ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ದರ ಸರಳೀಕರಣ ಸ್ವಾಗತಾರ್ಹ ನಿರ್ಧಾರ

Last Updated 27 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ಒಂದೂವರೆ ವರ್ಷದ ನಂತರ ದೊಡ್ಡ ಪ್ರಮಾಣದಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉತ್ಸುಕತೆ ತೋರಿಸುತ್ತಿದೆ. ಬಹುತೇಕ ಸರಕು ಮತ್ತು ಸೇವೆಗಳಿಗೆ ಕಡಿಮೆ ತೆರಿಗೆ ದರ ವಿಧಿಸಲು ಮುಂದಾಗಿದೆ. ಶೇ 28ರ ಗರಿಷ್ಠ ದರ ವ್ಯಾಪ್ತಿಗೆ ಕೆಲವೇ ಕೆಲ ಸರಕುಗಳನ್ನು ತರಲು ನಿರ್ಧರಿಸಲಾಗಿದೆ. ತಡವಾಗಿಯಾದರೂ ಕೇಂದ್ರ ಸರ್ಕಾರ ಸರಿಯಾದ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ. ಜಿಎಸ್‌ಟಿ ಮಂಡಳಿಯು ಮೊನ್ನೆ 30 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳನ್ನು ಶೇ 28ರಿಂದ ಶೇ 18ಕ್ಕೆ ತಗ್ಗಿಸಿದೆ. ತೆರಿಗೆ ವರಮಾನ ಸಂಗ್ರಹವು ಸ್ಥಿರಗೊಳ್ಳದ ಸಂದರ್ಭದಲ್ಲಿನ ಈ ನಿರ್ಧಾರದಿಂದ ಬೊಕ್ಕಸಕ್ಕೆ ₹ 5,500 ಕೋಟಿ ಖೋತಾ ಬೀಳಲಿದೆ. ಅಲ್ಪಾವಧಿಯಲ್ಲಿ ತೆರಿಗೆ ಸಂಗ್ರಹ ಕುಸಿದರೂ, ದೀರ್ಘಾವಧಿಯಲ್ಲಿ ತೆರಿಗೆ ವರಮಾನ ಹೆಚ್ಚಲಿದೆ. ಬೇಡಿಕೆ ಮತ್ತು ಉಪಭೋಗ ಹೆಚ್ಚಳವು ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಬಳಕೆದಾರರ ಮೇಲಿನ ಪರೋಕ್ಷ ತೆರಿಗೆಗಳ ಭಾರ ತಗ್ಗಿಸುವ ನಿಟ್ಟಿನಲ್ಲಿನ ಪ್ರಮುಖ ನಿರ್ಧಾರ ಇದಾಗಿದೆ. ಇವೆಲ್ಲವು ಮಧ್ಯಮವರ್ಗದವರು ಬಳಸುವ ಸರಕುಗಳಾಗಿವೆ. ಲೋಕಸಭಾ ಚುನಾವಣೆ ಸನಿಹದಲ್ಲಿರುವ ಹೊತ್ತಿನಲ್ಲಿ ಮತದಾರರನ್ನು ಓಲೈಸುವ ಕ್ರಮವೂ ಇದಾಗಿರಬಹುದು. ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರ ಇದುವರೆಗೆ 360 ಸರಕುಗಳ ಮೇಲಿನ ಹೊರೆ ಕಡಿಮೆ ಮಾಡಿದಂತಾಗಿದೆ. ಆರಂಭದಲ್ಲಿ ಗರಿಷ್ಠ ದರ ಶೇ 28ರ ವ್ಯಾಪ್ತಿಯಲ್ಲಿದ್ದ 200 ಸರಕುಗಳ ಸಂಖ್ಯೆ ಈಗ ಕೇವಲ 28ಕ್ಕೆ ಇಳಿದಿದೆ. ಗರಿಷ್ಠ ಮಟ್ಟದ ತೆರಿಗೆ ವ್ಯಾಪ್ತಿಗೆ ಗುರುತಿಸಿದ್ದ ಸರಕುಗಳ ಆಯ್ಕೆಯೇ ಅಪಕ್ವ ಚಿಂತನೆಯಾಗಿತ್ತು. ತೆರಿಗೆ ದರ ನಿಗದಿಪಡಿಸುವಲ್ಲಿ ಸರಕು ಮತ್ತು ಸೇವೆಗಳ ಸ್ವರೂಪಕ್ಕಿಂತ, ವರಮಾನ ಸಂಗ್ರಹವನ್ನೇ ಮುಖ್ಯ ಮಾನದಂಡವಾಗಿ ಪರಿಗಣಿಸಲಾಗಿತ್ತು. ಅನೇಕ ಸರಕು ಮತ್ತು ಸೇವೆಗಳಿಗೆ ಅಗತ್ಯಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗಿತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ವಿಲಾಸಿ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಲಾಗುವ ಉತ್ಪನ್ನಗಳ ವ್ಯಾಖ್ಯಾನವು ಇನ್ನಷ್ಟೇ ಸ್ಪಷ್ಟಗೊಳ್ಳಬೇಕಾಗಿದೆ. ಅಗ್ಗದ ತೆರಿಗೆ ದರಗಳು ವಾಸ್ತವದಲ್ಲಿ ಆರ್ಥಿಕತೆಯ ಸುಧಾರಣೆಗೆ ಇಂಬು ನೀಡುತ್ತವೆ. ತೆರಿಗೆ ಕಡಿತ ಮತ್ತು ಸರಳೀಕೃತ ತೆರಿಗೆ ಸ್ವರೂಪವು ಬಳಕೆದಾರರು ಮತ್ತು ತಯಾರಕರಿಬ್ಬರಿಗೂ ಅನುಕೂಲಕರ. ವಹಿವಾಟಿನ ಮೇಲಿನ ಒತ್ತಡವನ್ನು ಇದು ಕಡಿಮೆ ಮಾಡಲಿದೆ. ತೆರಿಗೆ ಪಾವತಿಗೂ ಉತ್ತೇಜನ ದೊರೆಯಲಿದೆ. ತಡವಾಗಿಯಾದರೂ ಮಂಡಳಿಯು ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಹಾಗೆಯೇ 2019ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿರುವ ಹೊಸ ಲೆಕ್ಕಪತ್ರ ವಿವರ ಸಲ್ಲಿಕೆಯು (ರಿಟರ್ನ್‌) ಕೂಡ ಸರಳವಾಗಿರಬೇಕು.

ದಿನಬಳಕೆಯ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಸದ್ಯದ ಶೇ 12 ಮತ್ತು ಶೇ 18ರ ದರಗಳ ಮಧ್ಯೆ ಹೊಸ ದರ (ಸ್ಟ್ಯಾಂಡರ್ಡ್‌ ಜಿಎಸ್‌ಟಿ) ನಿಗದಿಪಡಿಸುವ ಆಲೋಚನೆಯೂ ಸರ್ಕಾರಕ್ಕೆ ಇದೆ. ವಿಲಾಸಿ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಲಾದ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದೆಲ್ಲ ಸರಕುಗಳನ್ನು ಶೇ 28ರ ದರದ ವ್ಯಾಪ್ತಿಯಿಂದ ಕೈಬಿಡುವ ಚಿಂತನೆಯೂ ಇದೆ. ಇವೆಲ್ಲವೂ ಜಿಎಸ್‌ಟಿ ಸುಧಾರಣೆ ನಿಟ್ಟಿನಲ್ಲಿ ಪ್ರಮುಖ ನಿರ್ಧಾರಗಳಾಗಿವೆ. ತೆರಿಗೆ ದರಗಳ ಹಂತಗಳನ್ನು ಕಡಿಮೆ ಮಾಡುವ, ಸಂಕೀರ್ಣ ಸ್ವರೂಪ ದೂರ ಮಾಡುವ ಮತ್ತು ವ್ಯವಸ್ಥೆಯನ್ನು ಸರಳಗೊಳಿಸುವ ನಿರ್ಧಾರದಿಂದ ಜಿಎಸ್‌ಟಿ ಮಂಡಳಿಯು ಯಾವುದೇ ಕಾರಣಕ್ಕೂ ವಿಮುಖವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT