ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿತೆರಿಗೆ ಹೆಚ್ಚಳ ಸ್ವೀಕಾರಾರ್ಹವಲ್ಲ ಜನರ ಮೇಲೇಕೆ ವೈಫಲ್ಯದ ಹೊರೆ?

Last Updated 23 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆಯನ್ನು 2019ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ಕ್ರಮವಾಗಿ ಶೇ 25 ಹಾಗೂ ಶೇ 30ರಷ್ಟು ಏರಿಕೆ ಮಾಡಲು ಮುಂದಾಗಿರುವುದು ಸರ್ವಥಾ ಸ್ವೀಕಾರಾರ್ಹ ತೀರ್ಮಾನವಲ್ಲ. ವರಮಾನ ಹೆಚ್ಚಿಸಿಕೊಳ್ಳುವ ಹಪಹಪಿಯಿಂದ ಬಿಬಿಎಂಪಿ ತನ್ನ ನಾಗರಿಕರ ಹಿತವನ್ನೇ ಬಲಿಕೊಡಲು ಹೊರಟಿದೆ. ಮೂಲಸೌಕರ್ಯ ಒದಗಿಸುವ ತನ್ನ ಪ್ರಾಥಮಿಕ ಹೊಣೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸ್ಥಳೀಯಾಡಳಿತ, ತೆರಿಗೆ ಹೆಚ್ಚಳದ ವಿಷಯದಲ್ಲಿ ಮಾತ್ರ ಕಟುಕನಂತೆ ವರ್ತಿಸುತ್ತಿದೆ.

‘ಕರ್ನಾಟಕ ಪೌರಾಡಳಿತ ಕಾಯ್ದೆಯ ಪ್ರಕಾರ, ಪ್ರತೀ ಮೂರು ವರ್ಷಗಳಿಗೊಮ್ಮೆ ತೆರಿಗೆ ಹೆಚ್ಚಳ ಮಾಡುವುದು ಕಡ್ಡಾಯ. 2016ರಲ್ಲಿ ತೆರಿಗೆ ಪರಿಷ್ಕರಣೆಯಾದ ಮೇಲೆ ಮತ್ತೆ ಮಾಡಿಲ್ಲ’ ಎಂದು ಬಿಬಿಎಂಪಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. 2008–09 ಹಾಗೂ 2013–14ರ ಅವಧಿಯಲ್ಲಿ ಚುನಾವಣೆಗಳು ಘೋಷಣೆಯಾದ ಪರಿಣಾಮ ಆ ಸಂದರ್ಭದಲ್ಲಿ ತೆರಿಗೆ ಹೆಚ್ಚಳದ ನಿರ್ಧಾರವನ್ನು ಕೈಬಿಡಲಾಗಿತ್ತು. ಹತ್ತು ವರ್ಷಗಳ ಅವಧಿಯಲ್ಲಿ ಒಂದೇ ಸಲ ತೆರಿಗೆ ಹೆಚ್ಚಳ ಮಾಡಿದ್ದರಿಂದ ವರಮಾನ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದೂ ಪಾಲಿಕೆ ಹೇಳುತ್ತಿದೆ. ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಚುನಾವಣೆ ಸಂದರ್ಭದಲ್ಲಿ ಸುಮ್ಮನಿದ್ದು, ಈಗ ಹತ್ತು ವರ್ಷಗಳಲ್ಲಿ ಅನುಭವಿಸಿದ ಕೊರತೆಯನ್ನೆಲ್ಲ ಒಮ್ಮಿಂದೊಮ್ಮೆಲೇ ಸರಿದೂಗಿಸುವ ಉಮೇದಿನಿಂದ ತೆರಿಗೆದಾರರ ಮೇಲೆ ಭಾರಿ ಪ್ರಮಾಣದ ಹೊರೆ ಹೊರಿಸಲು ಹೊರಟಿರುವುದು ಹೊಣೆಗೇಡಿತನದ ಕ್ರಮ.

ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕುವ ಮುನ್ನ ಪಾಲಿಕೆ ತನ್ನ ಪ್ರಮಾದಗಳನ್ನು ಸರಿಪಡಿಸಿಕೊಳ್ಳ ಬೇಕು. ಏಕೆಂದರೆ, ತೆರಿಗೆ ಸಂಗ್ರಹದ ವಿಷಯದಲ್ಲಿ ಅದರ ಇದುವರೆಗಿನ ಕಾರ್ಯವೈಖರಿ ನಗೆಪಾಟಲಿಗೆ ಗುರಿಯಾಗಿದೆ. ಕಳೆದ ಹತ್ತು ವರ್ಷಗಳ
ಉದಾಹರಣೆಯನ್ನೇ ತೆಗೆದುಕೊಂಡರೆ ಬಜೆಟ್‌ನಲ್ಲಿ ಹಾಕಿಕೊಂಡ ತೆರಿಗೆ ಸಂಗ್ರಹದ ಗುರಿಯ ಹತ್ತಿರಕ್ಕೂ ಸುಳಿಯುವುದು ಅದಕ್ಕೆ ಸಾಧ್ಯವಾಗಿಲ್ಲ. ಹಣಕಾಸು ಸಚಿವರು ಮಂಡಿಸಿದ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಿರುವಂತೆ, ಬಿಬಿಎಂಪಿಯ ವ್ಯಾಪ್ತಿಯಲ್ಲಿ ಸದ್ಯದ ದರದ ಪ್ರಕಾರ ವಾರ್ಷಿಕ ₹ 6,500 ಕೋಟಿಯಷ್ಟು ತೆರಿಗೆ ಸಂಗ್ರಹಕ್ಕೆ ಅವಕಾಶಗಳುಂಟು. ಆದರೆ, ಸದ್ಯ ಸಂಗ್ರಹ ಆಗುತ್ತಿರುವುದು ಅದರ ಮೂರನೇ ಒಂದಂಶದಷ್ಟು ತೆರಿಗೆಯಷ್ಟೆ. ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಜಿಐಎಸ್‌) ನೆರವಿನಿಂದ ನಗರದಲ್ಲಿ ಒಟ್ಟು 19 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದೆ.

ಅದರಲ್ಲಿ ಐದು ಲಕ್ಷದಷ್ಟು ಆಸ್ತಿಗಳು ಈಗಲೂ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವುದು ಬೆಳಕಿಗೆ ಬಂದಿದೆ. ಆಸ್ತಿ ಮೌಲ್ಯದ ಲೆಕ್ಕಾಚಾರ ಸಮರ್ಪಕವಾಗಿ ನಡೆಯದೇ ಇರುವುದು, ತೆರಿಗೆ ಸಂಗ್ರಹದ ವಿಷಯದಲ್ಲಿ ಅಧಿಕಾರಿಗಳು ಉದಾಸೀನ ತೋರುತ್ತಿರುವುದು, ಸುಸ್ತಿದಾರರ ಕಡೆಗೆ ಕಣ್ಣೆತ್ತಿಯೂ ನೋಡದಿರುವುದು, ತೆರಿಗೆ ಕಳ್ಳರಿಗೆ ಕಾರ್ಪೊರೇಟರ್‌ಗಳೇ ಮುಂದೆ ನಿಂತುಕೊಂಡು ಕುಮ್ಮಕ್ಕು ನೀಡುತ್ತಿರುವುದು– ಇವು ವರಮಾನ ಕ್ರೋಡೀಕರಣದಲ್ಲಿ ಆಗಿರುವ ವೈಫಲ್ಯಕ್ಕೆ ಮುಖ್ಯ ಕಾರಣಗಳು.

ಬೃಹತ್‌ ವಾಣಿಜ್ಯ ಕಟ್ಟಡಗಳ ಮಾಲೀಕರು ಆಸ್ತಿಯ ನೈಜ ವಿಸ್ತೀರ್ಣವನ್ನು ಮರೆಮಾಚಿಸಿ, ಸುಳ್ಳು ಲೆಕ್ಕ ನೀಡುವ ಮೂಲಕ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿರುವ ವಿದ್ಯಮಾನ ಅಧಿಕಾರಿಗಳಿಗೆ ಗೊತ್ತಿಲ್ಲದಿಲ್ಲ. ಪಾಲಿಕೆಗೆ ವರಮಾನ ಸೋರಿಕೆಯಾದರೂ ತಮ್ಮ ಜೇಬು ತುಂಬಿಸುವಂತಹ ಇಂತಹ ವ್ಯವಸ್ಥೆಗಳು ಹಾಗೇ ಉಳಿಯುವುದು ಅವರಿಗೂ ಬೇಕು. ಘನತ್ಯಾಜ್ಯ ವಿಲೇವಾರಿ, ಚರಂಡಿ ಹಾಗೂ ರಸ್ತೆಗಳ ಗುಣಮಟ್ಟ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಸೋಲು ಕಂಡಿರುವ ಪಾಲಿಕೆ, ಈಗ ಯಾವ ಮುಖ ಇಟ್ಟುಕೊಂಡು ಹೆಚ್ಚಿನ ತೆರಿಗೆ ಕೇಳಲು ಹೊರಟಿದೆಯೋ? ನಾಗರಿಕರ ಮೇಲೆ ಹೆಚ್ಚಿನ ಹೊರೆಹಾಕುವ ಬದಲು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಬಾಕಿ ಉಳಿಸಿಕೊಂಡವರನ್ನು, ತೆರಿಗೆ ಕಳ್ಳರನ್ನು ಪತ್ತೆಹಚ್ಚಿ ವರಮಾನ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT