ರಾಜಕೀಯ ಪಕ್ಕಕ್ಕಿಡಿ ಅನುಷ್ಠಾನಕ್ಕೆ ಶ್ರಮಿಸಿ

7

ರಾಜಕೀಯ ಪಕ್ಕಕ್ಕಿಡಿ ಅನುಷ್ಠಾನಕ್ಕೆ ಶ್ರಮಿಸಿ

Published:
Updated:
Deccan Herald

ಮಹದಾಯಿ ಜಲವಿವಾದ ನ್ಯಾಯಮಂಡಳಿ ರಾಜ್ಯಕ್ಕೆ ಒಟ್ಟಾರೆ 13.42 ಟಿಎಂಸಿ ಅಡಿ ನೀರು ಬಳಕೆ ಮಾಡಲು ಅವಕಾಶ ನೀಡಿದೆ. ರಾಜ್ಯ ಕೇಳಿದ್ದು 32.5 ಟಿಎಂಸಿ ಅಡಿ ನೀರು. ಆದರೂ ನ್ಯಾಯಮಂಡಳಿ ತೀರ್ಪು ರಾಜ್ಯದ ಮಟ್ಟಿಗೆ ಸಮಾಧಾನಕರವಾಗಿಯೇ ಇದೆ. ಕಳಸಾದಿಂದ 1.72 ಟಿಎಂಸಿ ಅಡಿ ಹಾಗೂ ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯ. ಜಲ ವಿದ್ಯುತ್ ಉತ್ಪಾದನೆಗಾಗಿ ಪ್ರತ್ಯೇಕವಾಗಿ 8.02 ಟಿಎಂಸಿ ಅಡಿ ನೀರು ನೀಡಲಾಗಿದೆ. ಇದಲ್ಲದೆ ಮಹದಾಯಿ ಕಣಿವೆ ಪ್ರದೇಶದಲ್ಲಿ ಕುಡಿಯಲು ಮತ್ತು ನೀರಾವರಿ ಬಳಕೆಗಾಗಿ ಇನ್ನೂ 1.50 ಟಿಎಂಸಿ ಅಡಿ ನೀರು ಒದಗಿಸಲಾಗಿದೆ. ಇವೆಲ್ಲವೂ ರಾಜ್ಯದ ಪಾಲಿಗೆ ಸಂತಸದ ವಿಚಾರಗಳು. ಜೊತೆಗೆ ಮುಂಬೈ ಕರ್ನಾಟಕ ಭಾಗದ ಹಲವಾರು ಗ್ರಾಮಸ್ಥರು ಕುಡಿಯುವ ನೀರಿಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಕಳಸಾ ಬಂಡೂರಿ ಹೋರಾಟಗಾರರಲ್ಲಿ ಬಹುತೇಕ ಮಂದಿ ನ್ಯಾಯಮಂಡಳಿ ತೀರ್ಪನ್ನು ಸ್ವಾಗತಿಸಿದ್ದಾರೆ. ರಾಜಕಾರಣಿಗಳು ಯಥಾಪ್ರಕಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹದಾಯಿ ನೀರು ವಿವಾದವನ್ನು ಬಹಳ ಕಾಲದಿಂದಲೂ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ನದಿಯ ಪೂರ್ಣ ಪ್ರಮಾಣದ ಹಕ್ಕನ್ನು ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕರ್ನಾಟಕದ ಪರ ವಕೀಲರು ಹೇಳಿದ್ದಾರೆ. ತೀರ್ಪು ಹೊರಬಿದ್ದ ತಕ್ಷಣದಿಂದಲೇ ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಎಲ್ಲರೂ ಬಿಡಬೇಕು. ನಮ್ಮ ಪಾಲಿನ ಸಂಪೂರ್ಣ ಹಕ್ಕನ್ನು ಪಡೆಯಲು ಕಾನೂನು ಹೋರಾಟ ಮುಂದುವರಿಸಲಿ. ಆದರೆ ಕೆಸರೆರಚಾಟ ನಿಲ್ಲಿಸಬೇಕು. ಗೋವಾ, ಮಹಾರಾಷ್ಟ್ರದ ಜೊತೆಗೆ ಸೌಹಾರ್ದ ಹೆಚ್ಚಿಸುವುದಕ್ಕೂ ಇದು ನೆರವಾಗಬೇಕು.

ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಈಗ ಲಭ್ಯವಾಗಿರುವ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ರಾಜ್ಯ ಸರ್ಕಾರ ಗಮನ ನೀಡಬೇಕು. ಇದಕ್ಕೆ ವಿರೋಧ ಪಕ್ಷಗಳೂ ಬೆಂಬಲ ನೀಡಬೇಕು. ಹುಬ್ಬಳ್ಳಿ–ಧಾರವಾಡ, ಕುಂದಗೋಳ ಪಟ್ಟಣ ಹಾಗೂ ಸುತ್ತಲಿನ 18 ಗ್ರಾಮದ ಜನರು ಮಹದಾಯಿ ನೀರಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಈಗ ಅವರಿಗೆ ನೀರು ತಲುಪಿಸುವ ಕೆಲಸವನ್ನು ಸರ್ಕಾರ ಜರೂರಾಗಿ ಮಾಡಬೇಕು. ಅಂದಾಗ ಮಾತ್ರ ಅವರ ಹೋರಾಟಕ್ಕೆ ನಿಜವಾದ ನ್ಯಾಯ ಸಿಕ್ಕಂತಾಗುತ್ತದೆ. ನ್ಯಾಯಮಂಡಳಿ ರಾಜ್ಯದ ಪಾಲನ್ನು ಗುರುತಿಸಿದ್ದರೂ ಅದನ್ನು ಬಳಸಿಕೊಳ್ಳಲು ಹಲವಾರು ಷರತ್ತುಗಳನ್ನು ವಿಧಿಸಿದೆ. ಕಳಸಾ ನಾಲೆಗೆ ನದಿ ಸಂಪರ್ಕ ಕಲ್ಪಿಸುವಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ಒಡೆಯಲು ನೀರು ನಿರ್ವಹಣಾ ಪ್ರಾಧಿಕಾರದ ಒಪ್ಪಿಗೆ ಬೇಕು. ಜೊತೆಗೆ ಮಹದಾಯಿ ನೀರಿಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವುದಕ್ಕೂ ಹೊಸದಾಗಿ ಒಪ್ಪಿಗೆಯನ್ನು ಪಡೆಯಬೇಕು. ಇವೆಲ್ಲ ತಾಂತ್ರಿಕ ವಿಷಯಗಳು. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡು ಆ ಭಾಗದ ಜನರ ಬದುಕು ಕಲ್ಯಾಣವಾಗುವಂತೆ ನೋಡಿಕೊಳ್ಳಬೇಕು. ಇದರಲ್ಲಿ ವಿಳಂಬ ಧೋರಣೆ ಅನುಸರಿಸುವುದು ಸರ್ವಥಾ ಸಲ್ಲ.

2008ರಲ್ಲಿ ಮಹದಾಯಿ ಯೋಜನೆ ಕಾಮಗಾರಿ ವೆಚ್ಚ ₹ 93 ಕೋಟಿಯಷ್ಟಿತ್ತು. ಈಗ ಅದರ ಅಂದಾಜು ಮೊತ್ತ ₹ 800 ಕೋಟಿಗೆ ಏರಿದೆ. ರಾಜ್ಯ ಸರ್ಕಾರ ಇದಕ್ಕಾಗಿ ₹ 200 ಕೋಟಿ ತೆಗೆದಿರಿಸಿದ್ದರೂ ಎಲ್ಲ ರೀತಿಯ ಕಾಮಗಾರಿಗಳನ್ನೂ ಸ್ಥಗಿತಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದರಿಂದ ಎಲ್ಲವೂ ನಿಂತಿತ್ತು. ಈಗ ನಮ್ಮ ಪಾಲಿನ ನೀರು ಲಭ್ಯವಾಗಿರುವುದರಿಂದ ತಕ್ಷಣವೇ ಇದಕ್ಕೆ ಅಗತ್ಯವಾದಷ್ಟು ಹಣವನ್ನು ಒದಗಿಸಿ ನೀರು ಸದುಪಯೋಗ ಮಾಡಿಕೊಳ್ಳಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ನೀರು ಕನ್ನಡಿಯ ಗಂಟಾಗಬಾರದು. ರಾಜಕೀಯದ ವಿಷಯವೂ ಆಗಬಾರದು. ನ್ಯಾಯಮಂಡಳಿಯ ತೀರ್ಪು ಸಮಾಧಾನ ತಂದ ರೀತಿಯಲ್ಲಿಯೇ ಮಹದಾಯಿ ನೀರು ರೈತರ ಹೊಲದಲ್ಲಿ ಹರಿದಾಗ ಮತ್ತು ಆ ಪ್ರದೇಶದ ಜನರ ದಾಹ ತೀರಿಸಿದಾಗಲೇ ನಿಜವಾದ ಸಂತೋಷ ಸಿಗುತ್ತದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ಕಾರ್ಯ ಆರಂಭಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !