ಶುಕ್ರವಾರ, ಆಗಸ್ಟ್ 23, 2019
25 °C

ಆರ್ಥಿಕತೆಗೆ ನವಚೈತನ್ಯ ತುಂಬಲುತುರ್ತು ಕ್ರಮ ಅನಿವಾರ್ಯ

Published:
Updated:
Prajavani

ದೇಶಿ ಆರ್ಥಿಕತೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ವಿವಿಧ ವಲಯಗಳಲ್ಲಿನ ನಿರಾಶಾದಾಯಕ ಬೆಳವಣಿಗೆಗಳಿಂದ ದೃಢಪಡುತ್ತಿದೆ. ವಾಹನಗಳ ಮಾರಾಟ ಪ್ರಮಾಣವು 13 ತಿಂಗಳಿಂದ ನಿರಂತರವಾಗಿ ಕುಸಿತ ಕಂಡಿದೆ. ಪರಿಣಾಮವಾಗಿ ವಾಹನಗಳ ತಯಾರಿಕೆಯನ್ನು ಕಡಿತಗೊಳಿಸಲಾಗಿದೆ. ವಾಹನ ವಿತರಣಾ ಸಂಸ್ಥೆಗಳಲ್ಲಿ ಸುಮಾರು 2 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಎಂಟು ಪ್ರಮುಖ ಮೂಲ ಸೌಕರ್ಯ ವಲಯಗಳಲ್ಲಿನ ಪ್ರಗತಿಯು (ಶೇ 0.2) 50 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಮಾರಾಟ ಒತ್ತಡ ಮತ್ತು ವಿದೇಶಿ ಹೂಡಿಕೆಯ ಹೊರ ಹರಿವಿನಲ್ಲಿ ಹೆಚ್ಚಳದ ಕಾರಣಕ್ಕೆ ಷೇರುಪೇಟೆ ಸಂವೇದಿ ಸೂಚ್ಯಂಕ 5 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ನಗದು ಬಿಕ್ಕಟ್ಟು ಮುಂದುವರಿದಿದೆ. ಈ ಎಲ್ಲ ಪ್ರತಿಕೂಲ ವಿದ್ಯಮಾನಗಳಿಂದ ಆರ್ಥಿಕತೆ ಗಾಸಿಗೊಂಡಿದೆ. ಇವೆಲ್ಲವುಗಳಿಗೆ ಕಳಶ ಇಟ್ಟಂತೆ, ಭಾರತವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಎನ್ನುವ ಹೆಗ್ಗಳಿಕೆಯೂ ಕೈತಪ್ಪಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಆಧರಿಸಿ ವಿಶ್ವಬ್ಯಾಂಕ್‌ ಪಟ್ಟಿ ಮಾಡಿರುವ 205 ದೇಶಗಳ ಶ್ರೇಯಾಂಕದಲ್ಲಿ 6ನೇ ಸ್ಥಾನವನ್ನು ಫ್ರಾನ್ಸ್‌ಗೆ ಬಿಟ್ಟುಕೊಟ್ಟು 7ನೇ ಸ್ಥಾನಕ್ಕೆ ಇಳಿದಿರುವುದು ದೇಶಿ ಆರ್ಥಿಕತೆಯು ಕುಂಟುತ್ತಲೇ ಸಾಗಿರುವುದನ್ನು ಖಾತರಿಗೊಳಿಸು
ತ್ತದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿನ ಈ ನಿರಾಶಾದಾಯಕ ವಿದ್ಯಮಾನಗಳು ಆತಂಕ ಮೂಡಿಸುತ್ತವೆ. ಭಾರತವು ₹ 350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯಾಗುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿದೆ ಎಂದು ಅಧಿಕಾರಸ್ಥರು ಹೇಳಿಕೊಳ್ಳುತ್ತಿರುವುದು ಗಿಲೀಟು ಮಾತು ಎಂಬ ಅನುಮಾನ  ಮೂಡುತ್ತದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮರಳಿ ಅಧಿಕಾರಕ್ಕೆ ಬಂದಿರುವ ಆರಂಭಿಕ ಹಂತದಲ್ಲಿಯೇ ಅರ್ಥವ್ಯವಸ್ಥೆಯ ಕುಸಿತದ ಸವಾಲು ಎದುರಾಗಿದೆ. ಜುಲೈನಲ್ಲಿ ಮಂಡಿಸಲಾದ ಬಜೆಟ್‌ ಪ್ರಸ್ತಾವಗಳು ಆರ್ಥಿಕತೆಗೆ ಉತ್ಸಾಹ ತುಂಬುವಲ್ಲಿ ವಿಫಲವಾಗಿವೆ. ತೆರಿಗೆ ಪ್ರಸ್ತಾವಗಳು, ಆರ್ಥಿಕತೆಯ ನಾಡಿಮಿಡಿತದಂತಿರುವ ಷೇರುಪೇಟೆಯಲ್ಲಿ ದಿಗಿಲು ಮೂಡಿಸಿವೆ. ಆರ್ಥಿಕತೆಯನ್ನು ಕಾಡುತ್ತಿರುವ ಸದ್ಯದ ಸಮಸ್ಯೆಗಳಿಗೆ ಮೋದಿ ನೇತೃತ್ವದ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿನ ಕೆಲವು ತಪ್ಪು ನಿರ್ಧಾರಗಳು ಕೂಡ ಕಾರಣ ಎಂಬುದನ್ನು ಅಲ್ಲಗಳೆಯಲಾಗದು.

ಅರ್ಥವ್ಯವಸ್ಥೆಯಲ್ಲಿನ ಈ ಎಲ್ಲ ಜ್ವಲಂತ ಸಮಸ್ಯೆಗಳಿಗೆ ದಿಢೀರ್‌ ಪರಿಹಾರ ಕಷ್ಟಸಾಧ್ಯ. ಉತ್ಪಾದನೆ, ಮಾರಾಟ, ಬೇಡಿಕೆ, ವರಮಾನ, ಉದ್ಯೋಗ ಅವಕಾಶಗಳು ಒಳಗೊಂಡಂತೆ ಆರ್ಥಿಕತೆಯ ಎಲ್ಲ ವಲಯಗಳು ಒಂದಲ್ಲ ಒಂದು ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಹೀಗಾಗಿ ಪರಿಹಾರ ಕಂಡುಕೊಳ್ಳುವುದು ಸುಲಭದ ಮಾರ್ಗವಲ್ಲ. ಷೇರುಪೇಟೆಯ ವಿದ್ಯಮಾನಗಳಿಂದ ಸರ್ಕಾರಕ್ಕೂ ಇದು ಮನವರಿಕೆ ಆಗಿರಬಹುದು. ಬಜೆಟ್‌ನಲ್ಲಿನ ತೆರಿಗೆ ಪ್ರಸ್ತಾವಗಳ ಬಗ್ಗೆ ಸರ್ಕಾರ ಮರುಚಿಂತನೆಗೆ ಮುಂದಾಗಿರುವುದು ಸರಿಯಾದ ನಿಲುವು. ವರಮಾನ ವೃದ್ಧಿಯನ್ನೇ ಗಮನದಲ್ಲಿ ಇರಿಸಿಕೊಂಡು ತೆರಿಗೆ ಪ್ರಮಾಣ ಹೆಚ್ಚಿಸುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ಸಾಧ್ಯವಾಗದು. ಕೆಲವು ಪ್ರಮುಖ ಕಂಪನಿಗಳ ಹಣಕಾಸು ಸಾಧನೆಯು ಮೊದಲ ತ್ರೈಮಾಸಿಕದಲ್ಲಿ ಉತ್ತೇಜಕವಾಗಿಲ್ಲ. ಅರ್ಥ ವ್ಯವಸ್ಥೆಯಲ್ಲಿನ ಬಿಕ್ಕಟ್ಟಿನಿಂದ ಹೊರಬರುವುದಕ್ಕೆ ತುರ್ತು ಕ್ರಮಗಳ ಅಗತ್ಯ ಇದೆ. ಆದರೆ ಅಷ್ಟೇ ಸಾಲದು. ದೂರಗಾಮಿ ಪರಿಣಾಮಗಳನ್ನುಳ್ಳ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅನಿವಾರ್ಯ ಎದುರಾಗಿದೆ. ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿ, ಆರ್ಥಿಕತೆಯಲ್ಲಿನ ಪ್ರತಿಕೂಲಗಳನ್ನು ನಿಭಾಯಿಸುವ ಜಾಣತನ ತೋರಬೇಕಾಗಿದೆ. ಹಳಿ ತಪ್ಪಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಕಾರ್ಯಸಾಧ್ಯವಾದ ಕ್ರಮಗಳನ್ನು ಪ್ರಕಟಿಸಿ, ಆರ್ಥಿಕ ಹಿಂಜರಿತದ ಅಪಾಯವನ್ನು ಹಿಮ್ಮೆಟ್ಟಿಸಬೇಕಾಗಿದೆ. ಮೂಲಸೌಕರ್ಯ ವಲಯದ ಚಟುವಟಿಕೆ ಗರಿಗೆದರಲು ಅಗತ್ಯವಾದ ನೆರವು ನೀಡುವುದರಿಂದ ಮತ್ತು ರಿಯಲ್‌ ಎಸ್ಟೇಟ್‌ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದರಿಂದ ಆರ್ಥಿಕತೆ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ. 

Post Comments (+)