ಸೋಮವಾರ, ಡಿಸೆಂಬರ್ 16, 2019
17 °C

ಭಿನ್ನಮತದ ನಡುವೆಯೂ ಬಾಂಧವ್ಯ ಗಟ್ಟಿಗೊಳಿಸುವ ಯತ್ನ ಶ್ಲಾಘನೀಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಎರಡನೇ ಅನೌಪಚಾರಿಕ ಶೃಂಗಸಭೆ ತಮಿಳುನಾಡಿನ ಮಾಮಲ್ಲಪುರಂನಲ್ಲಿ ಪೂರ್ಣಗೊಂಡಿದೆ. ಎರಡೂ ದೇಶಗಳ ನಡುವೆ ಸಹಕಾರದ ಹೊಸದೊಂದು ಶಕೆಯೇ ಆರಂಭವಾಗಲಿದೆ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಎರಡು ದೇಶಗಳ ನಡುವಣ ಸಂಬಂಧ ಸಂಕೀರ್ಣವಾದುದು.

ಹಾಗೆ ನೋಡಿದರೆ, ಎಲ್ಲ ವಿಚಾರಗಳಲ್ಲಿಯೂ ಒಮ್ಮತ ಇದೆ ಎಂದು ಯಾವ ಎರಡು ದೇಶಗಳೂ ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಭಾರತ–ಚೀನಾ ನಡುವೆಯೂ ಭಿನ್ನಮತದ ವಿಚಾರಗಳು ಹತ್ತಾರಿವೆ. ಅಂತಹ ಭಿನ್ನಮತ ಒಪ್ಪಿಕೊಂಡು ಸದೃಢವಾದ ಸಂಬಂಧವನ್ನು ಕಟ್ಟಿಕೊಳ್ಳಲು ಇಬ್ಬರೂ ಮುಖಂಡರು ಮುಂದಾಗಿರುವುದು ಮೆಚ್ಚಬೇಕಾದ ಅಂಶ; ಸಂಬಂಧ ರಾಜತಾಂತ್ರಿಕವಾಗಿ ಮಾಗಿದೆ ಎಂಬುದರ ಸಂಕೇತ.

ಶೃಂಗಸಭೆಗಾಗಿ ಷಿ ಅವರು ಭಾರತಕ್ಕೆ ವಿಮಾನ ಏರುವುದಕ್ಕೆ ಎರಡು ದಿನ ಮೊದಲು, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಚೀನಾಕ್ಕೆ ಹೋಗಿ ಅವರನ್ನು ಭೇಟಿಯಾಗಿದ್ದರು. ಇಮ್ರಾನ್ ಜತೆಗೆ ಮಾತನಾಡಿದ ಷಿ ಅವರು ‘ಕಾಶ್ಮೀರದ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ’ ಎಂದಿದ್ದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಭಾರತ ‘ನಮ್ಮ ಆಂತರಿಕ ವಿಚಾರದಲ್ಲಿ ತಲೆಹಾಕಬೇಡಿ’ ಎಂದು ಖಾರವಾಗಿಯೇ ಹೇಳಿತ್ತು.

ಶೃಂಗಸಭೆ ಇನ್ನೇನು ಆರಂಭವಾಗಬೇಕು ಎಂಬ ಸಂದರ್ಭದಲ್ಲಿ ಇದು ಶುಭಸೂಚಕ ಬೆಳವಣಿಗೆ ಆಗಿರಲಿಲ್ಲ. ತಮಿಳುನಾಡಿನ ಜತೆಗೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ನಂಟು ಹೊಂದಿದ್ದ ಚೀನಾದ ಜತೆಗೆ ಭಾರತ ಹೊಂದಿರುವ ವಿವಾದಗಳಿಗೂ ಅರ್ಧ ಶತಮಾನಕ್ಕಿಂತ ಹೆಚ್ಚಿನ ಇತಿಹಾಸ ಇದೆ.

ದೋಕಲಾದಲ್ಲಿ ಸೇನಾ ಮುಖಾಮುಖಿಯ ಬಳಿಕ ಚೀನಾದ ವುಹಾನ್‌ನಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಆಗಿನಂತೆ ಈಗಲೂ ಎರಡೂ ದೇಶಗಳ ನಡುವೆ ತೀರಾ ಆತ್ಮೀಯ ಎನ್ನುವಂತಹ ಸಂಬಂಧ ಇಲ್ಲ. ಪರಸ್ಪರರ ಬಗ್ಗೆ ಒಡಲಲ್ಲಿ ಅನುಮಾನವನ್ನು ಇರಿಸಿಕೊಂಡೇ ನಾಯಕರು ಮಾತುಕತೆ ನಡೆಸಿದ್ದಾರೆ. ಇಂತಹ ಅವಿಶ್ವಾಸದ ನಡುವೆ ನಡೆಯುವ ಮಾತುಕತೆ ವಿಭಿನ್ನವೂ ವಿಶಿಷ್ಟವೂ ಆಗಿದ್ದರೆ ಫಲಿತಾಂಶ ಸಕಾರಾತ್ಮಕವಾಗಬಹುದು ಎಂಬುದು ಅನೌಪಚಾರಿಕ ಶೃಂಗಸಭೆಯ ಲೆಕ್ಕಾಚಾರ.

ಕಾರ್ಯಸೂಚಿ, ಒಪ್ಪಂದಗಳು, ಜಂಟಿ ಹೇಳಿಕೆಗಳಂತಹ ರಾಜತಾಂತ್ರಿಕ ಶಿಷ್ಟಾಚಾರಗಳ ಬಿಗುವು ಇಲ್ಲದೆ ಮಾತುಕತೆ ಮುಕ್ತವಾಗಿ ನಡೆಯಬೇಕು ಎಂಬುದು ಆಶಯ. ಎರಡನೇ ಶೃಂಗಸಭೆಯು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಮಾಮಲ್ಲಪುರಂ ಜತೆಗೆ ಚೀನಾ ಹೊಂದಿದ್ದ ನಂಟಿನ ಭಿತ್ತಿಯನ್ನು ಈ ಮಾತುಕತೆಗೆ ಒದಗಿಸಿದೆ. ಭಿನ್ನಮತದ ನಡುವೆಯೂ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸಲು ಇವು ನೆರವಾಗಬಹುದು ಎಂಬ ಎಣಿಕೆಯಲ್ಲಿ ತಪ್ಪೇನೂ ಇಲ್ಲ.

ಭಾರತದ ಭಾಗವಾಗಿದ್ದ ಸುಮಾರು 37 ಸಾವಿರ ಚ.ಕಿ.ಮೀ. ಪ್ರದೇಶವನ್ನು ‘ಅಕ್ಸಾಯ್‌ ಚಿನ್‌’ ಹೆಸರಲ್ಲಿ ಚೀನಾ ತನ್ನ ವಶದಲ್ಲಿ ಇರಿಸಿಕೊಂಡಿದೆ. ಆಕ್ರಮಿತ ಕಾಶ್ಮೀರದ (ಪಿಒಕೆ) ಒಂದಷ್ಟು ಭಾಗವನ್ನು ಪಾಕಿಸ್ತಾನವು ಚೀನಾಕ್ಕೆ ಒಪ್ಪಿಸಿದೆ. ಈ ಎಲ್ಲ ಕಹಿಗಳನ್ನು ಒಳಗೆ ಇರಿಸಿಕೊಂಡೇ ಬಂಧವನ್ನು ಸೌಹಾರ್ದಗೊಳಿಸುವ ಅಗತ್ಯ ಈಗಿನ ಸ್ಥಿತಿಯಲ್ಲಿ ಎರಡೂ ದೇಶಗಳಿಗೆ ಇದೆ. ಅಪಾರ ವೇಗದಲ್ಲಿ ಬೆಳೆಯುತ್ತಿದ್ದ ಚೀನಾದ ಆರ್ಥಿಕತೆ ಈಗ ಕುಂಟುತ್ತಿದೆ. ಪಿಒಕೆ ಮೂಲಕ ಹಾದುಹೋಗುವ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಭಾರತದ ವಿರೋಧ ಇದೆ.

ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಚೀನಾ ಈಗ ಕೈಬಿಡುವ ಸ್ಥಿತಿಯಲ್ಲಿಯೂ ಇಲ್ಲ. ಅಮೆರಿಕದ ಜತೆಗೆ ವಾಣಿಜ್ಯ ಸಮರಕ್ಕೆ ಚೀನಾ ಇಳಿದಿದೆ. ತೆರಿಗೆ ಹೇರಿಕೆಗಳ ಮೇಲಾಟದ ಮೂಲಕ ಈ ಎರಡು ದೇಶಗಳು ವಾಣಿಜ್ಯ ಹಿತಾಸಕ್ತಿಯನ್ನು ಬದಿಗೆ ತಳ್ಳಿವೆ. ಇದು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಲ್ಲದು. ಭಾರತದ ಅರ್ಥ ವ್ಯವಸ್ಥೆಯೂ ಹಿಂಜರಿತದ ಭೀತಿಗೆ ಒಳಗಾಗಿದೆ. ಏಷ್ಯಾದ ಎರಡು ಅತಿದೊಡ್ಡ ಅರ್ಥ ವ್ಯವಸ್ಥೆಗಳು ಪರಸ್ಪರ ಸಹಕರಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಉಭಯ ದೇಶಗಳ ನಡುವಣ ವಾಣಿಜ್ಯ ವ್ಯವಹಾರದಲ್ಲಿ ವ್ಯಾಪಾರ ಕೊರತೆಯು ಭಾರತಕ್ಕೆ ದೊಡ್ಡ ಕಳವಳ. 2018ರಲ್ಲಿ ಎರಡೂ ದೇಶಗಳ ನಡುವೆ ₹6.78 ಲಕ್ಷ ಕೋಟಿ ಮೊತ್ತದ ವ್ಯಾಪಾರ ಆಗಿದೆ; ಅದರಲ್ಲಿ ಭಾರತಕ್ಕೆ ಆಗಿರುವ ಕೊರತೆಯೇ ₹4.11 ಲಕ್ಷ ಕೋಟಿ. ಇದನ್ನು ಸರಿದೂಗಿಸುವುದು ಮೋದಿ ಅವರ ಮೊದಲ ಕಾಳಜಿ. ಈ ವಿಚಾರದಲ್ಲಿ ಷಿ ಅವರು ನೀಡಿದ ಭರವಸೆ ಕಾರ್ಯರೂಪಕ್ಕೆ ಬರಬೇಕು. ಚೀನಾದ ಹುವಾವೆ ಕಂಪನಿಯ 5ಜಿ ತಂತ್ರಜ್ಞಾನಕ್ಕೆ ಭಾರತದಲ್ಲಿ ಅವಕಾಶ ಕೊಡುವ ಬಗ್ಗೆ ಗೊಂದಲ ಇದೆ.

ಈ ಕಂಪನಿಯು ‘5ಜಿ’ ಮೂಲಕ ಬೇಹುಗಾರಿಕೆ ನಡೆಸಬಹುದು ಎಂಬ ಅನುಮಾನವನ್ನು ಅಮೆರಿಕ ವ್ಯಕ್ತಪಡಿಸಿದೆ. ಹುವಾವೆ ಕಂಪನಿಗೆ ಅವಕಾಶ ಕೊಡಬೇಡಿ ಎಂದು ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದೆ. ಪುರಾತನವಾದ ಎರಡು ನಾಗರಿಕತೆಗಳ ನಡುವಣ ಸಂಬಂಧದ ಪುನಶ್ಚೇತನಕ್ಕೆ ಅನೌಪಚಾರಿಕತೆಯನ್ನು ಮೀರಿದ ಸದೃಢ ಮತ್ತು ವಾಸ್ತವಿಕವಾದ ಕಾರ್ಯಯೋಜನೆಯ ನೆಲೆಗಟ್ಟು ಬೇಕು. ಬಂಧಕ್ಕೆ ಗಟ್ಟಿ ಬೆಸುಗೆ ಹಾಕುವ ಪ್ರಯತ್ನದ ನಡುವೆ ಅಮೆರಿಕದ ಒತ್ತಡವಾಗಲೀ, ಪಾಕಿಸ್ತಾನದ ಬಗ್ಗೆ ಚೀನಾಕ್ಕೆ ಇರುವ ಒಲವಾಗಲೀ ಅಡ್ಡಗಾಲು ಆಗಬಾರದು. ಜತೆಗೆ, ಭಯೋತ್ಪಾದನೆಯೂ ಸೇರಿದಂತೆ ಭಾರತಕ್ಕೆ ತಕರಾರು ಇರುವ ಹಲವು ವಿಚಾರಗಳಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ಚೀನಾ ಸದಾ ನಿಂತಿದೆ. ಇದು ಸರಿ ಅಲ್ಲ ಎಂಬುದನ್ನು ಚೀನಾಕ್ಕೆ ಹೇಳುವ ನೇರವಂತಿಕೆಯನ್ನು ಭಾರತ ತೋರಬೇಕು. ಇಲ್ಲದೇ ಹೋದರೆ ಇಂತಹ ಅನೌಪಚಾರಿಕ ಸಭೆಗಳಿಗೆ ಹೆಚ್ಚಿನ ಮಹತ್ವ ಉಳಿಯುವುದಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು