ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಅಪಾರ ನಿರೀಕ್ಷೆಗೆಸ್ಪಂದಿಸದ ಬಜೆಟ್‌

Last Updated 5 ಜುಲೈ 2019, 20:01 IST
ಅಕ್ಷರ ಗಾತ್ರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮಂಡಿಸಿದ 2019–20ನೇ ಸಾಲಿನ ಮುಂಗಡಪತ್ರದಲ್ಲಿ ಅರ್ಥವ್ಯವಸ್ಥೆಯನ್ನು ಪ್ರಗತಿಯ ಸರಿದಾರಿಗೆ ತರುವ ರಚನಾತ್ಮಕ ಕ್ರಮಗಳಾಗಲೀ, ಆರ್ಥಿಕ ಪ್ರಗತಿಗೆ ಪೂರಕವಾದ ಮುನ್ನೋಟವಾಗಲೀ ಕಂಡುಬಂದಿಲ್ಲ. ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಿ, ಆರ್ಥಿಕ ಪುನಶ್ಚೇತನಕ್ಕಾಗಿ ಜನರ ಕೈಯಲ್ಲಿ ಹೆಚ್ಚು ಹಣ ಇರುವಂತೆ ಮಾಡುವ ಕಾರ್ಯಕ್ರಮಗಳೂ ಇಲ್ಲ. ಜನಪ್ರಿಯ ಕಾರ್ಯಕ್ರಮಗಳ ಘೋಷಣೆಗಳಿಗೇನೂ ಬರ ಇಲ್ಲ. ಆದರೆ, ನಿರುದ್ಯೋಗವು ದೇಶದ ಮುಂದಿರುವ ಅತಿದೊಡ್ಡ ಸವಾಲು. ಇದಕ್ಕೆ ಪರಿಹಾರ ಕಂಡುಕೊಳ್ಳುವಂತಹ ನಿರ್ದಿಷ್ಟ ಯೋಜನೆಗಳು ಇಲ್ಲದಿರುವುದು ಅತಿದೊಡ್ಡ ಕೊರತೆಯಾಗಿದೆ. ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಹೋದರೆ ಮುಂದೊಂದು ದಿನ ಸಮಾಜದಲ್ಲಿ ಅಶಾಂತಿಗೂ ಕಾರಣವಾಗಬಹುದು. ಹೊಸತು ಅನ್ನಿಸುವ ಆಲೋಚನೆಗಳ ದೊಡ್ಡ ಮೂಟೆಯೇ ಬಜೆಟ್‌ ಪ್ರಸ್ತಾವಗಳಲ್ಲಿದೆ. ಕಾರ್ಮಿಕ ಕಲ್ಯಾಣ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಗದು ಬಿಕ್ಕಟ್ಟಿಗೆ ಪರಿಹಾರ, ಸ್ಟಾರ್ಟ್‌ಅಪ್‌, ಎಂಎಸ್‌ಎಂಇ ಗಳಿಗೆ ಉತ್ತೇಜನ, ಡಿಜಿಟಲ್‌ ಪಾವತಿಗೆ ನೆರವು, ಬ್ಯಾಟರಿಚಾಲಿತ ವಾಹನಗಳ ಬಳಕೆಗೆ ಉತ್ತೇಜನ, ಮಹಿಳಾ ಸಬಲೀಕರಣ ಮುಂತಾದವುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಆದರೆ ಇವು ಹೇಗೆ ಕಾರ್ಯಗತಗೊಳ್ಳಲಿವೆ ಎನ್ನುವುದರ ಮೇಲೆ ಈ ಬಜೆಟ್‌ನ ಯಶಸ್ಸು ನಿಂತಿದೆ. ಮುಂದಿನ 5 ವರ್ಷಗಳಲ್ಲಿ ಮೂಲಸೌಕರ್ಯ ವಲಯಕ್ಕೆ ₹ 100 ಲಕ್ಷ ಕೋಟಿ ವೆಚ್ಚ ಮಾಡುವ ದೊಡ್ಡ ಭರವಸೆ ನೀಡಲಾಗಿದೆ. ಆದರೆ, ಈ ಹಣ ಎಲ್ಲಿಂದ ಬರಲಿದೆ ಎನ್ನುವುದರ ವಿವರಗಳೇ ಬಜೆಟ್‌ನಲ್ಲಿ ಇಲ್ಲ.

ಭಾರಿ ಬಹುಮತದಿಂದ ಪುನಃ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಜನರು ಅಪಾರ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ ಈ ನಿರೀಕ್ಷೆಗಳಿಗೆ ಸ್ಪಂದನೆ ಸಿಕ್ಕಿಲ್ಲ. ಹಲವು ವಿಘ್ನಗಳನ್ನು ಎದುರಿಸುತ್ತಿರುವ ದೇಶಿ ಆರ್ಥಿಕತೆಯನ್ನು ಪ್ರಗತಿಯ ಹಾದಿಗೆ ತರಲು ಶಕ್ತಿ ನೀಡಬಹುದಾಗಿದ್ದ ಸರ್ಕಾರಿ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವೇನೂ ಕಾಣುವುದಿಲ್ಲ. ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ ಶೇ 3.3ಕ್ಕೆ ತಗ್ಗಿಸಿರುವುದು ಆರ್ಥಿಕ ಶಿಸ್ತು ಪಾಲನೆ ವಿಷಯದಲ್ಲಿ ಉತ್ತಮ ನಡೆಯಾಗಿದೆ. ಗರಿಷ್ಠ ಪ್ರಮಾಣದಲ್ಲಿ ಸಂಗ್ರಹವಾಗಲಿರುವ ತೆರಿಗೆಯನ್ನು ಸರ್ಕಾರ ನೆಚ್ಚಿಕೊಂಡಿರುವುದನ್ನು ಇದು ಧ್ವನಿಸುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಸೆಸ್‌ ವಿಧಿಸಿರುವುದರಿಂದ ಬಳಕೆದಾರರಿಗೆ ಹೊರೆಯಾಗಲಿದೆ. ಹಣದುಬ್ಬರ ಹೆಚ್ಚಳಕ್ಕೂ ಕಾರಣವಾಗಲಿದೆ. ವೇತನ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಯಾವುದೇ ಹೆಚ್ಚಿನ ವಿನಾಯಿತಿ ದೊರೆತಿಲ್ಲ. ತೆರಿಗೆಗೆ ಒಳಪಡುವ ವರಮಾನ ₹ 2 ಕೋಟಿಗಿಂತ ಹೆಚ್ಚು ಇರುವವರ ಮೇಲೆ ಮಾತ್ರ ಸರ್ಚಾರ್ಜ್‌ ವಿಧಿಸಿರುವುದು ಪರಿಣಾಮದ ದೃಷ್ಟಿಯಿಂದ ಗೌಣ. ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳಲ್ಲಿನ ಸಾರ್ವಜನಿಕರ ಪಾಲು ಬಂಡವಾಳವನ್ನು ಸದ್ಯದ ಶೇ 25ರಿಂದ ಶೇ 35ಕ್ಕೆ ಹೆಚ್ಚಿಸುವ ನಿರ್ಧಾರವು ಬಂಡವಾಳ ಮಾರುಕಟ್ಟೆಯತ್ತ ಹೆಚ್ಚು ಜನರನ್ನು ಸೆಳೆಯಲಿದೆ. ಜತೆಗೆ, ಪೇಟೆಯತ್ತ ಹರಿದು ಬರುತ್ತಿರುವ ವಿದೇಶಿ ನೇರ ಬಂಡವಾಳಕ್ಕೆ ಕಡಿವಾಣ ಹಾಕಲಿದೆ.ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಗಾತ್ರವನ್ನು 5 ವರ್ಷಗಳಲ್ಲಿ ₹ 350 ಲಕ್ಷ ಕೋಟಿ ಮೊತ್ತಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆ ಇದೆ. ಆದರೆ ಇದನ್ನು ಸಾಕಾರಗೊಳಿಸಲು ಬೇಕಾದ ವೇಗ ಮಾತ್ರ ಕಂಡುಬರುತ್ತಿಲ್ಲ. ಆರೋಗ್ಯ, ನೈರ್ಮಲ್ಯ, ನೀರಿನ ಬಳಕೆಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಆರ್ಥಿಕತೆಗೂ ಒತ್ತು ದೊರೆತಿದೆ. ತೆರಿಗೆ ಸಂಗ್ರಹವು ನಿಗದಿಯಂತೆ ಹೆಚ್ಚಳಗೊಳ್ಳದಿದ್ದರೆ ವಿತ್ತೀಯ ಕೊರತೆಯ ಗುರಿಸಾಧನೆ ಕಷ್ಟಸಾಧ್ಯ ಆಗಲಿದೆ. ಸರ್ಕಾರವು ಹೆಚ್ಚುವರಿ ಸಂಪನ್ಮೂಲಗಳಿಗಾಗಿ ಷೇರು ವಿಕ್ರಯ, ತೆರಿಗೆ ಸಂಗ್ರಹದಲ್ಲಿನ ಹೆಚ್ಚಳ ಮತ್ತು ಆರ್‌ಬಿಐ ಬಳಿ ಇರುವ ಹೆಚ್ಚುವರಿ ಬಂಡವಾಳವನ್ನೇ ನೆಚ್ಚಿಕೊಂಡಿದೆ. ಈ ಮೂಲಗಳಿಂದ ಬೊಕ್ಕಸ ಭರ್ತಿಯಾಗುವುದು ಸದ್ಯಕ್ಕೆ ಅನಿಶ್ಚಿತವಾಗಿದೆ. ವಿತ್ತೀಯ ಕೊರತೆಯನ್ನು ಕಡಿಮೆ ಮಟ್ಟದಲ್ಲಿ ನಿಯಂತ್ರಿಸಿ, ಆರ್ಥಿಕ ಬೆಳವಣಿಗೆ ಸಾಧಿಸುವುದು ನಿಜಕ್ಕೂ ಸವಾಲಿನ ಕೆಲಸ. ಸರ್ಕಾರದ ಬೆಂಬಲದ ಹೊರತಾಗಿಯೂ ಆರ್ಥಿಕ ವೃದ್ಧಿ ದರ ಕಡಿಮೆ ಮಟ್ಟದಲ್ಲಿಯೇ ಮುಂದುವರಿಯುವ ಸೂಚನೆಗಳಿವೆ. ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿಯ ಪುನರ್ಧನವು ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲಿದೆ. ಆದರೆ, ಇದರಿಂದ ಸರ್ಕಾರದ ಸಾಲದ ಹೊರೆಯೂ ಏರಿಕೆ ಆಗಲಿರುವುದನ್ನು ಅಲ್ಲಗಳೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT