ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ಸಾಧನೆ ಶ್ಲಾಘನಾರ್ಹ: ಕಿರುವೈಫಲ್ಯ ಮುಂದಿನ ಸಾಧನೆಗೆ ಮೆಟ್ಟಿಲಾಗಲಿ

Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಚಂದ್ರನ ದಕ್ಷಿಣ ಧ್ರುವದಲ್ಲಿ ಮೆಲ್ಲಗೆ ಇಳಿಯಬೇಕಿದ್ದ ‘ವಿಕ್ರಮ್’ ಕೊನೇಕ್ಷಣದಲ್ಲಿ ಕಣ್ಮರೆಯಾಗಿದ್ದು ತಾತ್ಕಾಲಿಕವಾಗಿ ನಿರಾಸೆ ತಂದರೂ ಅದು ‘ಇಸ್ರೊ’ದ ದೊಡ್ಡ ವೈಫಲ್ಯವೆಂದು ಯಾರೂ ಪರಿಗಣಿಸಿಲ್ಲ. ಬದಲಿಗೆ, ಎಲ್ಲೆಡೆಯಿಂದ ಶ್ಲಾಘನೆಗಳೇ ವ್ಯಕ್ತವಾಗಿವೆ. ಈ ಮಹಾಸಾಹಸದ ಒಂದೊಂದು ಹಂತದಲ್ಲೂ ತೀರಾ ಕ್ಲಿಷ್ಟ ಸವಾಲುಗಳಿದ್ದವು. ಸುಮಾರು ನಾಲ್ಕು ಟನ್‍ಗಳಷ್ಟು ಭಾರಿ ತೂಕದ ಉಪಗ್ರಹ ವನ್ನು ಜಿಎಸ್‍ಎಲ್‍ವಿ ರಾಕೆಟ್ ಮೂಲಕ ಜುಲೈ 22ರಂದು ಲೀಲಾಜಾಲವಾಗಿ ಮೇಲಕ್ಕೆತ್ತಿ ಕಕ್ಷೆಗೆ ಒಯ್ದಿದ್ದು, ಭೂಮಿಯ ಗುರುತ್ವ ಹಿಡಿತದಿಂದ ಅದನ್ನು ತಪ್ಪಿಸಿ ಚಂದ್ರನ ಕಕ್ಷೆಗೆ ದಾಟಿಸಿದ್ದು, ಮುಂದೆ ‘ಚಂದ್ರಯಾನ-2’ ಆರ್ಬಿಟರ್ ಮಾತೃನೌಕೆಯಿಂದ ಸೂಕ್ತ ಸಮಯದಲ್ಲಿ ‘ವಿಕ್ರಮ್’ ಇಳಿಯಂತ್ರವನ್ನು ಬೇರ್ಪಡಿಸಿದ್ದು, ಅದು ಚಂದ್ರನ ನೆಲದತ್ತ ಬಾಣದಂತೆ ಸಾಗುತ್ತಿರುವಾಗ ಧೊಪ್ಪೆಂದು ಬೀಳದಂತೆ ಇಲ್ಲಿಂದಲೇ ನಿರ್ದೇಶನ ಕೊಟ್ಟು ಹಿಮ್ಮೊಗ ರಾಕೆಟ್‍ಗಳು ಉರಿಯುವಂತೆ ಮಾಡಿ, ವಿಕ್ರಮ್ ತನ್ನ ವೇಗವನ್ನು ತಗ್ಗಿಸುತ್ತ ಸಾಗುವಂತೆ ಮಾಡಿದ್ದು– ಈ ಎಲ್ಲವೂ ಕರಾರುವಾಕ್ಕಾಗಿ ನಡೆದಿದ್ದವು. ಅದಕ್ಕೇ ಈ ಯಾನವನ್ನು ಶೇ 95ರಷ್ಟು ಯಶಸ್ವಿ ಎಂದು ಇಸ್ರೊ ಅಧ್ಯಕ್ಷ ಡಾ. ಕೆ.ಶಿವನ್ ಬಣ್ಣಿಸಿದ್ದು. ‘ಚಂದ್ರಯಾನ-2’ರ ಇಷ್ಟರಮಟ್ಟಿನ ಯಶಸ್ಸನ್ನು ಅಮೆರಿಕದ ‘ನಾಸಾ’ ಸಂಸ್ಥೆ ಕೂಡ ಕೊಂಡಾಡಿ ಅಭಿನಂದಿಸಿದೆ. ಇಸ್ರೊದ ಸಹಭಾಗಿತ್ವದಲ್ಲಿ ಸೂರ್ಯನ ಜ್ವಾಲೆಯ ಅಧ್ಯಯನಕ್ಕೆ ಕೈಜೋಡಿಸುವುದಾಗಿ ಶನಿವಾರವಷ್ಟೇ ಹೇಳಿದೆ. ಚಂದ್ರನಿರಲಿ, ಮಂಗಳನಿರಲಿ ಅಲ್ಲಿ ಇಳಿಯುವಾಗಿನ ಕೊನೆಯ ಹದಿನೈದು ನಿಮಿಷಗಳನ್ನು ಇಳಿಕೆಯ ‘ಘೋರ ಕ್ಷಣಗಳು’ ಎಂತಲೇ ಬಣ್ಣಿಸಲಾಗುತ್ತದೆ. ಅದರಲ್ಲಿ ವಿಫಲವಾಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಬಾಹ್ಯಾಕಾಶದ ಇತಿಹಾಸದಲ್ಲಿ ಇದುವರೆಗೆ ಚಂದ್ರನ ಮೇಲೆ ಯಂತ್ರವನ್ನು ಇಳಿಸುವ 109 ಯತ್ನಗಳಲ್ಲಿ 61 ಮಾತ್ರ ಯಶಸ್ವಿಯಾಗಿವೆ. ಕಳೆದ ಏಪ್ರಿಲ್‍ನಲ್ಲಿ ಇಸ್ರೇಲಿನ ‘ಬೆರೆಶೀಟ್’ ನೌಕೆಯೂ ಹೀಗೇ ಕೊನೇಕ್ಷಣದಲ್ಲಿ ಕಣ್ಮರೆಯಾಗಿತ್ತು. ನಮ್ಮದು ಅವರಿಗಿಂತ ಉತ್ತಮ ಏಕೆಂದರೆ, ಚಂದ್ರನನ್ನು ಸುತ್ತುತ್ತಿರುವ ಆರ್ಬಿಟರ್ ನೌಕೆ ಇದೀಗ ‘ವಿಕ್ರಮ್’ ಎಲ್ಲಿದೆ ಎಂಬುದನ್ನು ಪತ್ತೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ ಕತ್ತಲಲ್ಲಿ, ಅಲ್ಲಿನ ದಟ್ಟ ದೂಳಿನಲ್ಲಿ ‘ವಿಕ್ರಮ್’ ಕೋಶದಲ್ಲಿನ ಸೆನ್ಸರ್‌ಗಳು ಈಗಲೂ ಸುಸ್ಥಿತಿಯಲ್ಲಿದ್ದರೆ, ಅವು ಮಾತೃನೌಕೆಯ ಸಂಜ್ಞೆಗಳಿಗೆ ಸ್ಪಂದಿಸಬಹುದೆಂಬ ಆಶಾಭಾವನೆ ಜೀವಂತವಾಗಿದೆ.

ಸರ್ಕಾರಿ ಸ್ವಾಮ್ಯದ ತಾಂತ್ರಿಕ ಸಂಸ್ಥೆಯಾಗಿ ಇಸ್ರೊ ತನ್ನ ಐವತ್ತು ವರ್ಷಗಳಲ್ಲಿ ಹಂತಹಂತವಾಗಿ ಯಶಸ್ಸಿನ ವಿವಿಧ ಮಜಲುಗಳಿಗೆ ಏರುತ್ತ ಈಗಾಗಲೇ ಬಾಹ್ಯಾಕಾಶ ದಿಗ್ಗಜ ಸಂಸ್ಥೆಗಳ ಸಾಲಿನಲ್ಲಿ ಸೇರಿದೆ. ಭಾರತೀಯರ ಹೆಮ್ಮೆಯ ಸಂಸ್ಥೆಯಾಗಿದೆ. ಇಂದಿನ ಕೊಡುಕೊಳ್ಳುವ ಯುಗದಲ್ಲಿ ಉಪಗ್ರಹ ನಿರ್ಮಾಣಕ್ಕೆ ಮತ್ತು ರಾಕೆಟ್ ಉಡಾವಣೆಗೆ ಬೇಕಾದ ಯಾವುದೇ ಯಾಂತ್ರಿಕ ಬಿಡಿಭಾಗಗಳನ್ನು ವಿದೇಶಗಳಿಂದ ಖರೀದಿಸಬಹುದು. ಆದರೆ ಇಸ್ರೊದ ಹೆಚ್ಚಳವೇನೆಂದರೆ, ಬಾಹ್ಯಾಕಾಶ ಸಾಹಸಕ್ಕೆ ಅಗತ್ಯವಿರುವ ಎಲ್ಲ ಅಂಗಗಳಲ್ಲೂ ಇದು ಸ್ವಾವಲಂಬನೆ ಸಾಧಿಸಿದೆ. ಟೆಲಿಮೆಟ್ರಿ ಸಲಕರಣೆಗಳಿರಲಿ, ಕ್ಲಿಷ್ಟ ಕ್ರಯೊಜೆನಿಕ್ ಎಂಜಿನ್ ಇರಲಿ, ಯಾವುದಕ್ಕೂ ಬೇರೆ ದೇಶಗಳಿಗೆ ಕೈಯೊಡ್ಡಬೇಕಾಗಿಲ್ಲ. ನಮ್ಮ ರಾಕೆಟ್‍ಗಳು ವಿದೇಶಿ ಉಪಗ್ರಹಗಳನ್ನು ಕಡಿಮೆ ವೆಚ್ಚದಲ್ಲಿ ಕಕ್ಷೆಗೆ ಕೊಂಡೊಯ್ಯುವ ವಿಶ್ವಸನೀಯ ವಾಹನಗಳೆಂದು ಆಗಲೇ ವಿಶ್ವಖ್ಯಾತಿ ಪಡೆದಿವೆ. ಇಸ್ರೊ ಗಳಿಸಿದ ಈ ಮನ್ನಣೆ ಹಾಗೂ ಅಂತರ ರಾಷ್ಟ್ರೀಯ ಸದ್ಭಾವನೆ ಅಪ್ರತಿಮವಾದುದು. ಇನ್ನೂ ವಿಶೇಷವೇನೆಂದರೆ, ಬಾಹ್ಯಾಕಾಶ ಸಾಹಸದ ಕ್ಲಿಷ್ಟ ತಾಂತ್ರಿಕ ಸವಾಲುಗಳಿಗೆ ಸೂಕ್ತ ಉತ್ತರವನ್ನು ಹುಡುಕುತ್ತ ಸಂಸ್ಥೆಯ ಖ್ಯಾತಿಯನ್ನು ಸದಾ ಮೇಲಕ್ಕೇರಿಸಲು ಶ್ರಮಿಸುತ್ತಿರುವ ಎಲ್ಲ ತಾಂತ್ರಿಕ ಸಿಬ್ಬಂದಿಯೂ (ಅದರಲ್ಲೂ ಮಂಗಳಯಾನ, ಚಂದ್ರಯಾನಗಳನ್ನು ನಿಭಾಯಿಸಿದ ಮಹಿಳೆಯರು) ನಮ್ಮ ನೆಲದ ಅಪ್ಪಟ ಪ್ರತಿಭೆಗಳಾಗಿದ್ದು, ಯಾರೂ ನಾಸಾದಿಂದಾಗಲೀ ರಷ್ಯಾದ ರಾಸ್‍ಕಾಸ್ಮೊಸ್‍ನಿಂದಾಗಲೀ ಅನುಭವ ಪಡೆದು ಬಂದವರಲ್ಲ. ಇವೆಲ್ಲ ನಮ್ಮ ಎಳೆಯಪೀಳಿಗೆಗೆ ಪ್ರೇರಕ ಅಂಶಗಳೇ ಹೌದು. ಇಸ್ರೊ ತನ್ನ ಈಗಿನ ಕಿರುವೈಫಲ್ಯವನ್ನೇ ಮುಂದಿನ ಸಾಧನೆಗೆ ಮೆಟ್ಟಿಲನ್ನಾಗಿಸಿ, ಬಾಹ್ಯಾಕಾಶಕ್ಕೆ ಭಾರತೀಯರನ್ನೂ ಚಂದ್ರನ ನೆಲಕ್ಕೆ ‘ಚಂದ್ರಯಾನ-3’ನ್ನೂ ಕಳಿಸುವತ್ತ ಮುಂದಡಿ ಇಡಬೇಕೆಂದು ಇಡೀ ದೇಶ ಹಾರೈಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT