ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೋವಿಡ್‌ ಪ್ರಕರಣಗಳ ಏರಿಕೆ ಮೈಮರೆತರೆ ಕಾದಿದೆ ಅಪಾಯ

Last Updated 12 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೋವಿಡ್‌ ಪಿಡುಗು ಎಷ್ಟೊಂದು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬುದು ಕಳೆದೊಂದು ವರ್ಷದಲ್ಲಿ ಇಡೀ ಜಗತ್ತಿಗೆ ಅರಿವಾಗಿದೆ. ಆರ್ಥಿಕವಾಗಿ, ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ಮುಂಚೂಣಿಯಲ್ಲಿರುವ ಅಮೆರಿಕ, ಬ್ರಿಟನ್‌ನಂತಹ ದೇಶಗಳೇ ಈ ಸಾಂಕ್ರಾಮಿಕದ ಹೊಡೆತಕ್ಕೆ ತತ್ತರಿಸಿವೆ. ಕೊರೊನಾ ವೈರಾಣುವಿನಿಂದಾಗಿ ಭಾರತ ಅನುಭವಿಸಿದ ಕಷ್ಟ ನಷ್ಟಗಳನ್ನು ಮರೆಯಲು ಸಾಧ್ಯವಿಲ್ಲ. ಅಮೆರಿಕವನ್ನು ಬಿಟ್ಟರೆ ಭಾರತದಲ್ಲಿಯೇ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

2020ರ ನವೆಂಬರ್‌ನಿಂದ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲು ಆರಂಭವಾಗಿದ್ದರಿಂದ ಸರ್ಕಾರ ಮತ್ತು ಜನರು ತುಸು ನಿರಾಳವಾಗಿದ್ದು ಹೌದು. ಆದರೆ, ಕೆಲವು ದಿನಗಳಿಂದ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಗೆ ಹೊರಳಿಕೊಂಡಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆವರೆಗಿನ 24 ತಾಸುಗಳಲ್ಲಿ 23,285 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಅದಕ್ಕೂ ಹಿಂದಿನ 24 ತಾಸುಗಳಲ್ಲಿ ಕೂಡ 22,854 ಪ್ರಕರಣಗಳು ವರದಿಯಾಗಿವೆ. ಇದು ಬಹಳ ಕಳವಳಕಾರಿಯಾದ ಬೆಳವಣಿಗೆ. ಕಳೆದ 77 ದಿನಗಳಲ್ಲಿ ವರದಿಯಾದ ಅತ್ಯಂತ ಹೆಚ್ಚಿನ ಪ್ರಕರಣಗಳು ಇವು. ಮಹಾರಾಷ್ಟ್ರ ದಲ್ಲಿ ಆರಂಭದಿಂದಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಅದೇ ಪ್ರವೃತ್ತಿ ಈಗಲೂ ಮುಂದುವರಿದಿದೆ. ಆರಂಭದಲ್ಲಿ ಕೊರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಜಾಗತಿಕ ಮೆಚ್ಚುಗೆಗೆ ಪಾತ್ರವಾಗಿದ್ದ ಕೇರಳದಲ್ಲಿ ಈಗ ಹೆಚ್ಚು ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ದೇಶದ ಒಟ್ಟು ಪ್ರಕರಣಗಳ ಪೈಕಿ ಶೇ 70ಕ್ಕೂ ಹೆಚ್ಚು ಈ ಎರಡು ರಾಜ್ಯಗಳಿಂದಲೇ ವರದಿಯಾಗುತ್ತಿವೆ. ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಹತ್ತು ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೂ ಸೇರಿದೆ ಎಂಬುದನ್ನು ರಾಜ್ಯ ಸರ್ಕಾರವು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಿದೆ. ಒಂದೂಕಾಲು ಕೋಟಿಗೂ ಹೆಚ್ಚು ಜನರು ಇರುವ, ಹೆಚ್ಚು ಜನದಟ್ಟಣೆಯ ಪ್ರದೇಶ ಬೆಂಗಳೂರು ನಗರ ಜಿಲ್ಲೆ. ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ದಿನವೂ ಬರುವ ನಗರದಲ್ಲಿ ಸೋಂಕನ್ನು ನಿಯಂತ್ರಿಸುವುದು ಜರೂರು ಕೆಲಸ.

ಒಂದು ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದ ಸಾಂಕ್ರಾಮಿಕವು ಮತ್ತೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಏಕೆ ಎಂಬುದನ್ನು ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಪರಿಣತರು ತ್ವರಿತವಾಗಿ ಕಂಡುಕೊಳ್ಳಬೇಕಿದೆ. ಆರ್ಥಿಕವಾಗಿ ಮತ್ತು ಇತರ ರೀತಿಯಲ್ಲಿ ಅತಿ ದೊಡ್ಡ ನಷ್ಟಕ್ಕೆ ಕಾರಣವಾಗಿದ್ದ ಲಾಕ್‌ಡೌನ್‌, ಮಾಸ್ಕ್‌ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ, ಜನರು ಹೆಚ್ಚು ಸಂಖ್ಯೆಯಲ್ಲಿ ಒಂದೆಡೆ ಸೇರದಿರುವುದು, ಶಿಕ್ಷಣ ಸಂಸ್ಥೆಗಳ ಸ್ಥಗಿತದಂತಹ ಅಸಾಧಾರಣ ಕ್ರಮಗಳು ಕೋವಿಡ್‌ ಅನ್ನು ಮೊದಲ ಹಂತದಲ್ಲಿ ನಿಯಂತ್ರಿಸಿದವು ಎಂಬುದನ್ನು ಜನರು ಮರೆಯಬಾರದು. ತ್ವರಿತವಾಗಿ ಹರಡುವ ಈ ಸಾಂಕ್ರಾಮಿಕವು ದೇಶವನ್ನು ಮತ್ತೆ ಗಂಡಾಂತರಕ್ಕೆ ತಳ್ಳಬಹುದು ಎಂಬ ಎಚ್ಚರ ಎಲ್ಲರಲ್ಲಿಯೂ ಇರಬೇಕು.

ಕೋವಿಡ್‌ ಹರಡುವುದನ್ನು ತಡೆಯುವ ನಡವಳಿಕೆ ಮತ್ತು ಲಸಿಕೆ ಹಾಕಿಸಿಕೊಳ್ಳುವಿಕೆ ಮಾತ್ರ ಈ ರೋಗವನ್ನು ದೂರ ಇರಿಸಲು ಇರುವ ಮಾರ್ಗೋಪಾಯಗಳು. ಜನರಲ್ಲಿ ಜಾಗೃತಿಮೂಡಿಸಬೇಕಾದವರೇ ಕೋವಿಡ್‌ ತಡೆ ನಡವಳಿಕೆಯನ್ನು ಗಾಳಿಗೆ ತೂರಿದ್ದಾರೆ ಎಂಬುದು ವಿಷಾದನೀಯ. ರಾಜಕೀಯ ಪಕ್ಷಗಳ ಸಮಾವೇಶಗಳು, ನಾಯಕರ ಸಭೆಗಳು, ಪ್ರತಿಭಟನೆ, ಮೀಸಲಾತಿಗಾಗಿ ನಡೆದ ಪಾದಯಾತ್ರೆಗಳಲ್ಲಿ ಜನರು ಮಾಸ್ಕ್‌ ಧರಿಸಿರಲಿಲ್ಲ, ಅಂತರ ಕಾಯ್ದುಕೊಂಡಿರಲಿಲ್ಲ ಎಂಬುದು ಕಳವಳಕಾರಿಯಾದ ಸತ್ಯ. ಜನವರಿ 16ರಂದು ಆರಂಭವಾದ ಲಸಿಕೆ ಕಾರ್ಯಕ್ರಮವು ನಿರೀಕ್ಷಿತ ರೀತಿಯಲ್ಲಿ ಜಾರಿಯಾಗುತ್ತಿಲ್ಲ.

ಸೋಂಕಿಗೆ ಒಳಗಾಗುವ ಅತಿ ಹೆಚ್ಚು ಅಪಾಯ ಹೊಂದಿರುವ 30 ಕೋಟಿ ಜನರಿಗೆ ಜುಲೈ ಹೊತ್ತಿಗೆ ಲಸಿಕೆ ನೀಡಬೇಕು ಎಂಬ ಗುರಿ ಇದೆ. ಆದರೆ, ಲಸಿಕೆ ಕಾರ್ಯಕ್ರಮವು ವೇಗ ಪಡೆದುಕೊಂಡಿಲ್ಲ. ಈವರೆಗೆ, 2.61 ಕೋಟಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಒಂದೆರಡು ದಿನ ಲಸಿಕೆ ನೀಡಿಕೆಯ ಸಂಖ್ಯೆಯು 20 ಲಕ್ಷವನ್ನು ದಾಟಿತ್ತು. ಆದರೆ, ಈ ಸಂಖ್ಯೆ ಶುಕ್ರವಾರ 4.8 ಲಕ್ಷಕ್ಕೆ ಇಳಿದಿದೆ.

ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮುಂತಾದ ಗಣ್ಯರೇ ಲಸಿಕೆ ಪಡೆದು ಧೈರ್ಯ ತುಂಬಿದ್ದರೂ ಜನರಲ್ಲಿ ಲಸಿಕೆಯ ಬಗ್ಗೆ ಹಿಂಜರಿಕೆ ಇದೆ. ಈ ಹಿಂಜರಿಕೆಯಿಂದ ಜನರು ಹೊರಬರಬೇಕು. ಜಾಗೃತಿ ಮೂಡಿಸುವ ಹೊಣೆಗಾರಿಕೆಯನ್ನು ಸರ್ಕಾರ ನಿರ್ವಹಿಸಬೇಕು. ದೇಶವನ್ನು ಕೋವಿಡ್‌ ಮುಕ್ತವಾಗಿಸುವುದು ಎಂದರೆ ದೇಶವನ್ನು ಆರೋಗ್ಯಯುತವಾಗಿ, ಸುರಕ್ಷಿತವಾಗಿ ಇರಿಸುವುದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT