ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 3ನೇ ಅಲೆ ನಡುವೆಯೇ ಚುನಾವಣೆ: ಅತೀವ ಎಚ್ಚರ ಅಗತ್ಯ

Last Updated 9 ಜನವರಿ 2022, 19:30 IST
ಅಕ್ಷರ ಗಾತ್ರ

ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾದ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗವು ಶನಿವಾರ ಪ್ರಕಟಿಸಿದೆ. ಗೋವಾ, ಉತ್ತರಾಖಂಡ, ಪಂಜಾಬ್‌ ಮತ್ತು ಮಣಿಪುರ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ‘ಕೋವಿಡ್‌ ಸಾಂಕ್ರಾಮಿಕದ ಮೂರನೇ ಅಲೆಯು ದೇಶವನ್ನು ಈಗಾಗಲೇ ಅಪ್ಪಳಿಸಿದೆ. ಈ ಬಾರಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ’ ಎಂದು ತಜ್ಞರು ಎಚ್ಚರಿಸಿದ್ದಾರೆ. ಎರಡನೇ ಅಲೆ ಸಂದರ್ಭದಲ್ಲಿ ಜನರು ಹೈರಾಣಾಗಿದ್ದರ ನೆನಪು ಇನ್ನೂ ಹಸಿಯಾಗಿಯೇ ಇದೆ. ಈಗ ಮೂರನೇ ಅಲೆಯ ನಡುವಲ್ಲಿಯೇ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ಹಲವು ದೇಶಗಳಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌, ಭಾರತದಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಚುನಾವಣೆಯು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಮತ್ತು ಅನಿವಾರ್ಯ ಪ್ರಕ್ರಿಯೆ. ಜನರ ಆರೋಗ್ಯ ಮತ್ತು ಜೀವನೋಪಾಯ ಹಾಗೂ ದೇಶದ ಅರ್ಥ ವ್ಯವಸ್ಥೆಯನ್ನು ಸಂರಕ್ಷಿಸಬೇಕಾದುದು ಕಡಿಮೆ ಮಹತ್ವದ ವಿಚಾರ ಏನಲ್ಲ. ಜನರ ಆರೋಗ್ಯಕ್ಕೆ ಯಾವ ಧಕ್ಕೆಯೂ ಆಗದ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಆಯೋಗವು ನಡೆಸಬೇಕಿದೆ.

ಈ ದಿಸೆಯಲ್ಲಿ ಆಯೋಗವು ಯೋಚನೆ ಮಾಡಿದೆ ಎಂಬುದು ಸ್ವಾಗತಾರ್ಹ ಸಂಗತಿ. ಇದೇ 15ರವರೆಗೆ ಪಾದಯಾತ್ರೆ, ರ್‍ಯಾಲಿ, ಸಮಾವೇಶ, ಬಹಿರಂಗ ಸಭೆಗಳನ್ನು ಆಯೋಗವು ನಿಷೇಧಿಸಿದೆ. ಮನೆ ಮನೆ ಪ್ರಚಾರಕ್ಕೆ ಕೂಡ ಅಭ್ಯರ್ಥಿ ಸೇರಿ ಐವರಿಗಿಂತ ಹೆಚ್ಚು ಜನರು ಹೋಗುವಂತಿಲ್ಲ ಎಂಬ ನಿಯಮ ರೂಪಿಸಿದೆ. ರಾತ್ರಿ ಎಂಟು ಗಂಟೆಯಿಂದ ಬೆಳಿಗ್ಗೆ ಎಂಟು ಗಂಟೆಯವರೆಗೆ, ಬಹಿರಂಗವಾದ ಯಾವುದೇ ಪ್ರಚಾರಕ್ಕೆ ಅವಕಾಶ ಇಲ್ಲ. ಮತ ಎಣಿಕೆಯ ಬಳಿಕವೂ ವಿಜಯೋತ್ಸವವನ್ನು ನಿಷೇಧಿಸಿದೆ. ವರ್ಚುವಲ್‌ ರೂಪದಲ್ಲಿಯೇ ಪ್ರಚಾರ ನಡೆಸಿ ಎಂದು ರಾಜಕೀಯ ಪಕ್ಷಗಳಿಗೆ ಆಯೋಗವು ಸಲಹೆ ಕೊಟ್ಟಿದೆ. ರಾಜಕೀಯ ‍ಪಕ್ಷಗಳು ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ. ಇಲ್ಲದೇ ಹೋದರೆ, ಜನರ ಮತ ಯಾಚನೆಗೆ ಹೋಗುವ ರಾಜಕೀಯ ಪಕ್ಷಗಳ ನಾಯಕರಿಗೆ ಜನರ ಬಗ್ಗೆ ಯಾವ ಕಾಳಜಿಯೂ ಇಲ್ಲ; ಮಾತ್ರವಲ್ಲ, ಜನರನ್ನು ಅವರು ತೃಣ ಸಮಾನವಾಗಿ ಕಾಣುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಉಳಿಯುವುದಿಲ್ಲ.

ತಪ್ಪುಗಳಿಂದ ಪಾಠ ಕಲಿಯುವುದಿಲ್ಲ ಎಂಬುದನ್ನು ನಾವು ಪದೇ ಪದೇ ಸಾಬೀತು ಮಾಡುತ್ತಲೇ ಬಂದಿದ್ದೇವೆ. ಮಾಸ್ಕ್‌ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಗುಂಪುಗೂಡದೇ ಇರುವುದು, ಲಸಿಕೆ ಹಾಕಿಸಿಕೊಳ್ಳುವುದು ಕೋವಿಡ್‌ನಿಂದ ರಕ್ಷಣೆ ಪಡೆದುಕೊಳ್ಳಲು ಇರುವ ಮಾರ್ಗಗಳು. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಸಾಂಕ್ರಾಮಿಕದ ಮೊದಲ ಅಲೆ ಬಂದಾಗಿನಿಂದ ಹಲವು ಹತ್ತು ಬಾರಿ ಈ ಸಲಹೆಯನ್ನು ದೇಶದ ಜನರಿಗೆ ಕೊಟ್ಟಿದ್ದಾರೆ. ಆದರೆ, ಚುನಾವಣೆ ಘೋಷಣೆ ಆಗುವುದಕ್ಕಿಂತ ಮೊದಲು ಅವರು ಉತ್ತರಪ್ರದೇಶ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹಲವು ರ್‍ಯಾಲಿಗಳಲ್ಲಿ ಭಾಗಿಯಾಗಿದ್ದಾರೆ. ಉತ್ತರಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್‌ನ ಒಂದು ಹಂತದ ಯೋಜನೆಯ ಉದ್ಘಾಟನಾ ಸಮಾರಂಭ ಸೇರಿ ಹಲವು ರ್‍ಯಾಲಿಗಳಲ್ಲಿ ಮೋದಿ ಅವರು ಮಾಸ್ಕ್ ಇಲ್ಲದೆಯೇ ಕಾಣಿಸಿಕೊಂಡಿದ್ದಾರೆ. ದೇಶದ ಜನರಿಗೆ ಪ್ರಧಾನಿ ಮಾದರಿ ಆಗಬೇಕಲ್ಲವೇ?//ಈ ಮಾತು ಪ್ರಧಾನಿಯವರಿಗೆ ಸೀಮಿತವಾಗಬೇಕಿಲ್ಲ. ಇತರ ರಾಜಕೀಯ ಪಕ್ಷಗಳ ಮುಖಂಡರೂ ಮಾಸ್ಕ್‌ ಇಲ್ಲದೆ ಸಾರ್ವಜನಿಕವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಜನರ ನಾಯಕರಾಗಲು ಬಯಸುವ ಅವರೂ, ಮಾದರಿಯಾಗುವಂತಹ ನಡವಳಿಕೆಯನ್ನು ತೋರಬೇಕು.// ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರೂ ಹಲವು ಸಭೆಗಳಲ್ಲಿ ಮಾಸ್ಕ್ ಇಲ್ಲದೆ ಭಾಗಿಯಾಗಿದ್ದಾರೆ. ಅವರಿಗೆ ಕೊರೊನಾ ಸೋಂಕು ಇತ್ತೀಚೆಗೆ ದೃಢಪಟ್ಟಿತ್ತು. ಜನಪ್ರತಿನಿಧಿಗಳು ಮತ್ತು ಸಾಂವಿಧಾನಿಕ ಹುದ್ದೆಯಲ್ಲಿ ಇರುವವರ ಇಂತಹ ನಡವಳಿಕೆಯನ್ನು ಬೇಜವಾಬ್ದಾರಿ ಎನ್ನದೆ ಬೇರೆ ಏನೆನ್ನಬಹುದು? ಈ ವರ್ಷ ಫೆಬ್ರುವರಿ 10ರಿಂದ ಮಾರ್ಚ್‌ 7ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಕಳೆದ ವರ್ಷವೂ ಸರಿ ಸುಮಾರು ಇದೇ ಅವಧಿಯಲ್ಲಿ ಅಂದರೆ ಮಾರ್ಚ್– ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ವಿಧಾನಸಭೆಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆ ಘೋಷಣೆಗೆ ಮುನ್ನ ದೇಶದಲ್ಲಿ ದಿನನಿತ್ಯ ದೃಢಪಡುತ್ತಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ 20 ಸಾವಿರದ ಒಳಗೆ ಇತ್ತು. ಚುನಾವಣೆ ಮುಗಿದ ನಂತರ ಮೇ ತಿಂಗಳ ಹೊತ್ತಿಗೆ ದಿನವೂ ದೃಢಪಡುತ್ತಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷವನ್ನು ದಾಟಿತ್ತು. ರಾಜಕೀಯ ನೇತಾರರು ಚುನಾವಣೆ ಇರುವ ರಾಜ್ಯಗಳಲ್ಲಿ ಯಾವ ಎಗ್ಗೂ ಇಲ್ಲದೆ ರ‍್ಯಾಲಿ, ಸಮಾವೇಶಗಳನ್ನು ನಡೆಸಿದರು. ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದರು. ಯಾವ ಮುನ್ನೆಚ್ಚರಿಕೆಯನ್ನು ಯಾರೂ ಕೈಗೊಳ್ಳಲಿಲ್ಲ. ತಿಳಿ ಹೇಳಬೇಕಾದ ನಾಯಕರೇ ಕೋವಿಡ್‌ ತಡೆ ನಿಯಮಗಳನ್ನು ಗಾಳಿಗೆ ತೂರಿದರು. ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ಹೊಡೆತಕ್ಕೆ ಜನರು ದಿಕ್ಕೆಡುವಂತಾಯಿತು. ಈಗ ಮೂರನೇ ಅಲೆ ಆರಂಭವಾಗಿದೆ. ಚುನಾವಣೆ ನಡೆಯಬೇಕಿದೆ. ಕೋವಿಡ್‌ ತಡೆ ನಿಯಮಗಳನ್ನುಅತ್ಯಂತ ಎಚ್ಚರಿಕೆಯಿಂದ ಪಾಲಿಸುವ ಸದ್ಬುದ್ಧಿಯನ್ನು
ರಾಜಕೀಯ ನಾಯಕರು ಪ್ರದರ್ಶಿಸಲೇಬೇಕಿದೆ. ಹಳೆಯ ತಪ್ಪುಗಳಿಂದ ಪಾಠ ಕಲಿಯಲು ಜನರು ಮನಸ್ಸು ಮಾಡಲೇಬೇಕಾದ ಸ್ಥಿತಿಯಲ್ಲಿ ಇಂದು ದೇಶವು ಇದೆ.ಇಲ್ಲದಿದ್ದರೆ ಕೋವಿಡ್‌ನ ಇನ್ನೊಂದು ಅಲೆಯು ದೇಶವು ತತ್ತರಿಸುವಂತೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT