ಶುಕ್ರವಾರ, ಆಗಸ್ಟ್ 23, 2019
25 °C

ರಾಜಕೀಯ ಪ್ರಹಸನ ಅಂತ್ಯ ಮುಂದಿವೆ ಹಲವು ಸವಾಲು

Published:
Updated:
Prajavani

ರಾಜ್ಯದಲ್ಲಿ ಹದಿನಾಲ್ಕು ತಿಂಗಳಿನಿಂದ ತೂಗುಯ್ಯಾಲೆಯಲ್ಲಿಯೇ ಇದ್ದ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಡಿಸಿದ ವಿಶ್ವಾಸಮತ ನಿರ್ಣಯಕ್ಕೆ ಸೋಲುಂಟಾಗಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸರ್ಕಾರ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯೂ ಸಾಧ್ಯವಾಗಿರಲಿಲ್ಲ. ಪರಸ್ಪರ ಅಪನಂಬಿಕೆ ಇತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅದು ಜಗಜ್ಜಾಹೀರಾಗಿತ್ತು.  ರಾಜ್ಯದಲ್ಲಿ ಜನಪ್ರಿಯ ಸರ್ಕಾರವೊಂದು ಇದೆ ಎಂಬ ಭಾವನೆಯೇ ಜನಸಾಮಾನ್ಯರಲ್ಲಿ ಮೂಡಲಿಲ್ಲ. ಆಡಳಿತಾರೂಢ ಮೈತ್ರಿಕೂಟದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಬಿಜೆಪಿಯು ಯಶಸ್ವಿಯಾಯಿತೇ ವಿನಾ ಪ್ರತಿಪಕ್ಷವಾಗಿ ಛಾಪು ಮೂಡಿಸಲು ಅದಕ್ಕೆ ಸಾಧ್ಯವಾಗಲೇ ಇಲ್ಲ.  ಸರ್ಕಾರವನ್ನು ಕೆಡಹುವುದರ ಬಗ್ಗೆಯೇ ಆರಂಭದಿಂದಲೂ ಅದು ಹೆಚ್ಚಿನ ಆಸಕ್ತಿ ತೋರಿಸಿತು. ಈ ಮೂರೂ ಪ್ರಮುಖ ಪಕ್ಷಗಳ ಅಧಿಕಾರದಾಹದಿಂದ ಬಡವಾದುದು ಮಾತ್ರ ರಾಜ್ಯದ ಜನರು ಮತ್ತು ಪ್ರಜಾಪ್ರಭುತ್ವ. ರಾಜ್ಯಕ್ಕೆ ಸಮ್ಮಿಶ್ರ ಸರ್ಕಾರ ಹೊಸತೇನೂ ಅಲ್ಲ. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ 1983ರಲ್ಲಿಯೇ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ
ಮುಂದಾಳತ್ವದಲ್ಲಿ ಕೂಡ ಈ ಹಿಂದೆ ಸಮ್ಮಿಶ್ರ ಸರ್ಕಾರಗಳು ರಚನೆ ಆಗಿದ್ದವು. ಆದರೆ, ಯಾವುದೇ ಸಮ್ಮಿಶ್ರ ಸರ್ಕಾರವು ಅವಧಿ ಪೂರೈಸಲಿಲ್ಲ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆಡಳಿತದಲ್ಲಿ ಹುರುಪು ಇತ್ತು. ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳು ಜನಪ್ರಿಯವಾಗಿದ್ದವು. ಇಪ್ಪತ್ತು ತಿಂಗಳ ಆ ಅವಧಿಯು ಅವರಿಗೆ ವರ್ಚಸ್ಸು ತಂದುಕೊಟ್ಟಿತ್ತು. ಆದರೆ ಈ ಅವಧಿಯಲ್ಲಿ ಹಿಂದಿನ ಲವಲವಿಕೆ ಕಾಣಸಿಗಲಿಲ್ಲ. ಆಡಳಿತದಲ್ಲಿ ಚುರುಕು, ಹುರುಪು ಯಾವುದೂ ಕಾಣದೇ ಹೋದುದು ವಿಪರ್ಯಾಸ. ಆಡಳಿತದ ಮೇಲೆ ಹಿಡಿತ ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ. ಸರ್ಕಾರವು ಅತ್ಯಂತ ಪ್ರಮುಖ ಕಾರ್ಯಕ್ರಮ ಎಂದು ಪರಿಗಣಿಸಿದ ಸಾಲ ಮನ್ನಾ ಯೋಜನೆಯೂ ಪರಿಣಾಮಕಾರಿಯಾಗಿ ಅನುಷ್ಠಾನ ಆಗಲಿಲ್ಲ. ಅಸ್ಥಿರತೆಯ ನಡುವೆಯೂ ಆಡಳಿತದಲ್ಲಿ ಹಿಡಿತ ಸಾಧಿಸಿ, ಜನಪ್ರಿಯತೆ ಗಳಿಸಲು ಸಾಧ್ಯವಿತ್ತು. ಆ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಆಗಲಿಲ್ಲ.

ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆದ ರಾಜಕೀಯ ಪ್ರಹಸನವು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅಣಕಿಸುವಂತೆ ಇತ್ತು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇವೆಲ್ಲವೂ ಅತ್ಯಂತ ಕೆಟ್ಟ ಬೆಳವಣಿಗೆಗಳು. ಶಾಸಕರನ್ನು ಗುಂಪಾಗಿ ಸೆಳೆಯುವ ಪರಿಪಾಟ ಮರುಕಳಿಸದಂತೆ ಮಾಡಲು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸುವುದು ಅಗತ್ಯ ಎಂಬುದನ್ನು ರಾಜ್ಯದ ವಿದ್ಯಮಾನಗಳು ಎತ್ತಿ ತೋರಿವೆ. ಎಲ್ಲ ರಾಜಕೀಯ ಪಕ್ಷಗಳೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಇಲ್ಲವಾದರೆ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳಿಗೂ ಇದು ಶಾಪವಾಗಿ ಪರಿಣಮಿಸಲಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಕೋರುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ ನಂತರ ನಡೆದ ಚರ್ಚೆಗಳೂ ನಮ್ಮ ಶಾಸಕರ ಬಂಡವಾಳವನ್ನು ಬಯಲು ಮಾಡಿವೆ. ಒಂದು ಕಾಲದಲ್ಲಿ ಅತ್ಯುತ್ತಮ ಸಂಸದೀಯ ಪಟುಗಳನ್ನು ರಾಜ್ಯ ಹೊಂದಿತ್ತು. ಈಗ ಅದಕ್ಕೂ ಬಡತನ ಬಂದಿದೆ. ಈಗ ಬಿಜೆಪಿ ಅಧಿಕಾರಕ್ಕೆ ಬಂದರೂ ಭಿನ್ನಮತದ ಭೂತದ ಕಾಟ ಇರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಈಗ ಜನರಿಗೆ ಸ್ಥಿರ ಸರ್ಕಾರ ಮತ್ತು ಉತ್ತಮ ಆಡಳಿತ ಬೇಕಾಗಿದೆ. ಹೊಸ ಸರ್ಕಾರ ಇದನ್ನು ಅರಿತು ಮುಂದೆ ಸಾಗಬೇಕು. ಬಿಜೆಪಿ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಏನೇನಾಯಿತು ಎನ್ನುವುದನ್ನು ಜನರು ಮರೆತಿಲ್ಲ. ಆಗಲೂ ‘ಆಪರೇಷನ್ ಕಮಲ’ದ ಮಸಿ ಅಂಟಿತ್ತು. ಈಗಲೂ ಆ ಕಳಂಕ ಅಂಟಿದೆ. ಉತ್ತಮ ಆಡಳಿತ ನೀಡುವ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಆ ಮಸಿ ತೊಳೆದುಕೊಳ್ಳಬೇಕಾಗಿದೆ. ಸತತ ಬರಗಾಲದಿಂದ ಜನರು ತತ್ತರಿಸಿದ್ದಾರೆ. ಅವರಿಗೆ ಸಾಂತ್ವನ ಸಿಗಬೇಕಿದೆ. ಇಲ್ಲವಾದರೆ ಜನರು ಪ್ರಜಾಪ್ರಭುತ್ವದ ಬಗ್ಗೆಯೇ ನಂಬಿಕೆ ಕಳೆದುಕೊಳ್ಳುವ ಅಪಾಯ ಇದೆ. 

Post Comments (+)