ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್- ಕಿಮ್ ಚರ್ಚೆ ಮುಂದುವರಿಯಲಿ; ಉ.ಕೊರಿಯಾ ಅಣ್ವಸ್ತ್ರ ಬತ್ತಳಿಕೆ ಬರಿದಾಗಲಿ

Last Updated 4 ಮಾರ್ಚ್ 2019, 19:26 IST
ಅಕ್ಷರ ಗಾತ್ರ

‘ವಿಶ್ವದ ಅತಿ ದೊಡ್ಡ ಬಯಲು ಬಂದಿಖಾನೆ ಉತ್ತರ ಕೊರಿಯಾ’ ಎನ್ನುತ್ತದೆ ಮಾನವ ಹಕ್ಕುಗಳ ಸಂಸ್ಥೆ ‘ಹ್ಯೂಮನ್ ರೈಟ್ಸ್ ವಾಚ್’. 1910ರಲ್ಲಿ ಕೊರಿಯಾವನ್ನು ಆಕ್ರಮಿಸಿದ ಜಪಾನ್ ಎರಡನೆಯ ವಿಶ್ವಯುದ್ಧದ ಅಂತ್ಯದ (1945) ವೇಳೆಗೆ ಸೋವಿಯತ್ ಮತ್ತು ಅಮೆರಿಕಕ್ಕೆ ಶರಣಾಗಿ ಕಾಲು ಕಿತ್ತಿತು. ಅದಕ್ಕೆ ಮುನ್ನ ಕೊರಿಯಾವನ್ನು ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎಂದು ವಿಭಜಿಸಿತ್ತು.ಉತ್ತರವು ಸೋವಿಯತ್ ವಶವಾದರೆ, ದಕ್ಷಿಣವು ಅಮೆರಿಕದ ಅಧೀನಕ್ಕೆ ಒಳಪಟ್ಟಿತ್ತು.ಮೂರು ವರ್ಷಗಳ ನಂತರ 1948ರ ಏಪ್ರಿಲ್15ರಂದು ಉತ್ತರ ಮತ್ತು ದಕ್ಷಿಣ ಕೊರಿಯಾ ಸ್ವತಂತ್ರ ಸರ್ಕಾರಗಳು ರಚನೆಯಾದವು. 1950ರಿಂದ ಮೂರು ವರ್ಷಗಳ ಕಾಲ ಉತ್ತರ- ದಕ್ಷಿಣದ ನಡುವೆ ನಡೆದ ಯುದ್ಧದಲ್ಲಿ ಯಾರೂ ಗೆಲ್ಲಲಿಲ್ಲ ಮತ್ತು ಸೋಲಲಿಲ್ಲ. 12 ಲಕ್ಷ ಪ್ರಾಣಗಳು ಮಣ್ಣು ಸೇರಿದವು. ಉತ್ತರ ಕೊರಿಯಾ ಸರ್ವಾಧಿಕಾರಿ ಏಕಪಕ್ಷದ ಕ್ರೂರ ದುರಾಡಳಿತಕ್ಕೆ ಸಿಲುಕಿದೆ. ದಮನ–ಬಡತನ, ಬಲಾತ್ಕಾರದ ಶ್ರಮ- ಯಾತನಾ ಶಿಬಿರಗಳು, ಸಾಮೂಹಿಕ ಮರಣದಂಡನೆಗಳು, ಕ್ಷಾಮಕ್ಕೆ ಹತ್ತಾರು ಲಕ್ಷ ನಾಗರಿಕರು ಬಲಿಯಾಗಿದ್ದಾರೆ. ಮೂರನೆಯ ತಲೆಮಾರಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಾಯಕತ್ವದಲ್ಲಿ ಉತ್ತರ ಕೊರಿಯಾ ಮಾರಕ ಅಣ್ವಸ್ತ್ರಗಳನ್ನು ಮತ್ತು ಜೈವಿಕ ಅಸ್ತ್ರಗಳನ್ನು ಗುಡ್ಡೆ ಹಾಕಿಕೊಂಡಿದೆ. ಈ ದಾಹ ಇನ್ನೂ ತೀರಿಲ್ಲ. ಪ್ರಜೆಗಳು ಉಪವಾಸ– ವನವಾಸದಿಂದ ಸತ್ತರೂ ಕೆಟ್ಟರೂ ಲೆಕ್ಕವಿಲ್ಲ. ಅನ್ನ, ಅರಿವೆ, ಸೂರಿನ ಪರಿವೆ ಇಲ್ಲ. ಅಣ್ವಸ್ತ್ರಗಳ ತಯಾರಿಕೆಗಾಗಿ ಬೊಕ್ಕಸವೇ ಬರಿದಾಗುತ್ತಿದೆ. ವಿಶ್ವಸಂಸ್ಥೆ ವಿಧಿಸಿರುವ ಕಠಿಣ ನಿರ್ಬಂಧಗಳು ಉತ್ತರಕೊರಿಯಾ ನಾಯಕ ಕಿಮ್ ಅವರನ್ನು ಹೆಡೆಮುರಿಗೆ ಕಟ್ಟಿ ಕೆಡವಿಲ್ಲ.

ಬದಲಿಗೆ ಅಮೆರಿಕ ಮತ್ತು ಜಪಾನ್ ದೇಶಗಳನ್ನು ಬಲಿ ತೆಗೆದುಕೊಳ್ಳುವ ಖಂಡಾಂತರ ಪರಮಾಣು ಕ್ಷಿಪಣಿಗಳ ಪರೀಕ್ಷೆಯನ್ನು ಒಂದರ ನಂತರ ಮತ್ತೊಂದರಂತೆ ನಡೆಸುತ್ತಿದ್ದಾರೆ. ಅಮೆರಿಕವನ್ನಂತೂ ‘ಭಸ್ಮಾಸುರ’ನಂತೆ ಕಾಡಿದ್ದಾರೆ.

ಒಂದು ಕಡೆ ವಿಶ್ವಕ್ಕೆ ಕಡಿವಾಣ ತೊಡಿಸುವ ತವಕದ ‘ದೊಡ್ಡಣ್ಣ’,ಮತ್ತೊಂದೆಡೆ ಎರಡೂವರೆ ಕೋಟಿ ಜನಸಂಖ್ಯೆಯ ಪುಟ್ಟ ದೇಶದ ಸರ್ವಾಧಿಕಾರಿ.ಬಲು ಅಪಾಯಕಾರಿ.ಆರಂಭದಲ್ಲಿ ಪರಸ್ಪರರನ್ನು ಮುದಿಮೂಳ,ಬೆದರಿದ ನಾಯಿ,ಕುಳ್ಳ ರಾಕೆಟ್ ಮಾನವ ಎಂದೆಲ್ಲ ಕರೆದು ಪರಚಿಕೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತು ಕಿಮ್ ಇತ್ತೀಚಿನ ತಿಂಗಳುಗಳಲ್ಲಿಯುದ್ಧದ ಬೆದರಿಕೆ ತೊರೆದುಮಾತುಕತೆಯ ಮೇಜಿನತ್ತ ಬಂದಿರುವುದು ಸಕಾರಾತ್ಮಕ ಬೆಳವಣಿಗೆ.ಅಪಾಯಕಾರಿ ಅಣ್ವಸ್ತ್ರಗಳನ್ನು ನಾಶ ಮಾಡಬೇಕಲ್ಲದೆಅವುಗಳನ್ನು ತಯಾರಿಸುವ ನೆಲೆಗಳನ್ನು ಕಾಯಂ ಆಗಿ ಕಳಚಿ ಹಾಕಬೇಕು ಎಂಬುದು ಅಮೆರಿಕದ ಆಗ್ರಹ.ಪ್ರತಿಯಾಗಿಉತ್ತರ ಕೊರಿಯಾದ ಮೇಲೆ ವಿಶ್ವಸಂಸ್ಥೆ,ಅಮೆರಿಕ ಹಾಗೂ ದಕ್ಷಿಣ ಕೊರಿಯಾ ವಿಧಿಸಿರುವಉಸಿರು ಕಟ್ಟಿಸುವ ನಿರ್ಬಂಧಗಳುದಂಡಗಳನ್ನು ತೆಗೆದು ಹಾಕುವ ಜೊತೆಗೆ ಉತ್ತರ ಕೊರಿಯಾಕ್ಕೆಅಣ್ವಸ್ತ್ರ ದೇಶದಮಾನ್ಯತೆ ನೀಡಬೇಕು ಎಂಬುದು ಕಿಮ್ ಚೌಕಾಶಿ.ದಕ್ಷಿಣ ಕೊರಿಯಾದಲ್ಲಿ ಇಂದಿಗೂ ಅಮೆರಿಕದ ಪ್ರಬಲ ಮಿಲಿಟರಿ ನೆಲೆ ಉಂಟು.ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಮಿಲಿಟರಿ ಕಸರತ್ತುಗಳ ಅಂತಿಮ ಗುರಿ ತಾನೇ ಎಂಬುದು ಉತ್ತರ ಕೊರಿಯಾದ ಅಳುಕು.ಈ ಕಸರತ್ತುಗಳನ್ನು ನಿಲ್ಲಿಸಬೇಕು ಎಂಬುದು ಕಿಮ್ ಇಟ್ಟಿರುವ ಮತ್ತೊಂದು ಬೇಡಿಕೆ.ಏಳು ತಿಂಗಳ ಹಿಂದೆ ಸಿಂಗಪುರದಲ್ಲಿ ಟ್ರಂಪ್-ಕಿಮ್ ನಡುವೆ ಮೊದಲ ಸುತ್ತಿನ ಮಾತುಕತೆ ಜರುಗಿತು.ಮಾತುಕತೆ ಮುಂದುವರಿಸುವ ನಿರ್ಣಯವೇ ಮೊದಲ ಸುತ್ತಿನ ಪ್ರಮುಖ ಪ್ರಗತಿ.ಮೊನ್ನೆ ವಿಯೆಟ್ನಾಂ ರಾಜಧಾನಿ ಹನೋಯ್‌ನಲ್ಲಿಟ್ರಂಪ್-ಕಿಮ್ ನಡುವೆನಡೆದ ಎರಡನೆಯ ಸುತ್ತಿನಮಾತುಕತೆಯಿಂದ ಬಹಳ ನಿರೀಕ್ಷೆಗಳನ್ನು ಇರಿಸಿಕೊಳ್ಳಲಾಗಿತ್ತು.ಆದರೆ ಅದು ಹಠಾತ್ತನೆಮುರಿದುಬಿತ್ತು.ಪರಸ್ಪರರು ಅಸಾಧ್ಯ ಬೇಡಿಕೆಗಳನ್ನು ಮಂಡಿಸಿದ್ದೇ ಕಾರಣ ಎನ್ನಲಾಗಿದೆ. ಎಲ್ಲ ಅಣ್ವಸ್ತ್ರ ಸೌಲಭ್ಯ ನೆಲೆಗಳ ನಾಶದ ಪ್ರಕ್ರಿಯೆಯು ತಕ್ಷಣಪುರಾವೆಸಹಿತ ಜರುಗಬೇಕುಎಂಬ ಅಮೆರಿಕದ ಬೇಡಿಕೆಗೆ ಕಿಮ್ ಒಪ್ಪಲಿಲ್ಲ.ಮುಖ್ಯ ನೆಲೆಯೊಂದನ್ನು ಕಳಚುತ್ತೇವೆ, ಪ್ರತಿಯಾಗಿಎಲ್ಲ ನಿರ್ಬಂಧಗಳನ್ನು ತೆಗೆದುಹಾಕಬೇಕುಎಂಬ ಕಿಮ್ ಷರತ್ತನ್ನು ಒಪ್ಪುವುದು ಅಸಾಧ್ಯ ಎಂಬುದು ಟ್ರಂಪ್ ವಿವರಣೆ. ಇಂತಹ ಷರತ್ತನ್ನು ತಾವು ಇಟ್ಟಿಲ್ಲ ಎಂಬುದುಕಿಮ್ ಸ್ಪಷ್ಟನೆ. ಆದರೆ ಮುರಿದುಬಿದ್ದ ಮಾತುಕತೆ ಮತ್ತೆ ಮುಂದುವರಿಯಲಿದೆ ಎಂಬ ಟ್ರಂಪ್ ಹೇಳಿಕೆ ಸ್ವಾಗತಾರ್ಹ. ದಕ್ಷಿಣ ಕೊರಿಯಾ ಜೊತೆ ಅದು ಮಿಲಿಟರಿ ಕಸರತ್ತು ಕೈ ಬಿಟ್ಟಿರುವ ಕ್ರಿಯೆ ಆಶಾದಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT