ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭೂಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿ– ರಾಜ್ಯ ಸರ್ಕಾರದ ನಡೆ ಅಪಾಯಕಾರಿ

Last Updated 18 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಸರ್ಕಾರಿ ಜಮೀನುಗಳ ಕಬಳಿಕೆಯನ್ನು ತಡೆಯಲು ಜಾರಿಗೊಳಿಸಿದ್ದ ‘ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ-2011’ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಉದ್ದೇಶದಿಂದ ವಿಧಾನಭೆಯಲ್ಲಿ ತಿದ್ದುಪಡಿ ಮಸೂದೆಯೊಂದನ್ನು ಮಂಡಿಸಿದೆ. ಬೆಂಗಳೂರು ಮತ್ತು ಸುತ್ತಮುತ್ತ ಸರ್ಕಾರಿ ಜಮೀನುಭಾರಿ ಪ್ರಮಾಣದಲ್ಲಿ ಒತ್ತುವರಿ ಆಗಿರುವುದನ್ನು ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿಯು ದಶಕದ ಹಿಂದೆಯೇ ಗುರುತಿಸಿತ್ತು. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಆಗಿನ ದರದಲ್ಲಿ ₹ 40,000 ಕೋಟಿ ಮೌಲ್ಯದ ಸರ್ಕಾರಿ ಜಮೀನು ಕಬಳಿಕೆಯಾಗಿದೆ ಎಂದು ಸಮಿತಿ ವರದಿ ನೀಡಿತ್ತು. ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಅಧ್ಯಕ್ಷತೆಯಲ್ಲಿ ನೇಮಕಗೊಂಡಿದ್ದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯು ರಾಜ್ಯದ ಉದ್ದಗಲಕ್ಕೆ ಲಕ್ಷಾಂತರ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಿತ್ತು. ಜಂಟಿ ಸದನ ಸಮಿತಿ ಮತ್ತು ನಂತರದ ಕಾರ್ಯಪಡೆಗಳ ಶಿಫಾರಸಿನಂತೆ ಭೂಕಬಳಿಕೆ ನಿಷೇಧ ಕಾಯ್ದೆಯನ್ನು ರೂಪಿಸಿ, ಜಾರಿಗೊಳಿಸಲಾಗಿತ್ತು. ರೈತರಿಗೆ ಕಿರುಕುಳವಾಗುತ್ತಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಈ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಹೊರಟಿದೆ. ಬಿಬಿಎಂಪಿ ಹಾಗೂ ರಾಜ್ಯದ ಎಲ್ಲ ನಗರಪಾಲಿಕೆಗಳ ವ್ಯಾಪ್ತಿಯ ಹೊರಗಿನ ಪ್ರದೇಶಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾವ ತಿದ್ದುಪಡಿ ಮಸೂದೆಯಲ್ಲಿದೆ. ಕಾಯ್ದೆಯ ವ್ಯಾಪ್ತಿಯಿಂದ ಕೈಬಿಡುವ ಪ್ರದೇಶಗಳಲ್ಲಿನ ಭೂಕಬಳಿಕೆಗೆ ಸಂಬಂಧಿಸಿದಂತೆ ‘ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ದಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸುವ ಅಂಶವೂ ಮಸೂದೆಯಲ್ಲಿ ಸೇರಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ರೈತರಿಗೆ ರಕ್ಷಣೆ ನೀಡುವ ನೆಪದಲ್ಲಿ ತರುತ್ತಿರುವ ಈ ತಿದ್ದುಪಡಿಯು ರಾಜ್ಯದಲ್ಲಿ ಭೂಕಬಳಿಕೆಗೆ ಪ್ರಚೋದನೆ ನೀಡುವ, ಅರಣ್ಯ ಮತ್ತು ಪರಿಸರಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ.

‘ಭೂ ಮಾಫಿಯಾವು ನಗರಗಳ ಪರಿಧಿಯನ್ನು ದಾಟಿ ಹೋಗಿ ದಶಕಗಳೇ ಕಳೆದಿವೆ. ನಗರಗಳಿಗೆ ಹೊಂದಿಕೊಂಡಿರುವ ಸಣ್ಣ ಪಟ್ಟಣಗಳು, ಗ್ರಾಮ ಕೇಂದ್ರಗಳಲ್ಲೂ ಭೂ ಕಬಳಿಕೆ ಬೃಹತ್‌ ಪ್ರಮಾಣದಲ್ಲಿ ನಡೆಯುತ್ತಿದೆ’ ಎಂಬುದು ಬಾಲಸುಬ್ರಮಣಿಯನ್‌ ಅವರ ಅಭಿಪ್ರಾಯ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ಕಬಳಿಸು
ವವರನ್ನು ಕಾನೂನಿನ ವ್ಯಾಪ್ತಿಗೆ ತಂದು ಶಿಕ್ಷೆಗೆ ಗುರಿಪಡಿಸುವುದು ಈ ಕಾಯ್ದೆಯ ಪ್ರಮುಖ ಆಶಯವಾಗಿತ್ತು. ಆದರೆ, ಅಂತಹ ಭೂಗಳ್ಳರ ವಿರುದ್ಧ ಈ ಕಾಯ್ದೆಯನ್ನು ಪ್ರಯೋಗಿಸಿದ ಉದಾಹರಣೆಯೇ ಇಲ್ಲ. ಅರಣ್ಯ ಪ್ರದೇಶವೂ ಸೇರಿದಂತೆ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರನ್ನೇ ಗುರಿಯಾಗಿಸಿ ಈ ಕಾಯ್ದೆಯನ್ನು ಬಳಕೆ ಮಾಡಿರುವುದೇ ಹೆಚ್ಚು. ಕಾಯ್ದೆಯ ಅನುಷ್ಠಾನದಲ್ಲಿ ಅಧಿಕಾರಿಗಳಿಂದ ಆಗಿರುವ ಲೋಪವನ್ನು ಸರಿಪಡಿಸುವ ಬದಲಿಗೆ ಕಾಯ್ದೆಯನ್ನೇ ದುರ್ಬಲಗೊಳಿಸುವ ಕೆಲಸ ಮಾಡಲು ಸರ್ಕಾರ ಹೊರಟಿದೆ. ರೈತರು ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಮೂರು ಎಕರೆವರೆಗಿನ ಒತ್ತುವರಿಯನ್ನು ತೆರವುಗೊಳಿಸದಿರುವ ನಿರ್ಧಾರವನ್ನು ರಾಜ್ಯ ಸರ್ಕಾರವು 2015ರಲ್ಲೇ ಕೈಗೊಂಡಿತ್ತು. ಅಂತಹ ರೈತರ ವಿರುದ್ಧ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವುದನ್ನು ತಡೆಯುವ ಅವಕಾಶ ಸರ್ಕಾರದ ಕೈಯಲ್ಲೇ ಇತ್ತು. ಈಗಲೂ, ಅಂತಹ ರೈತರ ವಿರುದ್ಧದ ಪ್ರಕರಣಗಳನ್ನಷ್ಟೇ ಕೈಬಿಡುವ ತೀರ್ಮಾನ ಮಾಡುವುದಕ್ಕೂ ಅವಕಾಶ ಇದೆ. ಸರ್ಕಾರಿ ಜಮೀನುಗಳ ಕಬಳಿಕೆಯು ಬಿಬಿಎಂಪಿ ಮತ್ತು ಇತರ ನಗರಪಾಲಿಕೆಗಳ ವ್ಯಾಪ್ತಿಗೆ ಸೀಮಿತವಾಗಿ ಉಳಿದಿಲ್ಲ. ಈ ಪ್ರದೇಶಗಳ ಆಚೆಗೂ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಹೆಚ್ಚಿದಂತೆ ಜಮೀನಿನ ದರವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂತಹ ಎಲ್ಲ ಪ್ರದೇಶಗಳಲ್ಲೂ ರಿಯಲ್‌ ಎಸ್ಟೇಟ್‌ ಮಾಫಿಯಾದ ಕೈಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸುತ್ತಿರುವುದು ರಹಸ್ಯವೇನಲ್ಲ. ರಾಜ್ಯದ ವಿವಿಧೆಡೆ ನಡೆದಿರುವ ಸರ್ಕಾರಿ ಜಮೀನುಗಳ ಒತ್ತುವರಿಗೆ ಸಂಬಂಧಿಸಿದಂತೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಸಂಗ್ರಹಿಸಿರುವ ಅಂಕಿಅಂಶಗಳೇ ಇದನ್ನು ರುಜುವಾತುಪಡಿಸುತ್ತವೆ.

ಗ್ರಾಮೀಣ ಪ್ರದೇಶದಲ್ಲಿ ಬಗರ್‌ಹುಕುಂ ಸಾಗುವಳಿಯ ಪ್ರಮಾಣ ಹೆಚ್ಚುತ್ತಲೇ ಇದೆ. ಭೂಕಬಳಿಕೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಅರಣ್ಯ ಜಮೀನಿನ ಒತ್ತುವರಿಗೆ ತುಸು ಕಡಿವಾಣ ಬಿದ್ದಿತ್ತು. ಆದರೂ, ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆಯಷ್ಟು ಅರಣ್ಯ ಜಮೀನು ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಈಗ ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವ ತೀರ್ಮಾನದ ಬೆನ್ನಲ್ಲೇ ಭೂಕಬಳಿಕೆ ನಿಷೇಧ ಕಾಯ್ದೆಯ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಹೊರಗಿಡುವುದು ಅರಣ್ಯ ಪ್ರದೇಶದ ಒತ್ತುವರಿಗೆ ಎಡೆಮಾಡುವ ಸಂದೇಹವೂ ಇದೆ. ‘ಈ ತಿದ್ದುಪಡಿ ಪ್ರಸ್ತಾವವು, ಸರ್ಕಾರ ಭೂಮಾಫಿಯಾದ ನಿಯಂತ್ರಣಕ್ಕೆ ಸಿಲುಕಿದೆ ಎಂಬುದನ್ನು ತೋರಿಸುತ್ತಿದೆ. ಕೆಲವು ವರ್ಷಗಳಿಂದ ಈಚೆಗೆ ₹ 2 ಲಕ್ಷ ಕೋಟಿ ಮೌಲ್ಯದ ಭೂಕಬಳಿಕೆಯನ್ನು ಸಕ್ರಮಗೊಳಿಸಲಾಗಿದೆ. ಈಗಿನ ತಿದ್ದುಪಡಿಯು ಭೂಗಳ್ಳರ ಪಾಲಿಗೆ ವರದಾನ ಆಗಲಿದೆ’ ಎಂದು ಶಾಸಕ ಎ.ಟಿ. ರಾಮಸ್ವಾಮಿ ವಿಧಾನಸಭೆಯ ಕಲಾಪದಲ್ಲೇ ಹೇಳಿದ್ದಾರೆ. ಈ ತಿದ್ದುಪಡಿಯ ಕೆಟ್ಟ ಪರಿಣಾಮ ರಾಜ್ಯದ ಪಶ್ಚಿಮಘಟ್ಟಗಳ ಮೇಲೂ ಆಗಲಿದೆ. ಅನಧಿಕೃತ ಸಾಗುವಳಿ ಮತ್ತು ಇತರ ಸ್ವರೂಪದ ಒತ್ತುವರಿಯಿಂದಾಗಿ ಪಶ್ಚಿಮಘಟ್ಟ ಪ್ರದೇಶ ತೊಂದರೆಯಲ್ಲಿದೆ. ಈಗ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿಗೆ ಮುಕ್ತ ಅವಕಾಶ ಕಲ್ಪಿಸುವಂತಹ ತೀರ್ಮಾನವು ರಾಜ್ಯದ ಅರಣ್ಯ ಪ್ರದೇಶವು ವ್ಯಾಪಕವಾಗಿ ಅತಿಕ್ರಮಣಕ್ಕೆ ಒಳಗಾಗಲು ಕಾರಣವಾಗಬಹುದು. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲೇ ಪರಿಸರಕ್ಕೆ ಮಾರಕವಾದ ಇಂತಹ ನಿಲುವನ್ನು ರಾಜ್ಯ ಸರ್ಕಾರ ತಾಳುತ್ತಿರುವುದು ದುರದೃಷ್ಟಕರ. ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟು ಕೊಂಡು ಜನರನ್ನು ಓಲೈಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬ ಅನುಮಾನವೂ ಇದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳೂ ಜವಾಬ್ದಾರಿಯಿಂದ ವರ್ತಿಸಬೇಕು. ಕಾಯ್ದೆ ತಿದ್ದುಪಡಿಯ ಸಾಧಕ– ಬಾಧಕಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ ಬಳಿಕವೇ ತೀರ್ಮಾನಕ್ಕೆ ಬರಬೇಕು. ಇಲ್ಲವಾದರೆ ಮುಂದಿನ ಪೀಳಿಗೆಯು ನಮ್ಮನ್ನು ಶಪಿಸುವಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT