈ ಉಪಕ್ರಮಗಳು ನೆರವಾಗಲಿವೆ. ಆರ್‌ಬಿಐ ಕೈಗೊಂಡ ನಿರ್ಧಾರಗಳಲ್ಲಿ ಮಾನವೀಯ ಸ್ಪರ್ಶ ಇದೆ. ಜತೆಗೆ, ಹಣಕಾಸು ಸ್ಥಿರತೆಗೆ ಒತ್ತು ನೀಡಿರುವುದರಿಂದ ಉದ್ಯಮಿಗಳು ಮತ್ತು ಜನಸಾಮಾನ್ಯರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ದೀರ್ಘಾವಧಿಯ ವಿವಿಧ ಸಾಲಗಳ ಕಂತು ಪಾವತಿಗೆ 3 ತಿಂಗಳ ಬಿಡುವು ನೀಡಿರುವುದು, ಸಾಲಗಾರರ ಮೇಲಿರುವ ಹಣಕಾಸಿನ ಹೊರೆಯನ್ನು ತಕ್ಷಣಕ್ಕೆ ತಗ್ಗಿಸಲಿದೆ. ರೆಪೊ ದರ, ನಗದು ಮೀಸಲು ಅನುಪಾತ (ಸಿಆರ್‌ಆರ್) ಕಡಿತದಂತಹ ಕ್ರಮಗಳಿಂದ ಬ್ಯಾಂಕಿಂಗ್‌ ವ್ಯವಸ್ಥೆಗೆ ಹೆಚ್ಚುವರಿಯಾಗಿ ₹3.74 ಲಕ್ಷ ಕೋಟಿ ನಗದು ಲಭ್ಯವಾಗಲಿದೆ.

ಹಣಕಾಸು ಮಾರುಕಟ್ಟೆಯಲ್ಲಿ ಮಡುಗಟ್ಟಿರುವ ಆತಂಕವನ್ನು ಈ ಕ್ರಮಗಳು ನಿವಾರಿಸಲಿವೆ ಮತ್ತು ಆರ್ಥಿಕತೆಯಲ್ಲಿನಮಂದಗತಿಯ ಪ್ರಗತಿಯು ಇನ್ನಷ್ಟು ನಿಧಾನಗೊಳ್ಳುವುದನ್ನು ತಡೆಯಲು ನೆರವಾಗಲಿವೆ. ಹಣಕಾಸು ಮಾರುಕಟ್ಟೆಗಳು ಸುಸೂತ್ರವಾಗಿ ಕಾರ್ಯನಿರ್ವಹಿಸಲು, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಕ್ರಮಗಳನ್ನು ಪೋಷಿಸಲು ಮತ್ತು ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲುಈ ಎಲ್ಲ ಕ್ರಮಗಳು ಪೂರಕವಾಗಿ ಒದಗಿಬರಲಿವೆ.

ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯನ್ನು ಒಂದು ವಾರ ಮುಂಚಿತವಾಗಿ ನಡೆಸಿ, ದೃಢ ನಿರ್ಧಾರಕ್ಕೆ ಬಂದಿರುವುದು ಕೇಂದ್ರೀಯ ಬ್ಯಾಂಕ್‌ನ ಕಾಳಜಿಗೆ ನಿದರ್ಶನ. ಅಸಾಧಾರಣ ಎನ್ನಬಹುದಾದ ಈಗಿನ ಬಿಕ್ಕಟ್ಟು ನಿವಾರಿಸುವ ಹಾದಿಯಲ್ಲಿ ಎದುರಾಗಬಹುದಾದ ಅಡಚಣೆಗಳನ್ನು ದೂರ ಮಾಡಲು ಆರ್‌ಬಿಐ ಮುಂದಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಈ ಕ್ರಮಗಳು ನೀಡುತ್ತವೆ. ಇದೇ ಮುತುವರ್ಜಿಯನ್ನು ಬ್ಯಾಂಕುಗಳು ಕೂಡ ತೋರಬೇಕು.

ರೆಪೊ ದರ ಕಡಿತದ ಪ್ರಯೋಜನವನ್ನು ಬ್ಯಾಂಕುಗಳುಗ್ರಾಹಕರಿಗೆ ಗರಿಷ್ಠ ಮಟ್ಟದಲ್ಲಿ ತುರ್ತಾಗಿ ವರ್ಗಾಯಿಸಬೇಕು. ಅದರಿಂದ ಬ್ಯಾಂಕ್‌ಗಳ ಸಾಲಗಳ ಬಡ್ಡಿ ದರ ಗಣನೀಯವಾಗಿ ತಗ್ಗಲಿದೆ. ದೇಶದಾದ್ಯಂತ ಜಾರಿಯಲ್ಲಿ ಇರುವ ದಿಗ್ಬಂಧನವು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಹಣಕಾಸು ವ್ಯವಸ್ಥೆಯಲ್ಲಿ ಆತಂಕದ ಕಂಪನಗಳನ್ನು ಸೃಷ್ಟಿಸಿದೆ. ಅರ್ಥ ವ್ಯವಸ್ಥೆಯು ತೀವ್ರ ನಾಜೂಕಿನ ಪರಿಸ್ಥಿತಿಯಲ್ಲಿ ಇರುವಾಗ ಹಣದ ಹರಿವು ಹೆಚ್ಚಿಸುವ ನಿರ್ಧಾರಗಳು ಆರ್ಥಿಕತೆ ಚೇತರಿಸಿಕೊಳ್ಳಲು ಉತ್ತೇಜನ ನೀಡಬಹುದು. ಇದರಿಂದ ಹಣಕಾಸು ಮಾರುಕಟ್ಟೆಯು ಸ್ಥಿರತೆ ಕಾಯ್ದುಕೊಳ್ಳುವುದು ಸಾಧ್ಯವಾಗಬಹುದು.

ಸದ್ಯದ ಅನಿಶ್ಚಿತ ಪರಿಸ್ಥಿತಿ ಎಲ್ಲಿಯವರೆಗೆ ಮುಂದುವರಿಯಲಿದೆ ಎನ್ನುವುದು ಖಚಿತವಿಲ್ಲ.ಹಿಂದೆಂದೂ ಕಂಡರಿಯದ ಬಿಕ್ಕಟ್ಟು ಈಗ ಎದುರಾಗಿದೆ. ಹಾಗಾಗಿ, ಆರ್‌ಬಿಐ ಈಗ ಪ್ರಕಟಿಸಿರುವ ಕ್ರಮಗಳನ್ನು, ಆರ್ಥಿಕತೆಯ ರಕ್ಷಣೆಗೆ ಕೈಗೊಂಡಿರುವ ಆರಂಭಿಕ ಉಪಕ್ರಮಗಳು ಎಂದಷ್ಟೇ ಭಾವಿಸಬೇಕಾಗಿದೆ. ದೇಶಿ ಹಣಕಾಸು ವ್ಯವಸ್ಥೆಗೆ ಇನ್ನೂ ಹೆಚ್ಚಿನ ನೆರವಿನ ಅಗತ್ಯ ಉದ್ಭವಿಸಬಹುದು. ಸಣ್ಣ ಮತ್ತು ಮಧ್ಯಮ (ಎಸ್‌ಎಂಇ) ಉದ್ಯಮಿಗಳಿಗೆ ಅಗತ್ಯ ಹಣಕಾಸು ನೆರವು ಕಲ್ಪಿಸಲು ಇನ್ನಷ್ಟು ಕ್ರಮ ಕೈಗೊಳ್ಳುವ ಅಗತ್ಯ ಎದುರಾಗಬಹುದು. ಒಂದು ವೇಳೆ ಹಣಕಾಸು ಪರಿಸ್ಥಿತಿ ವಿಷಮಗೊಂಡರೆ ಮತ್ತಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಅನಿವಾರ್ಯವೂ ಸೃಷ್ಟಿಯಾಗಬಹುದು.

‘ಇದು ಅಸಾಮಾನ್ಯ ಸಂದರ್ಭ. ಹಾಗಾಗಿ ಅರ್ಥ ವ್ಯವಸ್ಥೆಗೆ ಬೆಂಬಲವಾಗಿ ನಿಲ್ಲಲು ಅಭೂತಪೂರ್ವ ಕ್ರಮ ಬೇಕಾಗುತ್ತದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿರುವುದು ಭರವಸೆದಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT