ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮರುವಲಸೆಯ ಅಪಾಯ ಕಡೆಗಣಿಸಬೇಡಿ; ಗ್ರಾಮಗಳನ್ನು ಸೋಂಕಿನಿಂದ ಕಾಪಾಡಿ

Last Updated 28 ಏಪ್ರಿಲ್ 2021, 19:07 IST
ಅಕ್ಷರ ಗಾತ್ರ

ಕೋವಿಡ್‌ ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರವು 14 ದಿನಗಳ ಕರ್ಫ್ಯೂ ಘೋಷಿಸಿದ ಬೆನ್ನಲ್ಲೇ ಬೆಂಗಳೂರು ಸಹಿತ ಪ್ರಮುಖ ನಗರಗಳಿಂದ ಹಳ್ಳಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮರುವಲಸೆ ನಡೆದಿದೆ. ಸುದೀರ್ಘ ಕರ್ಫ್ಯೂ ಅವಧಿಯಲ್ಲಿ ಯಾವುದೇ ಆದಾಯವಿಲ್ಲದೆ ಬಡ ಕುಟುಂಬಗಳು ದೊಡ್ಡ ನಗರಗಳಲ್ಲಿ ಬದುಕು ಸಾಗಿಸುವುದು ಕಷ್ಟ. ಸ್ವಂತ ಊರುಗಳಿಗೆ ತೆರಳಿದರೆ ಆರೋಗ್ಯವನ್ನಾದರೂ ರಕ್ಷಣೆ ಮಾಡಿಕೊಳ್ಳಬಹುದು ಎಂಬ ಆಶಯ ಈ ಮಹಾವಲಸೆಯ ಹಿಂದಿದೆ. ಯಾವುದೇ ಗಳಿಕೆಯಿಲ್ಲದೆ ಬೆಂಗಳೂರಿನಂತಹ ನಗರದಲ್ಲಿ ದುಬಾರಿ ಮನೆಬಾಡಿಗೆ ತೆತ್ತು ಸುಮ್ಮನೇ ಕಾಲ ಕಳೆಯುವುದು ಕಾರ್ಮಿಕ ವರ್ಗದ ಪಾಲಿಗಂತೂ ಆಗದ ಮಾತು. ಅವರ ಧಾವಂತ ಸ್ವಯಂವೇದ್ಯ. ಆದರೆ, ಕರ್ಫ್ಯೂ ಜಾರಿಗೊಳಿಸುವ ಮುನ್ನ ಪೂರ್ವಸಿದ್ಧತೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಗ್ರಾಮೀಣ ಭಾಗಗಳತ್ತ ಮರುವಲಸೆ ನಡೆಯಲಿದೆ ಎನ್ನುವುದು ಗೊತ್ತಿದ್ದೂ ಕರ್ಫ್ಯೂ ಘೋಷಣೆಗೆ ಮುನ್ನ ಕಟ್ಟುನಿಟ್ಟಿನ ತಪಾಸಣೆಗಾಗಲೀ ಕ್ವಾರಂಟೈನ್‌ಗಾಗಲೀ ಯಾವುದೇ ವ್ಯವಸ್ಥೆಯನ್ನು ಮಾಡಿಕೊಳ್ಳಲಿಲ್ಲ. ರಾಜ್ಯದ ಶೇಕಡ 60ರಷ್ಟು ಸೋಂಕು ಪ್ರಕರಣಗಳು ವರದಿ ಆಗುತ್ತಿರುವ ಬೆಂಗಳೂರಿನಿಂದ ಸೋಂಕಿತರೇನಾದರೂ ಹಳ್ಳಿಗಳಿಗೆ ವಲಸೆ ಹೋದರೆ ಸಾಂಕ್ರಾಮಿಕ ಉಲ್ಬಣಗೊಳ್ಳಬಹುದು ಎನ್ನುವ ಆತಂಕ ಸರ್ಕಾರವನ್ನು ಕಾಡದೇ ಇರುವುದು ಸೋಜಿಗ. ದೊಡ್ಡ ನಗರಗಳಿಂದ ವಾಪಸ್‌ ಹೋದವರನ್ನು ಯಾವ ಸೋಂಕು ಪತ್ತೆ ಪರೀಕ್ಷೆಗೂ ಒಳಪಡಿಸಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಏನಾದರೂ ವ್ಯಾಪಕವಾಗಿ ಹರಡಿದರೆ ಅದಕ್ಕೆ ಸರ್ಕಾರದ ನಿರ್ಲಕ್ಷ್ಯವಲ್ಲದೆ ಬೇರೇನೂ ಕಾರಣವಲ್ಲ. ಹೊರ ಊರುಗಳಿಂದ ಹಳ್ಳಿಗಳಿಗೆ ಮರಳಿರುವ ಜನರ ಮೇಲೆ ನಿಗಾ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚನೆಯೇನೋ ಹೊರಟಿದೆ. ಆದರೆ, ಹೊರಗಿನಿಂದ ಬಂದವರನ್ನು ಯಾವುದೇ ಪರೀಕ್ಷೆ ಮಾಡದೆ ಮೊದಲು ಹಾಗೇ ಬಿಟ್ಟುಕೊಂಡು, ಬಳಿಕ ನಿಗಾ ಇಡುವಂತೆ ಸೂಚನೆ ನೀಡಿದರೆ ಏನು ಪ್ರಯೋಜನ?

ಗ್ರಾಮೀಣಾಭಿವೃದ್ಧಿ ಇಲಾಖೆ ಬರೀ ಸುತ್ತೋಲೆ ಹೊರಡಿಸಿ ಸುಮ್ಮನೆ ಕುಳಿತುಕೊಳ್ಳುವಷ್ಟು ಪರಿಸ್ಥಿತಿ ಸರಳವಾಗಿಲ್ಲ. ವೈದ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರವೇ ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿದೆ. ಹಾಗಿರುವಾಗ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಮತ್ತು ತಜ್ಞ ವೈದ್ಯ ಸಿಬ್ಬಂದಿ ಇಲ್ಲದ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಗ್ರಾಮ ಮಟ್ಟದಲ್ಲಿ ಸೋಂಕು ಹರಡಿದರೆ ಪರಿಣಾಮ ಭೀಕರವಾಗಲಿದೆ. ಈ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಸಮರೋಪಾದಿಯಲ್ಲಿ ಕೆಲಸ ಮಾಡಲು ಸರ್ಕಾರವು ಸ್ಥಳೀಯ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಿದೆ. ತಾಲ್ಲೂಕು ದಂಡಾಧಿಕಾರಿಗಳಾದ ತಹಶೀಲ್ದಾರರು ಪ್ರತಿದಿನವೂ ಆಯಾ ತಾಲ್ಲೂಕಿನ ಕೋವಿಡ್ ಪರಿಸ್ಥಿತಿಯ ಅವಲೋಕನ ನಡೆಸಿ, ಯಾವ ಪ್ರದೇಶದಲ್ಲಿ ಆದ್ಯತೆಯ ಮೇಲೆ ತುರ್ತು ಕ್ರಮಗಳ ಅಗತ್ಯವಿದೆ ಎನ್ನುವುದನ್ನು ಪ್ರಕಟಿಸಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ ಇರುವ ಕೊರತೆಗಳನ್ನು ಸರಿಪಡಿಸಲು ಮತ್ತು ತುರ್ತು ವೈದ್ಯಕೀಯ ನೆರವು ಒದಗಿಸಲು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಕ್ರಮಗಳನ್ನು ಕೈಗೊಳ್ಳಬೇಕು. ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಾಪಸ್‌ ಹೋಗಿರುವ ದುಡಿಯುವ ಕೈಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಒಳಗೊಂಡಂತೆ ವಿವಿಧ ಯೋಜನೆಗಳಡಿ ತಕ್ಷಣಕ್ಕೆ ಕೆಲಸ ದೊರಕಿಸುವ ಕಾಮಗಾರಿಗಳನ್ನೂ ಆಯಾ ಜಿಲ್ಲಾ ಪಂಚಾಯಿತಿಗಳು ತುರ್ತಾಗಿ ಕೈಗೆತ್ತಿಕೊಳ್ಳಬೇಕು. ಪ್ರಾಥಮಿಕ ಹಂತದ ಸೋಂಕುಪೀಡಿತರ ಐಸೊಲೇಷನ್‍ಗೆ ಬೇಕಾದ ಪ್ರತ್ಯೇಕ ವ್ಯವಸ್ಥೆಗಳನ್ನೂ ತಾಲ್ಲೂಕು ಮಟ್ಟದಲ್ಲಿ ಕೈಗೊಳ್ಳಬೇಕು. ಮುಖ್ಯವಾಗಿ ಆಯಾ ಭಾಗದ ಶಾಸಕರು ಈ ವಿಷಯದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು. ತಾಲ್ಲೂಕು ಮಟ್ಟದಲ್ಲೇ ಕೋವಿಡ್ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗಲು ಪ್ರತಿಯೊಬ್ಬ ಶಾಸಕರೂ ಮುಂದಾದರೆ, ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ಮಾಡಬಹುದು. ಹಾಗೆಯೇ ಪರಿಸ್ಥಿತಿ ಬಿಗಡಾಯಿಸುವವರೆಗೆ ಕಾಯದೆ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ಮೂಲಕ ಸಾವು ನೋವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ದಿಸೆಯಲ್ಲಿಯೂ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT