ಭಾನುವಾರ, ಜೂನ್ 20, 2021
28 °C

ಮಾದಕವಸ್ತು ಮಾರಾಟ ಜಾಲಮಟ್ಟ ಹಾಕಲು ಇಚ್ಛಾಶಕ್ತಿ ಪ್ರದರ್ಶಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲ ವಿಸ್ತರಣೆಯಾಗುತ್ತಿರುವುದರ ಬಗ್ಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಆತಂಕ ವ್ಯಕ್ತವಾಗಿದೆ. ಶಾಸಕರೊಬ್ಬರು ತಮ್ಮ ಮಗನೂ ಮಾದಕ ವಸ್ತು ವ್ಯಸನಿಯಾದ ಕಣ್ಣೀರ ಕತೆಯನ್ನು ಹೇಳಿಕೊಂಡಿದ್ದಾರೆ. ಬೆಂಗಳೂರು ಒಂದರಲ್ಲಿಯೇ ವಾರ್ಷಿಕ ₹ 250 ಕೋಟಿಗೂ ಹೆಚ್ಚು ಮೊತ್ತದ ಮಾದಕ ವಸ್ತುಗಳು ಮಾರಾಟವಾಗುತ್ತಿವೆ ಎಂದು ಶಾಸಕರೊಬ್ಬರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಈ ಮೊದಲು ಹತ್ತಾರು ಕೋಟಿ ರೂಪಾಯಿಗಳ ವ್ಯವಹಾರವಾಗಿದ್ದ ಇದು ಈಗ ಸಾವಿರಾರು ಕೋಟಿ ರೂಪಾಯಿಗಳ ವ್ಯವಸ್ಥಿತ ಉದ್ಯಮವಾಗುತ್ತಿದೆ ಎಂಬುದು ಆತಂಕಕಾರಿ ಅಂಶ. ಮಾದಕ ವಸ್ತು ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ ಈಗ ಭರವಸೆಯನ್ನು ನೀಡಿದ್ದಾರೆ.

ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಾನೂನು ಇದೆ. 2014ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಔಷಧ ಉಪಯೋಗಕ್ಕಾಗಿ ಬಳಕೆಯಾಗುವ ಮಾದಕ ವಸ್ತುಗಳಿಗೆ ರಿಯಾಯ್ತಿ ನೀಡಲಾಗಿದೆ. ಆದರೆ ಇದು ಮಾದಕ ವಸ್ತುಗಳ ಪ್ರಸರಣ ಹೆಚ್ಚಾಗಲು ಕಾರಣವಾಗಿದೆ. ಬೆಂಗಳೂರಿನ ಹಲವಾರು ಕಡೆ ಔಷಧ ವಿತರಕರ ಹೆಸರಿನಲ್ಲಿಯೇ ಮಾದಕ ವಸ್ತುಗಳು ಮಾರಾಟವಾಗುತ್ತಿರುವುದನ್ನು ಪತ್ತೆ ಮಾಡಲಾಗಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಗೋಪ್ಯವಾಗಿ ಮಾಹಿತಿ ಕಲೆಹಾಕಲು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ವಿಶೇಷ ವ್ಯವಸ್ಥೆ ಇದೆ. ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕದ್ರವ್ಯ ಅಪರಾಧ ನಿಗ್ರಹಕ್ಕಾಗಿ ಪೊಲೀಸ್ ಠಾಣೆಗಳನ್ನೂ ಸ್ಥಾಪಿಸಲಾಗಿದೆ. ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ನೀಡಲು ವಿಶೇಷ ಸಹಾಯವಾಣಿಯನ್ನೂ ಸ್ಥಾಪಿಸಲಾಗಿದೆ. ಇಷ್ಟೆಲ್ಲಾ ಇದ್ದರೂ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ನಿಲ್ಲುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಯುವ ಜನರನ್ನು ಈ ವ್ಯಸನ ಸೆಳೆಯುತ್ತಲೇ ಇದೆ.

ಬೆಂಗಳೂರು ಕೂಡ ಅಂತರರಾಷ್ಟ್ರೀಯ ಡ್ರಗ್ ಮಾರುಕಟ್ಟೆಯಾಗಿ ಬದಲಾಗಿದೆ ಎಂಬ ಶಂಕೆ ಇದೆ. ಮುಂಬೈ, ಗೋವಾ, ಕೊಚ್ಚಿ, ತಿರುವನಂತಪುರಂ, ಸಿಕಂದರಾಬಾದ್ ಮುಂತಾದ ಕಡೆಗಳಿಂದ ಬೆಂಗಳೂರಿಗೆ ಮಾದಕ ವಸ್ತುಗಳು ಬರುತ್ತವೆ ಎಂಬ ಗುಮಾನಿ ಇದೆ. ಅಲ್ಲದೆ ವಿದೇಶಿ ವಿದ್ಯಾರ್ಥಿಗಳು ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ದೂರೂ ಇದೆ. ರಾಜ್ಯದ ಕರಾವಳಿ ಪ್ರದೇಶಗಳಲ್ಲಿಯೂ ಡ್ರಗ್ಸ್ ದಂಧೆ ವ್ಯಾಪಕವಾಗಿದೆ ಎಂಬ ಮಾಹಿತಿಯೂ ಇದೆ. ಫೇಸ್‌ಬುಕ್, ವಾಟ್ಸ್ ಆ್ಯಪ್ ಮೂಲಕವೂ ಮಾದಕ ದ್ರವ್ಯಗಳು ಬಿಕರಿಯಾಗುತ್ತಿವೆ. ಬೆಂಗಳೂರಿನ ಕೆಲವು ಪಿ.ಜಿ.ಗಳಲ್ಲಿ, ಬೇಕರಿ, ಬೀಡಾ ಅಂಗಡಿ, ಎಳನೀರು ಅಂಗಡಿಗಳಲ್ಲಿಯೂ ಮಾದಕ ದ್ರವ್ಯ ಸಿಗುತ್ತಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಇಷ್ಟೆಲ್ಲಾ ಇದ್ದರೂ ಡ್ರಗ್ ವಿತರಣೆ ಜಾಲವನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದರೂ ಅವರಿಗೆ ಶಿಕ್ಷೆ ಕೊಡಿಸುವಷ್ಟು ಸಾಕ್ಷ್ಯಗಳನ್ನು ಪೊಲೀಸರು ಒದಗಿಸುತ್ತಿಲ್ಲ.

ಪೊಲೀಸರಿಗೆ ಮಾಹಿತಿ ಇಲ್ಲದೇ ಮಾದಕ ದ್ರವ್ಯ ಮಾರಾಟ ಮಾಡುವುದು ಕಷ್ಟ. ಈ ಬಗ್ಗೆಯೂ ಗೃಹ ಸಚಿವರು ಆಲೋಚನೆ ಮಾಡಬೇಕಾಗಿದೆ. ಗೂಂಡಾ ಕಾಯ್ದೆ ಬಳಸುತ್ತೇವೆ ಎಂದಮಾತ್ರಕ್ಕೆ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಲು ಸಾಧ್ಯವಿಲ್ಲ. ಮಾರಾಟ ಜಾಲವನ್ನು ಮಟ್ಟ ಹಾಕಲು ಇಚ್ಛಾಶಕ್ತಿ ಬೇಕು. ನಮ್ಮ ಯುವಜನರು ಡ್ರಗ್ಸ್ ದಾಸರಾಗುತ್ತಿರುವುದು ಅಪಾಯಕಾರಿ. ವ್ಯಸನಮುಕ್ತಗೊಳಿಸುವುದು ಸುಲಭದ ಕೆಲಸವಲ್ಲ. ಇದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗದು. ಮಾದಕ ದ್ರವ್ಯ ಜಾಲವನ್ನು ತಡೆಯುವುದು ಕೇವಲ ಪೊಲೀಸರ ಕೆಲಸವಲ್ಲ. ಸಮಾಜ ಕೂಡ ಕೈಜೋಡಿಸಬೇಕು. ಪೋಷಕರೂ ತಮ್ಮ ಮಕ್ಕಳ ಬಗ್ಗೆ ಗಮನ ನೀಡಬೇಕು.  ಮಾದಕ ವಸ್ತುಗಳ ಮಾರಾಟವು ಜನರ ನಡುವೆಯೇ ನಡೆಯುವುದರಿಂದ ಯಾವುದೇ ಪ್ರದೇಶದಲ್ಲಿ ಇದು ಕಂಡರೂ ಪೊಲೀಸರಿಗೆ ಮಾಹಿತಿ ಮುಟ್ಟಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ನಾಗರಿಕರ ಕರ್ತವ್ಯವೂ ಬಹಳ ಮುಖ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು