ಹಿಂಸಾತ್ಮಕ ಪ್ರತಿಭಟನೆ ಸರಿಯಲ್ಲ ಸುಪ್ರೀಂ ಕೋರ್ಟ್‌ ತೀರ್ಪು ಪಾಲಿಸಿ

7

ಹಿಂಸಾತ್ಮಕ ಪ್ರತಿಭಟನೆ ಸರಿಯಲ್ಲ ಸುಪ್ರೀಂ ಕೋರ್ಟ್‌ ತೀರ್ಪು ಪಾಲಿಸಿ

Published:
Updated:
Prajavani

ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶ ನಿರ್ಬಂಧ ಕುರಿತ ವಿವಾದ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಬಿಂದು ಮತ್ತು ಕನಕದುರ್ಗಾ ಎಂಬಿಬ್ಬರು 40ರ ಹರೆಯದ ಮಹಿಳೆಯರು ಬುಧವಾರ ಬೆಳಗಿನ ಜಾವ ದೇವಾಲಯವನ್ನು ಪ್ರವೇಶಿಸಿದ ಬಳಿಕ, ಪ್ರವೇಶ ನಿಷೇಧವನ್ನು ಸಮರ್ಥಿಸುತ್ತಿರುವ ಶಬರಿಮಲೆ ಕರ್ಮ ಸಮಿತಿಯ ಸದಸ್ಯರು ಉದ್ರಿಕ್ತರಾಗಿದ್ದಾರೆ.

ಈ ಸಮಿತಿಯ ಸದಸ್ಯರು ಮತ್ತು ಬಿಜೆಪಿ ಬೆಂಬಲಿಗರು ಕೇರಳದ ಹಲವು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಕಲ್ಲು ತೂರಾಟ, ರಸ್ತೆ ತಡೆ ಮತ್ತು ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ಪಂದಳಂನಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ನಡೆದ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದರು ಎನ್ನಲಾದ ಚಂದ್ರನ್‌ ಉಣ್ಣಿತ್ತಾನ್‌ ಸಾವನ್ನಪ್ಪಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಉದ್ರಿಕ್ತಗೊಳಿಸಿದೆ. ಧಾರ್ಮಿಕ ಸ್ವರೂಪದ್ದು ಎಂದು ಭಾವಿಸಲಾಗಿರುವ ವಿವಾದ ಈಗ ಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿರುವುದು ದುರದೃಷ್ಟಕರ.

ಮಹಿಳೆಯರ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಸ್ಪಷ್ಟ ಮಾತುಗಳಲ್ಲಿ ತೀರ್ಪು ನೀಡಿದ ಬಳಿಕವೂ ಈ ವಿವಾದವನ್ನು ಜೀವಂತವಾಗಿ ಇಡಲು ರಾಜಕೀಯ ಶಕ್ತಿಗಳು ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ. ಜನರ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ ತನ್ಮೂಲಕ ರಾಜಕೀಯ ಲಾಭ ಗಳಿಸುವ ಯತ್ನವನ್ನು ಯಾರೇ ಮಾಡಿದರೂ ಸಮರ್ಥಿಸಲು ಸಾಧ್ಯವಿಲ್ಲ. ‘ಪ್ರಾರ್ಥಿಸುವುದು ಎಲ್ಲರ ಮೂಲಭೂತ ಹಕ್ಕು. ಪುರುಷರಂತೆ ಮಹಿಳೆಯರಿಗೂ ದೇವಾಲಯ ಪ್ರವೇಶಿಸಿ ಪೂಜಿಸುವ ಅಥವಾ ಪ್ರಾರ್ಥಿಸುವ ಹಕ್ಕು ಇದೆ.

ಖಾಸಗಿ ದೇವಾಲಯ ಎನ್ನುವುದು ಇಲ್ಲ. ಸಾರ್ವಜನಿಕ ಪೂಜಾಸ್ಥಳಕ್ಕೆ ಪುರುಷರು ಹೋಗಬಹುದಾದರೆ ಮಹಿಳೆಯರೂ ಹೋಗಬಹುದು. ಶಬರಿಮಲೆ ದೇವಾಲಯ ಪ್ರವೇಶಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ನಿರ್ಬಂಧ ಹೇರಿರುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿಯೇ ತೀರ್ಪಿತ್ತಿದೆ. ಪುರುಷರು ಮತ್ತು ಸ್ತ್ರೀಯರ ನಡುವಣ ಯಾವುದೇ ತಾರತಮ್ಯವನ್ನು ನಮ್ಮ ಸಂವಿಧಾನ ಒಪ್ಪುವುದಿಲ್ಲ. ಧರ್ಮದ ಆಚರಣೆ ಮತ್ತು ಪ್ರಸಾರದ ಹಕ್ಕನ್ನು ಸಂವಿಧಾನದ 25ನೇ ವಿಧಿ ಎಲ್ಲ ವ್ಯಕ್ತಿಗಳಿಗೂ ನೀಡಿದೆ. ಈ ವಿಧಿ ಮಹಿಳೆಯರಿಗೂ ಅನ್ವಯವಾಗುತ್ತದೆ. ಇದನ್ನು ವಿರೋಧಿಸುವುದು ಸಂವಿಧಾನವನ್ನೇ ವಿರೋಧಿಸಿದಂತೆ.

ಶಬರಿಮಲೆ ಕರ್ಮ ಸಮಿತಿಯ ಸದಸ್ಯರು ಮತ್ತು ಸಮಿತಿಯನ್ನು ಬೆಂಬಲಿಸುತ್ತಿರುವ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಹಿಂಸಾತ್ಮಕ ಹೋರಾಟದಿಂದ ಸುಪ್ರೀಂ ಕೋರ್ಟ್‌ ತೀರ್ಪು ಬದಲಾಗುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಶಬರಿಮಲೆ ದೇವಾಲಯನ್ನು ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗಾ ಅವರಿಗೆ ಪೊಲೀಸ್‌ ಬೆಂಗಾವಲು ಒದಗಿಸಿದ ಕೇರಳ ಸರ್ಕಾರದ ಕ್ರಮ ಸಮರ್ಥನೀಯ. ಪ್ರತಿಭಟನೆಕಾರರು ಹಿಂಸೆಗೆ ಇಳಿದು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡದಂತೆ ಮತ್ತು ಜೀವಹಾನಿ ಮಾಡದಂತೆ ನೋಡಿಕೊಳ್ಳುವುದೂ ಸರ್ಕಾರದ ಕರ್ತವ್ಯವಾಗಿದೆ.

ಅದೇ ವೇಳೆ, ಬಿಜೆಪಿ ಕಾರ್ಯಕರ್ತರ ವಿರುದ್ಧ ಆಡಳಿತಾರೂಢ ಸಿಪಿಎಂ ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸದಂತೆ ನೋಡಿಕೊಳ್ಳುವ ಕರ್ತವ್ಯವೂ ಸರ್ಕಾರದ ಮೇಲಿದೆ. ಕಾನೂನು ಮತ್ತು ಶಿಸ್ತು ಪಾಲನೆಯ ವಿಷಯದಲ್ಲಿ ಸರ್ಕಾರ ಯಾವುದೇ ಮುಲಾಜು ನೋಡಬಾರದು. ಕಾನೂನು, ಶಿಸ್ತು ಪಾಲನೆಯ ರಾಜ್ಯ ಸರ್ಕಾರದ ಕರ್ತವ್ಯಕ್ಕೆ ಆಳುವ ಪಕ್ಷದ ರಾಜಕೀಯ ಸಿದ್ಧಾಂತವು ಅಡ್ಡಿಯಾಗದಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿಯ ಹೊಣೆ. ಧಾರ್ಮಿಕ ಕ್ಷೇತ್ರಗಳಲ್ಲಿ ಜಾರಿಯಲ್ಲಿರುವ ಕೆಲವು ನಿಯಮಗಳು ಮತ್ತು ಕಟ್ಟಳೆಗಳು ಸಂವಿಧಾನದತ್ತ ಹಕ್ಕುಗಳಿಗೆ ವ್ಯತಿರಿಕ್ತವಾಗಿವೆ ಎಂದು ಕಂಡುಬಂದಾಗ, ಆ ನಿಯಮಗಳಿಗೆ ತಿದ್ದುಪಡಿ ತರುವುದು ಅಗತ್ಯ.

ಎರಡು ವರ್ಷಗಳ ಹಿಂದೆ ಮುಂಬೈಯ ಹಾಜಿ ಅಲಿ ದರ್ಗಾದ ಒಳಗೆ ಮಹಿಳೆಯರ ಪ್ರವೇಶ ನಿಷೇಧದ ಕುರಿತು ಇಂತಹದ್ದೇ ವಿವಾದ ಉಂಟಾಗಿತ್ತು. ಮಹಿಳೆಯರ ಹಕ್ಕನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದು ಸ್ಪಷ್ಟ ತೀರ್ಪು ನೀಡಿದ ಬಳಿಕ ಅಲ್ಲಿನ ದರ್ಗಾ ಸಮಿತಿಯು ನಿಯಮಗಳಿಗೆ ತಿದ್ದುಪಡಿ ತಂದು ಮಹಿಳೆಯರ ಪ್ರವೇಶ ನಿರ್ಬಂಧ ರದ್ದು ಮಾಡಿದ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಸಂವಿಧಾನ ಪರಮೋಚ್ಚ ಎನ್ನುವುದನ್ನು ಎಲ್ಲ ಧಾರ್ಮಿಕ ಗುಂಪುಗಳೂ ಮನಗಾಣಬೇಕು. ಈ ವಿಷಯದಲ್ಲಿ ರಾಡಿಯೆಬ್ಬಿಸಿ ರಾಜಕೀಯ ಲಾಭ ಪಡೆಯುವ ಶಕ್ತಿಗಳನ್ನು ಜನರೇ ದೂರ ಮಾಡಬೇಕು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !