ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಸಂಘರ್ಷ: ಸರ್ಕಾರದಆದ್ಯತೆ ಬೆಳೆಗಾರರಾಗಿರಲಿ

Last Updated 20 ನವೆಂಬರ್ 2018, 2:39 IST
ಅಕ್ಷರ ಗಾತ್ರ

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಣ ಸಂಘರ್ಷ ಮತ್ತೆ ಶುರುವಾಗಿದೆ. ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಕೊಡಿಸುವಂತೆ ಆಗ್ರಹಿಸಿ ಪ್ರತಿವರ್ಷದಂತೆ ಈ ಬಾರಿಯೂ ರೈತರು ಬೀದಿಗಿಳಿದಿದ್ದಾರೆ. ಪೂರೈಸಿರುವ ಕಬ್ಬಿಗೆ ಸಿಗಬೇಕಾದ ಹಣಕ್ಕೆ ರೈತರು ಪ್ರತಿವರ್ಷ ಬೀದಿಗಿಳಿಯಬೇಕಾದ ಅನಿವಾರ್ಯವನ್ನು ಸೃಷ್ಟಿಸಿರುವವರು ಯಾರು?

ಈ ಪ್ರಶ್ನೆಗೆ ಸರಳ ಉತ್ತರ: ರಾಜಕಾರಣಿಗಳು. ಕಾರ್ಖಾನೆ ಮತ್ತು ರೈತರ ನಡುವಣ ಸಂಬಂಧದಲ್ಲಿ ಇರಬೇಕಾದ ವ್ಯಾವಹಾರಿಕ ಪಾವಿತ್ರ್ಯ ಇಲ್ಲವಾಗಿದೆ. ಕಾರ್ಖಾನೆ ಮಾಲೀಕರು ಹೊಂದಿರುವ ರಾಜಕೀಯ ಬಲ, ರೈತರ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವುದು ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಕೇಂದ್ರ ಸರ್ಕಾರದ ಕಬ್ಬು ಖರೀದಿ ಮತ್ತು ನಿಯಂತ್ರಣ ಆದೇಶದ ಪ್ರಕಾರ, ಕಬ್ಬು ಪೂರೈಸಿದ 14 ದಿನದೊಳಗೆ ಕಾರ್ಖಾನೆಗಳು ರೈತರಿಗೆ ಹಣ ಪಾವತಿಸಬೇಕು. ಅನಗತ್ಯ ವಿಳಂಬವಾದರೆ ಶೇ 15ರಷ್ಟು ಬಡ್ಡಿ ಕೊಡಬೇಕು. ಬಡ್ಡಿಯ ಮಾತು ಹೋಗಲಿ, ಬಾಕಿ ಹಣವನ್ನೇ ಸರಿಯಾಗಿ ಕೊಡುತ್ತಿಲ್ಲ.

ಬಾಕಿ ಹಣ ನೀಡುವಂತೆ ಸರ್ಕಾರವೂ ಒತ್ತಡ ಹೇರುತ್ತಿಲ್ಲ. ಇದಕ್ಕೆ ರಾಜಕೀಯ ಕಾರಣಗಳೂ ಇವೆ. ಪ್ರತಿವರ್ಷ ಈ ಸಂಘರ್ಷ ಮರುಕುಳಿಸುವುದೇಕೆ? ಬಹಳಷ್ಟು ಕಾರ್ಖಾನೆಗಳು ರಾಜಕೀಯ ನಾಯಕರ ಹಿಡಿತದಲ್ಲಿವೆ. ಇದಕ್ಕೆ ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ಆದರೆ, ಎಲ್ಲ ಕಾರ್ಖಾನೆಗಳ ವಿಷಯದಲ್ಲೂ ಈ ಮಾತು ಹೇಳಲಾಗದು. ಕೆಲವು ಕಾರ್ಖಾನೆಗಳು ಕಬ್ಬಿನ ಬಾಕಿ ಹಣವನ್ನು ಸಕಾಲಕ್ಕೆ ಪಾವತಿಸುತ್ತಿವೆ. ಒಪ್ಪಿಕೊಂಡಷ್ಟು ದರವನ್ನೂ ನೀಡಿವೆ. ಆದರೆ ಇಂತಹ ಕಾರ್ಖಾನೆಗಳ ಸಂಖ್ಯೆ ಕಡಿಮೆ. ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ಬೆಲೆ ಅನ್ವಯ ಕಾರ್ಖಾನೆಗಳು ₹ 95 ಕೋಟಿ ಬಾಕಿ ಪಾವತಿಸಬೇಕು. ಇದಕ್ಕೆ ಹೊರತಾಗಿ, ಹೆಚ್ಚುವರಿ ದರ ನೀಡುವುದಾಗಿ ಹೇಳಿ ರೈತರ ಜೊತೆ ಕಾರ್ಖಾನೆಗಳು ಮಾಡಿಕೊಂಡಿರುವ ಒಪ್ಪಂದದ ಅನ್ವಯ ₹ 480 ಕೋಟಿ.

ಕಬ್ಬಿನ ಬಾಕಿ ಪಾವತಿಸುವವರೆಗೂ ಪ್ರಸಕ್ತ ಸಾಲಿಗೆ ದರ ನಿಗದಿಪಡಿಸಬಾರದು ಎಂದು ಬೆಳೆಗಾರರು ಒತ್ತಾಯಿಸುತ್ತಿರುವುದರಲ್ಲೂ ಅರ್ಥವಿದೆ. ಸಕ್ಕರೆ ಲಾಬಿಗೆ ಮಣಿದು ಹೊಸ ದರ ನಿಗದಿ ಮಾಡಿ, ಕಬ್ಬು ಅರೆಯಲು ಒಪ್ಪಿಗೆ ನೀಡಿದರೆ ಬೆಳೆಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ನಿಶ್ಚಿತ. ಹೀಗಾಗಿ, ಸರ್ಕಾರ ತಡ ಮಾಡದೆ ಅವರ ರಕ್ಷಣೆಗೆ ಧಾವಿಸಬೇಕು. ಕೇಂದ್ರ ಸರ್ಕಾರ ಸೆಪ್ಟೆಂಬರ್ ಕೊನೆಯ ವಾರ ಸಕ್ಕರೆ ಕಾರ್ಖಾನೆಗಳಿಗೆ ₹ 5,500 ಕೋಟಿಯಷ್ಟು ಬೃಹತ್‌ ಪ್ಯಾಕೇಜ್‌ ಪ್ರಕಟಿಸಿದೆ.

ಕಬ್ಬು ಬೆಳೆಗಾರರಿಗೆ ನೀಡುವ ನೆರವು ಹೆಚ್ಚಳ, 50 ಲಕ್ಷ ಟನ್‌ ಸಕ್ಕರೆ ರಫ್ತು ಮಾಡುವ ಕಾರ್ಖಾನೆಗಳಿಗೆ ಸಾಗಣೆ ಸಬ್ಸಿಡಿ, ಎಥೆನಾಲ್‌ ಉತ್ಪಾದಿಸುವ ಕಾರ್ಖಾನೆಗಳು ಡಿಸ್ಟಿಲರಿ ಸ್ಥಾಪಿಸಲು ಬಡ್ಡಿರಹಿತ ಸಾಲ ಸೇರಿದಂತೆ ಹಲವಾರು ಅನುಕೂಲಗಳನ್ನು ಪ್ಯಾಕೇಜ್‌ ಒಳಗೊಂಡಿದೆ. ಸಕ್ಕರೆ ಬೆಲೆಯನ್ನು ಕೆ.ಜಿ.ಗೆ ₹ 29ಕ್ಕೆ ನಿಗದಿಪಡಿಸಿರುವುದರ ಜೊತೆಗೆ ಆಮದಿಗೆ ಕಡಿವಾಣ ಹಾಕಲು ಆಮದು ಸುಂಕವನ್ನು ಶೇ 50ರಿಂದ ಶೇ 100ಕ್ಕೆ ಹೆಚ್ಚಿಸಿದೆ.

ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಪ್ಯಾಕೇಜ್‌ ಪ್ರಕಟಿಸಲಾಗಿದೆ. ಇದು ಕಬ್ಬು ಬೆಳೆಗಾರರ ಸಮಸ್ಯೆಯು ಚುನಾವಣೆ ವಿಷಯವಾಗುತ್ತಿರುವುದಕ್ಕೆ ಸಾಕ್ಷಿ. ಮಹಾರಾಷ್ಟ್ರ, ಉತ್ತರಪ್ರದೇಶ ಒಳಗೊಂಡಂತೆ ದೇಶದಾದ್ಯಂತ ಸಕ್ಕರೆ ಲಾಬಿ ಪ್ರಬಲವಾಗಿದೆ. ಈ ಲಾಬಿಯನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ನಿರ್ವಿವಾದ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರರು ಅದರಲ್ಲೂ, ರೈತ ಮಹಿಳೆ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಇದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ. ಮಾತನಾಡುವ ಮೊದಲು ಮುಖ್ಯಮಂತ್ರಿ ಎಚ್ಚರ ವಹಿಸುವ ಅಗತ್ಯವಿದೆ. ಇನ್ನು ಸರ್ಕಾರದಿಂದ ಲಾಭ ಮಾಡಿಕೊಳ್ಳುತ್ತಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಹಣ ಪಾವತಿಸಲು ಸತಾಯಿಸುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT