ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ರಸ್ತೆ: ಗಂಭೀರವಾಗಿ ಪರಿಗಣಿಸದಿದ್ದರೆ ಕಷ್ಟನಷ್ಟ ತಪ್ಪಿದ್ದಲ್ಲ

Last Updated 21 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ದೇಶದಲ್ಲಿ ಕಳೆದ ವರ್ಷ ಕೋವಿಡ್‌–19 ಪಿಡುಗಿಗಿಂತಲೂ ರಸ್ತೆ ಅಪಘಾತಗಳೇ ಹೆಚ್ಚು ಜನರನ್ನು ಬಲಿ ಪಡೆದಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಳೆದ ವಾರ ಹೇಳಿದ್ದಾರೆ. ಒಂದು ಸಾಂಕ್ರಾಮಿಕಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ಜನರ ಸಂಖ್ಯೆಯನ್ನೂ, ಅಪಘಾತಗಳಲ್ಲಿ ಸಾಯುವವರ ಸಂಖ್ಯೆಯನ್ನೂ ಹೋಲಿಸಿ, ಯಾವುದು ಹೆಚ್ಚು ಅಪಾಯಕಾರಿ ಎಂದು ವಿವರಿಸಲು ಸಚಿವರು ಹೊರಟಿರಲಿಲ್ಲ. ಆದರೆ, ರಸ್ತೆ ಅಪಘಾತಗಳನ್ನು ನಾವು ಎಷ್ಟು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಅವರ ಮಾತಿನ ಹಿಂದಿನ ಆಶಯವಿದ್ದಿರಬಹುದು. ಅಂತರರಾಷ್ಟ್ರೀಯ ಚಾಲನಾ ಶಿಕ್ಷಣ ಕಂಪನಿ ಝುಟೊಬಿ ನಡೆಸಿದ ಅಧ್ಯಯನ ವರದಿಯ ಪ್ರಕಾರ, ವಿಶ್ವದಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇದು, ಸುಸಜ್ಜಿತ ರಸ್ತೆಗಳು ಇನ್ನೂ ನಮಗೆ ಆದ್ಯತೆಯಾಗದೇ ಇರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಅಧ್ಯಯನಕ್ಕೆ ಒಳಪಟ್ಟ 56 ದೇಶಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಥಾಯ್ಲೆಂಡ್ ಮತ್ತು ಅಮೆರಿಕ ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ರಸ್ತೆ ಅಪಘಾತಗಳಲ್ಲಿನ ಮರಣ ಪ್ರಮಾಣ, ಕಾರಿನಲ್ಲಿ ಮುಂದೆ ಕುಳಿತು ಪ್ರಯಾಣಿಸುವವರಲ್ಲಿ ಸೀಟ್‌ ಬೆಲ್ಟ್ ಧರಿಸುವವರ ಪ್ರಮಾಣ, ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗಿ ಮರಣ ಹೊಂದಿದವರ ಸಂಖ್ಯೆ ಎಂಬಿತ್ಯಾದಿ ಅಂಶಗಳನ್ನು ಅಧ್ಯಯನ ಒಳ ಗೊಂಡಿತ್ತು. ವಿಶ್ವದಲ್ಲೇ ಅತ್ಯಂತ ಸುರಕ್ಷಿತ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಜಪಾನ್‌ ಹಾಗೂ ಸ್ವೀಡನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ಅಪಘಾತಕ್ಕೆ ಎಡೆ ಮಾಡಬಲ್ಲ ಅಸುರಕ್ಷಿತ ತಿರುವುಗಳು, ಕಿತ್ತು ಹೋದ ಡಾಂಬರು, ಹೆಜ್ಜೆ ಹೆಜ್ಜೆಗೂ ಎದುರಾಗುವ ಗುಂಡಿಗಳು, ಸಂಚಾರ ದಟ್ಟಣೆ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಪಾರ್ಕಿಂಗ್‌ ಅವ್ಯವಸ್ಥೆ... ಇವೆಲ್ಲವೂ ವಾಹನ ಸವಾರರಿಗೆ ಸವಾಲು ಎಸೆಯುತ್ತವೆ. ನಮ್ಮಲ್ಲಿ ಅನೇಕ ನಗರ ಮತ್ತು ಪಟ್ಟಣಗಳ ಪ್ರಮುಖ ರಸ್ತೆಗಳ ಸ್ಥಿತಿಯೇ ದಾರುಣವಾಗಿರುವುದು ಕಣ್ಣಿಗೆ ಬೀಳುತ್ತದೆ. ಬಡಾವಣೆಗಳ ಒಳರಸ್ತೆಗಳ ಸ್ಥಿತಿಯಂತೂ ಮತ್ತೂ ಶೋಚನೀಯ. ಒಳರಸ್ತೆಗಳಲ್ಲಿ ನಡೆಯುವ ಎಷ್ಟೋ ಅಪಘಾತಗಳು ಮಾರಣಾಂತಿಕವಾಗಿ ಪರಿಣಮಿಸಿದ ನಿದರ್ಶನಗಳು ಇವೆ. ಇವೆಲ್ಲ, ರಸ್ತೆಯೊಂದು ಅಪಾಯಕಾರಿ ಆಗುವುದಕ್ಕೆ ಇರಬಹುದಾದ ತಾಂತ್ರಿಕ ಕಾರಣಗಳು. ಆದರೆ ದೇಶದಲ್ಲಿ ನಡೆಯುವ ಬಹಳಷ್ಟು ಅಪಘಾತಗಳಿಗೆ ಅಜಾಗರೂಕತೆಯಿಂದ ವಾಹನ ಚಲಾಯಿಸುವುದೂ ಮುಖ್ಯ ಕಾರಣ ಆಗಿರುತ್ತದೆ. ಈ ಮಾತು ಹೇಳಲು ದೊಡ್ಡ ಅಧ್ಯಯನದ ಬಲವೇನೂ ಬೇಕಿಲ್ಲ. ಅಜಾಗರೂಕ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ,ಪಾದಚಾರಿ ಮಾರ್ಗದ ಒತ್ತುವರಿ, ಚಲಿಸುತ್ತಿರುವ ವಾಹನಗಳಿಗೆ ದಿಢೀರನೆ ಎದುರಾಗುವ ಪಾದಚಾರಿಗಳು, ಸೀಟ್‌ ಬೆಲ್ಟ್‌ ಧರಿಸುವುದರ ಮಹತ್ವ ಮನಗಾಣದಿರುವುದು... ಹೀಗೆ ರಸ್ತೆ ಸಂಚಾರವು ಅನೇಕ ಕಾರಣಗಳಿಂದಾಗಿ ಅಪಾಯಕಾರಿ ಆಗುತ್ತಿದೆ. ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದ ಅಪಘಾತಗಳು ಸಂಭವಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂಬ ವಾಸ್ತವ ಕಣ್ಣೆದುರಿದ್ದರೂ ನಮ್ಮ ರಸ್ತೆಗಳಲ್ಲಿನ ಇಂತಹ ದುಃಸ್ಥಿತಿಯನ್ನು ಬದಲಿಸುವುದಕ್ಕೆ ಸಾಧ್ಯವಾಗಿಲ್ಲದಿರುವುದು ವಿಪರ್ಯಾಸ. ರಸ್ತೆ ಅಪಘಾತಗಳಿಂದ ಆಗುತ್ತಿರುವ ಕಷ್ಟನಷ್ಟಗಳ ಬಗ್ಗೆ ವಿಶ್ವಬ್ಯಾಂಕ್‌ ಇತ್ತೀಚೆಗೆ ನೀಡಿದ ವರದಿಯಲ್ಲಿ, ಮಾನವೀಯ ಅಂತಃಕರಣವನ್ನೇ ಕಲಕುವಂತಹ ಹಲವಾರು ವಿವರಗಳಿದ್ದವು. ಪ್ರಾಣಹಾನಿಗೆ ಕಾರಣವಾಗುತ್ತಿರುವ ಅಪಘಾತಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ. ಬಾಧಿತ ಕುಟುಂಬಗಳು, ಅದರಲ್ಲೂ ಬಡಕುಟುಂಬಗಳು ಇಂತಹ ಸನ್ನಿವೇಶಗಳಿಂದ ನಲುಗಿ ಹೋಗುತ್ತಿವೆ. ವೈದ್ಯಕೀಯ ವೆಚ್ಚ ಭರಿಸಲಾಗದೆ ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ‘ರಸ್ತೆ ಅಪಘಾತಗಳ ತಡೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದು ಗಡ್ಕರಿ ಲೋಕಸಭೆಯಲ್ಲಿ ಭರವಸೆ ನೀಡಿದ್ದಾರೆ. ಆದರೆ, ಸುರಕ್ಷತೆಗೆ ಪೂರಕವಾದ ರಸ್ತೆ ವಿನ್ಯಾಸ, ಕಾಲಕಾಲಕ್ಕೆ ರಸ್ತೆಗಳ ಸಮರ್ಪಕ ನಿರ್ವಹಣೆ, ವಾಹನ ಚಾಲನಾ ಪರವಾನಗಿ ನೀಡಿಕೆಗೆ ಇನ್ನೂ ಕಠಿಣ ನಿಯಮ ಅಳವಡಿಕೆ ಹಾಗೂ ಸಂಚಾರ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದರೆ ಅಪಘಾತಗಳನ್ನು ಕನಿಷ್ಠಗೊಳಿಸಲು ಸಾಧ್ಯ. ವ್ಯಾಪಕವಾದ ಜನಜಾಗೃತಿಯೂ ರಸ್ತೆ ಸುರಕ್ಷತೆಗೆ ಪೂರಕವಾದ ಪ್ರಮುಖ ಕ್ರಮಗಳಲ್ಲಿ ಒಂದು ಎಂಬುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT