ಮಳೆ ಅನಾಹುತ ಸನ್ನದ್ಧತೆ ಕೊರತೆ

7
Rain

ಮಳೆ ಅನಾಹುತ ಸನ್ನದ್ಧತೆ ಕೊರತೆ

Published:
Updated:
Deccan Herald

ಕೇರಳ, ಹಿಮಾಚಲ ಪ್ರದೇಶ, ಛತ್ತೀಸಗಡ, ಉತ್ತರಾಖಂಡ ಸಹಿತ ದೇಶದ ಏಳು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ನೂರಾರು ಹಳ್ಳಿಗಳು ಮತ್ತು ಪಟ್ಟಣಗಳು ಜಲಾವೃತಗೊಂಡಿವೆ. ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆಗಳು ಕೊಚ್ಚಿಹೋಗಿವೆ. ಸಾವಿರಾರು ಜನರು ತೊಂದರೆಗೀಡಾಗಿದ್ದಾರೆ. ಅದರಲ್ಲೂ ಕೇರಳದಲ್ಲಿ ಈ ಮಹಾಮಳೆ ದೊಡ್ಡ ಮಟ್ಟದ ಹಾನಿಯುಂಟು ಮಾಡಿದೆ. 54 ಸಾವಿರಕ್ಕೂ ಹೆಚ್ಚು ಜನರು ಮಳೆಯಿಂದ ತೊಂದರೆಗೆ ಈಡಾಗಿದ್ದು, 20 ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ, ಇಲ್ಲವೇ ಜಲಾವೃತವಾಗಿವೆ. ಒಟ್ಟು 10 ಸಾವಿರ ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆಗಳಿಗೆ ಹಾನಿಯಾಗಿದ್ದು ಸೇನೆಯ ಸಿಬ್ಬಂದಿ ಜತೆಗೆ ಜನರೂ ಸೇರಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲವೆಡೆ ಸೇನಾ ಸಿಬ್ಬಂದಿ ಜೀವವನ್ನು ಒತ್ತೆಯಿಟ್ಟು ಸಂತ್ರಸ್ತರನ್ನು ರಕ್ಷಿಸಿದ ವರದಿಗಳು ಬಂದಿವೆ. ವಯನಾಡ್‌, ಕಣ್ಣೂರು, ಕಾಸರಗೋಡು, ಕೊಯಿಕ್ಕೋಡ್‌, ಮಲಪ್ಪುರಂ ಮತ್ತು ಪಾಲಕ್ಕಾಡ್‌ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು ತುಂಬಿ ತುಳುಕುತ್ತಿರುವ ಅಣೆಕಟ್ಟುಗಳಿಂದ ನೀರು ಹೊರಬಿಡುತ್ತಿದ್ದು, ಜನರ ಆತಂಕ ಇನ್ನಷ್ಟು ಹೆಚ್ಚಾಗಿದೆ. 30 ಸಾವಿರಕ್ಕೂ ಹೆಚ್ಚು ಜನರು ಈಗಾಗಲೇ ಪರಿಹಾರ ಶಿಬಿರಗಳಲ್ಲಿದ್ದು, ಅವರಿಗೆ ಆಹಾರ ಮತ್ತು ಬಟ್ಟೆಬರೆಗಳನ್ನು ಒದಗಿಸಲು ಜನರೂ ಕೈಜೋಡಿಸಿದ್ದಾರೆ. 1924ರ ನಂತರ ಕೇರಳದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಭಾರಿ ಪ್ರಮಾಣದ ಮಳೆ ಬಿದ್ದಿದೆ ಎನ್ನಲಾಗಿದೆ.

‘ಮಳೆ ಬಂದರೂ ಶಾಪ, ಬಾರದಿದ್ದರೂ ಶಾಪ’ ಎನ್ನುವಂತಹ ಪರಿಸ್ಥಿತಿ ಏಕೆ ಉಂಟಾಗಿದೆ ಎನ್ನುವುದರ ಬಗ್ಗೆ ಸರ್ಕಾರ ಮತ್ತು ಜನರು ಆಲೋಚಿಸಬೇಕು. ಪ್ರಕೃತಿಯ ಜತೆಗೆ ಹೊಂದಾಣಿಕೆಯ ಜೀವನವನ್ನು ತಿರಸ್ಕರಿಸಿ, ನಮ್ಮದೇ ಆದ ನಗರೀಕರಣದ ಸೂತ್ರಗಳನ್ನು ಜಾರಿಗೊಳಿಸಿರುವುದರಿಂದ ಇಂತಹ ಅತಿವೃಷ್ಟಿಯ ಸಂದರ್ಭಗಳಲ್ಲಿ ನಾವು ಬೆಲೆ ತೆರುತ್ತಿದ್ದೇವೆ. ಕಳೆದ ವರ್ಷ ಆಗಸ್ಟ್ ಹೊತ್ತಿಗೆ ಕೇರಳದಲ್ಲಿ ವಾಡಿಕೆಗಿಂತ ಶೇಕಡ 29ರಷ್ಟು ಕಡಿಮೆ ಮಳೆ ಬಿದ್ದಿದ್ದು ಬರಗಾಲದ ಪರಿಸ್ಥಿತಿ ಇತ್ತು. ಈ ವರ್ಷ 14 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಶೇ 20ರಿಂದ 59ರಷ್ಟು ಪ್ರಮಾಣದಲ್ಲಿ ಹೆಚ್ಚು ಮಳೆ ಬಿದ್ದಿದೆ. ಹವಾಮಾನ ವೈಪರೀತ್ಯದ ಮುನ್ನೆಚ್ಚರಿಕೆಗಳಿಗೆ ಸೂಕ್ತ ಗಮನ ಕೊಡದೇ ಇರುವುದು ಈ ರೀತಿಯ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಕಾರಣವಾಗುತ್ತಿದೆ ಎನ್ನುವುದು ಸ್ಪಷ್ಟ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇಂತಹ ಏರುಪೇರಿಗೆ ಕಾರಣವಾಗುತ್ತಿವೆ. ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಕೂಡಾ ಹವಾಮಾನ ವೈಪರೀತ್ಯದ ಸೂಚನೆ. ಇನ್ನೊಂದೆಡೆ ನಗರ, ಪಟ್ಟಣ ಮತ್ತು ಹಳ್ಳಿಗಳೆನ್ನದೆ ಎಲ್ಲೆಡೆ ಮನಬಂದಂತೆ ಏಳುತ್ತಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳು ನೀರಿನ ಹರಿವಿಗೆ ತಡೆಯೊಡ್ಡುತ್ತಿವೆ. ಸಹಜವಾಗಿ ನೀರು ಹರಿದು ಹೋಗಲು ಇದ್ದ ದಾರಿಗಳು ಬಂದ್‌ ಆದರೆ, ಆ ನೀರು ಎಲ್ಲಿಗೆ ಹೋಗಬೇಕು? ಒಳಚರಂಡಿಗಳು ಸಾಲದಾದಾಗ ಮಳೆನೀರು ರಸ್ತೆಯ ಮೇಲೆ ಬರಲೇಬೇಕು. ಕೇರಳದಲ್ಲಿರುವ 24 ಅಣೆಕಟ್ಟುಗಳಲ್ಲಿ ಅಪಾರ ಹೂಳು ತುಂಬಿರುವುದರ ಕಡೆಗೆ ಗಮನ ಹರಿಸದೇ ಇರುವುದೂ ಸಂಕಷ್ಟಕ್ಕೆ ಕಾರಣವಾಗಿದೆ. ಇದು ಕೇರಳ ಮಾತ್ರವಲ್ಲ, ಬಹುತೇಕ ರಾಜ್ಯಗಳ ಸಮಸ್ಯೆಯೂ ಹೌದು. ಬೆಂಗಳೂರು, ಮುಂಬೈ ಸಹಿತ ದೇಶದ ಬಹುದೊಡ್ಡ ನಗರಗಳ ತಗ್ಗು ಪ್ರದೇಶಗಳು ಎರಡು ದಿನ ಎಡೆಬಿಡದೆ ಮಳೆ ಸುರಿದರೆ ಪೂರ್ಣ ಜಲಾವೃತವಾಗುತ್ತವೆ. ಕೇರಳದಲ್ಲಿ ವಾರದ ಹಿಂದೆಯೇ ಮಹಾಮಳೆಯ ಸೂಚನೆ ಇದ್ದುದರಿಂದ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಬಹುದಾಗಿತ್ತು. ಪ್ರವಾಹದಿಂದ ಜನರ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದು, 39 ಜನರ ಪ್ರಾಣಹಾನಿಗೂ ಕಾರಣವಾಗಿದೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಅಗತ್ಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು ಸದ್ಯದ ಅಗತ್ಯ. ಜೊತೆಗೆ, ದೀರ್ಘಾವಧಿಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳ ತೀವ್ರತೆಯನ್ನು ತಗ್ಗಿಸುವ ಕ್ರಮಗಳನ್ನು ಕೈಗೊಳ್ಳುವತ್ತಲೂ ಗಮನ ಹರಿಸಬೇಕು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !