ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರಾಷ್ಟ್ರಮಂದಿರ ಹೇಳಿಕೆ; ಮುಖ್ಯಮಂತ್ರಿಯಿಂದ ಸಲ್ಲದ ಮಾತು

Last Updated 14 ಜೂನ್ 2022, 6:09 IST
ಅಕ್ಷರ ಗಾತ್ರ

ಭಾರತಕ್ಕೆ ಒಂದು ರಾಷ್ಟ್ರಧ್ವಜ ಇದೆ. ಹಾಗೆಯೇ, ರಾಷ್ಟ್ರಲಾಂಛನ ಇದೆ. ರಾಷ್ಟ್ರವನ್ನು ಹೆಮ್ಮೆಯಿಂದ ಪ್ರತಿನಿಧಿಸುವ ರಾಷ್ಟ್ರಪಕ್ಷಿ, ರಾಷ್ಟ್ರಪ್ರಾಣಿ ಕೂಡ ನಮಗೆ ಇವೆ. ಈಗ ಈ ಪಟ್ಟಿಗೆ ಇನ್ನೊಂದನ್ನು ಸೇರಿಸಬೇಕು ಎಂಬ ಆಗ್ರಹ ಬಂದಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯ ರಾಮ ಮಂದಿರವು ರಾಷ್ಟ್ರ ಮಂದಿರವಾಗಲಿದೆ ಎಂದು ಈಚೆಗೆ ಘೋಷಿಸಿದರು. ರಾಮ ಮಂದಿರದ ಗರ್ಭಗುಡಿಯ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಅವರು ಈ ಮಾತು ಆಡಿದ್ದಾರೆ. ದೀರ್ಘ ಅವಧಿಗೆ ನಡೆದ ಕಾನೂನು ಸಮರದ ನಂತರದಲ್ಲಿ ಸುಪ್ರೀಂ ಕೋರ್ಟ್‌ ಈ ಜಮೀನನ್ನು ಹಿಂದೂಗಳಿಗೆ ನೀಡಿದೆ. ಅಲ್ಲಿ ಈಗ ರಾಮ ಮಂದಿರ ನಿರ್ಮಾಣ ಆಗುತ್ತಿದೆ.

ಈ ಜಮೀನನ್ನು ಹಿಂದೂಗಳಿಗೆ ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಇತರ ಸಂಘಟನೆಗಳು ಬಹುಕಾಲದಿಂದ ಒತ್ತಾಯಿಸುತ್ತ ಬಂದಿದ್ದವು. ಸುಪ್ರೀಂ ಕೋರ್ಟ್ ತೀರ್ಪಿನ ನಂತರದಲ್ಲಿ ಈ ಜಮೀನಿಗೆ ಸಂಬಂಧಿಸಿದ ರಾಜಕೀಯ ಹಾಗೂ ಕಾನೂನು ಸಮರ ಪೂರ್ಣಗೊಂಡಂತೆ ಎಂದು ಭಾವಿಸಬೇಕಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಈ ಜಮೀನಿಗಾಗಿ ನಡೆದ ಅಭಿಯಾನವು ಬೇರೆ ಯಾವ ವಿಷಯಗಳಿಗೂ ಸಾಟಿ ಇಲ್ಲದಂತೆ ಸಮಾಜವನ್ನು ಧ್ರುವೀಕರಿಸಿದೆ. ಆದಿತ್ಯನಾಥ ಅವರ ಹೇಳಿಕೆಯು ಈ ಜಮೀನು, ಮಂದಿರಕ್ಕಾಗಿ ನಡೆದ ಅಭಿಯಾನವು ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸುತ್ತಿದೆ.

ಧರ್ಮನಿರಪೇಕ್ಷ ಸರ್ಕಾರವೊಂದರ ಮುಖ್ಯಸ್ಥರು ಪಾಲಿಸಬೇಕಿದ್ದ ನಿಯಮಗಳನ್ನು ಮೀರಿ ಪ್ರಧಾನಿ ನರೇಂದ್ರ ಮೋದಿ ಅವರು 2020ರಲ್ಲಿ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದರು. ಮೋದಿ ಅವರು ಪ್ರಧಾನಿಯಾಗಿ, ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹೋಮ ನಡೆಸಿದ್ದರು. ಇದು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿತ್ತು. ಮೋದಿ ಅವರು ಪ್ರಧಾನಿಯಾಗಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿತ್ತು. ಈಗ ಆದಿತ್ಯನಾಥ ಅವರೂ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾದ ಕೆಲಸ ಮಾಡಿದ್ದಾರೆ. ಯುಕ್ತವಲ್ಲದುದನ್ನು ಅವರು ಮಾತನಾಡಿರುವುದಷ್ಟೇ ಅಲ್ಲ.

ದೇವಸ್ಥಾನದ ಬಗ್ಗೆ ಈ ರೀತಿ ಮಾತನಾಡುವ ಮೂಲಕ ತಮ್ಮ ತಿಳಿವಳಿಕೆ ಕೊರತೆಯನ್ನೂ ಅವರು ತೋರಿಸಿದ್ದಾರೆ. ರಾಮ ಮಂದಿರವು ರಾಷ್ಟ್ರದ ಮಂದಿರ ಎಂದು ಹೇಳುವ ಅಧಿಕಾರ ಆದಿತ್ಯನಾಥ ಅವರಿಗೆ ಇಲ್ಲ. ರಾಷ್ಟ್ರವನ್ನು ಪ್ರತಿನಿಧಿಸುವ ಎಲ್ಲ ಲಾಂಛನಗಳನ್ನು ನಿರ್ದಿಷ್ಟ ಪ್ರಕ್ರಿಯೆ ಮೂಲಕ ಅಂತಿಮಗೊಳಿಸಲಾಗಿದೆ. ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಯಾವುದಾಗಿರಬೇಕು ಎಂಬುದನ್ನು ಸಂವಿಧಾನ ರಚನಾ ಸಭೆ ತೀರ್ಮಾನಿಸಿದೆ. ಕೆಲವು ಮಾನದಂಡಗಳಿಗೆ ಅನುಗುಣವಾಗಿ ಇರುವುದನ್ನು ಮಾತ್ರ ರಾಷ್ಟ್ರದ ಲಾಂಭನಗಳಾಗಿ ಸ್ವೀಕರಿಸಲಾಗುತ್ತದೆ. ಅವುಗಳನ್ನು ಕೇಂದ್ರ ಸರ್ಕಾರವು ಅಧಿಸೂಚನೆಯಲ್ಲಿ ಪ್ರಕಟಿಸಬೇಕಾಗುತ್ತದೆ. ಇಂತಹ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳಲು ಆದಿತ್ಯನಾಥ ಅವರಿಗೆ ಯಾವುದೇ ಅಧಿಕಾರ ಇಲ್ಲ.

ವಾಸ್ತವದಲ್ಲಿ, ಈ ಸಂಬಂಧ ಯಾರು ತೀರ್ಮಾನ ಕೈಗೊಳ್ಳಬೇಕು ಎಂಬುದು ಚರ್ಚೆಯ ವಿಚಾರವೇ ಅಲ್ಲ. ಧರ್ಮನಿರಪೇಕ್ಷ ದೇಶದಲ್ಲಿ ರಾಷ್ಟ್ರ ಮಂದಿರ ಇರಲು ಅವಕಾಶವಿಲ್ಲ. ರಾಷ್ಟ್ರ ಮಂದಿರವನ್ನು ಹೊಂದುವ ಮೂಲಕ ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ ಎಂದು ಹೇಳಲು ಯೋಗಿ ಆದಿತ್ಯನಾಥ ಯತ್ನಿಸುತ್ತಿದ್ದಾರೆಯೇ? ಹಿಂದೂ ರಾಷ್ಟ್ರದಲ್ಲಿಯೂ ಯಾವುದೋ ಒಂದು ಮಂದಿರವನ್ನು ರಾಷ್ಟ್ರ ಮಂದಿರ ಎಂದು ಹೇಳಲು ಆಗುವುದಿಲ್ಲ. ಅಸಂಖ್ಯ ದೇವರು ಇರುವ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳು ಇರುತ್ತವೆ. ಇತರರಿಗಿಂತ ದೊಡ್ಡ ದೇವರು, ದೊಡ್ಡ ದೇವಸ್ಥಾನ ಎಂಬುದು ಇರುವುದಿಲ್ಲ. ಪ್ರತಿ ವ್ಯಕ್ತಿಗೂ ತಾನು ನಂಬುವ ದೇವರು, ತನ್ನ ಇಷ್ಟದ ದೇವಸ್ಥಾನ ದೊಡ್ಡದು.

ಹಿಂದೂ ಧರ್ಮವು ತನ್ನ ಅನುಯಾಯಿಗಳಲ್ಲಿ, ಈ ದೇಶದಲ್ಲಿ ಶತಮಾನಗಳಿಂದ ಉಳಿದು ಬಂದಿರುವುದು ಈ ಮೂಲಕ. ಅಯೋಧ್ಯೆಯ ರಾಮ ಮಂದಿರವನ್ನು ರಾಷ್ಟ್ರಮಂದಿರ ಎಂದು ಹೇಳುವುದು ‘ಒಂದು ದೇಶ, ಒಂದು ದೇವಸ್ಥಾನ’ ಎಂದು ಘೋಷಿಸುವುದಕ್ಕೆ ಸನಿಹದ ಮಾತು. ಭಾರತವು ದೇವಸ್ಥಾನಗಳಲ್ಲಿ ಎಷ್ಟರಮಟ್ಟಿಗೆ ಅಸ್ಮಿತೆಯನ್ನು ಹೊಂದಿದೆಯೋ, ಚರ್ಚು, ಮಸೀದಿ ಹಾಗೂ ಇತರ ಧಾರ್ಮಿಕ ಸ್ಥಳಗಳಲ್ಲಿಯೂ ಅಷ್ಟೇ ಪ್ರಮಾಣದಲ್ಲಿ ಅಸ್ಮಿತೆಯನ್ನು ಹೊಂದಿದೆ. ಆದರೆ ಈ ಯಾವುವೂ ರಾಷ್ಟ್ರದ ಲಾಂಛನ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT