ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜನರೊಂದಿಗೆ ವನ್ಯಜೀವಿಗಳ ಮುಖಾಮುಖಿ ಬೇಕಿದೆ ಸಮತೋಲನದ ನೀತಿ

Last Updated 5 ಡಿಸೆಂಬರ್ 2022, 19:52 IST
ಅಕ್ಷರ ಗಾತ್ರ

ವನ್ಯಜೀವಿಗಳ ಸಂರಕ್ಷಣೆಯ ವಿಷಯದಲ್ಲಿ ನಾವೆಲ್ಲ ಹೆಮ್ಮೆಪಡುವಂತೆ ಕನ್ನಡನಾಡು ಭಾರತದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. ಆನೆ ಮತ್ತು ಹುಲಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಕ್ರಮವಾಗಿ ಮೊದಲನೆಯ ಹಾಗೂ ಎರಡನೆಯ ಸ್ಥಾನ ಕರ್ನಾಟಕದ್ದೇ ಆಗಿದೆ. ರಾಜ್ಯದಲ್ಲಿ ಚಿರತೆಗಳ ಸಂಖ್ಯೆಯೂ ಗಣನೀಯವಾಗಿದೆ. ಆದರೆ ಈ ಸಮೃದ್ಧಿಯ ಜೊತೆಜೊತೆಗೆ ಆತಂಕವೂ ಹೆಚ್ಚುತ್ತಿದೆ. ಆನೆಯ ತುಳಿತಕ್ಕೆ, ಹುಲಿಯ ಬಾಯಿಗೆ, ಚಿರತೆಯ ದಾಳಿಗೆ ಸಿಕ್ಕು ಅಸುನೀಗುವವರ ಸಂಖ್ಯೆಯಲ್ಲಿ ನಿರಂತರ ಏರಿಕೆ ಆಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸಬಹುದಾದ ವನ್ಯತಾಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಬೃಂದಾವನ ಉದ್ಯಾನದಂಥ ಪ್ರವಾಸಿ ತಾಣವನ್ನೇ ಚಿರತೆಯ ದೆಸೆಯಿಂದಾಗಿ ದೀರ್ಘಕಾಲ ಮುಚ್ಚಬೇಕಾದ ವಿಪರ್ಯಾಸದ ಸಂದರ್ಭವೂ ಎದುರಾಗಿತ್ತು. ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2021-22ರಲ್ಲಿ ವನ್ಯಜೀವಿಗಳೊಂದಿಗೆ ಮನುಷ್ಯ ಸಂಘರ್ಷದ ಅತ್ಯಧಿಕ ಅಂದರೆ 36,982 ಘಟನೆಗಳು ಸಂಭವಿಸಿವೆ. ಬೆಳೆಹಾನಿ, ಜಾನುವಾರು ಬಲಿ, ಜನರ ಸಾವುನೋವಿಗೆ ಪರಿಹಾರ ರೂಪದಲ್ಲಿ
₹ 27.42 ಕೋಟಿ ಸಂದಾಯವಾಗಿದೆ. ಹಾಸನ, ಕೊಡಗು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ವನ್ಯಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಲಕ್ಕೆ ನುಗ್ಗುತ್ತಿರುವುದು ವರದಿಯಾಗುತ್ತಿದೆಯಾದರೂ ಪಶ್ಚಿಮ ಘಟ್ಟಗಳ ಬಹುತೇಕ ಎಲ್ಲ ತಾಲ್ಲೂಕುಗಳಲ್ಲೂ ಕಾಡುಹಂದಿ, ಕೋತಿ, ಕಾಟಿಗಳೊಂದಿಗೆ ನಿತ್ಯವೂ ಎಂಬಂತೆ ಗ್ರಾಮೀಣ ಜನರ ಮುಖಾಮುಖಿ
ಅದೆಷ್ಟಿದೆಯೆಂದರೆ, ಮನೆಯಂಗಳದಲ್ಲೂ ತರಕಾರಿ ಬೆಳೆಗಳ ರಕ್ಷಣೆ ಅಸಂಭವ ಎನ್ನುವಂತಾಗಿದೆ. ಸಾಲದ್ದಕ್ಕೆ ಈಚಿನ ವರ್ಷಗಳಲ್ಲಿ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಕಾಡುಪ್ರಾಣಿಗಳ ಹೆಜ್ಜೆಗುರುತು ಹೆಚ್ಚುತ್ತಿದ್ದು, ಒಂದು ವಾರದಿಂದ ಬೆಂಗಳೂರಿನ ಸರಹದ್ದಿನಲ್ಲಿ ಚಿರತೆಗಳ ಓಡಾಟ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆತಂಕವನ್ನು ಹೆಚ್ಚಿಸಿದೆ.

ಹೀಗೆ ದಿನೇ ದಿನೇ ಮನುಷ್ಯರ ಮತ್ತು ವನ್ಯಜೀವಿಗಳ ಸಂಘರ್ಷದ ಪ್ರಸಂಗಗಳು ಹೆಚ್ಚುತ್ತಿರಲು ಕಾರಣಗಳು ಒಂದೆರಡಲ್ಲ. ಮೂಲ ಸಂಗತಿ ಏನೆಂದರೆ ವನ್ಯಜೀವಿಗಳು ಸಂಚರಿಸುವ ಪ್ರದೇಶದಲ್ಲಿ ಮನುಷ್ಯರ ಅತಿಕ್ರಮಣ ಜಾಸ್ತಿಯಾಗಿದೆ. ಕಾಡುಪ್ರಾಣಿಗಳಿಗೆಂದೇ
ಸಂರಕ್ಷಿತ ಪ್ರದೇಶಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರು
ವುದು ಶ್ಲಾಘನೀಯವೇ ಆದರೂ ಅವುಗಳ ಉಸ್ತುವಾರಿಯಲ್ಲಿ ಲೋಪಗಳೂ ತೀವ್ರವಾಗುತ್ತಿವೆ.
ನಮೀಬಿಯಾದಿಂದ ಚೀತಾಗಳನ್ನು ತರಲೆಂದು ಅಷ್ಟೆಲ್ಲ ಪ್ರಚಾರೋತ್ಸಾಹವನ್ನು ಮೆರೆದ ಕೇಂದ್ರ ಸರ್ಕಾರವು ಕರ್ನಾಟಕದ ಹುಲಿ ಯೋಜನೆಗೆ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿರುವುದು
ಈಚೆಗಷ್ಟೇ ವರದಿಯಾಗಿತ್ತು. ಸಂರಕ್ಷಿತ ವನ್ಯ
ಧಾಮಗಳಲ್ಲಿ ಲಂಟಾನಾ, ಯುಪಟೋರಿಯಂನಂತಹ ಕಳೆಸಸ್ಯಗಳು ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ಸಸ್ಯಾಹಾರಿ ಪ್ರಾಣಿಗಳು ಆಹಾರಕ್ಕಾಗಿ ಆಚೀಚೆಅಲೆಯುವಂತಾಗಿದೆ. ಅವು ಹಾಗೆ ತಮ್ಮ ಗಡಿ ದಾಟಿ ಹೊರಬರದಂತೆ ಬೇಲಿ, ಕಂದಕಗಳ ನಿರ್ಮಾಣವಾಗಿದ್ದರೂ ಅದೆಷ್ಟೋ ಕಡೆ ಗ್ರಾಮೀಣ ಜನರೇ ದನಕರುಗಳನ್ನು ಮೇಯಿಸಲೆಂದು ಅಂಥ ಕಂದಕಗಳಿಗೆ ಮಣ್ಣು ತುಂಬಿ, ಬೇಲಿ ಮುರಿದು ಹಾಕಿದ್ದೂ ಇದೆ. ಅನುಕೂಲಸ್ಥರು ತಮ್ಮ ಹೊಲಕ್ಕೆ ಅನಧಿಕೃತವಾಗಿ ವಿದ್ಯುತ್‌ ಬೇಲಿಯನ್ನು ಹಾಕಿ ವನ್ಯಜೀವಿಗಳ ಪ್ರಾಣಕ್ಕೆ ಎರವಾದ ಪ್ರಸಂಗಗಳೂ ಬೇಕಾದಷ್ಟಿವೆ. ಈ ಮುಗ್ಧ ಜೀವಿಗಳು ನೀರು ಮತ್ತು ಆಹಾರಕ್ಕೆಂದು ಅತ್ತ ಹೋದರೆ ಗ್ರಾನೈಟ್‌ ಕ್ವಾರಿ, ಇತ್ತ ಬಂದರೆ ವಿದ್ಯುತ್‌ ಬೇಲಿ, ಆ ಕಡೆ ಹೆದ್ದಾರಿ, ಈ ಕಡೆ ರೆಸಾರ್ಟು ಎದುರಾಗುತ್ತವೆ. ಅನಿವಾರ್ಯವಾಗಿ ಅವು ಮನುಷ್ಯರ ಜೊತೆ ಮುಖಾಮುಖಿ ಆಗಬೇಕಾಗುತ್ತದೆ.

ವನ್ಯಜೀವಿಗಳ ನಿರ್ವಹಣೆ ಗಂಭೀರ ವಿಷಯವಾಗುತ್ತಿರುವುದರಿಂದ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬ ಈಗಿನ ಧೋರಣೆಯನ್ನು ಬದಲಿಸಬೇಕಾಗಿದೆ. ನಮ್ಮ ದೇಶದ ವನ್ಯಸಂರಕ್ಷಣಾ ಧೋರಣೆಯೇ ಜನವಿರೋಧಿ, ನಿಸರ್ಗವಿರೋಧಿ ಹಾಗೂ ವಿಜ್ಞಾನವಿರೋಧಿಯಾಗಿದ್ದು, ಕಾನೂನನ್ನು ಆಮೂಲಾಗ್ರ ಬದಲಿಸಬೇಕೆಂದು ಡಾ. ಮಾಧವ ಗಾಡ್ಗೀಳ್‌ ಅವರಂಥ ತಜ್ಞರು ಒತ್ತಾಯಿಸು
ತ್ತಿದ್ದಾರೆ. ಕಾನೂನಿನಲ್ಲಿ ಇರಬಹುದಾದ ಲೋಪ, ಮಿತಿಗಳ ಬಗ್ಗೆ ಪರಿಶೀಲನೆ ಆಗಬೇಕಿದೆ. ಹಿಮಾಚಲ ಪ್ರದೇಶದಲ್ಲಿ ಮಂಗಗಳಿಗೆ ಸಂತಾನ ನಿಯಂತ್ರಣ ವ್ಯವಸ್ಥೆ ಇರುವ ಹಾಗೆ, ಪಶ್ಚಿಮಘಟ್ಟ ಪ್ರದೇಶಗಳ ಎಲ್ಲೆಡೆ ಕೃಷಿ ಚಟುವಟಿಕೆಗಳಿಗೆ ಹಾವಳಿಯಾಗಿ ಪರಿಣಮಿಸಿರುವ ಕೆಲವು ವನ್ಯಜೀವಿಗಳಿಗೆ ವನ್ಯತಜ್ಞರ ಕಟ್ಟುನಿಟ್ಟಿನ ನಿಗಾದಲ್ಲಿ ಜನನ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವುದು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ವನ್ಯಜೀವಿಗಳೊಂದಿಗೆ ಸಂಘರ್ಷ ಹೆಚ್ಚುತ್ತಿರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ತರಬೇತಿ ಪಡೆದ ಸ್ಥಳೀಯರನ್ನೇ ಜನಜಾಗೃತಿ ಮತ್ತು ಭದ್ರತೆಗೆಂದು ನಿಯೋಜಿಸಬೇಕಾಗಿದೆ. ರಕ್ಷಣೆ ವನ್ಯಜೀವಿಗಳಿಗೂ ಬೇಕು, ಕಾಡಂಚಿನ ಜನರಿಗೂ ಬೇಕು. ಈ ಸೂಕ್ಷ್ಮ ಸಮತೋಲನವನ್ನು ನಿಭಾಯಿಸುವ ಕೆಲಸ ಅರಣ್ಯಭವನದಿಂದ ಮಾತ್ರವೇ ಅಲ್ಲ, ನಿಸರ್ಗದ ಮಧ್ಯೆಯೂ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT