ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಮಾನವೀಯ ನೆಲೆಯ ಪುನರವಲೋಕನ

Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ದೇಶದ ಸಂವಿಧಾನ ಮತ್ತು ಕಾನೂನುಗಳ ಪರಮೋಚ್ಚ ವ್ಯಾಖ್ಯಾನಕಾರನ ಸ್ಥಾನದಲ್ಲಿರುವ ಸುಪ್ರೀಂ ಕೋರ್ಟ್‌, ಒಂದು ವರ್ಷದ ಹಿಂದೆ ತಾನು ನೀಡಿದ್ದ ತೀರ್ಪೊಂದರ ಬಗ್ಗೆ ತಾನೇ ಪರಾಮರ್ಶೆ ನಡೆಸಿದೆ. ಆ ತೀರ್ಪು ಸರಿಯಿರಲಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಆ ತೀರ್ಪಿನಲ್ಲಿ ಇದ್ದ, ತೀವ್ರ ವಿವಾದಕ್ಕೆ ಕಾರಣವಾಗಿದ್ದ ನಿರ್ದೇಶನಗಳನ್ನು ಹಿಂಪಡೆದಿದೆ. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ– 1989’ಕ್ಕೆ ಸಂಬಂಧಿಸಿದಂತೆ 2018ರ ಮಾರ್ಚ್‌ ತಿಂಗಳಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸೇರಿದ ಜನರಿಗೆ ತಾರತಮ್ಯದಿಂದ ರಕ್ಷಣೆ ಒದಗಿಸಲು ಜಾರಿಗೆ ಬಂದ ಈ ಕಾಯ್ದೆಯು ಸಾರ್ವಜನಿಕ ಸೇವೆಯಲ್ಲಿ ಇರುವವರನ್ನು ಹಾಗೂ ಮುಗ್ಧರನ್ನು ಬ್ಲ್ಯಾಕ್‌ಮೇಲ್‌ಗೆ ಒಳಪಡಿಸುವ ಅಸ್ತ್ರವಾಗಿದೆ ಎಂದು ಹೇಳಿತ್ತು. ಅಷ್ಟೇ ಅಲ್ಲ, ಸಾರ್ವಜನಿಕ ಸೇವೆಯಲ್ಲಿರುವವರ (ಅಂದರೆ, ಸರ್ಕಾರಿ ನೌಕರರ) ವಿರುದ್ಧ, ಜನಸಾಮಾನ್ಯರ ವಿರುದ್ಧಈ ಕಾಯ್ದೆಯ ಅಡಿ ದೂರು ದಾಖಲಾದ ಸಂದರ್ಭದಲ್ಲಿ, ಕ್ರಮವಾಗಿ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಅನುಮತಿ ಸಿಗುವವರೆಗೆ ಆರೋಪಿಯ ಬಂಧನ ಆಗುವಂತಿಲ್ಲ ಎಂದು ಹೇಳಿತ್ತು. ಪ್ರಕರಣ ದಾಖಲಿಸಿಕೊಳ್ಳುವ ಮೊದಲು, ದೂರಿನಲ್ಲಿ ಹುರುಳಿದೆಯೇ ಅಥವಾ ಅದು ದುರುದ್ದೇಶದಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸಲು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಬಹುದು ಎಂದೂ ದ್ವಿಸದಸ್ಯ ಪೀಠವು 2018ರ ತೀರ್ಪಿನಲ್ಲಿ ಹೇಳಿತ್ತು. ಈ ತೀರ್ಪನ್ನು ವಿರೋಧಿಸಿ ದೇಶದ ಹಲವೆಡೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೆಲವೆಡೆ ಇದು ಹಿಂಸಾರೂಪಕ್ಕೂ ತಿರುಗಿತ್ತು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ದ್ವಿಸದಸ್ಯ ಪೀಠದ ನಿರ್ದೇಶನವು ಅನುಷ್ಠಾನಕ್ಕೆ ಬಾರದ ರೀತಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇನ್ನೊಂದೆಡೆ, ತೀರ್ಪಿನ ಮರುಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಕಾನೂನುಗಳನ್ನು ವ್ಯಾಖ್ಯಾನಿಸುವ ಪರಮೋಚ್ಚ ಸ್ಥಾನದಲ್ಲಿ ಸುಪ್ರೀಂ ಕೋರ್ಟ್‌ ಇದ್ದರೂ, ಆ ವ್ಯಾಖ್ಯಾನ
ದಲ್ಲಿ ಲೋಪಗಳು ಆಗುವುದೇ ಇಲ್ಲವೆಂದು ಹೇಳಲಾಗದು. ಆದರೆ, ಆಗಿರುವ ಲೋಪವನ್ನು ಗುರುತಿಸಿ ಅದನ್ನು ಸರಿಪಡಿಸಿಕೊಂಡ, ಕಾನೂನನ್ನು ಇನ್ನಷ್ಟು ಮಾನವೀಯವಾಗಿ ಅರ್ಥೈಸಿದ ಹಿರಿಮೆ ಇದೇ ಕೋರ್ಟ್‌ಗೆ ಇದೆ. ಈ ಮಾತಿಗೆ ಉದಾಹರಣೆಯಾಗಿ ನಿದರ್ಶನಗಳನ್ನೂ ನೀಡಬಹುದು. 1989ರ ಕಾಯ್ದೆಯ ವಿಚಾರವಾಗಿ, ಈಗ ತ್ರಿಸದಸ್ಯ ಪೀಠ ನೀಡಿರುವ ತೀರ್ಪು ಕೂಡ ಅಂಥದ್ದೊಂದು ನಿದರ್ಶನ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದವರು ತಮ್ಮ ರಕ್ಷಣೆಗಾಗಿ ರೂಪಿಸಿದ ಕಾಯ್ದೆಯನ್ನು ಇಡಿಯಾಗಿ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವ ವಾದದ ಮೇಲೆ ಬಲವಾಗಿ ಏಟು ನೀಡಿರುವುದು ತ್ರಿಸದಸ್ಯ ಪೀಠದ ತೀರ್ಪಿನಲ್ಲಿ ಗುರುತಿಸಬೇಕಾದ ಅಂಶ. ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನ ಒಂದು ವರ್ಗವಾಗಿ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಹುದು ಹಾಗೂ ಮೇಲ್ಜಾತಿಗಳಿಗೆ ಸೇರಿದ ಜನ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಭಾವಿಸಲಾಗದು. ಸುಳ್ಳು ದೂರು ದಾಖಲಿಸಲು ವ್ಯಕ್ತಿಯ ಜಾತಿ ಕಾರಣವಾಗುತ್ತದೆ ಎನ್ನಲಾಗದು. ಮನುಷ್ಯನಲ್ಲಿರುವ ದೌರ್ಬಲ್ಯಗಳು ಅದಕ್ಕೆ ಕಾರಣವಾಗುತ್ತವೆಯೇ ವಿನಾ ಜಾತಿ ಅಲ್ಲ’ ಎಂದು ಈಗ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗೆಯೇ, ‘ದೂರೊಂದು ಸುಳ್ಳು ಎಂದಾದರೆ, ಹಾಗಾಗುವುದಕ್ಕೆ ದೋಷಪೂರಿತ ತನಿಖೆಯೂ ಕಾರಣವಾಗಿರಬಹುದು. ಕೆಲವು ಪ್ರಕರಣಗಳಲ್ಲಿ ದೂರು ಸುಳ್ಳಾಗಿರಬಹುದು. ಆದರೆ, ಅದು ಕಾನೂನನ್ನು ಬದಲಾಯಿಸಲು ಕಾರಣ ಆಗುವುದಿಲ್ಲ’ ಎಂದು ಕೋರ್ಟ್‌ ಹೇಳಿದೆ. ದ್ವಿಸದಸ್ಯ ಪೀಠ ನೀಡಿದ್ದ ಆದೇಶದಂತೆ, ದೌರ್ಜನ್ಯ ತಡೆ ಕಾಯ್ದೆಯ ಅಡಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದವರು ನೀಡಿದ ದೂರು ದಾಖಲಿಸಿಕೊಳ್ಳುವ ಮುನ್ನ ಪ್ರಾಥಮಿಕ ತನಿಖೆ ನಡೆಸಬಹುದು ಎಂಬುದೇ ನೆಲದ ಕಾನೂನಾಗಿಬಿಟ್ಟಿದ್ದರೆ, ಅದು ಇನ್ನೊಂದು ಬಗೆಯ, ಕಾನೂನುಬದ್ಧ ತಾರತಮ್ಯಕ್ಕೆ ದಾರಿಮಾಡಿಕೊಡುತ್ತಿತ್ತು. ಏಕೆಂದರೆ, ಮೇಲ್ಜಾತಿಗಳಿಗೆ ಸೇರಿದ ವ್ಯಕ್ತಿಗಳು ನಿರ್ದಿಷ್ಟ ಕಾನೂನುಗಳ ಅಡಿ ಇನ್ನೊಬ್ಬರ ವಿರುದ್ಧ ದೂರು ನೀಡಿದಾಗ, ಅದು ಸತ್ಯವೋ ಅಸತ್ಯವೋ ಎಂಬ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವ ಪರಿಪಾಟ ಸಾಮಾನ್ಯ ಸಂದರ್ಭಗಳಲ್ಲಿ ಇಲ್ಲ. ಹೀಗಿರುವಾಗ, ದಲಿತರು 1989ರ ಕಾಯ್ದೆಯ ಅಡಿ ನೀಡಿದ ದೂರುಗಳ ವಿಚಾರವಾಗಿ ಪ್ರಾಥಮಿಕ ಪರಿಶೀಲನೆ ನಡೆಸಬಹುದು ಎಂಬ ನಿರ್ದೇಶನವು ತಪ್ಪು ಅರ್ಥ ಧ್ವನಿಸುವಂತಿತ್ತು. ತ್ರಿಸದಸ್ಯ ಪೀಠದ ತೀರ್ಪು ಈಗ ಇಂಥದ್ದಕ್ಕೆ ಅವಕಾಶ ಇಲ್ಲದಂತೆ ಮಾಡಿದೆ. ಈ ಎಲ್ಲ ಕಾರಣಗಳಿಗಾಗಿ, ಇದು, ಒಂದು ಕಾಯ್ದೆಗೆ ಸಂಬಂಧಿಸಿದ ತೀರ್ಪು ಮಾತ್ರವೇ ಆಗಿರದೆ, ನ್ಯಾಯಾಂಗವು ಅತ್ಯಂತ ಮಾನವೀಯವಾಗಿ ಆಲೋಚಿಸಿದ, ಆ ನಿಟ್ಟಿನಲ್ಲಿ ಕ್ರಿಯಾಶೀಲವಾದ ರೂಪಕವಾಗಿ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT