ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಕರೆ ದರ ದುಬಾರಿಸೇವಾ ಗುಣಮಟ್ಟ ಸುಧಾರಿಸಲಿ

Last Updated 3 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಮೊಬೈಲ್‌ ಪ್ರಿಪೇಯ್ಡ್‌ ಗ್ರಾಹಕರ ಕರೆ ದರ ಮತ್ತು ಇಂಟರ್‌ನೆಟ್‌ (ಡೇಟಾ) ಬಳಕೆ ಶುಲ್ಕವು ಒಮ್ಮೆಗೇ ಶೇ 40ರಿಂದ ಶೇ 50ರವರೆಗೆ ಹೆಚ್ಚಳಗೊಂಡಿರುವುದು ಬಳಕೆದಾರರಿಗೆ ಹೊರೆಯಾಗಿ ಪರಿಣಮಿಸಿದೆ. ಖಾಸಗಿ ಸಂಸ್ಥೆಗಳಾದ ವೊಡಾಫೋನ್‌ ಐಡಿಯಾ ಮತ್ತು ಏರ್‌ಟೆಲ್‌ ಕಂಪನಿಗಳ ದರ ಹೆಚ್ಚಳ ಈಗಾಗಲೇ ಜಾರಿಗೆ ಬಂದಿದೆ. ರಿಲಯನ್ಸ್‌ ಜಿಯೊ ಕೂಡ ದರ ಹೆಚ್ಚಿಸುವುದಾಗಿ ಪ್ರಕಟಿಸಿದೆ. ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ದರ ಏರುಮುಖ ಕಂಡಿದೆ. ಮಂದಗತಿಯ ಆರ್ಥಿಕತೆ ಹಾಗೂ ಬೇಡಿಕೆ ಕುಸಿತದ ಈ ದಿನಗಳಲ್ಲಿ ಇದೊಂದು ಅನಿರೀಕ್ಷಿತ ಬೆಳವಣಿಗೆ. ಕೆಲವು ಪ್ಲ್ಯಾನ್‌ಗಳಡಿ ಕಡಿಮೆ ದರದಲ್ಲಿ ಗ್ರಾಹಕರು ಗರಿಷ್ಠ ಪ್ರಯೋಜನ ಪಡೆದುಕೊಂಡಿದ್ದರು. ಅಂತಹ ಸೌಲಭ್ಯಕ್ಕೆ ಈಗ ಹೆಚ್ಚು ಬೆಲೆ ತೆರಬೇಕಾಗಿದೆ. ಮೂರು ವರ್ಷಗಳ ಹಿಂದೆ ರಿಲಯನ್ಸ್‌ ಜಿಯೊ, ಕಡಿಮೆ ದರಕ್ಕೆ ಅನಿಯಮಿತ ಕರೆ ಹಾಗೂ 4ಜಿ ಡೇಟಾ ಸೌಲಭ್ಯವನ್ನು ಒದಗಿಸಿತು.ಈ ಮಾರುಕಟ್ಟೆ ತಂತ್ರವನ್ನು ಇತರ ಕಂಪನಿಗಳೂ ಅನುಸರಿಸಿದವು. ಇದರಿಂದಾಗಿ ಮೊಬೈಲ್‌ ಬಳಕೆಯ ಪ್ರವೃತ್ತಿಯಲ್ಲಿ ತೀವ್ರ ಬದಲಾವಣೆಗಳಾದವು. ಅನಾರೋಗ್ಯಕರ ಮತ್ತು ಅವೈಜ್ಞಾನಿಕ ದರ ಸಮರವು ದೂರಸಂಪರ್ಕ ಕ್ಷೇತ್ರದಲ್ಲಿ ಸೃಷ್ಟಿಸಿದ ಅವಾಂತರವು ಟೆಲಿಕಾಂ ಕಂಪನಿಗಳ ವರಮಾನಕ್ಕೆ ದೊಡ್ಡ ಪೆಟ್ಟು ನೀಡಿತು. ಅಲ್ಲದೆ, ಕೆಲವು ಕಂಪನಿಗಳನ್ನು ಸಾಲದ ಸುಳಿಗೆ ದೂಡಿತು. ಈ ಹೊರೆ ಇಳಿಸಿಕೊಳ್ಳಲು ದರ ಹೆಚ್ಚಿಸುವುದು ಅನಿವಾರ್ಯವಾಯಿತು. ಇದು, ಹೊಸ ಗ್ರಾಹಕರ ಸೇರ್ಪಡೆ ಮತ್ತು ಮೊಬೈಲ್‌ ಬಳಕೆ ಪ್ರಮಾಣದ ಮೇಲೆ ನಿಸ್ಸಂದೇಹವಾಗಿ ಪರಿಣಾಮ ಬೀರಲಿದೆ. ಡಿಜಿಟಲೀಕರಣದ ಪ್ರಕ್ರಿಯೆಗೂ ಇದರ ಬಿಸಿ ತಟ್ಟಬಹುದು. ಡೇಟಾ ಬಳಕೆಗೆ ಹೆಚ್ಚಿನ ಬೆಲೆ ತೆರಬೇಕಾಗಿರುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ನಡುವಣ ಡಿಜಿಟಲ್‌ ಅಂತರ ಇನ್ನಷ್ಟು ಹೆಚ್ಚಬಹುದು. ಆರ್ಥಿಕವಾಗಿ ಸಬಲರಲ್ಲದವರು ದುಬಾರಿಯಾದ ಡೇಟಾ ಸೇವೆ ಬಳಸಲು ಇನ್ನು ಮುಂದೆ ಹಿಂದೇಟು ಹಾಕುವ ಸಾಧ್ಯತೆಯೂ ಇದೆ.

2016ರಿಂದ ಈಚೆಗೆ ಯಾವುದೋ ಒಂದು ನಿರ್ದಿಷ್ಟ ಪ್ಲ್ಯಾನ್‌ನಡಿ, ನಿರ್ದಿಷ್ಟ ಮೊತ್ತ ಪಾವತಿಸಿದರೆ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಸಿಗುತ್ತಿತ್ತು.ಡೇಟಾ ಬಳಕೆ ಶುಲ್ಕ ತೀರಾ ಅಗ್ಗವಾಗಿತ್ತು. ಈ ಕೊಡುಗೆಗಳ ಕಾರಣಕ್ಕೆ ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು ಡೇಟಾ ಬಳಕೆ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗಿತ್ತು. ಆದರೆ, ಮೊಬೈಲ್‌ ಕಂಪನಿಗಳ ವರಮಾನ ಏರಿಕೆಗೆ ಇದು ನೆರವಾಗಲಿಲ್ಲ. ಹಾಗೆ ನೋಡಿದರೆ, ಹೊಡೆತ ಬಿದ್ದದ್ದೇ ಹೆಚ್ಚು. ಅದರ ‍‍ಪರಿಣಾಮವಾಗಿ, ಅಸ್ತಿತ್ವ ಉಳಿಸಿಕೊಳ್ಳುವುದೇ ಈಗ ಅವುಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ತರಂಗಾಂತರ ಮತ್ತು ಲೈಸೆನ್ಸ್‌ ಶುಲ್ಕದ ಭಾರಿ ಮೊತ್ತದ ಬಾಕಿಯನ್ನು ಸರ್ಕಾರಕ್ಕೆ ಮೊಬೈಲ್‌ ಕಂಪನಿಗಳು ಪಾವತಿಸಬೇಕಾಗಿದೆ. ವರಮಾನ ಹಂಚಿಕೆಗೆ ಸಂಬಂಧಿಸಿದ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಮಾನ್ಯ ಮಾಡಿದೆ. ಮೊಬೈಲ್‌ ಕಂಪನಿಗಳು ಸರ್ಕಾರಕ್ಕೆ ಒಟ್ಟು ₹ 1.42 ಲಕ್ಷ ಕೋಟಿ ಪಾವತಿಸಬೇಕು ಎಂದೂ ಕೋರ್ಟ್‌ ತೀರ್ಪು ನೀಡಿದೆ. ಇದರಿಂದ, ಅವುಗಳ ಹಣಕಾಸು ಪರಿಸ್ಥಿತಿ ಇನ್ನಷ್ಟು ವಿಷಮಿಸಿದೆ. ನಷ್ಟದ ಸುಳಿಯಿಂದ ಕಂಪನಿಗಳು ಮೈಕೊಡವಿಕೊಂಡು ಏಳಬೇಕಾದ ಸ್ಥಿತಿ ಒದಗಿದೆ. ಅದಕ್ಕಾಗಿ ದರ ಏರಿಕೆಯ ಮೊರೆ ಹೋಗಿವೆ. ಇದರಿಂದ ಸಿಗುವ ಹೆಚ್ಚುವರಿ ವರಮಾನವನ್ನು ಸೇವೆಗಳ ಗುಣಮಟ್ಟ ಸುಧಾರಣೆಗೆ ಹಾಗೂ ಮೂಲ ಸೌಕರ್ಯ ಹೆಚ್ಚಿಸುವುದಕ್ಕೆ ಬಳಸುವ ಕಡೆಯೂ ಗಮನ ನೀಡಬೇಕಾಗಿದೆ. ದರಗಳು ಇನ್ನಷ್ಟು ಹೆಚ್ಚಳಗೊಂಡು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗದಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಿಗಾ ವಹಿಸಬೇಕು. ಅನಾರೋಗ್ಯಕರ ಪೈಪೋಟಿ ತಡೆಯುವ ದಿಸೆಯಲ್ಲೂ ಗಮನಹರಿಸಬೇಕು. ದೂರಸಂಪರ್ಕ ವಲಯದಲ್ಲಿ ಕವಿದಿರುವ ಕಾರ್ಮೋಡ ಕರಗಿಸಲು ಸರ್ಕಾರ ದೃಢ ಹೆಜ್ಜೆ ಇಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT