ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಹೊಸ ನೀತಿ ಡ್ರೋನ್‍ ಯುಗದ ಆರಂಭ

Last Updated 30 ಆಗಸ್ಟ್ 2018, 20:02 IST
ಅಕ್ಷರ ಗಾತ್ರ

ಮುಂಬರುವ ಡಿಸೆಂಬರ್ 1ರಿಂದ ಡ್ರೋನ್‍ಗಳ ಹಾರಾಟಕ್ಕೆ ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ಅವಕಾಶ ನೀಡುವಂತಹ ನೀತಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. ಹೀಗಾಗಿ ಡ್ರೋನ್‍ ಯುಗಕ್ಕೆ ಭಾರತ ಪ್ರವೇಶ ಪಡೆಯಲಿದೆ. ಡ್ರೋನ್‍ಗಳ ವಾಣಿಜ್ಯ ಬಳಕೆಗೆ ಅವಕಾಶ ನೀಡುವ ಈ ನೀತಿ, ಸುರಕ್ಷತಾ ಕ್ರಮಗಳಿಗೆ ಅನುಸಾರವಾಗಿ ಹಲವು ನಿರ್ಬಂಧ, ನಿಯಂತ್ರಣಗಳನ್ನೂ ಒಳಗೊಂಡಿದೆ. ವಿಮಾನನಿಲ್ದಾಣ, ಅಂತರರಾಷ್ಟ್ರೀಯ ಗಡಿ, ಸೇನಾನೆಲೆಗಳಂತಹ ‘ಹಾರಾಟ ನಿಷೇಧ’ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್‍ಗಳ ಹಾರಾಟಕ್ಕೆ ಅವಕಾಶ ಇರುವುದಿಲ್ಲ. ಈ ಹೊಸ ನೀತಿಯ ಕುರಿತಂತೆ ಭರವಸೆ, ನಿರೀಕ್ಷೆಗಳ ಜೊತೆಗೇ ಕೆಲವು ಅನುಮಾನಗಳೂ ಇವೆ.

37 ಪುಟಗಳ ಈ ನೀತಿಯಲ್ಲಿ ಡ್ರೋನ್‍ ಬಳಕೆಗೆ ಅನುಸರಿಸಬೇಕಾದ ನಿಯಮಗಳನ್ನು ವಿವರಿಸಲಾಗಿದೆ. ಕೃಷಿ ಹಾಗೂ ಆರೋಗ್ಯದಂತಹ ಕ್ಷೇತ್ರಗಳಲ್ಲಿ ಡ್ರೋನ್‍ಗಳ ವ್ಯಾಪಕ ಬಳಕೆಗೆ ಈ ನೀತಿಯಿಂದ ಅವಕಾಶಗಳು ತೆರೆದುಕೊಳ್ಳಲಿವೆ ಎಂಬ ನಿರೀಕ್ಷೆ ಇದೆ. ಮ‍ಣ್ಣು ಹಾಗೂ ಕ್ಷೇತ್ರ ವಿಶ್ಲೇಷಣೆಗೆ ಡ್ರೋನ್‍ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಬೆಳೆ ನಿರ್ವಹಣೆ ಸೇರಿದಂತೆ ಹಲವು ಆಯಾಮಗಳ ಸಂಶೋಧನೆಗಳಿಗೂ ಕೃಷಿತಜ್ಞರಿಗೆ ಇದು ವರವಾಗಬಹುದು. ನಗರ ಪ್ರದೇಶಗಳಲ್ಲಿ ತುರ್ತುಸಹಾಯದ ಕಾರ್ಯಾಚರಣೆಗಳ ವಿಧಾನವನ್ನೇ ಪರಿವರ್ತಿಸುವ ಶಕ್ತಿ ಡ್ರೋನ್‍ ತಂತ್ರಜ್ಞಾನಕ್ಕೆ ಇದೆ.

ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಂತೂ ಡ್ರೋನ್‍ಗಳ ಬಳಕೆ ಹೆಚ್ಚು ಅನುಕೂಲಕರ. ಭಾರತದ ಆರ್ಥಿಕತೆಯನ್ನು ಮುಂದಕ್ಕೆ ಒಯ್ಯಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬಂಥ ಕೇಂದ್ರ ಸರ್ಕಾರದ ದೃಷ್ಟಿಕೋನಕ್ಕೆ ಈಗ ಪ್ರಕಟಿಸಿರುವ ಈ ನೀತಿ ಪೂರಕವಾಗಿದೆ ಎನ್ನಬಹುದು. ವರ್ಷಗಳ ಹಿಂದೆಯೇ ಈ ಸಂಬಂಧದ ಕರಡು ನೀತಿಯನ್ನು ಪ್ರಕಟಿಸಲಾಗಿತ್ತು. ಆದರೆ ಅದನ್ನು ಅಂತಿಮಗೊಳಿಸಲು ದೀರ್ಘ ಕಾಲ ಹಿಡಿದಿದೆ. ವಿವಿಧ ಡ್ರೋನ್‍ ತಂತ್ರಜ್ಞಾನಗಳ ವಾಣಿಜ್ಯ ಅಳವಡಿಕೆಗೆ ಅವಕಾಶ ನೀಡುವ ಜಾಗತಿಕ ಮಾನದಂಡಗಳಿಗೆ ಅನುಸಾರವಾಗಿ ಡ್ರೋನ್‍ ನಿಯಮಾವಳಿಗಳನ್ನು ಅಭಿವೃದ್ಧಿಪಡಿಸಬೇಕಾದದ್ದು ಇದಕ್ಕೆ ಕಾರಣ. ಜೊತೆಗೆ, ಹಲವು ರಾಷ್ಟ್ರಗಳಲ್ಲಿಡ್ರೋನ್‍ ನಿಯಮಾವಳಿಗಳು ಇನ್ನೂ ಪ್ರಾಯೋಗಿಕ ಹಂತದಲ್ಲೇ ಇವೆ. ಭಾರತದ ಪರಿಸರದಲ್ಲಂತೂ ಇನ್ನೂ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ. ಹೀಗಾಗಿ ನಾಗರಿಕ ಯಾನ ಅಗತ್ಯಗಳ ಅನುಸಾರ, ಡ್ರೋನ್ ನಿಯಮಾವಳಿಗಳ ಸಿದ್ಧತೆಗೆ ಅನೇಕ ವರ್ಷಗಳು ಹಿಡಿದಿರುವುದು ಸಹಜವೇ.

ಡ್ರೋನ್‍ಗಳೆಂದು ಕರೆಯಲಾಗುವ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ತೂಕದ ಆಧಾರದ ಮೇಲೆ ಐದು ವರ್ಗಗಳಲ್ಲಿ ಈಗ ಈ ಹೊಸ ನೀತಿ ವಿಂಗಡಿಸಿದೆ. ಈ ಡ್ರೋನ್‍ಗಳ ನಿರ್ವಹಣೆ, ಇವನ್ನು ಹೇಗೆ ಹಾರಿಸಬಹುದು, ಎಲ್ಲೆಲ್ಲಿ ಬಳಸಬಾರದು ಎಂಬೆಲ್ಲಾ ವಿಚಾರಗಳ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನೂ ನೀಡಲಾಗಿದೆ. ಅದ್ದೂರಿ ವಿವಾಹ ಸಮಾರಂಭಗಳ ಛಾಯಾಗ್ರಹಣಕ್ಕೆ ಈಗಾಗಲೇ ಡ್ರೋನ್‍ ಬಳಸುವಂತಹ ಅಭ್ಯಾಸ ಇದೆ. ಇನ್ನು ಮುಂದೆ ನಿಯಮಗಳು ಜಾರಿ ಆಗಲಿರುವುದರಿಂದ ಈ ನಿಯಮಗಳ ಅನುಸಾರ ಛಾಯಾಗ್ರಹಣ ಮಾಡಿದಲ್ಲಿ ಪೊಲೀಸರಿಂದ ಕಾನೂನುಕ್ರಮದ ಭೀತಿ ಇಲ್ಲದೆ ನಿರಾತಂಕವಾಗಿ ಡ್ರೋನ್‍ ಬಳಕೆ ಮಾಡಬಹು ದಾಗಿದೆ. ನೊಂದಾವಣೆ, ಲೈಸೆನ್ಸ್ ಪಡೆದುಕೊಳ್ಳುವಿಕೆ ಹಾಗೂ ಪೊಲೀಸ್ ಅನುಮೋದನೆ- ಇವೆಲ್ಲವೂ ಈ ಕಾನೂನು ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತದೆ.

ನಿರ್ದಿಷ್ಟ ದೂರ ಹಾಗೂ ಎತ್ತರದಲ್ಲಿ ಮಾತ್ರ ಡ್ರೋನ್‍ಗಳ ವಾಣಿಜ್ಯ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಡ್ರೋನ್‍ ನಿರ್ವಹಿಸುವ ವ್ಯಕ್ತಿಯ ಕಣ್ಣಿಗೆ ಗೋಚರಿಸುವ ವ್ಯಾಪ್ತಿಯೊಳಗೇ ಡ್ರೋನ್‍ ಹಾರಾಟ ನಡೆಸಬೇಕೆಂದೂ ಈ ನೀತಿ ಸ್ಪಷ್ಟಪಡಿಸಿದೆ. ಆಕಾಶ ಟ್ಯಾಕ್ಸಿಗಳಾಗಿ, ಪಿಜ್ಜಾ ಅಥವಾ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಾಹನಗಳಾಗಿ ಡ್ರೋನ್‌ಗಳನ್ನು ಬಳಸಲು ಸದ್ಯಕ್ಕೆ ಈ ನೀತಿಯ ಪ್ರಕಾರ ಅವಕಾಶವಿಲ್ಲ. ಆದರೆ ಈ ನೀತಿ ನಿರಂತರವಾಗಿ ತಂತ್ರಜ್ಞಾನದ ಹೊಸ ಸಾಧ್ಯತೆಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತಲೇ ಇರಬೇಕಾಗುತ್ತದೆ. ಕೃತಕ ಬುದ್ಧಿಮತ್ತೆ ಅಭಿವೃದ್ಧಿಯಾಗುತ್ತಿರುವ ಈ ದಿನಗಳಲ್ಲಿ ಡ್ರೋನ್‌ಗಳ ಸಾಮರ್ಥ್ಯ, ದಕ್ಷತೆ ಹೆಚ್ಚುತ್ತಲೇ ಸಾಗುವುದರಲ್ಲಿ ಅನುಮಾನವಿಲ್ಲ. ಆದರೆ ಡ್ರೋನ್‌ ಬಳಕೆ ಹೆಚ್ಚಿದಷ್ಟೂ ಕಾನೂನು ನಿಯಂತ್ರಕರಿಗೆ ತಲೆನೋವು ಹೆಚ್ಚಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಖಾಸಗಿತನದ ಉಲ್ಲಂಘನೆ ಆರೋಪ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿವೆ. ಡ್ರೋನ್‌ ವಹಿವಾಟಿನಲ್ಲಿ ಸದ್ಯಕ್ಕೆ ಚೀನಾ ಮುಂಚೂಣಿಯಲ್ಲಿದೆ. ನಾವು ಇಷ್ಟಪಡಲಿ, ಪಡದಿರಲಿ, ಮುಂದಿನ ದಿನಗಳಲ್ಲಿ ಆಗಸದಲ್ಲಿಯೂ ದಟ್ಟಣೆ, ಗಜಿಬಿಜಿಗಳು ಹೆಚ್ಚುವ ಸಾಧ್ಯತೆಗಳಂತೂ ಗೋಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT