ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಬಡಬಡಿಕೆ ಖಂಡನೀಯಆತಂಕದ ನೆರಳಿನಲ್ಲಿ ಭಾರತ

Last Updated 6 ಜನವರಿ 2019, 20:00 IST
ಅಕ್ಷರ ಗಾತ್ರ

ಅಭದ್ರ ಹೇಳಿಕೆಗಳಿಗೆ ಹೆಸರಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಬಡಬಡಿಸಿದ್ದಾರೆ. ಸತತ ದಾಳಿ, ಆಕ್ರಮಣ, ಅಂತಃಕಲಹ, ಬೆಂಬಿಡದ ಬರಗಾಲ, ದಾರಿದ್ರ್ಯದಿಂದ ತತ್ತರಿಸಿರುವ ದೇಶ ಅಫ್ಗಾನಿಸ್ತಾನ.

ಈ ನೆರೆ ರಾಷ್ಟ್ರದ ಮರುನಿರ್ಮಾಣ ಕಾರ್ಯದಲ್ಲಿ ಭಾರತ ಸಕ್ರಿಯವಾಗಿ ತೊಡಗಿದೆ. ಆಸ್ಪತ್ರೆಗಳು, ಅಣೆಕಟ್ಟೆ, ಜಲವಿದ್ಯುತ್ ಸ್ಥಾವರ, ನೀರಾವರಿ, ನೂರಾರು ಸಣ್ಣ ಅಭಿವೃದ್ಧಿ ಯೋಜನೆಗಳು, ಕುಡಿಯುವ ನೀರು ಪೂರೈಕೆ, ಹೆದ್ದಾರಿ ನಿರ್ಮಾಣ, ಪ್ರಾಥಮಿಕ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಲ್ಲಿನ ಜನರ ದೈನಂದಿನ ಬದುಕಿನ ಮೂಲಭೂತ ಅಗತ್ಯಗಳಿಗೆ ಹೆಗಲು ಕೊಟ್ಟಿದೆ. ಇಂತಹ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚಮಾಡಿದೆ.

ಆದರೆ, ಭಾರತದ ಈ ಕೆಲಸ ಏನೇನೂ ಸಾಲದೆಂಬಂತೆ ಟ್ರಂಪ್ ಹೀಗಳೆದಿದ್ದಾರೆ. ‘ಅಲ್ಲೊಂದು ಗ್ರಂಥಾಲಯ ಕಟ್ಟಿರುವುದೇ ತಮ್ಮ ದೇಶದ ಮಹಾನ್ ಕಾರ್ಯ ಎಂಬಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ನನ್ನ ಬಳಿ ಹೇಳುತ್ತಿರುತ್ತಾರೆ’ ಎಂದು ಲಘುವಾಗಿ ಉದ್ಗರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿ ಭಾರತ ಯಾವ ಗ್ರಂಥಾಲಯವನ್ನೂ ಕಟ್ಟಿಸಿಲ್ಲ. ಬದಲಾಗಿ ಆ ದೇಶದ ಭವ್ಯ ಸಂಸತ್‌ ಭವನವನ್ನು ಕಟ್ಟಿಸಿಕೊಟ್ಟಿದೆ. ಭಾರತದ ಪ್ರಧಾನಿಯನ್ನು ಟ್ರಂಪ್ ಅಣಕಿಸಿರುವುದು ಇದೇ ಮೊದಲಲ್ಲ.

ಹಾರ್ಲೆ ಡೇವಿಡ್ಸನ್ ಮೋಟರ್ ಸೈಕಲ್‌ಗಳಿಗೆ ಆಮದು ಸುಂಕ ತಗ್ಗಿಸಿದ್ದೇವೆ ಎಂಬುದಾಗಿ ಮೋದಿಯವರು ಮಾಡಿದ್ದ ದೂರವಾಣಿ ಕರೆಗೆ ‘ಓಹೋ, ಅದೇನು ಮಹಾ ರಿಯಾಯಿತಿ’ ಎಂದು ವ್ಯಂಗ್ಯವಾಡಿದ್ದರು. ಮೋದಿಯವರ ಇಂಗ್ಲಿಷ್ ಉಚ್ಚಾರಣೆಯ ಅಣಕ ಮಾಡಿದ್ದರು. ಅವರಿಗಾಗಿ ವಧುವನ್ನು ಹುಡುಕುವುದಾಗಿ ಲಘು ಮಾತನ್ನೂ ಆಡಿದ್ದರು. ಟ್ರಂಪ್ ಅವರ ಇಂತಹ ಬಡಬಡಿಕೆಯು ಖಂಡನೀಯ.

ಅಫ್ಗಾನಿಸ್ತಾನದ ಬೆಳವಣಿಗೆಗಳನ್ನು ಅವಲೋಕಿಸಿದರೆ ಅಲ್ಲಿ ಗಂಭೀರ ಆತಂಕ ಮತ್ತು ಸವಾಲುಗಳು ಭಾರತಕ್ಕೆ ಎದುರಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸತೊಡಗಿವೆ. ಅಫ್ಗಾನಿಸ್ತಾನದ ಹೊಣೆಗಾರಿಕೆಯನ್ನು ಅಮೆರಿಕ ಮಾತ್ರವೇ ಯಾಕೆ ಹೊರಬೇಕು ಎಂಬ ಧ್ವನಿಯನ್ನೂ ವಿದೇಶಾಂಗ ವ್ಯವಹಾರಗಳ ನಿಪುಣರು ಟ್ರಂಪ್ ಅಣಕದ ಹಿಂದೆ ಕಂಡಿರುವುದು ಉಂಟು. ಇಸ್ಲಾಂ ಭಯೋತ್ಪಾದಕರು ಸೆಪ್ಟೆಂಬರ್ 11ರಂದು ತನ್ನ ಮೇಲೆ ನಡೆಸಿದ ಮಾರಕ ದಾಳಿಗಳಿಗೆ ಪ್ರತೀಕಾರವಾಗಿ ಅಮೆರಿಕ 2001ರಲ್ಲಿ ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡಿತು.

ಅಲ್‌ಕೈದಾಕ್ಕೆ ಆಶ್ರಯ ನೀಡಿದ್ದ ತಾಲಿಬಾನಿಗಳ ಆಡಳಿತವನ್ನು ಕಿತ್ತೊಗೆಯಿತು. ಅಂದಿನಿಂದ ಇಂದಿನವರೆಗೆ 14 ಸಾವಿರ ಯೋಧರನ್ನು ಒಳಗೊಂಡ ಅಮೆರಿಕದ ಸೇನಾ ತುಕಡಿಗಳು ಅಲ್ಲಿ ಬೀಡುಬಿಟ್ಟಿವೆ. ಇತಿಹಾಸದಲ್ಲೇ ಅಮೆರಿಕ ಸಾರಿದ ಬಹುದೀರ್ಘ ಯುದ್ಧವಿದು. ಆದರೂ ಅಫ್ಗನ್ ತಾಲಿಬಾನಿಗಳನ್ನು ಸದೆಬಡಿಯುವಲ್ಲಿ ಸಫಲವಾಗಿಲ್ಲ. ಗೆಲುವು ಕಾಣದ ಈ ಯುದ್ಧದಲ್ಲಿ ತನ್ನ ಯೋಧರ ಪ್ರಾಣಗಳನ್ನೂ ಆರ್ಥಿಕ ಸಂಪನ್ಮೂಲಗಳನ್ನೂ ಕಳೆದುಕೊಂಡಿರುವ ಅಮೆರಿಕ ಬಹಳಷ್ಟು ಬಳಲಿದೆ. ಅಧಿಕಾರಕ್ಕೆ ಬರುವ ಮುನ್ನ ತಾವು ನಡೆಸಿದ ಚುನಾವಣಾ ಪ್ರಚಾರದಲ್ಲಿ ಸಿರಿಯಾ ಮತ್ತು ಅಫ್ಗಾನಿಸ್ತಾನದಲ್ಲಿನ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಟ್ರಂಪ್ ಸಾರಿದ್ದರು.

ಅಂತೆಯೇ ಏಳು ಸಾವಿರ ಯೋಧರನ್ನು ವಾಪಸು ಕರೆಯಿಸಿಕೊಳ್ಳುವ ತೀರ್ಮಾನವನ್ನು ಅವರು ಇತ್ತೀಚೆಗೆ ಪ್ರಕಟಿಸಿದರು. ಉಳಿದ ಸೇನೆಯನ್ನೂ ಹಿಂತೆಗೆದುಕೊಳ್ಳುವ ಹಠಾತ್ ನಿರ್ಧಾರ ಹೊರಬಿದ್ದರೆ ಆಶ್ಚರ್ಯಪಡಬೇಕಿಲ್ಲ.

ಅಫ್ಗಾನಿಸ್ತಾನದ ಜನತಾಂತ್ರಿಕ ಸರ್ಕಾರಕ್ಕೆ ಅಲ್ಲಿನ ತಾಲಿಬಾನಿಗಳು ಈಗಲೂ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಪಾಕಿಸ್ತಾನದ ಪರೋಕ್ಷ ಬೆಂಬಲ ಉಳ್ಳ ಅವರ ಹಿಡಿತ ಇನ್ನಷ್ಟು ಬಲವಾಗುತ್ತಿದೆಯೇ ವಿನಾ ಸಡಿಲಗೊಳ್ಳುತ್ತಿಲ್ಲ. ಅಲ್ಲಿಂದ ಅಮೆರಿಕದ ಸೇನೆ ಇಡಿಯಾಗಿ ಕಾಲು ಕೀಳುವುದು ಭಾರತದ ಪಾಲಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಅಲ್ಲಿನ ಪಾಕ್ ಬೆಂಬಲಿತ ತಾಲಿಬಾನಿಗಳ ಜೊತೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಧಾನಕ್ಕಿಳಿಯುವುದು ಅನಿವಾರ್ಯ ಆಗಲಿದೆ. ಅಮೆರಿಕ, ರಷ್ಯಾ, ಚೀನಾ ಈಗಾಗಲೇ ತಾಲಿಬಾನಿಗಳ ಜೊತೆ ಮಾತುಕತೆ ಆರಂಭಿಸಿವೆ. ಭಯೋತ್ಪಾದಕರನ್ನು ಒಳ್ಳೆಯವರು ಮತ್ತು ಕೆಟ್ಟವರೆಂದು ವರ್ಗೀಕರಿಸಲು ಬರುವುದಿಲ್ಲ.

ಭಯೋತ್ಪಾದಕರೆಂದರೆ ಭಯೋತ್ಪಾದಕರೇ ಎಂಬುದು ಭಾರತದ ನಿಲುವು. ಈ ನೀತಿಯನ್ನು ತ್ಯಜಿಸಿ ಭಯೋತ್ಪಾದಕರ ಜೊತೆ ದೇಶದ ಹೊರಗೆ ಮಾತುಕತೆ ನಡೆಸುವುದೇ ಆದರೆ ದೇಶದ ಒಳಗಿನ ಜಿಹಾದಿಗಳೊಂದಿಗೆ ಅದೇ ನೀತಿ ಯಾಕೆ ಅನುಸರಿಸಬಾರದು ಎಂಬ ಜಟಿಲ ಪ್ರಶ್ನೆ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT