ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣದಂಡನೆ: ಸುಪ್ರೀಂ ಕೋರ್ಟ್‌ ತೀರ್ಪು ಆಳುವ ವರ್ಗದ ಕಣ್ತೆರೆಸಲಿ

Last Updated 12 ಮಾರ್ಚ್ 2019, 20:30 IST
ಅಕ್ಷರ ಗಾತ್ರ

ಮರಣದಂಡನೆಗೆ ಗುರಿಯಾಗಿದ್ದ ಎಂಟು ಜನರನ್ನು ದೋಷಮುಕ್ತಗೊಳಿಸಿ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿರುವ ತೀರ್ಪುಗಳು ನಮ್ಮ ತನಿಖಾ ಪ್ರಕ್ರಿಯೆ ಮತ್ತು ನ್ಯಾಯದಾನ ವ್ಯವಸ್ಥೆ ಬಗ್ಗೆ ಕಣ್ಣು ತೆರೆಸುವಂತಿವೆ. ಸುಪ್ರೀಂ ಕೋರ್ಟ್‌ನಿಂದ ಮರುಜೀವ ಪಡೆದಿರುವ ಈ ಎಂಟು ಜನ ಎರಡು ವಿಭಿನ್ನ ಪ್ರಕರಣಗಳಲ್ಲಿ ಮರಣದಂಡನೆಗೆ ಗುರಿಯಾಗಿದ್ದವರು. ಮೊದಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಮಹಾರಾಷ್ಟ್ರದ ಅಲೆಮಾರಿ ಜನಾಂಗದ ಆರು ಮಂದಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದು ಮಾಡಿ, ಅವರನ್ನು ದೋಷಮುಕ್ತಗೊಳಿಸಿದೆ. ಒಂದೇ ಕುಟುಂಬದ ಐವರನ್ನು ಕೊಂದ ಆರೋಪ ಇವರ ಮೇಲಿತ್ತು. ಇವರು ಹದಿನಾರು ವರ್ಷಗಳಿಂದ ಜೈಲಿನಲ್ಲಿದ್ದರು. ಇವರಿಗೆ ಮರಣದಂಡನೆ ವಿಧಿಸಿ ಒಂದು ದಶಕ ಕಳೆದಿತ್ತು. ಈ ಆರು ಜನರಿಗೆ ಕೆಳಹಂತದ ವಿಚಾರಣಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು. ಇದರ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌, ಆರು ಜನರಲ್ಲಿ ಮೂವರಿಗೆ ಮಾತ್ರ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಈ ಆದೇಶದ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2009ರಲ್ಲಿ ಆರೂ ಜನರಿಗೆ ಪುನಃ ಗಲ್ಲು ಶಿಕ್ಷೆ ವಿಧಿಸಿತ್ತು. ಇದರ ಪುನರ್‌ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಅಪರಿಪೂರ್ಣ ಸಾಕ್ಷ್ಯಾಧಾರ
ಗಳನ್ನು ಆಧರಿಸಿ ಅವರನ್ನು ದೋಷಿಗಳು ಎಂದು ಘೋಷಿಸಲಾಗಿತ್ತು ಎಂದು ಹೇಳಿದೆ. ಈ ಆರು ಜನರಿಗೆ ಪರಿಹಾರ ನೀಡಬೇಕು ಎಂದೂ ಸುಪ್ರೀಂ ಕೋರ್ಟ್‌ ಈಗ ಹೇಳಿದೆ. ಇನ್ನೊಂದು ಪ್ರಕರಣದಲ್ಲಿ, ಮರಣದಂಡನೆಯಿಂದ ಮುಕ್ತಿ ಪಡೆದಿರುವ ಛತ್ತೀಸಗಡದ ಇಬ್ಬರ ವಿಚಾರದಲ್ಲಿ ತನಿಖೆ ದೋಷಪೂರ್ಣವಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ನಮ್ಮ ಕ್ರಿಮಿನಲ್ ಅಪರಾಧಗಳ ತನಿಖಾ ವ್ಯವಸ್ಥೆಯು ಬಡವರ ವಿಚಾರದಲ್ಲಿ ಪೂರ್ವಗ್ರಹಪೀಡಿತ ಆಗಿದೆ ಎಂಬ ಟೀಕೆಗಳನ್ನು ಈ ಎರಡು ಪ್ರಕರಣಗಳು ಗಟ್ಟಿಗೊಳಿಸುವಂತಿವೆ.

ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ನಡೆದಿರುವ ಈ ಬೆಳವಣಿಗೆಯು ಮರಣದಂಡನೆಯನ್ನು ರದ್ದುಪಡಿಸಬೇಕು ಎಂಬ ಹಳೆಯ ವಾದಕ್ಕೆ ಹೊಸ ಪುಷ್ಟಿ ನೀಡಿದೆ. ಶಿಕ್ಷೆಯನ್ನು ಕೊಡುವುದರ ಹಿಂದಿನ ಉದ್ದೇಶವೇನು, ಅದು ತಪ್ಪು ಮಾಡಿದವನನ್ನು ಪುನಃ ಸರಿದಾರಿಗೆ ತರುವುದಕ್ಕೋ ಅಥವಾ ಆತನಿಗೆ ತನ್ನನ್ನು ಸರಿಪಡಿಸಿಕೊಳ್ಳಲು ಅವಕಾಶವೇ ಇಲ್ಲದಂತೆ ಮಾಡುವುದಕ್ಕೋ ಎಂಬ ಚರ್ಚೆ ಹಿಂದಿನಿಂದಲೂ ಇದೆ. ನ್ಯಾಯಮೂರ್ತಿ ಕುರಿಯನ್ ಜೋಸೆಫ್‌ ಅವರು 2018ರಲ್ಲಿ ನೀಡಿದ ಒಂದು ತೀರ್ಪಿನಲ್ಲಿ ಈ ಚರ್ಚೆ ಪ್ರತಿಫಲಿತ
ವಾಗಿದೆ.

‘ತಪ್ಪು ಮಾಡಿದವನನ್ನು ಮರಣದಂಡನೆಗೆ ಗುರಿಪಡಿಸುವ ಮುನ್ನ, ಆತನಲ್ಲಿ ಸುಧಾರಣೆ ತರುವುದು ಇನ್ನು ಸಾಧ್ಯವೇ ಇಲ್ಲ ಎನ್ನಲು ಯಾವ ರೀತಿಯ ಮನಃಶಾಸ್ತ್ರೀಯ ಪರೀಕ್ಷಾ ವ್ಯವಸ್ಥೆ ಇದೆ? ಮನಃಶಾಸ್ತ್ರೀಯ ನೆಲೆಯಲ್ಲಿ ಪರಿಶೀಲನೆ ನಡೆಸದೆಯೇ ಸುಧಾರಣೆ ಸಾಧ್ಯವಿಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ’ ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದರು. ಮರಣ
ದಂಡನೆಯನ್ನು ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್‌ 1980ರಲ್ಲಿ ಬಚನ್ ಸಿಂಗ್ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ. ಆದರೆ, ಮರಣದಂಡನೆ ವಿಧಿಸುವುದು ‘ನ್ಯಾಯಮೂರ್ತಿ ಕೇಂದ್ರಿತ’ವೂ ‘ಪೀಠದಲ್ಲಿರುವ ನ್ಯಾಯಮೂರ್ತಿಗಳ ವೈಯಕ್ತಿಕ ನಿಲುವು’ಗಳನ್ನು ಅವಲಂಬಿಸಿದ್ದೂ ಆಗಿರುವುದರ ಬಗ್ಗೆ ಅಲೋಕನಾಥ ದತ್ತ, ಸ್ವಾಮಿ ಶ್ರದ್ಧಾನಂದ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಮರಣದಂಡನೆ ವಿಚಾರದಲ್ಲಿ ಕೇಂದ್ರ ಕಾನೂನು ಆಯೋಗವು 2015ರಲ್ಲಿ ನೀಡಿದ ವರದಿ ಕೂಡ ಗಮನಾರ್ಹ. ‘ಮರಣದಂಡನೆ ರದ್ದು ಮಾಡುವತ್ತ ಸಾಗುವ ಸಮಯ ಬಂದಿದೆ... ಭಯೋತ್ಪಾದನೆ ಮತ್ತು ರಾಷ್ಟ್ರದ ವಿರುದ್ಧ ಯುದ್ಧ ಸಾರಿದ’ ಅಪರಾಧಗಳನ್ನು ಹೊರತುಪಡಿಸಿ, ಇತರ ಅಪರಾಧಗಳಿಗೆ ಮರಣದಂಡನೆ ರದ್ದು ಮಾಡಬೇಕೆಂದು ಆಯೋಗ ಶಿಫಾರಸು ಮಾಡಿದೆ. ಅತ್ಯಾಚಾರ ಸೇರಿದಂತೆ ಹತ್ತೆಂಟು ಸ್ವರೂಪದ ಅಪರಾಧಗಳಿಗೆ ಮರಣದಂಡನೆಯನ್ನೇ ವಿಧಿಸಬೇಕು ಎಂಬ ಬೇಡಿಕೆ ಸಮಾಜದಲ್ಲಿ ವ್ಯಕ್ತವಾಗುತ್ತಿದೆ. ಹೀಗಿದ್ದರೂ, ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದು ಮಾಡುವುದು ಪ್ರಭುತ್ವವೊಂದು ಕೈಗೊಳ್ಳಬಹುದಾದ ಅತ್ಯುನ್ನತ ನೈತಿಕ ತೀರ್ಮಾನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT