ಶುಕ್ರವಾರ, ಆಗಸ್ಟ್ 23, 2019
26 °C

ವ್ಯಾಪಾರ ಬಿಕ್ಕಟ್ಟಿಗೆ ತೇಪೆಹಚ್ಚಿದ ಜಿ20 ಶೃಂಗಸಭೆ

Published:
Updated:

ಜಗತ್ತಿನ ಅತಿ ಶ್ರೀಮಂತ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟದ ಸದಸ್ಯತ್ವದ ಜಿ20 ಗುಂಪಿನ ಶೃಂಗಸಭೆಗೆ ಜಪಾನ್‌ನ ಒಸಾಕಾದಲ್ಲಿ ತೆರೆಬಿದ್ದಿದೆ. ಜಾಗತಿಕ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ನೀತಿಗಳ ಬಗ್ಗೆ ಚರ್ಚಿಸಲು, ಅರ್ಥ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ದೇಶಗಳ ಗುಂಪೊಂದು ಬೇಕು ಎಂಬ ಚಿಂತನೆಯ ಫಲವಾಗಿ ಜಿ20 ರೂಪುಗೊಂಡಿತು. ಅಂತರರಾಷ್ಟ್ರೀಯ ಆರ್ಥಿಕ ಸಹಕಾರದ ಈ ಗುಂಪಿನ ಶೃಂಗಸಭೆಯನ್ನು ‘ಹಣಕಾಸು ಮಾರುಕಟ್ಟೆಗಳು ಮತ್ತು ಜಾಗತಿಕ ಆರ್ಥಿಕತೆಯ ಶೃಂಗಸಭೆ’ ಎಂದೇ ಅಧಿಕೃತವಾಗಿ ಕರೆಯಲಾಗುತ್ತದೆ. ಆರ್ಥಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುವ ಆಶಯವನ್ನು ಈ ಗುಂಪು ಹೊಂದಿದೆ. ಹಾಗಾಗಿ, ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದಾದ ಹವಾಮಾನ ಬದಲಾವಣೆ, ಅಂತರರಾಷ್ಟ್ರೀಯ ವ್ಯಾಪಾರ, ಇಂಧನ, ಆರೋಗ್ಯ, ಭಯೋತ್ಪಾದನೆ, ವಲಸೆ, ನಿರಾಶ್ರಿತರು ಮುಂತಾದ ವಿಚಾರಗಳು ಈ ಗುಂಪಿಗೆ ಮಹತ್ವದ್ದೇ ಆಗಿವೆ. ಜಾಗತಿಕ ವ್ಯಾಪಾರ ಮತ್ತು ಸಹಕಾರವು ಪ್ರಕ್ಷುಬ್ಧವಾಗಿರುವ ಸದ್ಯದ ವಾತಾವರಣದಲ್ಲಿ ಈ ಬಾರಿಯ ಶೃಂಗಸಭೆ ನಡೆಯಿತು. ಭಾರತ– ಅಮೆರಿಕ, ಅಮೆರಿಕ– ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು ಕೈಮೀರುವ ಹಂತದಲ್ಲಿತ್ತು. ಅಮೆರಿಕ ಮತ್ತು ಇರಾನ್‌ ನಡುವೆ ಯುದ್ಧದ ಕಾರ್ಮೋಡ ಇನ್ನೂ ಕರಗಿಲ್ಲ. ಇರಾನ್‌ನಿಂದ ಬೇರೆ ದೇಶಗಳು ತೈಲ ಆಮದು ಮಾಡಿಕೊಂಡರೆ ನಿರ್ಬಂಧ ಹೇರುವುದಾಗಿ ಅಮೆರಿಕ ಎಲ್ಲರನ್ನೂ ಬೆದರಿಸಿ ಇಟ್ಟಿದೆ. ಇರಾನ್‌ನಿಂದ ತೈಲ ಆಮದು ನಿಲ್ಲಿಸಿರುವುದು ಭಾರತದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಜಿ20 ಗುಂಪಿನಲ್ಲಿ ಇರಾನ್‌ ಇಲ್ಲ; ಹಾಗಿದ್ದರೂ ಈ ಬಾರಿಯ ಶೃಂಗಸಭೆ ಕಾವೇರಲು ಆ ದೇಶವೂ ಕಾರಣವಾಗಿತ್ತು. ಭಾರತ ಮತ್ತು ಜಪಾನ್‌ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಭೆಗೆ ಬರುವುದಕ್ಕೂ ಮೊದಲೇ ಟ್ವೀಟ್‌ ಮೂಲಕ ಹರಿಹಾಯ್ದಿದ್ದರು. ಬದ್ಧ ಪ್ರತಿಸ್ಪರ್ಧಿ ಚೀನಾದ ವಿರುದ್ಧವೂ ಕಿಡಿ ಕಾರಿದ್ದರು. ಉದಾರವಾದಿ ನೀತಿ ಸವಕಲಾಗಿದೆ, ಅದನ್ನು ಬಿಟ್ಟು ಮುಂದೆ ಸಾಗಬೇಕಾದ ಅಗತ್ಯ ಇದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದರು. ನಿರಾಶ್ರಿತರಿಗೆ ಆಶ್ರಯ ಕೊಟ್ಟ ಜರ್ಮನಿಯ ನೀತಿಯನ್ನು ಟೀಕಿಸಿದ್ದರು. ಈ ಎಲ್ಲದರಿಂದಾಗಿ ಶೃಂಗಸಭೆಯು ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಬಹುದು ಎಂಬ ಆತಂಕವೂ ಇತ್ತು.

ಆದರೆ, ಶೃಂಗಸಭೆಯಲ್ಲಿ ಭಾಗವಹಿಸಲು ಬಂದ ನಾಯಕರು ನಡೆಸಿದ ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಮಾತುಕತೆಗಳು ವ್ಯಾಪಾರ ಬಿಕ್ಕಟ್ಟಿಗೆ ತೇಪೆ ಹಾಕುವಲ್ಲಿ ಯಶಸ್ವಿಯಾಗಿವೆ. ಭಾರತಕ್ಕೆ ಸಂಬಂಧಿಸಿ ಈ ಶೃಂಗಸಭೆಯು ಹೆಚ್ಚು ಫಲಪ್ರದ ಎಂದೇ ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್‌ ನಡುವಣ ಮಾತುಕತೆಯು ಎರಡೂ ದೇಶಗಳ ನಡುವಣ ವ್ಯಾಪಾರ ಸಮರ ಉಲ್ಬಣವಾಗುವುದನ್ನು ತಡೆದಿದೆ. ದೂರಸಂಪರ್ಕ ಕ್ಷೇತ್ರದಲ್ಲಿ 5ಜಿ ತಂತ್ರಜ್ಞಾನ ಅಳವಡಿಕೆಯ ವಿಚಾರದಲ್ಲಿ ಟ್ರಂಪ್‌ ಅವರ ಒತ್ತಡಕ್ಕೆ ಮೋದಿ ಮಣಿದಿಲ್ಲ. ಚೀನಾದ ಹುವಾವೆ ಕಂಪನಿಯ 5ಜಿ ತಂತ್ರಜ್ಞಾನ ಸೇವೆಯನ್ನು ಬಳಸಬಾರದು ಎಂಬುದು ಅಮೆರಿಕದ ಒತ್ತಡ. ಟ್ರಂಪ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನಡುವೆ ನಡೆದ ಮಾತುಕತೆ ಆ ಎರಡೂ ದೇಶಗಳ ವ್ಯಾಪಾರ ಸಂಘರ್ಷ ಶಮನದ ನಿಟ್ಟಿನಲ್ಲಿ ಸಣ್ಣ ಹೆಜ್ಜೆ ಇರಿಸಿದೆ. ಡಿಜಿಟಲ್‌ ದತ್ತಾಂಶ ಸಂಗ್ರಹದ ಏಕಸ್ವಾಮ್ಯ ಮುರಿಯುವ ದಿಕ್ಕಿನಲ್ಲಿ ಶೃಂಗಸಭೆ ಯೋಚಿಸಿದೆ ಎಂಬುದು ಸ್ವಾಗತಾರ್ಹ. ದತ್ತಾಂಶ ಸಂಗ್ರಹದ ವಿಕೇಂದ್ರೀಕರಣವನ್ನು ಟ್ರಂಪ್‌ ಅವರು ವಿರೋಧಿಸಿದ್ದಾರೆ. ಆದರೆ, ಇತರ ದೇಶಗಳು ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿವೆ ಎಂಬ ಸುಳಿವನ್ನು ಶೃಂಗಸಭೆ ನೀಡಿದೆ. ಹವಾಮಾನ ಬದಲಾವಣೆಯು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮ ಸಣ್ಣದೇನಲ್ಲ. ಆದರೆ, ಈ ವಿಚಾರದಲ್ಲಿ ಸರ್ವಾನುಮತ ಸಾಧ್ಯವಾಗದಿರುವುದು ದೊಡ್ಡ ವೈಫಲ್ಯ. ಅಮೆರಿಕದ ಮನವೊಲಿಸಲು ಇತರ ದೇಶಗಳಿಗೆ ಸಾಧ್ಯವಾಗಿಲ್ಲ. ಉದಾರವಾದ ವಿರೋಧಿ ನಿಲುವಿಗೆ ದೂರಗಾಮಿ ಪರಿಣಾಮಗಳಿವೆ. ಪುಟಿನ್‌ ಅವರ ವಾದವನ್ನು ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್‌ ಟಸ್ಕ್‌ ಖಂಡಿಸಿದ್ದಾರೆ. ಹಾಗಿದ್ದರೂ ಇಂತಹ ಮನಃಸ್ಥಿತಿ ಮನುಷ್ಯ–ಮನುಷ್ಯ ಸಂಬಂಧದ ನೆಲೆಗಟ್ಟನ್ನೇ ಅಲುಗಾಡಿಸಬಲ್ಲದು. ಒಸಾಕಾ ಸಭೆಗೆ ಕೆಲದಿನ ಮೊದಲು, ಅಮೆರಿಕವನ್ನು ಸೇರಿಕೊಳ್ಳುವುದಕ್ಕಾಗಿ ಮೆಕ್ಸಿಕೊದ ರಿಯೊ ಗ್ರಾಂಡೆ ನದಿ ದಾಟುವಾಗ ಸಾಲ್ವಡೋರ್‌ನ ವ್ಯಕ್ತಿ ಮತ್ತು ಆತನ ಎರಡು ವರ್ಷದ ಮಗಳು ಮುಳುಗಿ ಸತ್ತರು. ಮಾಧ್ಯಮದಲ್ಲಿ ಪ್ರಕಟವಾದ ಮನಕಲಕುವ ಈ ಚಿತ್ರ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ವಲಸೆ ಸಮಸ್ಯೆಯ ಗಂಭೀರ ಮುಖವನ್ನು ತೋರಿಸಿದೆ. ಈ ಬಗ್ಗೆ ಶೃಂಗಸಭೆ ಏನನ್ನೂ ಹೇಳಿಲ್ಲ. ಜಿ20 ಶೃಂಗಸಭೆಯು ಜಾಗತಿಕ ಸಹಕಾರದಲ್ಲಿ ಹೊಸ ಯುಗವೊಂದನ್ನು ಆರಂಭಿಸುವಂತಹ ಮುನ್ನೋಟವನ್ನು ಹಿಂದೆಂದೂ ಕಟ್ಟಿಕೊಟ್ಟಿಲ್ಲ ಎಂಬ ಆರೋ‍ಪ ಇದೆ. ಈ ಸಲದ ಸಭೆಯೂ ಅದಕ್ಕೆ ಹೊರತಲ್ಲ. ವಲಸೆಗೆ ಸಂಬಂಧಿಸಿದಂತೆ ಪುಟಿನ್‌ ಪ್ರತಿಪಾದಿಸಿದ ಮಾನವೀಯತೆ ವಿರೋಧಿ ನಿಲುವು ಈ ಬಾರಿಯ ಸಭೆಯ ಕಪ್ಪುಚುಕ್ಕೆ ಎನ್ನಬಹುದು. 

Post Comments (+)