ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಭಾರತದ ಜತೆ ಬಾಂಗ್ಲಾ ಮುನಿಸು: ಶಮನಕ್ಕೆ ಬೇಕು ತುರ್ತು ಕ್ರಮ

Last Updated 27 ಆಗಸ್ಟ್ 2020, 4:34 IST
ಅಕ್ಷರ ಗಾತ್ರ

ಭಾರತದ ನೆರೆಯ ದೇಶಗಳಿಗೆ ದೊಡ್ಡ ಮೊತ್ತದ ಆರ್ಥಿಕ ನೆರವು, ಸಾಲ ಮತ್ತು ಇತರ ಆಮಿಷಗಳ ಮೂಲಕ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಚೀನಾ ಕೆಲ ವರ್ಷಗಳಿಂದ ಮಾಡುತ್ತಿದೆ. ಭಾರತದ ಮೇಲೆ ಕಣ್ಣಿಟ್ಟೇ ಇರಬೇಕು ಎಂಬ ಚೀನಾದ ಕಾರ್ಯತಂತ್ರದ ಭಾಗ ಇದು. ಈ ಹುನ್ನಾರದಲ್ಲಿ ಚೀನಾಕ್ಕೆ ಗಮನಾರ್ಹ ಪ್ರಮಾಣದ ಯಶಸ್ಸು ಲಭಿಸಿದೆ. ಹಂಬನ್‌ತೋಟ ಬಂದರನ್ನು 99 ವರ್ಷಗಳಿಗೆ ಚೀನಾಕ್ಕೆ ಶ್ರೀಲಂಕಾ ಗುತ್ತಿಗೆ ನೀಡಿದ್ದು ಇದರ ಪರಿಣಾಮ. ಇದೊಂದು ತಪ್ಪು ನಿರ್ಧಾರ, ‘ಭಾರತ ಮೊದಲು’ ಎಂಬುದೇ ತನ್ನ ನೀತಿ ಎಂದು ಶ್ರೀಲಂಕಾ ವಿದೇಶಾಂಗ ಸಚಿವರು ಹೇಳಿರುವುದು ಭಾರತದ ಪಾಲಿಗೆ ಒಳ್ಳೆಯ ಸುದ್ದಿ. ಸ್ನೇಹದಿಂದಲೇ ಇದ್ದ ನೇಪಾಳ, ಭಾರತದ ಭೂಭಾಗವನ್ನು ಸೇರಿಸಿ ಹೊಸ ನಕ್ಷೆ ತಯಾರಿಸಿದ್ದರ ಹಿಂದೆಯೂ ಚೀನಾದ ಕುಮ್ಮಕ್ಕು ಇದೆ ಎನ್ನಲಾಗುತ್ತಿದೆ. ಇದೀಗ, ತೀಸ್ತಾ ನದಿ ನೀರು ನಿರ್ವಹಣೆಗೆ ಸಂಬಂಧಿಸಿ ಬಾಂಗ್ಲಾ ದೇಶವು ಚೀನಾದ ಜತೆಗೆ ಮಾತುಕತೆ ನಡೆಸಿದೆ. ಇದು ಸುಮಾರು ₹7,500 ಕೋಟಿ ಮೊತ್ತದ ಯೋಜನೆ ಎನ್ನಲಾಗಿದೆ. ತೀಸ್ತಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಭಾರತ–ಬಾಂಗ್ಲಾ ನಡುವೆ ವಿವಾದ ಇದೆ. ಈ ವಿವಾದವನ್ನು ಶಾಶ್ವತವಾಗಿ ಪರಿಹರಿಸುವ ಒಪ್ಪಂದಕ್ಕೆ 2011 ಮತ್ತು 2014ರಲ್ಲಿ ಸಹಿ ಆಗಬೇಕಿತ್ತು. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರೋಧದಿಂದಾಗಿ ಇದು ಸಾಧ್ಯವಾಗಿಲ್ಲ. ತೀಸ್ತಾ ವಿವಾದವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಆರೋಪವು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ವಿರುದ್ಧವೂ ಇದೆ. ತೀಸ್ತಾ ನದಿಯು ಎರಡೂ ದೇಶಗಳ ಆಂತರಿಕ ರಾಜಕಾರಣದಲ್ಲಿ ಮುಖ್ಯವಾಗಿದೆ. ಈ ಅಂಶವನ್ನೇ ಮುಂದಿಟ್ಟುಕೊಂಡು ಬಾಂಗ್ಲಾವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ ಬಲೆ ಹೆಣೆದಿದೆ. ಭಾರತದ ಗಡಿಗೆ ಹೊಂದಿಕೊಂಡಿರುವ ಸಿಲ್‌ಹಟ್‌ ವಿಮಾನ ನಿಲ್ದಾಣದಲ್ಲಿನ ಮೂರನೇ ಟರ್ಮಿನಲ್‌ ನಿರ್ಮಾಣದ ಗುತ್ತಿಗೆಯನ್ನೂ ಚೀನಾ ಪಡೆದುಕೊಂಡಿದೆ. ವಾಸ್ತವ ನಿಯಂತ್ರಣ ರೇಖೆಯ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಯತ್ನಿಸುತ್ತಿರುವ ಈ ಸನ್ನಿವೇಶದಲ್ಲಿ ಬಾಂಗ್ಲಾ ದೇಶವು ಚೀನಾಕ್ಕೆ ಹತ್ತಿರವಾಗುತ್ತಿರುವುದನ್ನು ಭಾರತವು ಬಹಳ ಗಂಭೀರವಾಗಿ ಪರಿಗಣಿಸಬೇಕು.

ಬಾಂಗ್ಲಾದ ಜತೆಗೆ ಭಾರತವು ಈವರೆಗೆ ಮಮತೆಯ ಸಂಬಂಧ ಹೊಂದಿತ್ತು. ಆ ದೇಶದ ಅಗತ್ಯಗಳಿಗೆ ಭಾರತದ ಬಾಹುಗಳು ಸದಾ ತೆರೆದುಕೊಂಡೇ ಇದ್ದವು. ಬಾಂಗ್ಲಾ ದೇಶವು ಭಾರತದ ಬಗ್ಗೆ ಹೊಂದಿದ್ದ ಆತ್ಮೀಯತೆಯಲ್ಲಿಯೂ ಕಪಟ ಇರಲಿಲ್ಲ. ಭಾರತ ವಿರೋಧಿ ಉಗ್ರರ ತರಬೇತಿ ಶಿಬಿರಗಳು ತಲೆ ಎತ್ತಲು ಆ ದೇಶ ಅವಕಾಶ ಕೊಟ್ಟಿರಲಿಲ್ಲ. ಬಾಂಗ್ಲಾದಲ್ಲಿ ತಲೆಮರೆಸಿಕೊಂಡಿದ್ದ ಉಲ್ಫಾ ಉಗ್ರರನ್ನು ಹಿಡಿದು ಭಾರತಕ್ಕೆ ಗಡಿಪಾರು ಮಾಡಿತ್ತು. ಚೀನಾದ ಮಹತ್ವಾಕಾಂಕ್ಷೆಯ ‘ಒಂದು ವಲಯ, ಒಂದು ರಸ್ತೆ ಯೋಜನೆ’ಯ ಭಾಗವಾಗಿದ್ದರೂ ಭಾರತದ ಭದ್ರತೆಗೆ ಅಪಾಯ ಒಡ್ಡುವಂತಹ ಯಾವುದೇ ಯೋಜನೆಗೆ ಅವಕಾಶ ಕೊಟ್ಟಿರಲಿಲ್ಲ. ಇತ್ತೀಚೆಗೆ, ಬಾಂಗ್ಲಾ ಜತೆಗಿನ ಸಂಬಂಧದ ವಿಚಾರದಲ್ಲಿ ಭಾರತವು ಉದಾಸೀನದಿಂದ ವರ್ತಿಸಿತೇ ಎಂಬ ಪ್ರಶ್ನೆ ಇದೆ. ಜತೆಗೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಸಂಬಂಧಕ್ಕೆ ಹಾನಿ ಮಾಡಿವೆ ಎಂಬ ವಿಶ್ಲೇಷಣೆಯೂ ಇದೆ. ಅಸ್ಸಾಂನಲ್ಲಿರುವ ಬಾಂಗ್ಲಾದ ಅಕ್ರಮ ವಲಸಿಗರು ಸ್ಥಳೀಯರ ಉದ್ಯೋಗ ಕಸಿದುಕೊಳ್ಳುವ ಗೆದ್ದಲುಗಳು ಎಂದು ಬಿಜೆಪಿ ಅಧ್ಯಕ್ಷರಾಗಿದ್ದಅಮಿತ್‌ ಶಾ ಅವರು 2018ರಲ್ಲಿ ಹೇಳಿದ್ದರು. 2019ರ ಚುನಾವಣಾ ಪ್ರಚಾರದಲ್ಲಿಯೂ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಇದನ್ನೇ ಪುನರುಚ್ಚರಿಸಿದ್ದರು. ಎನ್‌ಆರ್‌ಸಿ, ಸಿಎಎ ಸಂಬಂಧ ಬಾಂಗ್ಲಾದ ಕಳವಳಗಳಿಗೆ ಸ್ಪಂದಿಸುವ ಕೆಲಸವೂ ಆಗಲಿಲ್ಲ. ಇದು ಭಾರತದ ಬಗ್ಗೆ ಬಾಂಗ್ಲಾ ಹೊಂದಿದ್ದ ಭಾವನೆಗಳಿಗೆ ಗಾಸಿ ಉಂಟು ಮಾಡಿರಬಹುದು. ಆಂತರಿಕ ರಾಜಕಾರಣವು ವಿದೇಶಾಂಗ ನೀತಿಯನ್ನು ನಿರೂಪಿಸತೊಡಗಿದರೆ ಅದರ ಪರಿಣಾಮವು ಅನಿರೀಕ್ಷಿತ ತಿರುವು ಪಡೆದುಕೊಳ್ಳಬಹುದು ಎಂಬುದರ ಅರಿವು ಸರ್ಕಾರಕ್ಕೆ ಇರಬೇಕು. ನೆರೆಯ ದೇಶಗಳ ಜತೆಗೆ ಸೌಹಾರ್ದದಿಂದ ಇರುವುದು ದೇಶದ ಭದ್ರತೆಗೆ ಅಗತ್ಯ ಮತ್ತು ಅಭಿವೃದ್ಧಿಗೆ ಪೂರಕ. ಅದರಲ್ಲೂ, ತನ್ನ ಪ್ರಭಾವ ವಲಯವನ್ನು ಚೀನಾ ವೃದ್ಧಿಸಿಕೊಳ್ಳಲು ಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಭಾರತವು ನೆರೆ ದೇಶಗಳನ್ನು ಸಾಧ್ಯವಾದಷ್ಟು ಹತ್ತಿರ ಇರಿಸಿಕೊಳ್ಳಬೇಕು. ನೆರೆ ದೇಶಗಳ ವಿಚಾರದಲ್ಲಿ ನಿರ್ಲಕ್ಷ್ಯ ಖಂಡಿತಾ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT