ಭಾನುವಾರ, ಜೂನ್ 7, 2020
22 °C

ಸಂಪಾದಕೀಯ | ಜನರ ಜೀವನೋಪಾಯ ಚಿಗುರಲಿ ಸೋಂಕು ತಡೆ ಎಚ್ಚರ ಸದಾ ಇರಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ನ ಮೂರನೇ ಹಂತ ಇನ್ನೇನು ಆರಂಭವಾಗಲಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗಿರುವ ಕೆಂಪು ವಲಯಗಳು ಮತ್ತು ಪ್ರಕರಣಗಳು ವರದಿಯಾಗಿರುವ ಕಂಟೈನ್‌ಮೆಂಟ್‌ ವಲಯಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ ಬಿಟ್ಟು ಬೇರೆ ಯಾವುದೇ ಚಟುವಟಿಕೆಯು ದಿಗ್ಬಂಧನದ ಮೂರನೇ ವಿಸ್ತರಣೆಯ ಅವಧಿಯಲ್ಲಿಯೂ ಶುರುವಾಗುವ ಸಾಧ್ಯತೆ ಇಲ್ಲ ಎಂಬುದು ಪ್ರಧಾನಿ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ನಡುವಣ ಸಂವಾದದಿಂದ ನಿಚ್ಚಳವಾಗಿದೆ. ಹಾಗಿದ್ದರೂ ಆರ್ಥಿಕ ವ್ಯವಸ್ಥೆಯನ್ನು ಪುನರ್‌ ಆರಂಭಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಪ್ರಧಾನಿ ಹೇಳಿದ್ದಾರೆ.

ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳಾಗಿ ವಿಂಗಡಿಸಿ, ಹಸಿರು ವಲಯಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆಯಂತಹ ಎಚ್ಚರಿಕೆಯನ್ನು ಇರಿಸಿಕೊಂಡೇ ವ್ಯಾಪಾರ, ವಹಿವಾಟು ಆರಂಭಿಸಲು ಯೋಜಿಸಲಾಗಿದೆ. ಆದರೆ, ಇದು ಬಹಳ ಎಚ್ಚರಿಕೆಯಿಂದ ಕೈಗೊಳ್ಳಬೇಕಾದ ನಿರ್ಧಾರ. ಸೋಂಕಿತರ ಪರೀಕ್ಷೆ ಮಾಡಿ, ಅವರಿಂದ ಇತರರಿಗೆ ರೋಗ ಹರಡದಂತೆ ನೋಡಿಕೊಳ್ಳುವುದಷ್ಟೇ ಸದ್ಯ ನಮ್ಮ ಮುಂದಿರುವ ದಾರಿ. ನಮ್ಮಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಳವಾಗಿದೆ.

ಈಗ ಅದು 10 ಲಕ್ಷ ಮಂದಿಗೆ ಸುಮಾರು 400ರ ಹತ್ತಿರ ಬಂದಿದೆ. ಆದರೆ, ಜಾಗತಿಕ ಸರಾಸರಿ 5,897. ಕೊರೊನಾ ಹರಡುವಿಕೆ ಎಷ್ಟು ತ್ವರಿತ ಮತ್ತು ವ್ಯಾಪಕ ಎಂಬುದರ ಅರಿವು ನಮಗೆ ಈಗ ಇದೆ. ಹಸಿರು ವಲಯ ಕಿತ್ತಳೆಯಾಗಲು, ಕಿತ್ತಳೆ ವಲಯ ಕೆಂಪಾಗಲು ಬಹಳ ಸಮಯವೇನೂ ಬೇಕಾಗುವುದಿಲ್ಲ. ಇದರ ನಡುವೆಯೂ ಕೆಲಸಗಳು ಆರಂಭವಾಗಬೇಕು ಮತ್ತು ಜನರು ಹೊರಬರಲೇಬೇಕು. ಹೊರಬರುವವರಲ್ಲಿ ಈ ಎಚ್ಚರಿಕೆ ಸದಾ ಜಾಗೃತವಾಗಿರಬೇಕು. 

ಭಾರತದಲ್ಲಿ ಶ್ರಮಿಕ ವರ್ಗದ ಬಹುಪಾಲು ಮಂದಿಗೆ ಜೀವ ಮತ್ತು ಜೀವನೋಪಾಯ ಬೇರೆ ಬೇರೆ ಅಲ್ಲ. ಜೀವನೋಪಾಯ ಇಲ್ಲ ಎಂದಾದರೆ ಅವರ ಜೀವನ ಮತ್ತು ಜೀವ ಲೆಕ್ಕಕ್ಕೆ ಇಲ್ಲದಂತಾಗಿಬಿಡುತ್ತದೆ. ದೇಶದ ಉದ್ದಗಲಕ್ಕೂ ಹೇರಲಾಗಿರುವ ದಿಗ್ಬಂಧನ ಎಲ್ಲರ ಮೇಲೆಯೂ ಗಾಢವಾದ ಪರಿಣಾಮವನ್ನೇ ಬೀರಿದೆ. ರೈತರು ಮತ್ತು ಕಾರ್ಮಿಕರನ್ನು ಇದು ಕಂಗೆಡಿಸಿದೆ, ಅವರ ಜೀವನೋಪಾಯವೇ ಕುಸಿದು ಹೋಗಿದೆ.

ಬೆಳೆ ಕೈಗೆ ಬರುವ ಹೊತ್ತಿನಲ್ಲಿ ದಿಗ್ಬಂಧನವು ಅದಕ್ಕೆ ಮಣ್ಣು ಹಾಕಿದೆ. ತರಕಾರಿ, ಹಣ್ಣು ಸಾಗಾಟ ಸಾಧ್ಯವಾಗುತ್ತಿಲ್ಲ. ಚಿತ್ರದುರ್ಗ ಜಿಲ್ಲೆಯ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಮಾಡಿದ ಮನವಿ ಮುಖ್ಯಮಂತ್ರಿಯನ್ನು ತಲುಪಿದೆ. ಆ ಮಹಿಳೆಯ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸಮಸ್ಯೆಯನ್ನು ನೇರವಾಗಿ ಮುಖ್ಯಮಂತ್ರಿಗೆ ತಲುಪಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಅದು ಸರಿಯಾದ ವ್ಯವಸ್ಥೆಯೂ ಅಲ್ಲ. ಆಡಳಿತ ಎಂಬುದು ನೀತಿ ನಿರೂಪಣೆ. ಆ ನೀತಿ ನಿರೂಪಣೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದನೆಯು ಆದ್ಯತೆ ಆಗಿರಬೇಕು.

ರಾಜ್ಯದಲ್ಲಿ ಸಾವಿರಾರು ಮಂದಿ ಈರುಳ್ಳಿ ಬೆಳೆಗಾರರಿದ್ದಾರೆ. ಇತರ ಆಹಾರವಸ್ತುಗಳನ್ನು ಬೆಳೆಯುವವರೂ ಇದ್ದಾರೆ. ದಿಗ್ಬಂಧನದಂತಹ ಸಂದರ್ಭದಲ್ಲಿ ಈ ಎಲ್ಲರ ಯೋಗಕ್ಷೇಮ, ಬೆಳೆದ ಬೆಳೆಗೆ ಅರ್ಹ ಬೆಲೆ, ಮುಂದಿನ ಬೇಸಾಯಕ್ಕೆ ಬೇಕಾದ ಪರಿಕರಗಳನ್ನು ದೊರಕಿಸಿಕೊಡುವುದರಲ್ಲಿ ಸರ್ಕಾರವು ದುಪ್ಪಟ್ಟು ಹೊಣೆಗಾರಿಕೆ ತೋರಬೇಕು. ಇತರ ದೇಶಗಳಿಗೆ ಹೋಲಿಸಿದರೆ, ಭಾರತಕ್ಕೆ ಕೊರೊನಾ ವೈರಾಣು ಕಾಲಿಟ್ಟದ್ದು ಸ್ವಲ್ಪ ತಡವಾಗಿ. ನಮ್ಮ ದೇಶಕ್ಕೆ ಇದು ಬಾರದು ಎಂಬ ಖಾತರಿಯೇನೂ ಆಗ ಇರಲಿಲ್ಲ. ಹಾಗಾಗಿ, ಎಲ್ಲ ವ್ಯವಸ್ಥೆಗಳನ್ನೂ ಅಲ್ಲೋಲಕಲ್ಲೋ‍ಲ ಮಾಡಬಲ್ಲಂತಹ ವೈರಾಣುವನ್ನು ಎದುರಿಸಲು ದೇಶವನ್ನು ಸಜ್ಜುಗೊಳಿಸಬೇಕಿತ್ತು.

ಲಾಕ್‌ಡೌನ್‌ ಮಾಡುವುದಿದ್ದರೆ ಅದು ಹೇಗಿರಬೇಕು, ಅದರಿಂದ ಹೊರಬರುವ ಯೋಜನೆಗಳೇನು ಎಂಬುದನ್ನೂ ಯೋಚಿಸಬೇಕಿತ್ತು. ರೈತರು, ಕಾರ್ಮಿಕರು, ವಲಸಿಗರು, ವ್ಯಾಪಾರ, ಉದ್ಯಮಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳ ಕಾರಣಗಳಲ್ಲಿ ಆಡಳಿತ ವ್ಯವಸ್ಥೆಯ ದೂರಾಲೋಚನೆಯ ಕೊರತೆಯ ‍ಪಾಲೂ ಇದೆ. ಈ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ 0.2ರಷ್ಟಿರಲಿದೆ ಎಂದು ಮೂಡೀಸ್‌ ಸಂಸ್ಥೆ ಅಂದಾಜಿಸಿದೆ. ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಸಮೀಕ್ಷೆಗಳಿವೆ.

ಇವನ್ನು ಸರ್ಕಾರ ಎಚ್ಚರಿಕೆಯಾಗಿ ಪರಿಗಣಿಸಬೇಕು. ಜನಜೀವನ ಸಹಜ ಸ್ಥಿತಿಯತ್ತ ಸಾಗಲು ಅನುವಾಗುವಂತೆ ದಿಗ್ಬಂಧನ ತೆರವು ಯೋಜನೆ ಸಿದ್ಧಪಡಿಸಬೇಕು. ದಿಗ್ಬಂಧನ ಆರಂಭವಾಗಿ ಒಂದೂವರೆ ತಿಂಗಳಾಗುತ್ತಾ ಬಂತು. ಇಷ್ಟೊಂದು ದೀರ್ಘ ಅವಧಿಯಲ್ಲಿ ಆದಾಯವೇ ಇಲ್ಲದ ಜನರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನಿರ್ಧಾರಗಳಲ್ಲಿ ಗೊಂದಲಗಳು ಇಲ್ಲದಂತೆ ನೋಡಿಕೊಳ್ಳಬೇಕು. ಜನಸಂಚಾರ ಆರಂಭವಾದರೆ ವೈರಾಣುವಿಗೆ ರೆಕ್ಕೆ ಕಟ್ಟಿದಂತೆ. ಹಾಗಾಗಿ, ಸೋಂಕು ಪ್ರಸರಣ ತಡೆಯಲು ಏನೆಲ್ಲ ಮಾಡಬೇಕೋ ಅದರಲ್ಲಿ ಯಾವ ಅಲಕ್ಷ್ಯವೂ ಇರಬಾರದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು