ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೂಡಿದ ಸಂಪುಟ ಪುನಾರಚನೆ ಅತೃಪ್ತಿ ಶಮನವಾದೀತೇ?

Last Updated 23 ಡಿಸೆಂಬರ್ 2018, 19:52 IST
ಅಕ್ಷರ ಗಾತ್ರ

ನಾಲ್ಕೈದು ತಿಂಗಳಿಂದ ಸಚಿವ ಸ್ಥಾನದ ಆಕಾಂಕ್ಷಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ರಾಜ್ಯ ಸಚಿವ ಸಂಪುಟ ಪುನಾರಚನೆ ಕಸರತ್ತು ಈಗ ಕೈಗೂಡಿದೆ. ಉಳಿಕೆ ಸ್ಥಾನಗಳನ್ನು ಭರ್ತಿ ಮಾಡಿರುವುದು ಸ್ವಾಗತಾರ್ಹ ಕ್ರಮವಾದರೂ ಇದರ ಬೆನ್ನಲ್ಲೇ‍ಕಾಂಗ್ರೆಸ್‌ ಪಕ್ಷದೊಳಗೆ ಕಾಣಿಸಿಕೊಂಡಿರುವ ಅತೃಪ್ತಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುವ ಸೂಚನೆಗಳು ಗೋಚರಿಸಿವೆ. ಎಂಟು ಸಚಿವ ಸ್ಥಾನಗಳಲ್ಲಿ ಏಳನ್ನು ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಶಾಸಕರಿಗೇ ನೀಡಲಾಗಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಕೂಗು ಎದ್ದಿತ್ತು. ಅದನ್ನು ಈ ಮೂಲಕ ಶಮನಗೊಳಿಸುವ ಪ್ರಯತ್ನ ಮಾಡಲಾಗಿದೆ. ಸದ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಇಷ್ಟಾಗಿಯೂ ಇನ್ನೂ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೂಗು ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನಾಲ್ಕು, ಕುರುಬ ಸಮುದಾಯಕ್ಕೆ ಎರಡು, ಲಿಂಗಾಯತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ತಲಾ ಒಂದು ಸ್ಥಾನ ಕಲ್ಪಿಸಿ ಸಾಮಾಜಿಕ ನ್ಯಾಯ ‍ಪಾಲನೆಗೂ ಒತ್ತು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ, ಕುರುಬ ಸಮುದಾಯದ ಒಬ್ಬರನ್ನು ಸಂಪುಟದಿಂದ ಕೈಬಿಟ್ಟು, ಅದೇ ಸಮುದಾಯದ ಇಬ್ಬರಿಗೆ ಅವಕಾಶ ದೊರಕಿಸಿಕೊಟ್ಟಿರುವುದು ಎಷ್ಟು ಸರಿ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಸಂಪುಟ ಪುನಾರಚನೆ ದೊಡ್ಡ ಮಟ್ಟದಲ್ಲಿ ಆಗಬಹುದೆಂಬ ನಿರೀಕ್ಷೆ ಆ ಪಕ್ಷದ ನಾಯಕರಲ್ಲಿತ್ತು. ಅದಕ್ಷ ಮಂತ್ರಿಗಳನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಬಹುದು ಎಂದು ಅವರು ಭಾವಿಸಿದ್ದರು. ಆದರೆ ಹಾಗಾಗಿಲ್ಲ. ನೆಪ ಮಾತ್ರಕ್ಕೆ ಎಂಬಂತೆ ಇಬ್ಬರನ್ನು ಮಾತ್ರ ಕೈಬಿಡಲಾಗಿದೆ. ಈ ಸಣ್ಣ ಬದಲಾವಣೆಗೆ ಇಷ್ಟೊಂದು ಸರ್ಕಸ್‌ ಮಾಡುವ ಅಗತ್ಯವಿರಲಿಲ್ಲ. ಬಹಳ ಹಿಂದೆಯೇ ಮಾಡಿ ಮುಗಿಸಬಹುದಿತ್ತು. ಸಂಪುಟದಲ್ಲಿ ತಮ್ಮ ಆಪ್ತರಿಗೆ ಅವಕಾಶ ಕಲ್ಪಿಸುವಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಈ ಮೂಲಕ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಬಿಗಿಗೊಳಿಸಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲೇ ಕೇಳಿಬರುತ್ತಿದೆ.

ಸಚಿವ ಸ್ಥಾನ ಸಿಗಲಿಲ್ಲ ಎಂದು ಹಲವು ಶಾಸಕರು ಮುನಿಸಿಕೊಂಡಿದ್ದಾರೆ. ತಮ್ಮ ಅಸಮಾಧಾನವನ್ನು ಕೆಲವರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ಸರ್ಕಾರದ ಸ್ಥಿರತೆಯ ಬಗೆಗಿನ ಅನುಮಾನಗಳನ್ನು ಜೀವಂತವಾಗಿ ಉಳಿಸಿದೆ. ಇದೇ ಕಾರಣಕ್ಕಾಗಿ, ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ಆರಂಭವಾಗಿದೆ. ಈ ಕಾರ್ಯದಲ್ಲಿ ಪಕ್ಷದ ನಾಯಕರು ಸಫಲರಾಗುವರೇ, ಸರ್ಕಾರ ಸುಗಮವಾಗಿ ಕೆಲಸ ಮಾಡಲು ಅನುವು ಮಾಡಿಕೊಡುವರೇ ಎಂಬುದು ಕುತೂಹಲದ ಸಂಗತಿ. ಜೆಡಿಎಸ್‌ ಪಾಲಿನ ಎರಡು ಸಚಿವ ಸ್ಥಾನಗಳು ಇನ್ನೂ ಭರ್ತಿಯಾಗಿಲ್ಲ. ಧನುರ್ಮಾಸದ ನೆಪ ಮುಂದಿಟ್ಟಿರುವ ಆ ಪಕ್ಷದ ನಾಯಕರು, ಸದ್ಯಕ್ಕೆ ಅವುಗಳನ್ನು ತುಂಬುವಂತೆ ಕಾಣುತ್ತಿಲ್ಲ. ಶಾಸಕರಾಗಿ ಆಯ್ಕೆಯಾದ ಎಲ್ಲರಿಗೂ ಸಚಿವ ಸ್ಥಾನ ಕಲ್ಪಿಸಿಕೊಡಲು ಸಾಧ್ಯವಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂದರ್ಭದಲ್ಲಿ ಅಸಮಾಧಾನ ಕಾಣಿಸಿಕೊಳ್ಳುವುದು ಸಹಜ. ಆದರೆ, ಅತೃಪ್ತಿ– ಅಸಮಾಧಾನಗಳು ಸರ್ಕಾರದ ಕಾರ್ಯವೈಖರಿ ಮೇಲೆ ದುಷ್ಪರಿಣಾಮ ಬೀರಬಾರದು. ಮೈತ್ರಿ ಸರ್ಕಾರದ ಆಡಳಿತ ಇನ್ನೂ ಚುರುಕು ಪಡೆದಿಲ್ಲ ಎಂಬ ಟೀಕೆಗಳಿವೆ. ಉಭಯ ಪಕ್ಷಗಳ ನಾಯಕರು ಈಗಲಾದರೂ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ರೈತರ ಸಾಲಮನ್ನಾ ಗೊಂದಲ ಬಗೆಹರಿಸಬೇಕು. ಮಳೆ ವೈಫಲ್ಯದಿಂದಾಗಿ ಎದುರಾಗಿರುವ ಬರ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಆದ್ಯತೆ ಕೊಡಬೇಕು. ಮೂರು ತಿಂಗಳು ಕಳೆಯುವಷ್ಟರಲ್ಲಿ ಲೋಕಸಭೆ ಚುನಾವಣೆ ಘೋಷಣೆ ಆಗಲಿದೆ. ನೀತಿ ಸಂಹಿತೆ ಜಾರಿಯಾಗಲಿದೆ. ಅಷ್ಟರೊಳಗೆ ತನ್ನ ಛಾಪು ಮೂಡಿಸುವ ಅನಿವಾರ್ಯ ಸರ್ಕಾರಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT