ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವ ನಿರ್ಧಾರ ಶ್ಲಾಘನೀಯ

ಸಂಪಾದಕೀಯ
Last Updated 3 ಫೆಬ್ರುವರಿ 2023, 1:26 IST
ಅಕ್ಷರ ಗಾತ್ರ

ತೀರ್ಪುಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಿ ಜನರಿಗೆ ಒದಗಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ನಿರ್ಧಾರವು ಸ್ವಾಗತಾರ್ಹ. ಏಕೆಂದರೆ, ಇದರಿಂದಾಗಿ ತೀರ್ಪುಗಳು ಬಹು ಸಂಖ್ಯೆಯ ಜನರಿಗೆ ದೊರಕುವಂತಾಗುತ್ತದೆ. ಜನರು ಅರ್ಥ ಮಾಡಿಕೊಳ್ಳಬಲ್ಲ ಭಾಷೆಯಲ್ಲಿಯೇ ತೀರ್ಪುಗಳು ಜನರಿಗೆ ದೊರಕುವಂತಾಗಬೇಕು ಎಂಬುದಕ್ಕೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
ಡಿ.ವೈ. ಚಂದ್ರಚೂಡ್‌ ಅವರು ಒತ್ತು ನೀಡಿದ್ದಾರೆ. ಈ ನಿರ್ಧಾರದ ಜಾರಿಯ ದಿಸೆಯಲ್ಲಿ ಕೆಲಸ ಮಾಡುವುದಕ್ಕಾಗಿ ನ್ಯಾಯಮೂರ್ತಿ ಅಭಯ್‌ ಓಕ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ. ಅನುಷ್ಠಾನದ ಮೊದಲ ಹೆಜ್ಜೆಯಾಗಿ ನಾಲ್ಕು ಭಾಷೆಗಳಿಗೆ ತೀರ್ಪುಗಳನ್ನು ಅನುವಾದ ಮಾಡಲಾಗುವುದು. ಆ ಭಾಷೆಗಳೆಂದರೆ, ಹಿಂದಿ, ತಮಿಳು, ಗುಜರಾತಿ ಮತ್ತು ಒಡಿಯಾ. ಮುಂದಿನ ದಿನಗಳಲ್ಲಿ, ಇತರ ಭಾಷೆಗಳಿಗೂ ತೀರ್ಪು ಅನುವಾದ ಆಗಬಹುದು ಎಂಬ ಭರವಸೆಯನ್ನು ಇರಿಸಿಕೊಳ್ಳಬಹುದು. ಮಾಹಿತಿ ಕೊರತೆ ಮತ್ತು ಭಾಷಿಕ ತೊಡಕನ್ನು ನಿವಾರಿಸಿಕೊಳ್ಳಲು ತಂತ್ರಜ್ಞಾನವು ನೆರವಾಗುತ್ತದೆ. ಹಾಗಾಗಿ, ಕೃತಕ ಬುದ್ಧಿಮತ್ತೆಯನ್ನು ಅನುವಾದಕ್ಕಾಗಿ ಬಳಸಿಕೊಳ್ಳಬಹುದು ಎಂದೂ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಆಯ್ದ ಕೆಲವು ತೀರ್ಪುಗಳನ್ನು ಅನುವಾದಿಸುವ ಕೆಲಸವನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ಈಗಾಗಲೇ ಆರಂಭಿಸಿದೆ. ಕನ್ನಡ ಸೇರಿ ಕೆಲವು ಭಾಷೆಗಳಿಗೆ ಅನುವಾದ ಮಾಡಲಾಗುತ್ತಿದೆ. ಆದರೆ, ಹೆಚ್ಚಿನ ತೀರ್ಪುಗಳು ಹಿಂದಿಗೆ ಮಾತ್ರ ಅನುವಾದ ಆಗುತ್ತಿವೆ. ‘ಇಂಗ್ಲಿಷ್‌ನಲ್ಲಿ ಬರೆಯಲಾದ ಕಾನೂನು ವಿಷಯಗಳು ದೇಶದ ಶೇ 99.9ರಷ್ಟು ಜನರಿಗೆ ಅರ್ಥವಾಗುವುದು ಕಷ್ಟ. ತಾವು ಮಾತನಾಡುವ ಮತ್ತು ಅರ್ಥ ಮಾಡಿಕೊಳ್ಳಬಲ್ಲ ಭಾಷೆಯಲ್ಲಿ ಜನರಿಗೆ ತೀರ್ಪುಗಳು ಸಿಗದೇ ಇದ್ದರೆ ನ್ಯಾಯದ ಲಭ್ಯತೆಯೇ ಅರ್ಥಹೀನ ಅನ್ನಿಸಿಬಿಡುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ದೇಶದ ಬಹುಪಾಲು ಜನರಿಗೆ ಇಂಗ್ಲಿಷ್‌ ಅರ್ಥವಾಗುವುದಿಲ್ಲ. ಮಾತ್ರವಲ್ಲ, ತೀರ್ಪುಗಳಲ್ಲಿ ಬಳಸುವ ಭಾಷೆಯಲ್ಲಿ ಕಾನೂನುಗಳಿಗೆ ಸಂಬಂಧಿಸಿದ ಹಲವು ಪಾರಿಭಾಷಿಕ ಪದಗಳು ಇರುತ್ತವೆ. ಇಂತಹ ಪದಗಳು ಜನರಿಗೆ ತಿಳಿಯುವುದಿಲ್ಲ. ವಕೀಲರಿಗೆ ಕೂಡ ಕೆಲವು ಸಂದರ್ಭಗಳಲ್ಲಿ ತೀರ್ಪುಗಳನ್ನು ಅರ್ಥ ಮಾಡಿಕೊಳ್ಳುವುದು ಕಠಿಣವಾಗುತ್ತದೆ. ಹಾಗಾಗಿಯೇ ತೀರ್ಪುಗಳ ಅನುವಾದವು ಮಹತ್ವದ ಉದ್ದೇಶವೊಂದನ್ನು ಸಾಧಿಸುತ್ತದೆ. ಇದು ಕಾನೂನು ಶಿಕ್ಷಣದಲ್ಲಿ ಬಹಳ ಉಪಯುಕ್ತವೆನಿಸುತ್ತದೆ ಮತ್ತು ಕಾನೂನು ಸಾಕ್ಷರತೆಯನ್ನು ಉತ್ತಮಪಡಿಸುವುದಕ್ಕೂ ನೆರವಾಗುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ ಕಾನೂನನ್ನು ಕುರಿತ ಬರಹಗಳು ಬಹಳವೇನೂ ಇಲ್ಲ. ಸುಪ್ರೀಂ ಕೋರ್ಟ್‌ನ ಕ್ರಮದಿಂದಾಗಿ ಪ್ರಾದೇಶಿಕ ಭಾಷೆಗಳು ಶ್ರೀಮಂತವಾಗುತ್ತವೆ. ಈ ಹಿಂದೆ ಬಂದಿರುವ ತೀರ್ಪುಗಳನ್ನೂ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗುವುದೇ ಎಂಬುದು ತಿಳಿದುಬಂದಿಲ್ಲ. ಆದರೆ, ಈ ಹಿಂದೆ ಬಂದ ಮಹತ್ವದ ತೀರ್ಪುಗಳನ್ನೂ ಅನುವಾದ ಮಾಡಿದರೆ ಉಪಯುಕ್ತವಾಗುತ್ತದೆ. ಸುಪ್ರೀಂ ಕೋರ್ಟ್‌ನ ಈ ಕ್ರಮದಿಂದ ಉತ್ತೇಜನ ಪಡೆದುಕೊಂಡು ಹೈಕೋರ್ಟ್‌ಗಳು ಕೂಡ ತಮ್ಮ ತೀರ್ಪುಗಳನ್ನು ಅನುವಾದ ಮಾಡಲು ಮುಂದಾಗಬೇಕು. ಕೊನೇಪಕ್ಷ ಆಯಾ ಹೈಕೋರ್ಟ್‌ನ ವ್ಯಾಪ್ತಿಯ ಪ್ರಾದೇಶಿಕ ಭಾಷೆಗಾದರೂ ಭಾಷಾಂತರ ಮಾಡಬೇಕು.

ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಸಮರ್ಪಕವಾಗಿ ಮತ್ತು ನಿಖರವಾಗಿ ಅನುವಾದ ಮಾಡುವುದು ಸವಾಲಿನ ಕೆಲಸ. ಏಕೆಂದರೆ, ಪ್ರಾದೇಶಿಕ ಭಾಷೆಗಳಲ್ಲಿ ಕಾನೂನು ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಇಲ್ಲದೇ ಇರಬಹುದು. ಆಯಾ ಭಾಷೆಗಳ ವಿದ್ವಾಂಸರ ನೆರವಿನಿಂದ ಅಂತಹ ಪದಗಳನ್ನು ಸೃಷ್ಟಿಸಬೇಕು. ಅನುವಾದಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಲು ನ್ಯಾಯಾಂಗ ಕ್ಷೇತ್ರದಲ್ಲಿ ಕೆಲಸ ಮಾಡಿ ನಿವೃತ್ತರಾದವರ ಸೇವೆ ಪಡೆದುಕೊಳ್ಳಲಾಗುವುದು ಎಂದೂ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಇದು ಕೂಡ ಉತ್ತಮವಾದ ಯೋಚನೆಯೇ ಆಗಿದೆ. ಕೋರ್ಟ್‌ನ ಕೆಲವು ಕಲಾಪಗಳ ನೇರ ಪ್ರಸಾರವು ನ್ಯಾಯಾಲಯವು ಜನರ ಹತ್ತಿರಕ್ಕೆ ತಲುಪಲು ನೆರವಾಗಿದೆ. ತೀರ್ಪುಗಳನ್ನು ಪ‍್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಿದರೆ ಮತ್ತೊಂದು ಹೆಜ್ಜೆ ಮುಂದಕ್ಕೆ ಇಟ್ಟಂತೆ ಆಗುತ್ತದೆ. ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಮತ್ತು ನ್ಯಾಯಾಲಯಗಳ ಕಲಾಪಗಳು ಆ ಭಾಷೆಯಲ್ಲಿಯೇ ನಡೆಯಬೇಕು ಎಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ ಇತ್ತೀಚೆಗೆ ಹೇಳಿದ್ದರು. ಆದರೆ, ಸುಪ್ರೀಂ ಕೋರ್ಟ್‌ನ ಈಗಿನ ನಿಲುವು ಇದಕ್ಕೆ ವ್ಯತಿರಿಕ್ತವಾಗಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT