ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನಾಲಿಗೆ ಚಪಲದ ಕೋಳಿಜಗಳ ರಾಷ್ಟ್ರನಾಯಕರ ಅವಹೇಳನ ಸಲ್ಲ

Last Updated 13 ಅಕ್ಟೋಬರ್ 2022, 20:08 IST
ಅಕ್ಷರ ಗಾತ್ರ

ದೇಶಕ್ಕೆ ಗಣನೀಯ ಕೊಡುಗೆ ನೀಡಿದ ನಾಯಕರ ಹೆಸರನ್ನು ಬೀದಿ ಜಗಳದ ಮಟ್ಟದ ರಾಜಕೀಯ ವಾಗ್ವಾದಕ್ಕೆ ಎಳೆತರುವ ಮೂಲಕ, ರಾಜಕೀಯ ಪಕ್ಷಗಳ ನಾಯಕರು ತಮ್ಮ ನಾಲಿಗೆ ಚಪಲ ತೋರಿಸಿದ್ದಾರೆ. ಕನಿಷ್ಠ ಲಜ್ಜೆಯನ್ನೂ ಗಾಳಿಗೆ ತೂರಿದ್ದಾರೆ. ‘ಮಹಾತ್ಮ ಗಾಂಧಿ ಅವರ ಪಾದದ ದೂಳಿಗೆ ಜವಾಹರಲಾಲ್‌ ನೆಹರೂ ಅವರು ಸಮಾನರಾ. ನಾವು ಹೀಗೆ ಕೇಳಬಹುದಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಅವರು, ಮಹಾತ್ಮನ ಪಾದ ದೂಳಿನೊಂದಿಗೆ ನೆಹರೂ ಅವರನ್ನು ತುಲನೆ ಮಾಡಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು, ಮೋದಿ ಅವರ ಪಾದದ ದೂಳಿಗೂ ಸಿದ್ದರಾಮಯ್ಯ ಸಮಾನರಲ್ಲ ಎಂದು ಹೇಳಿದ್ದಾರೆ; ರಾಹುಲ್‌ ಗಾಂಧಿ ಅವರನ್ನು ಬಚ್ಚಾ ಎಂದೂ ಕರೆದಿದ್ದಾರೆ.ಈ ರೀತಿಯ ಪದಗಳ ಬಳಕೆ ತಮ್ಮ ಸ್ಥಾನಮಾನಕ್ಕೆ ಹಾಗೂ ವಯಸ್ಸಿನ ಹಿರಿತನಕ್ಕೆ ಹೊಂದುತ್ತದೆಯೇ ಎನ್ನುವುದರ ಬಗ್ಗೆ ಬಿಜೆಪಿಯ ಉನ್ನತ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ‘ಯಡಿಯೂರಪ್ಪ ಅವರಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ’ ಎನ್ನುತ್ತಲೇ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರು ಕೂಡ ಪಾದ–ದೂಳಿನ ಹೋಲಿಕೆಯ ಮಾತು ಆಡಿದ್ದಾರೆ. ಸಿದ್ದರಾಮಯ್ಯ ಅವರು ಇಲ್ಲಿ ಜಾಣ್ಮೆ ತೋರಿದ್ದರೂ ಪಾದ–ದೂಳಿನ ಉಲ್ಲೇಖ ಅವರಿಗೆ ತಕ್ಕುದಲ್ಲ.ಉನ್ನತ ಸ್ಥಾನಗಳಲ್ಲಿ ಇರುವವರು ತಮ್ಮ ಸಾರ್ವಜನಿಕ ನಡವಳಿಕೆಯ ಮೂಲಕ ಸಮಾಜಕ್ಕೆ ಉತ್ತಮ ಮಾದರಿಗಳನ್ನು ಒದಗಿಸಬೇಕು. ನಿದರ್ಶನ ಆಗಬೇಕಾದವರೇ ಲಘುವಾಗಿ ಮಾತನಾಡ
ತೊಡಗಿದರೆ ಸಾಮಾನ್ಯ ಕಾರ್ಯಕರ್ತರ ನಾಲಿಗೆಗೆ ಲಗಾಮು ಎಲ್ಲಿಂದ ಬರಬೇಕು?

ಬಿಜೆಪಿಯ ನಾಯಕರು ನೆಹರೂ ಅವರನ್ನು ತಡವಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಸ್ವತಂತ್ರ ಭಾರತದ ಎಲ್ಲ ಬಿಕ್ಕಟ್ಟುಗಳಿಗೂ ನೆಹರೂ ಅವರೇ ಕಾರಣ ಎಂದು ಬಿಂಬಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ ನೆಹರೂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಮರೆಮಾಚುವ ಪ್ರಯತ್ನ ನಡೆಸಲಾಗುತ್ತಿದೆ. ಆಧುನಿಕ ಭಾರತದ ನೀಲನಕಾಶೆಯನ್ನು ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದ ನೆಹರೂ ಸ್ವಾತಂತ್ರ್ಯ ಚಳವಳಿಯಲ್ಲೂ ಸಕ್ರಿಯರಾಗಿದ್ದರು. ಗಾಂಧಿಯ ನಂತರ ಜನರನ್ನು ಪ್ರಭಾವಿಸಿದ ಬಹುದೊಡ್ಡ ನಾಯಕನ ಕೊಡುಗೆಯನ್ನು ಸ್ಮರಿಸಿಕೊಳ್ಳುವ
ಸಜ್ಜನಿಕೆ ತೋರದೆ ಹೋದರೂ, ಕೃತಘ್ನರಂತೆ ವರ್ತಿಸುವುದು ನೈತಿಕತೆಯೂ ಅಲ್ಲ, ಜನಪರ ರಾಜಕಾರಣವೂ ಅಲ್ಲ. ದೇಶದ ವಿಭಜನೆಗೆ ನೆಹರೂ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಕೂಡ ಹೊಣೆಗೇಡಿತನದ ವರ್ತನೆ ಹಾಗೂ ಇತಿಹಾಸದ ಅಪವ್ಯಾಖ್ಯಾನ. ನೆಹರೂ ಅವರನ್ನು ಸ್ವತಃ ಮಹಾತ್ಮ ಗಾಂಧಿ ಗೌರವದಿಂದ ಕಂಡಿದ್ದರು ಹಾಗೂ ತಮ್ಮ ಆಶೋತ್ತರಗಳ ವಾರಸುದಾರರನ್ನಾಗಿ ಹಲವು ಸಂದರ್ಭಗಳಲ್ಲಿ ಬಿಂಬಿಸಿದ್ದರು. ಇತಿಹಾಸವನ್ನು ತಿರುಚಿ ನೆಹರೂ ಅವರನ್ನು ತಪ್ಪಾಗಿ ಚಿತ್ರಿಸುವುದರಿಂದ ನೆಹರೂ ಕೊಡುಗೆಯನ್ನು ಮರೆಮಾಚುವುದು ಸಾಧ್ಯವಿಲ್ಲ. ಗಾಂಧಿ ಅವರ ಪಾದದ ದೂಳಿಗೆ ನೆಹರೂ ಅವರನ್ನು ಹೋಲಿಸುವುದು ದೇಶದ ಮೊದಲ ಪ್ರಧಾನಿಗೆ ತೋರುವ ಅಗೌರವ ಮಾತ್ರವಲ್ಲ, ಮಹಾತ್ಮನಿಗೆ ಮಾಡುವ ಅವಮಾನವೂ ಹೌದು ಎನ್ನುವುದನ್ನು ನಾಯಕರು ನೆನಪಿನಲ್ಲಿಟ್ಟುಕೊಳ್ಳ
ಬೇಕು. ಇತರ ಪಕ್ಷಗಳ ಮುಖಂಡರು ಕೂಡಟೀಕೆಗಳಿಗೆ ತಿರುಗೇಟು ನೀಡುವ ಭರದಲ್ಲಿ ಕೀಳು ಅಭಿರುಚಿ ಪ್ರದರ್ಶಿಸಿದ್ದು ಇದೆ. ಇದೇ ರೀತಿ ಮುಂದುವರಿದರೆ ಸಾರ್ವಜನಿಕ ಸಂವಾದದ ಗುಣಮಟ್ಟವು ಪಾತಾಳಕ್ಕೆ ಕುಸಿಯುತ್ತದೆ. ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಸೇರಿದಂತೆ ಇತರ ಎಲ್ಲ ಪಕ್ಷಗಳ ಮುಖಂಡರು ಮಾತಿನಲ್ಲಿ ಹದ್ದು ಮೀರದೆ, ಸಾರ್ವಜನಿಕ ಜೀವನದ ಘನತೆಯನ್ನು ಎತ್ತಿ ಹಿಡಿಯಬೇಕು. ಪ್ರತಿಸ್ಪರ್ಧಿ ಪಕ್ಷಗಳ ಮುಖಂಡರು ಕೀಳಾಗಿ ಮಾತನಾಡುವ ರೀತಿಯಲ್ಲಿ ಪ್ರಚೋದನೆಯನ್ನೂ ಮಾಡಬಾರದು.

ಗಾಂಧಿ, ನೆಹರೂ ಸೇರಿದಂತೆ ಯಾರೊಬ್ಬರೂ ಟೀಕೆಗೆ ಅತೀತರಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಟೀಕೆಟಿಪ್ಪಣಿಗಳಿಗೆ ತೆರೆದ ಮನಸ್ಸನ್ನು ಹೊಂದಿರುವುದು ಅಗತ್ಯ. ಆದರೆ, ಆ ಟೀಕೆಗಳು ರಚನಾತ್ಮಕ ನೆಲೆಗಟ್ಟಿನಲ್ಲಿರಬೇಕೇ ಹೊರತು ಚಾರಿತ್ರ್ಯಹರಣದ ರೂ‍ಪ ಪಡೆಯಬಾರದು. ಅದರಲ್ಲೂ ಈಗ ನಮ್ಮೊಡನೆ ಇಲ್ಲದಿರುವ ನಾಯಕರ ವ್ಯಕ್ತಿತ್ವ ಮತ್ತು ಸಾಧನೆಯನ್ನು ವಿಶ್ಲೇಷಿಸುವಾಗ ವಿವೇಕ ಮತ್ತು ಸಂಯಮ ಅತ್ಯಗತ್ಯ. ನೆಹರೂ ಅಥವಾ ಗಾಂಧಿ ಒಂದು ಪಕ್ಷಕ್ಕೆ ಸೀಮಿತವಾದ ನಾಯಕರಲ್ಲ; ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸುವ ಮೂಲಕ ಇಡೀ ದೇಶದ ಗೌರವ ಮತ್ತು ಕೃತಜ್ಞತೆಗೆ ಪಾತ್ರರಾದ ನೇತಾರರು. ಅಂಥ ನಾಯಕರನ್ನು ರಾಜಕಾರಣದ ಬೀದಿಜಗಳಕ್ಕಾಗಿ ಬಳಸಿಕೊಳ್ಳುವುದು ತೀರಾ ಹೀನಾಯವಾದ ನಡವಳಿಕೆ. ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್‌ನವರೂ ಮಾತಿನ ದಾಳಿ ನಡೆಸುತ್ತಿದ್ದಾರೆ. ಈ ಮಾತು ಹಾಗೂ ಪ್ರತಿ ಮಾತು ರಾಜಕೀಯ ಜೀವನದಲ್ಲಿ ಸಹಜ. ಆದರೆ, ಈ ಕೋಳಿಜಗಳದಲ್ಲಿ ಈಗ ಇತಿಹಾಸದ ಪುಟಗಳಿಗೆ ಸೇರಿರುವ ನಾಯಕರನ್ನು ಬಳಸಿಕೊಳ್ಳುವುದು ಯಾರಿಗೂ ಶೋಭೆ ತರುವ ವರ್ತನೆಯಲ್ಲ. ಜನರ ಭಾವಕೋಶದಲ್ಲಿ ಅಚ್ಚೊತ್ತಿರುವ ಉದಾತ್ತ ನಾಯಕರ ಬಿಂಬಗಳನ್ನು ಗಾಸಿಗೊಳಿಸುವ ಪ್ರಯತ್ನಗಳು ನಿಲ್ಲಬೇಕು. ಇಂಥ ನಿರಾಕರಣೆಯ ಪ್ರವೃತ್ತಿ ಮುಂದುವರಿಯುತ್ತಾ ಹೋದರೆ, ಏನನ್ನೂ ಯಾರನ್ನೂ ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಎದುರಾಳಿಗೆ ಕೆಸರು ಎರಚುವ ಪ್ರಯತ್ನದಲ್ಲಿ ಆ ಕೊಳಕು ತಮ್ಮ ಕೈಗಳಿಗೂ ಅಂಟುತ್ತದೆ ಎನ್ನುವುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT