ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾಯಕ ಮಕ್ಕಳ ದುರ್ಮರಣ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ

Last Updated 20 ಆಗಸ್ಟ್ 2019, 3:16 IST
ಅಕ್ಷರ ಗಾತ್ರ

ಕೊಪ್ಪಳದ ಡಿ. ದೇವರಾಜ ಅರಸು ಮೆಟ್ರಿಕ್‌ಪೂರ್ವ ವಸತಿ ನಿಲಯದ ಐವರು ವಿದ್ಯಾರ್ಥಿಗಳು ವಿದ್ಯುದಾಘಾತದಿಂದ ಸಾವಿಗೀಡಾಗಿರುವುದು ದುರದೃಷ್ಟಕರ. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ನ ಮೊದಲ ಮಹಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣದ ಸಲುವಾಗಿ, ತಗಡಿನ ಡಬ್ಬಿಯಲ್ಲಿ ಮರಳು ತುಂಬಿ ಹತ್ತು ಅಡಿ ಎತ್ತರದ ಧ್ವಜಕಂಬವನ್ನು ನೆಡಲಾಗಿತ್ತು. ಭಾನುವಾರ ಬೆಳಿಗ್ಗೆ ಈ ಕಂಬವನ್ನು ತೆರವುಗೊಳಿಸುವ ಸಂದರ್ಭದಲ್ಲಿ, ಕಟ್ಟಡದ ಎದುರು ಹಾದುಹೋಗಿರುವ ವಿದ್ಯುತ್‌ ತಂತಿಯ ಸಂಪರ್ಕಕ್ಕೆ ಇಬ್ಬರು ವಿದ್ಯಾರ್ಥಿಗಳು ಸಿಲುಕಿ ಆಘಾತಕ್ಕೊಳಗಾಗಿದ್ದಾರೆ. ಅವರನ್ನು ರಕ್ಷಿಸಲು ಹೋದ ಮೂವರು ಒಳಗೊಂಡಂತೆ, ಒಟ್ಟು ಐವರು ವಿದ್ಯಾರ್ಥಿಗಳು ದುರಂತ ಮರಣಕ್ಕೊಳಗಾಗಿದ್ದಾರೆ. ಕಟ್ಟಡದ ಎದುರು ಹಾದುಹೋಗಿರುವ ವಿದ್ಯುತ್‌ ತಂತಿಗೆ ಪ್ಲಾಸ್ಟಿಕ್‌ ಕೊಳವೆಯ ಸುರಕ್ಷತೆ ಕಲ್ಪಿಸದಿರುವುದು ಅವಘಡಕ್ಕೆ ಕಾರಣವಾಗಿದೆ. 14ರಿಂದ 16ರ ಹರೆಯದ ಮಕ್ಕಳು ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿದ್ದಾರೆ. ಹಾಸ್ಟೆಲ್‌ ವಾರ್ಡನ್‌, ಕಟ್ಟಡದ ಮಾಲೀಕ ಹಾಗೂ ವಿದ್ಯುತ್‌ ಸರಬರಾಜು ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯ ಮಕ್ಕಳ ಸಾವಿಗೆ ಕಾರಣವಾಗಿದೆ. ದುರಂತ ಸಂಭವಿಸಿರುವ ಹಾಸ್ಟೆಲ್‌ನ ಅವ್ಯವಸ್ಥೆಯನ್ನು ಈ ಮೊದಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಉಪಯೋಗವಾಗಿಲ್ಲ ಎನ್ನುವ ದೂರುಗಳನ್ನು ನೋಡಿದರೆ, ಮಕ್ಕಳ ಸಾವಿಗೆ ಕಾರಣಕರ್ತರ ಪಟ್ಟಿ ಉದ್ದವಿರುವಂತಿದೆ. ಕೂಡುದೊಡ್ಡಿಗಳಂತಹ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್‌ಗಳು ನಡೆಯುವುದು ಅಥವಾ ವಾಸಸ್ಥಳದ ಪರಿಸರದಲ್ಲಿನ ಅಪಾಯಕಾರಿ ವಿದ್ಯುತ್‌ ತಂತಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಕುರುಡಾಗಿರುವುದು– ಇವೆಲ್ಲ ಸರ್ಕಾರದ ಪಾಲಿಗೆ ಮಕ್ಕಳ ಸುರಕ್ಷತೆಯು ಆದ್ಯತೆ ವಿಷಯವಾಗಿಲ್ಲ ಎನ್ನುವುದರ ಕುರುಹುಗಳು. ಅಮಾಯಕ ಮಕ್ಕಳು ದುರ್ಘಟನೆಗಳಲ್ಲಿ ಜೀವ ಕಳೆದುಕೊಂಡಾಗ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಆತಂಕವೂ, ಅವ್ಯವಸ್ಥೆಯನ್ನು ಸರಿಪಡಿಸುವ ಕಾಳಜಿಯೂ ವ್ಯಕ್ತವಾಗುತ್ತವೆ. ಆದರೆ ಈ ಆತಂಕ–ಕಾಳಜಿ ಮತ್ತೆ ವ್ಯಕ್ತವಾಗುವುದು ಮತ್ತೊಂದು ದುರ್ಘಟನೆ ನಡೆದಾಗಲೇ.

ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ನೆನಪಿಸಿಕೊಂಡರೆ, ವಿದ್ಯಾರ್ಥಿಗಳ ಸುರಕ್ಷತೆಯ ಕುರಿತ ವ್ಯವಸ್ಥೆಯ ಕಾಳಜಿ ಎಷ್ಟು ಗಟ್ಟಿಯಾದುದು ಎನ್ನುವುದು ಮನವರಿಕೆಯಾಗುತ್ತದೆ. ಶಾಲಾ ಶೌಚಾಲಯದ ಮೇಲೆ ಬಿದ್ದಿದ್ದ ಚೆಂಡನ್ನು ತರಲು ಹೋದ ವಿದ್ಯಾರ್ಥಿಯೊಬ್ಬ ವಿದ್ಯುತ್‌ ತಂತಿಯ ಸ್ಪರ್ಶಕ್ಕೆ ಸಿಲುಕಿ ಸತ್ತ ಸುದ್ದಿ 2018ರ ಜೂನ್‌ನಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರಿನಿಂದ ವರದಿಯಾಗಿತ್ತು. ಅದಾದ ತಿಂಗಳ ಅಂತರದಲ್ಲೇ ಹಾವೇರಿ ಜಿಲ್ಲೆಯ ಕೆರುಡಿ ಗ್ರಾಮದ ಶಾಲೆಯ ಆಟದ ಅಂಗಳದಲ್ಲಿ ಮಕ್ಕಳ ಆಟದ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಜಾವೆಲಿನ್‌ ತಗುಲಿ ಸಾವಿಗೀಡಾಗಿದ್ದ. ಈ ವರ್ಷದ ಮೇ ತಿಂಗಳಲ್ಲಿ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ
ವಿದ್ಯಾರ್ಥಿಯೊಬ್ಬ ಜಲಾಶಯವೊಂದರಲ್ಲಿ ಮುಳುಗಿ ಸತ್ತ ಘಟನೆ ಬಂಗಾರಪೇಟೆಯ ಕಾಮಸಮುದ್ರ ಗ್ರಾಮದಿಂದ ವರದಿಯಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ– ಶಾಲೆಯ ಮೆಟ್ಟಿಲುಗಳ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ಹರಿಯುವ ತಂತಿ ತುಳಿದು ಬಾಲಕನೊಬ್ಬ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದರೆ, ಕಲಬುರ್ಗಿ ಜಿಲ್ಲೆಯ ಕಮಲಾಪುರದಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯುತ್‌ ತಂತಿ ತುಳಿದು ಜೀವ ಕಳೆದುಕೊಂಡಿದ್ದಾನೆ. ಇನ್ನು ರಸ್ತೆ ಅಪಘಾತಗಳಿಗೆ ಮಕ್ಕಳು ಈಡಾಗುವ ದುರ್ಘಟನೆಗಳು ಸಾಮಾನ್ಯ ಎನ್ನುವಂತಾಗಿವೆ. ಇವೆಲ್ಲ ಘಟನೆಗಳು ಶಾಲೆ ಅಥವಾ ಹಾಸ್ಟೆಲ್‌ಗಳಲ್ಲಿ ಮಕ್ಕಳು ಎಷ್ಟು ಸುರಕ್ಷಿತರಾಗಿದ್ದಾರೆ ಎನ್ನುವುದರ ನಿದರ್ಶನಗಳಾಗಿವೆ. ಸಣ್ಣಪುಟ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಈ ಸಾವುಗಳನ್ನು ತಪ್ಪಿಸಬಹುದಿತ್ತು. ಶೈಕ್ಷಣಿಕ ಸಂಸ್ಥೆಗಳಲ್ಲಿನ ಮಕ್ಕಳ ಸುರಕ್ಷತೆಗಾಗಿ ‘ಕರ್ನಾಟಕ ಮಕ್ಕಳ ಸುರಕ್ಷತಾ ನೀತಿ– 2016’ ಜಾರಿಯಲ್ಲಿದೆ. ಯಾವುದೇ ಬಗೆಯ ದುರುಪಯೋಗ, ನಿರ್ಲಕ್ಷ್ಯ ಮತ್ತು ಶೋಷಣೆಯಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ರಕ್ಷಣೆಯನ್ನು ಖಾತರಿಪಡಿಸುವ ಈ ಸುರಕ್ಷತಾ ನೀತಿಯು ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಮಕ್ಕಳಿಗಾಗಿ ಇರುವ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಹೀಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಎಳೆಯರು ಬಲಿಯಾಗುವುದು ಕೊನೆಗೊಂಡಿಲ್ಲ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳು ಕಟ್ಟುನಿಟ್ಟಾಗಿ ಪಾಲನೆಯಾಗದೇ ಹೋದರೆ ಅಭಿವೃದ್ಧಿಯ ಕುರಿತ ನಮ್ಮ ಮಾತುಗಳೆಲ್ಲ ವ್ಯರ್ಥ ಆಲಾಪವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT