ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸುಗಮವಾಗಲಿ

7

ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸುಗಮವಾಗಲಿ

Published:
Updated:

ಮೂರು ಮಹಾನಗರ ಪಾಲಿಕೆಗಳು ಮತ್ತು 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಅಭಿವೃದ್ಧಿ ಮಾಡದಿದ್ದರೆ ಯಾವ ಪಕ್ಷವೂ ಅನಿವಾರ್ಯವಲ್ಲ ಎನ್ನುವ ಸಂದೇಶವನ್ನು ನಗರ ಪ್ರದೇಶದ ಮತದಾರರು ಸ್ಪಷ್ಟವಾಗಿ ನೀಡಿದ್ದಾರೆ.

376 ಮಂದಿ ಪಕ್ಷೇತರರು ಗೆಲುವು ಸಾಧಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಬಹುತೇಕ ಕಡೆ ಸ್ಥಳೀಯ ನಾಯಕತ್ವ ಮತ್ತು ಸ್ಥಳೀಯ ವಿಚಾರಗಳೇ ಮುಖ್ಯವಾಗಿದ್ದವು ಎನ್ನುವುದನ್ನೂ ಫಲಿತಾಂಶ ದೃಢಪಡಿಸುತ್ತದೆ. 22 ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ನಡೆದ ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಭರ್ಜರಿ ಜಯ ಸಾಧಿಸಿಲ್ಲ. ಕಳೆದ ಚುನಾವಣೆಯಲ್ಲಿ ಪಡೆದಿದ್ದ ಸ್ಥಾನಗಳ ಪ್ರಮಾಣಕ್ಕೆ ಹೋಲಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಷ್ಟವಾಗಿದೆ.

ಬಿಜೆಪಿಗೆ ಅಲ್ಪ ಗಳಿಕೆಯಾಗಿದ್ದರೂ ಬೀಗುವಂತಿಲ್ಲ. ಈ ಬಾರಿ ಚುನಾವಣೆ ನಡೆದ ಒಟ್ಟು 2,662 ಸ್ಥಾನಗಳಲ್ಲಿ ಕಾಂಗ್ರೆಸ್ 982 ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿದೆ. ಬಿಜೆಪಿ 929, ಜೆಡಿಎಸ್ 375 ಸ್ಥಾನಗಳನ್ನು ಗೆದ್ದಿವೆ. ಮೂರು ಮಹಾನಗರ ಪಾಲಿಕೆಗಳ ಪೈಕಿ ಒಂದರಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಉಳಿದೆರಡು ಅತಂತ್ರವಾಗಿವೆ.

ಆದರೆ ಇಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆಗೆ ಏರಲಿವೆ. ಅದೇ ರೀತಿ 102 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ 32, ಬಿಜೆಪಿ 25, ಜೆಡಿಎಸ್ 13 ಕಡೆಗಳಲ್ಲಿ ಬಹುಮತ ಪಡೆದಿವೆ. 27 ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ಇದೆ. ಐದು ಕಡೆ ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆ ಇದು. ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ನಡೆದ ಪ್ರಮುಖ ಚುನಾವಣೆಯೂ ಹೌದು. ಲೋಕಸಭಾ ಚುನಾವಣೆಗೆ ಇದು ತಾಲೀಮು ಎಂದೇ ಭಾವಿಸಲಾಗಿತ್ತು. ಆದರೆ ಫಲಿತಾಂಶವನ್ನು ಗಮನಿಸಿದರೆ ಇದು ಸುಳ್ಳು ಎನ್ನುವುದು ಸ್ಪಷ್ಟ.

ಈ ಚುನಾವಣೆ ರಾಜ್ಯ ಸರ್ಕಾರದ ಜನಮತಗಣನೆ ಅಲ್ಲ. ಆದರೂ ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಈ ಚುನಾವಣೆ ಫಲಿತಾಂಶ ಕೆಲವು ಅಚ್ಚರಿಗಳನ್ನು ಹೊರಹಾಕಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಈಗ ಒಟ್ಟಾರೆ ಸ್ಥಾನ ಗಳಿಕೆಯಲ್ಲಿ ಆ ಪಕ್ಷಕ್ಕೆ ಹಿನ್ನಡೆಯಾಗಿದೆ.

ಅಲ್ಲದೆ ಬಿಜೆಪಿ ನಗರ ಕೇಂದ್ರಿತ ಪಕ್ಷ ಎಂಬ ಕಲ್ಪನೆಯೂ ಇತ್ತು. ಈ ಚುನಾವಣೆ ಅದನ್ನು ಕೊಂಚಮಟ್ಟಿಗಾದರೂ ಸುಳ್ಳಾಗಿಸಿದೆ. ಆದರೆ ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ಸಾಧನೆ ಆ ಪಕ್ಷಕ್ಕೆ ಹುಮ್ಮಸ್ಸು ತುಂಬುವುದೇ ಆಗಿದೆ. ಒಟ್ಟಾರೆ ಸ್ಥಾನಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದರೂ ವಿಧಾನಸಭಾ ಫಲಿತಾಂಶಕ್ಕಿಂತ ಇದು ಭಿನ್ನವಾಗೇನೂ ಇಲ್ಲ. ಇದೇ ಮಾತನ್ನು ಜೆಡಿಎಸ್ ಪಕ್ಷಕ್ಕೂ ಹೇಳಬಹುದು.

ವಿಧಾನಸಭಾ ಫಲಿತಾಂಶ ಹೊರಬಿದ್ದ ತಕ್ಷಣವೇ ಹೊಂದಾಣಿಕೆ ಮಾಡಿಕೊಂಡ ಹಾಗೆ ಅತಂತ್ರವಾದ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಹೊಂದಾಣಿಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯನ್ನು ತ್ವರಿತವಾಗಿ ಪ್ರಕಟಿಸಬೇಕು. ಅದರಲ್ಲಿ ರಾಜಕೀಯ ಮಾಡಬಾರದು. ಜನರು ಸ್ಥಳೀಯ ವಿದ್ಯಮಾನಗಳನ್ನು ಗಮನದಲ್ಲಿ ಇಟ್ಟುಕೊಂಡು ಮತ ಹಾಕಿದಂತೆಯೇ ಆಯಾ ನಗರಗಳನ್ನು ಅಭಿವೃದ್ಧಿಪಡಿಸುವುದೇ ಎಲ್ಲ ಪಕ್ಷಗಳ ಆದ್ಯತೆಯಾಗಬೇಕು.

ಯಾವುದೇ ಕಾರಣಕ್ಕೂ ಯಾವುದೇ ಪಕ್ಷ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ‘ಸ್ಥಳೀಯ ಸರ್ಕಾರ’ ರಚನೆಯಲ್ಲಿ ಹಸ್ತಕ್ಷೇಪ ಮಾಡಬಾರದು. ನಗರದ ಜನರಿಗೆ ಸೌಕರ್ಯ ಒದಗಿಸುವುದು ಆ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವುದು ಜಯಶೀಲರಾದ ಎಲ್ಲ ಅಭ್ಯರ್ಥಿಗಳ ಆದ್ಯತೆಯಾಗಿರಬೇಕು. ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸುಗಮವಾಗಿ ನಡೆಯುವಂತೆ ಮಾಡುವುದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯ. ಅದು ಪಾಲನೆಯಾಗಲಿ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !