ವಿರೋಧ ಪಕ್ಷಗಳ ಭಾರಿ ಒತ್ತಡದ ನಡುವೆ ಜಾತಿ ಜನಗಣತಿ ನಡೆಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ತೆಗೆದುಕೊಂಡಿದೆ. ದಶಕಕ್ಕೆ ಒಮ್ಮೆ ನಡೆಸಲಾಗುವ ಜನಗಣತಿಯ ಜೊತೆಗೆ ಜಾತಿ ಜನಗಣತಿಯೂ ನಡೆಯಲಿದೆ ಮತ್ತು ಇದು ದೇಶದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಯ ಮೇಲೆ ವ್ಯಾಪಕವಾದ ಪರಿಣಾಮಗಳನ್ನು ಬೀರಲಿದೆ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಜಾತಿ ಜನಗಣತಿ ನಡೆಸುವುದಕ್ಕೆ ಅನುಮೋದನೆ ನೀಡಿದೆ. ‘ಇದು ನೀತಿಗೆ ಸಂಬಂಧಿಸಿದ ವಿಚಾರ’ ಎಂದು ಬಹುದೀರ್ಘ ಕಾಲದಿಂದ ಜಾತಿ ಜನಗಣತಿಯ ಚಿಂತನೆಯನ್ನೇ ವಿರೋಧಿಸಿಕೊಂಡು ಬಂದಿದ್ದ ಬಿಜೆಪಿ, ಈಗ ಗಣತಿ ನಡೆಸಲು ಮುಂದಾಗಿದೆ. ಬಿಜೆಪಿ ಮಾತ್ರವಲ್ಲದೆ ಆರ್ಎಸ್ಎಸ್ ಕೂಡ ಜಾತಿ ಜನಗಣತಿಯನ್ನು ನಿರಂತರವಾಗಿ ವಿರೋಧಿಸಿಕೊಂಡೇ ಬಂದಿದೆ. ಜಾತಿ ಗುಂಪುಗಳು ದೃಢಗೊಂಡು ಹಿಂದೂ ಅಸ್ಮಿತೆಗೆ ಹೊಡೆತ ಕೊಟ್ಟರೆ, ರಾಜಕೀಯವಾಗಿ ಅದು ಬಿಜೆಪಿಗೆ ನಷ್ಟ ಉಂಟುಮಾಡಬಹುದು ಎಂಬುದು ಈ ವಿರೋಧಕ್ಕೆ ಕಾರಣ. ಮತ ಬ್ಯಾಂಕ್ಗಳನ್ನು ಗಟ್ಟಿಗೊಳಿಸುವ ಪ್ರತಿಗಾಮಿ ಪ್ರಯತ್ನ ಇದು ಎಂದು ಜಾತಿ ಜನಗಣತಿಯನ್ನು ಬಿಜೆಪಿ ಈ ಹಿಂದೆ ಬಣ್ಣಿಸಿತ್ತು. ಲೋಕಸಭೆಗೆ 2024ರಲ್ಲಿ ನಡೆದ ಚುನಾವಣೆಯ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿಯ ಪ್ರಸ್ತಾವವನ್ನು ಕಾಂಗ್ರೆಸ್ ಸೇರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅದನ್ನು ಬಲವಾಗಿ ವಿರೋಧಿಸಿದ್ದರು.

ಈಗ, ಮೋದಿ ನೇತೃತ್ವದ ಸಂಪುಟ ಸಮಿತಿಯು ಜಾತಿ ಜನಗಣತಿಗೆ ಅನುಮೋದನೆ ಕೊಡುವುದರೊಂದಿಗೆ ಸರ್ಕಾರದ ನೀತಿಯಲ್ಲಿ ಭಾರಿ ಪಲ್ಲಟ ಕಂಡುಬಂದಿದೆ. ಸಾಮಾಜಿಕ ನ್ಯಾಯ ಒದಗಿಸುವ ದಿಸೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬಿಂಬಿಸಲು ಸರ್ಕಾರ ಯತ್ನಿಸುತ್ತಿದೆ. ಆದರೆ, ರಾಜಕೀಯ ಒತ್ತಡಗಳೇ ಇದರ ಹಿಂದೆ ಇರುವುದು ಎಂಬುದು ಬಹಳ ಸ್ಪಷ್ಟ. ಜಾತಿ ಜನಗಣತಿ ನಡೆಸಲೇಬೇಕು ಎಂಬ ಸೈದ್ಧಾಂತಿಕ ನಿಲುವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೃಢವಾಗಿ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಹಾಗಾಗಿ, ಇದು ತನ್ನದೇ ನಿರ್ಧಾರ ಎಂದು ಬಿಜೆಪಿ ಹೇಳದೇ ಇದ್ದರೆ ರಾಹುಲ್ ಅವರ ಸಂಕಥನದ ಜೊತೆಗೆ ಅನಿವಾರ್ಯವಾಗಿ ರಾಜಿ ಮಾಡಿಕೊಂಡಿದೆ ಎಂದು ಬಿಂಬಿತವಾಗುತ್ತದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನೂ ಆಗಿರುವ ರಾಹುಲ್ ಅವರು ಜಾತಿ ಜನಗಣತಿಯನ್ನು ಪರಿಣಾಮಕಾರಿಯಾದ ಚುನಾವಣಾ ವಿಷಯ ಆಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾತಿ ಜನಗಣತಿಯ ಸಂಕಥನವನ್ನು ಬೇರೆಯವರು ಕಸಿದುಕೊಳ್ಳುವುದನ್ನು ತಡೆಯಲು ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟದಲ್ಲಿರುವ ಮಿತ್ರಪಕ್ಷಗಳು ಎಲ್ಲ ಪ್ರಯತ್ನಗಳನ್ನೂ ನಡೆಸಲಿವೆ. ಜಾತಿ ಜನಗಣತಿಯಿಂದಾಗಿ ಒಬಿಸಿಯ ಪ್ರಭಾವಿ ಗುಂಪುಗಳು ಸಂಘಟಿತಗೊಳ್ಳಬಹುದು. ಹಿಂದೂ ರಾಷ್ಟ್ರೀಯವಾದಿ ಸಂಕಥನವನ್ನೇ ಆರಂಭದಿಂದಲೂ ನೆಚ್ಚಿಕೊಂಡಿರುವ ಬಿಜೆಪಿಗೆ ಇದು ಪಥ್ಯವಾಗುವುದು ಕಷ್ಟ. ಆ ಕಾರಣಕ್ಕಾಗಿಯೇ ಜಾತಿ ಜನಗಣತಿ ಚಿಂತನೆಯನ್ನು ಬಿಜೆಪಿ ತಿರಸ್ಕರಿಸುತ್ತಲೇ ಬಂದಿತ್ತು. ಒಬಿಸಿ–ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ ಒಗ್ಗೂಡುವಿಕೆಯನ್ನು ತಡೆಯಲು ಈಗಿನ ಜಾತಿ ಜನಗಣತಿಯನ್ನು ಬಿಜೆಪಿ ಬಳಸಿಕೊಳ್ಳಬಹುದು. ಏಕೆಂದರೆ, ಲೋಕಸಭೆಗೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಈ ಸಮೀಕರಣವು ಬಿಜೆಪಿಯ ಸ್ಥಾನ ಗಳಿಕೆಯ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಬಿಹಾರ ವಿಧಾನಸಭೆಗೆ ಈ ವರ್ಷ ನಡೆಯಲಿರುವ ಚುನಾವಣೆಯು ಜಾತಿ ಅಸ್ಮಿತೆಯ ಸುತ್ತ ನಿರ್ಮಾಣವಾಗಿರುವ ಅಭಿಯಾನವನ್ನು ಪರೀಕ್ಷೆಗೆ ಒಡ್ಡಲಿದೆ. ಕಾಂಗ್ರೆಸ್ ಆಳ್ವಿಕೆ ಇರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜಾತಿ ಜನಗಣತಿ ಈಗಾಗಲೇ ನಡೆದಿದೆ. ಹಾಗಾಗಿ, ಜಾತಿ ಜನಗಣತಿ ಆರಂಭಿಸಿದ ಹಿರಿಮೆ ತನ್ನದು ಎಂಬ ಭಾವನೆ ಕಾಂಗ್ರೆಸ್ಗೆ ಇದೆ. ರಾಷ್ಟ್ರ ಮಟ್ಟದಲ್ಲಿ ಗಣತಿ ಆರಂಭಿಸುವ ಮೂಲಕ ಈ ಹಿರಿಮೆಯನ್ನು ಕಸಿದುಕೊಳ್ಳುವ ಉದ್ದೇಶವನ್ನೂ ಕೇಂದ್ರ ಸರ್ಕಾರ ಹೊಂದಿರಬಹುದು.

ಜಾತಿ ಜನಗಣತಿ ನಡೆಸುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೂ ಅದಕ್ಕೆ ಕಾಲಮಿತಿಯನ್ನು ಹಾಕಿಕೊಂಡಿಲ್ಲ. ಒಬಿಸಿ ಸಮುದಾಯಗಳಿಗೆ ಸಂಬಂಧಿಸಿದ ನೀತಿ ನಿರೂಪಣೆ ಮತ್ತು ಸಂಪನ್ಮೂಲ ಹಂಚಿಕೆಗೆ ಜಾತಿ ಜನಗಣತಿಯು ನಿರ್ಣಾಯಕ. ಆದರೆ ಹಲವು ಪ್ರಶ್ನೆಗಳು ಇವೆ: ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಅವಕಾಶ ಇದೆಯೇ? ಗಣತಿಗೆ ಬಳಸುವ ವಿಧಾನ ಯಾವುದು? ಪರಿಣಾಮಕಾರಿ ಅನುಷ್ಠಾನ ಸಾಧ್ಯವೇ? 2021ರಲ್ಲಿ ನಡೆಸಬೇಕಿದ್ದ ಜನಗಣತಿ ಪ್ರಕ್ರಿಯೆ ಇನ್ನೂ ಆರಂಭ ಆಗಿಲ್ಲ. ಹಾಗಿರುವಾಗ, ಜಾತಿ ಜನಗಣತಿ ಯಾವಾಗ ನಡೆಯಬಹುದು? 2011ರ ಜನಗಣತಿಯ ಸಮೀಕ್ಷೆಯಲ್ಲಿ ಸಾಮಾಜಿಕ–ಆರ್ಥಿಕ ಮತ್ತು ಜಾತಿಯ ಮಾಹಿತಿ ಸಂಗ್ರಹಿಸಲಾಗಿತ್ತು. ಆದರೆ, ಸಮೀಕ್ಷೆಯ ವರದಿ ಇನ್ನೂ ಬಹಿರಂಗ ಆಗಿಲ್ಲ. ಹಾಗಿರುವಾಗ, ಹೊಸ ಜಾತಿ ಜನಗಣತಿಯನ್ನು ದಕ್ಷವಾಗಿ, ಪ್ರಾಮಾಣಿಕವಾಗಿ ನಡೆಸಿ, ವರದಿಯನ್ನು ಬಿಡುಗಡೆ ಮಾಡುವ ಗುರುತರ ಹೊಣೆಗಾರಿಕೆ ಸರ್ಕಾರದ ಮೇಲೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.