ನೋಟು ರದ್ದತಿ: ಆರ್‌ಬಿಐ ಸ್ವಾಯತ್ತೆ ಮೇಲೆ ಸವಾರಿ

ಶುಕ್ರವಾರ, ಏಪ್ರಿಲ್ 19, 2019
29 °C
ನೋಟು ರದ್ದತಿ: ಸರ್ಕಾರದ ಅಣತಿಗೆ ತಲಾಬಾಗಿದ ಆರ್‌ಬಿಐ

ನೋಟು ರದ್ದತಿ: ಆರ್‌ಬಿಐ ಸ್ವಾಯತ್ತೆ ಮೇಲೆ ಸವಾರಿ

Published:
Updated:

2016ರ ನವೆಂಬರ್‌ ತಿಂಗಳಲ್ಲಿ ದಿಢೀರನೆ ಕೈಗೊಂಡ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪೂರ್ವಾನುಮತಿ ಇರಲಿಲ್ಲ ಎಂಬುದು ಆಘಾತಕಾರಿ. ಈ ನಿರ್ಧಾರ ಪ್ರಕಟಿಸುವುದಕ್ಕೆ ಕೆಲವೇ ಗಂಟೆಗಳ ಮುಂಚೆ ಆರ್‌ಬಿಐ ನಿರ್ದೇಶಕ ಮಂಡಳಿಯ ಸಭೆ ನಡೆದಿತ್ತು. ಆದರೆ, ಸಭೆಯಲ್ಲಿ ನೋಟು ರದ್ದತಿಯು ಅರ್ಥವ್ಯವಸ್ಥೆಯ ಮೇಲೆ ಬೀರಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಚರ್ಚೆಯೇ ನಡೆದಿರಲಿಲ್ಲ. ಪ್ರವಾಸಿಗರಿಗೆ ಆಗಬಹುದಾದ ಅನನುಕೂಲದ ಬಗ್ಗೆ ಒಂದಷ್ಟು ಚರ್ಚೆ ನಡೆಸಲಾಗಿತ್ತು ಎಂಬ ಅಂಶ ಈಗ ಬಯಲಾಗಿದೆ. ಆ ವರ್ಷದ ಜಿಡಿಪಿ ಮೇಲೆ ಅಲ್ಪಾವಧಿ ಪರಿಣಾಮ ಉಂಟಾಗಬಹುದು ಎಂದಷ್ಟೇ ಸಭೆಯು ಅಂದಾಜಿಸಿತ್ತು. ಅಲ್ಲದೆ, ಮಂಡಳಿಯ ಅನುಮೋದನೆಗೆ ಕಾಯದೆ ನೋಟು ರದ್ದತಿಯ ನಿರ್ಧಾರವನ್ನು ಏಕಪಕ್ಷೀಯವಾಗಿ ಪ್ರಕಟಿಸಲಾಯಿತು. ಇದಕ್ಕೆ, ಕೇಂದ್ರೀಯ ಬ್ಯಾಂಕ್‌ನ ಔಪಚಾರಿಕ ಮತ್ತು ಲಿಖಿತ ಅನುಮತಿಯನ್ನೂ ಪಡೆದಿರಲಿಲ್ಲ. ಪೂರ್ವಾನ್ವಯಗೊಳಿಸಿ ಸಮ್ಮತಿ ನೀಡುವಂತೆ ಆರ್‌ಬಿಐ ಮೇಲೆ ಒತ್ತಡ ತರಲಾಗಿತ್ತು. ಇದು, ಸರ್ಕಾರದ ನಿರಂಕುಶ ನಿರ್ಧಾರವಾಗಿತ್ತು. ಜತೆಗೆ ಆರ್‌ಬಿಐನ ಕರೆನ್ಸಿ ನೀತಿಯ ಅಧಿಕಾರದ ಸ್ಪಷ್ಟ ಉಲ್ಲಂಘನೆಯೂ ಆಗಿದೆ. ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತೆ ಮೇಲೆ ನಡೆಸಿದ ಸವಾರಿಯೂ ಹೌದು. ಆರ್‌ಬಿಐ ನಿರ್ದೇಶಕ ಮಂಡಳಿಯ ಸಭಾ ನಡಾವಳಿಯ ವಿವರ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಆರ್‌ಬಿಐ ಈಗ ವಿವರ ಬಹಿರಂಗಪಡಿಸಿದೆ. ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಈ ಮಾಹಿತಿ ನೀಡಲು ಆರ್‌ಬಿಐ ಹಿಂದೇಟು ಹಾಕಿತ್ತು. ಸ್ವತಃ ಮುಜುಗರಕ್ಕೆ ಒಳಗಾಗುವುದನ್ನು ಮತ್ತು ಸರ್ಕಾರಕ್ಕೆ ಇರಿಸುಮುರಿಸು ಆಗುವುದನ್ನು ತಪ್ಪಿಸುವುದು ಅದರ ಇರಾದೆ ಆಗಿರಬಹುದು. ಸರ್ಕಾರದ ನಿಲುವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಣೆಗೆ ಒಳಪಡಿಸದೆ ಆರ್‌ಬಿಐ ತನ್ನ ಸಾಂಸ್ಥಿಕ ಹೊಣೆಗಾರಿಕೆಯಿಂದ ನುಣುಚಿಕೊಂಡಿರುವುದು ಸ್ಪಷ್ಟಗೊಳ್ಳುತ್ತದೆ. ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಧ್ಯತೆಯಿದ್ದ ನಿರ್ಧಾರಕ್ಕೆ ಮೌನ ಸಮ್ಮತಿ ನೀಡುವ ಮೂಲಕ ಸ್ವಾಯತ್ತ ಸಂಸ್ಥೆಯ ವರ್ಚಸ್ಸಿಗೂ ಧಕ್ಕೆ ತಂದುಕೊಂಡಿದೆ.

ನೋಟು ರದ್ದತಿ ನಿರ್ಧಾರ ಹೊರಬೀಳುವುದಕ್ಕೂ ಎರಡೂವರೆ ಗಂಟೆ ಮೊದಲು ನಡೆದ ನಿರ್ದೇಶಕ ಮಂಡಳಿ ಸಭೆ ಔಪಚಾರಿಕವಷ್ಟೇ ಆಗಿತ್ತು ಎಂಬುದನ್ನು ಈ ಅಂಶಗಳು ಪುಷ್ಟೀಕರಿಸುತ್ತವೆ. ನೋಟು ರದ್ದತಿಯ ಗೋಜಲುಗಳ ಬಗ್ಗೆ ಈ ಸಭೆ ಗಂಭೀರ ಚರ್ಚೆಯನ್ನೇ ನಡೆಸಿಲ್ಲ. ಆರ್ಥಿಕತೆಯ ವಿವಿಧ ವಲಯಗಳು, ಕೃಷಿ, ಸಣ್ಣ ವಹಿವಾಟುದಾರರು, ಉದ್ಯೋಗ ಅವಕಾಶ, ಜನಜೀವನದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಮಂಡಳಿ ಚಕಾರ ಎತ್ತಿರಲಿಲ್ಲ. ಕಪ್ಪು ಹಣ ನಿರ್ಮೂಲನೆಗಾಗಿ ನೋಟು ರದ್ದತಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ ರಿಯಲ್‌ ಎಸ್ಟೇಟ್‌ ಮತ್ತು ಚಿನ್ನದ ರೂಪದಲ್ಲಿ ಇರುವ ಕಪ್ಪು ಹಣವನ್ನು ಹಣಕಾಸು ವ್ಯವಸ್ಥೆಯಿಂದ ಮೂಲೋತ್ಪಾಟನೆ ಮಾಡಲು ಸಾಧ್ಯವಾಗುವುದಿಲ್ಲ. ನೋಟು ರದ್ದತಿಯಿಂದಾಗಿ ದೇಶಿ ಆರ್ಥಿಕತೆಗೆ ಕೆಲಮಟ್ಟಿಗೆ ನಷ್ಟವೂ ಆಗಲಿದೆ ಎಂಬುದು ಆರ್‌ಬಿಐನ ನಿಲುವಾಗಿತ್ತು. ಇದನ್ನೂ ಸರ್ಕಾರಕ್ಕೆ ಆರ್‌ಬಿಐ ದೃಢವಾಗಿ ಹೇಳದೇ ಇರುವುದು ಗಂಭೀರ ಲೋಪ. ಈಗ ಆರ್ಥಿಕತೆ ಕುಂಟುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಪೆಟ್ಟು ಬಿದ್ದಿದೆ. ನಿರುದ್ಯೋಗ ಪ್ರಮಾಣ ಹೆಚ್ಚಿದೆ. ನೋಟು ರದ್ದತಿಯ ಮೂಲಕ ಇವಕ್ಕೆಲ್ಲ ಕಾರಣರಾದವರು ಈಗ ಈ ಕುರಿತು ಚಕಾರ ಎತ್ತದಿರುವುದು ಈ ನಿರ್ಧಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ.

ಬರಹ ಇಷ್ಟವಾಯಿತೆ?

 • 27

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !