ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಲಾಕ್‌ಡೌನ್‌ ತೆರವಿನ ಬಳಿಕ ಕೋವಿಡ್‌ ಜಾಗೃತಿ ಇನ್ನೂ ಹೆಚ್ಚಲಿ

ನಮ್ಮೆಲ್ಲರ ಹೊಣೆ
Last Updated 22 ಜುಲೈ 2020, 0:58 IST
ಅಕ್ಷರ ಗಾತ್ರ

ಇನ್ನೊಂದು ಲಾಕ್‌ಡೌನ್‌ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಆಗದಂತೆ ನೋಡಿಕೊಂಡು, ಎಲ್ಲರೂ ಜತೆಯಾಗಿ ಕೋವಿಡ್‌ ಪಿಡುಗನ್ನು ಹಿಮ್ಮೆಟ್ಟಿಸೋಣ. ಇದು, ಸರ್ಕಾರದ್ದು ಮಾತ್ರವಲ್ಲ ನಮ್ಮೆಲ್ಲರ ಹೊಣೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಜ್ಯದ ಹಲವೆಡೆ ಹೇರಲಾಗಿದ್ದ ಲಾಕ್‌ಡೌನ್‌ ಕೊನೆಗೊಂಡಿದೆ. ಲಾಕ್‌ಡೌನ್‌ನಿಂದ ದೊಡ್ಡ ಮಟ್ಟದ ಪ್ರಯೋಜನ ಆಗದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ, ಇನ್ನು ಮುಂದೆ ಲಾಕ್‌ಡೌನ್‌ ಇರುವುದಿಲ್ಲ ಎಂದೂ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೆಲವು ದಿನಗಳಿಂದ ಪ್ರತಿದಿನ ಸುಮಾರು ನಾಲ್ಕು ಸಾವಿರ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. ಅದರ ಪೈಕಿ ಸುಮಾರು ಅರ್ಧದಷ್ಟು ಬೆಂಗಳೂರಿನಲ್ಲಿಯೇ ವರದಿಯಾಗಿವೆ. ಆದರೆ, ಸೋಮವಾರ ಈ ಸಂಖ್ಯೆಯಲ್ಲಿ ಅಲ್ಪ ಕುಸಿತವಾಗಿದೆ. ಲಾಕ್‌ಡೌನ್‌ನಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆಯೇ ಎಂಬುದು ತಿಳಿದಿಲ್ಲ. ಮಾರ್ಚ್‌ 24ರಂದು ದೇಶದಾದ್ಯಂತ ಲಾಕ್‌ಡೌನ್‌ ಹೇರಿಕೆಯಾದಾಗ ಇದ್ದ ಪ್ರಕರಣಗಳ ಸಂಖ್ಯೆ ಸುಮಾರು 500 ಮಾತ್ರ. ಆದರೆ, ಜೂನ್‌ನಲ್ಲಿ ಲಾಕ್‌ಡೌನ್‌ ತೆರವು ಮಾಡುವ ಹಂತಕ್ಕೆ ಬಂದಾಗ ಪ್ರಕರಣಗಳ ಸಂಖ್ಯೆ ಸುಮಾರು 50 ಸಾವಿರ ಆಗಿತ್ತು. ಲಾಕ್‌ಡೌನ್‌ನಿಂದ ಕೋವಿಡ್‌ ನಿಯಂತ್ರಣ ಸಾಧ್ಯವೇ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಇನ್ನೂ ಸಿಕ್ಕಿಲ್ಲ.

ಸ್ವೀಡನ್‌, ಹಾಲೆಂಡ್‌ನಂತಹ ದೇಶಗಳು ಕಠಿಣ ಲಾಕ್‌ಡೌನ್‌ ಇಲ್ಲದೆಯೇ ಈ ಪಿಡುಗನ್ನು ಹಿಮ್ಮೆಟ್ಟಿಸಿದ ನಿದರ್ಶನ ನಮ್ಮ ಮುಂದೆ ಇದೆ. ಈ ಸಾಂಕ್ರಾಮಿಕದ ವಿರುದ್ಧದ ಯುದ್ಧದಲ್ಲಿ ಜಯ ಗಳಿಸಲು ಸೋಂಕು ಪತ್ತೆಯೇ ಬಹುದೊಡ್ಡ ಅಸ್ತ್ರ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಹೇಳಿದೆ. ಪರೀಕ್ಷೆಯ ಮೂಲಕ ಸೋಂಕಿತರನ್ನು ಪತ್ತೆ ಮಾಡಬೇಕು, ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸಬೇಕು ಮತ್ತು ಇವರೆಲ್ಲರನ್ನೂ ಪ್ರತ್ಯೇಕವಾಗಿ ಇರಿಸಬೇಕು. ಕೋವಿಡ್‌ ದೃಢಪಟ್ಟು, ಚಿಕಿತ್ಸೆ ಅಗತ್ಯ ಇದ್ದವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು. ಇದುವೇ ಕೋವಿಡ್‌ ನಿಯಂತ್ರಣದ ಮೂಲಮಂತ್ರ. ಯಡಿಯೂರಪ್ಪನವರೂ ಇದನ್ನೇ ಹೇಳಿದ್ದಾರೆ. ಆರೋಗ್ಯ ರಕ್ಷಣೆ ವ್ಯವಸ್ಥೆಯಲ್ಲಿ ಕೊರತೆ, ಲೋಪ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ. ಈ ದಿಸೆಯಲ್ಲಿ ಸರ್ಕಾರವು ಸರ್ವಪ್ರಯತ್ನ ನಡೆಸಬೇಕಾದುದು ಈಗಿನ ಜರೂರು.

ಲಾಕ್‌ಡೌನ್‌ ಎಂಬುದು ಸುಲಭದ ವಿಧಾನ ಏನಲ್ಲ. ಜನರ ಜೀವನೋಪಾಯ ಮತ್ತು ಎಲ್ಲ ಆರ್ಥಿಕ, ಸಾಮಾಜಿಕ ಚಟುವಟಿಕೆಗಳನ್ನು ಲಾಕ್‌ಡೌನ್‌ ಹೆಸರಿನಲ್ಲಿ ಕೋವಿಡ್‌ಗೆ ಒತ್ತೆ ಇಟ್ಟುಬಿಟ್ಟರೆ ಭವಿಷ್ಯವೇ ಮಸುಕಾಗಿಬಿಡಬಹುದು. ಕುಟುಂಬಗಳು, ಸಂಸ್ಥೆಗಳು, ಸರ್ಕಾರಗಳು ಕೋವಿಡ್‌ ಮುಂಚಿನ ಸ್ಥಿತಿಗೆ ಬರಲು ವರ್ಷಗಳೇ ಬೇಕಾಗಬಹುದು. ಹಾಗಾಗಿ, ಲಾಕ್‌ಡೌನ್‌ ಇಲ್ಲದೆಯೇ ಈ ಪಿಡುಗನ್ನು ಎದುರಿಸಲು ನಾವು ಸಿದ್ಧರಾಗಬೇಕಾಗಿದೆ. ಸೋಂಕು ಹರಡುವಿಕೆಯ ಆರಂಭದ ದಿನಗಳಲ್ಲಿ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ಹತ್ತಾರು ಪ್ರಕರಣಗಳು ದೃಢಪಟ್ಟಿದ್ದವು.

ಆರೂಕಾಲು ಸಾವಿರ ಮನೆಗಳು ಮತ್ತು ಇಪ್ಪತ್ತೊಂದೂವರೆ ಸಾವಿರ ಜನರು ಇರುವ ಈ ಪ್ರದೇಶ ಏಪ್ರಿಲ್‌ 9ರಂದೇ ಸೀಲ್‌ಡೌನ್ ಆಗಿತ್ತು. ಈ ವಾರ್ಡ್‌ನಲ್ಲಿ ಸೋಂಕನ್ನು ನಿಯಂತ್ರಿಸಲು ಸಾಧ್ಯ ಇಲ್ಲವೇನೋ ಎಂಬ ಆತಂಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಉಂಟಾಗಿತ್ತು. ಆದರೆ, ಇಂದು ಪಾದರಾಯನಪುರವು ಕೋವಿಡ್‌ ನಿಯಂತ್ರಣದ ಮಾದರಿಯಾಗಿ ನಮ್ಮ ಮುಂದೆ ಇದೆ. ಬಿಬಿಎಂಪಿ ಮತ್ತು ಪೊಲೀಸರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು, ಜನರಲ್ಲಿ ಮೂಡಿದ ಜಾಗೃತಿಯ ಪರಿಣಾಮ ಪಾದರಾಯನಪುರವು ಬೆಂಗಳೂರಿನ ಅತ್ಯಂತ ಸುರಕ್ಷಿತ ವಾರ್ಡ್‌ ಎನಿಸಿಕೊಂಡಿದೆ. ಕಳೆದ ಹತ್ತು ದಿನಗಳಲ್ಲಿ ಇಲ್ಲಿ ಒಂದು ಪ್ರಕರಣವೂ ದೃಢಪಟ್ಟಿಲ್ಲ.

ಈ ವಾರ್ಡ್‌ ನಮಗೆ ಕಲಿಸಿಕೊಟ್ಟ ಪಾಠ ಅತ್ಯಂತ ಸರಳವಾದುದು. ಅಂತರ ಕಾಯ್ದುಕೊಳ್ಳುವುದು, ಸೋಂಕಿತರು, ಅವರ ಸಂಪರ್ಕಿತರನ್ನು ಪ್ರತ್ಯೇಕವಾಗಿ ಇರಿಸುವುದನ್ನಷ್ಟೇ ನಾವು ಪಾಲಿಸಬೇಕಾಗಿದೆ. ಮತ್ತೊಂದು ಲಾಕ್‌ಡೌನ್‌ನಿಂದ ಹೊರಬಂದಿರುವ ನಮಗೆ ಈ ಸರಳ ಪಾಠ ಬಹಳ ಮಹತ್ವದ್ದಾಗಿದೆ. ಎಲ್ಲರೂ ಜಾಗೃತರಾಗಿರೋಣ, ಪರಸ್ಪರರಿಂದ ಅಂತರ ಕಾಯ್ದುಕೊಳ್ಳೋಣ, ನಮಗೆ ಸೋಂಕು ಬಾರದಂತೆ, ನಮ್ಮಿಂದ ಇತರರಿಗೆ ಹರಡದಂತೆ ಎಚ್ಚರ ವಹಿಸೋಣ. ಇನ್ನೊಂದು ಲಾಕ್‌ಡೌನ್‌ ಅನಿವಾರ್ಯ ಎಂಬಂಥ ಸ್ಥಿತಿ ನಿರ್ಮಾಣ ಆಗದಂತೆ ನೋಡಿಕೊಂಡು, ಎಲ್ಲರೂ ಜತೆಯಾಗಿ ಕೋವಿಡ್‌ ಪಿಡುಗನ್ನು ಹಿಮ್ಮೆಟ್ಟಿಸೋಣ. ಇದು, ಸರ್ಕಾರದ್ದು ಮಾತ್ರವಲ್ಲ ನಮ್ಮೆಲ್ಲರ ಹೊಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT