ಕೋಮುಭಾವನೆ ಕೆರಳಿಸುವ ಮಾತಿಗೆ ಬಿಜೆಪಿ ಸೀಮಿತವಾಗಿರುವುದೇಕೆ?

ಶುಕ್ರವಾರ, ಏಪ್ರಿಲ್ 19, 2019
22 °C

ಕೋಮುಭಾವನೆ ಕೆರಳಿಸುವ ಮಾತಿಗೆ ಬಿಜೆಪಿ ಸೀಮಿತವಾಗಿರುವುದೇಕೆ?

Published:
Updated:
Prajavani

ಬಿಜೆಪಿಯ ತಾರಾ ಪ್ರಚಾರಕರಾಗಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ತನಕ ಆಡಿರುವ ಮಾತುಗಳಲ್ಲಿ ಹೆಚ್ಚಿನವು ಕೋಮುಭಾವನೆಗಳನ್ನು ಕೆರಳಿಸುವಂಥವು. ತಮ್ಮ ಆಚಾರಗೆಟ್ಟ ನಾಲಿಗೆಯ ಮೂಲಕವೇ ಗುರುತಿಸಿಕೊಂಡ ಕೆಲವರಷ್ಟೇ ಈ ಬಗೆಯ ಮಾತುಗಳನ್ನು ಆಡುತ್ತಿದ್ದರು. ಆದರೆ ಈಗ ಇಂಥ ಮಾತುಗಳನ್ನು ಆಡುವವರಿಗೆ ಪ್ರಧಾನಿಯೇ ನೇತೃತ್ವ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದನ್ನು ಟೀಕಿಸುವುದಕ್ಕೆ ಅವರು ಆರಿಸಿಕೊಂಡ ಮಾತುಗಳೇ ಇದಕ್ಕೆ ಉದಾಹರಣೆ.

‘ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಿರುವ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ’, ‘ಹಿಂದೂಗಳನ್ನು ಎದುರಿಸುವ ಶಕ್ತಿ ಇಲ್ಲ’ ಎಂಬ ಕೋಮುವಾದಿ ಮಾತುಗಳು ಪ್ರಧಾನಿಯ ಬಾಯಿಂದ ಹೊರಬರುವುದಕ್ಕಿಂತ ದೊಡ್ಡ ದುರಂತ ಮತ್ತೊಂದಿದೆಯೇ? ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ಸ್ಥಾನದಲ್ಲಿ ಕುಳಿತ ಯಾರೂ ದೇಶವನ್ನು ಹೀಗೆ ಕೋಮು ಆಧಾರಿತವಾಗಿ ವಿಭಜಿಸಿ ಮಾತನಾಡಿರಲಿಲ್ಲ. ಶಾ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ‘ಹಿಂದೂ, ಬೌದ್ಧ ಮತ್ತು ಸಿಖ್ಖರನ್ನು ಹೊರತುಪಡಿಸಿದ ಎಲ್ಲಾ ನುಸುಳುಕೋರರನ್ನು ಹೊರದಬ್ಬುತ್ತೇವೆ’ ಎಂಬ ಅವರ ಮಾತಿನ ಅರ್ಥವೇನು? ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶವ್ಯಾಪಿಯಾಗಿ ವಿಸ್ತರಿಸುವುದೆಂದರೆ ದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ದೇಶಭ್ರಷ್ಟರನ್ನಾಗಿಸುವುದು ಎಂದರ್ಥವೇ? ಮೇನಕಾ ಗಾಂಧಿ ತಮ್ಮ ಕ್ಷೇತ್ರದ ಅಲ್ಪಸಂಖ್ಯಾತ ಮತದಾರರನ್ನು ಉದ್ದೇಶಿಸಿ ‘ನನಗೆ ವೋಟು ಕೊಡದಿದ್ದರೆ ನಿಮ್ಮ ಯಾವ ಕೆಲಸವನ್ನೂ ನಾನು ಮಾಡಿಕೊಡುವುದಿಲ್ಲ’ ಎಂಬ ಅರ್ಥದ ಪರೋಕ್ಷ ಬೆದರಿಕೆ ಒಡ್ಡಿದ್ದಾರೆ.

ಪ್ರಜಾಪ್ರಭುತ್ವವನ್ನೇ ಅಣಕ ಮಾಡುವಂಥ ವರ್ತನೆ ತೋರುವವರಲ್ಲಿ ಬಿಜೆಪಿಯ ನಾಯಕರೇ ಏಕೆ ಹೆಚ್ಚಿದ್ದಾರೆ ಎಂಬ ಪ್ರಶ್ನೆಯೂ ಇಲ್ಲಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370 ಮತ್ತು 35ಎ ವಿಧಿಗಳಿಗೆ ಸಂಬಂಧಿಸಿದಂತೆ ಮಾತನಾಡುವಾಗಲೂ ಅದಕ್ಕೊಂದು ಕೋಮು ಆಯಾಮವನ್ನು ಆರೋಪಿಸದೇ ಮಾತನಾಡುವುದು ಬಿಜೆಪಿಯ ನಾಯಕರಿಗೆ ತಿಳಿದೇ ಇಲ್ಲ. 370ನೇ ವಿಧಿ ಎಂಬುದು ಕಾಶ್ಮೀರ ಸಮಸ್ಯೆಗೆ ಸೀಮಿತವಾದುದಲ್ಲ, ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ವಿಚಾರವೆಂಬುದನ್ನೂ ಮರೆಯಲಾಗುತ್ತದೆ.

ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಿದ್ದಷ್ಟೇ ಅಲ್ಲದೆ, ಪೂರ್ಣ ಅವಧಿಗೆ ಸರ್ಕಾರವನ್ನು ನಡೆಸಿ ಮರುಆಯ್ಕೆ ಬಯಸಿ ಮತದಾರರ ಮುಂದೆ ನಿಂತಿದೆ. ಈ ಹೊತ್ತಿನಲ್ಲಿ ಅದು ತನ್ನ ಐದು ವರ್ಷಗಳ ಸಾಧನೆಯನ್ನು ಮುಂದಿಟ್ಟು ಮತ ಯಾಚಿಸಬೇಕು. ತನ್ನ ಭವಿಷ್ಯದ ಯೋಜನೆಗಳನ್ನು ಜನರ ಮುಂದಿಡಬೇಕು. ಅದರ
ಬದಲಿಗೆ ಕೇವಲ ಕೋಮು ಭಾವನೆಗಳನ್ನು ಕೆರಳಿಸುವ ಮಾತುಗಳಿಗೆ ಅದು ಸೀಮಿತವಾಗಿರುವುದೇಕೆ? ಈ ಪ್ರಶ್ನೆಗೆ ಎರಡು ಉತ್ತರಗಳಿವೆ.

ಮೊದಲನೆಯದು: ಬಿಜೆಪಿ ಐದು ವರ್ಷಗಳಲ್ಲಿ ಹೆಚ್ಚಿನ ಸಾಧನೆಗಳನ್ನೇನೂ ಮಾಡಿಲ್ಲ. ತನ್ನ ನಾಯಕರು ದೊಡ್ಡ ಗಂಟಲಿನಲ್ಲಿ ಘೋಷಿಸುವ ಸಾಧನೆಗಳ ಬಗ್ಗೆ ಆ ಪಕ್ಷಕ್ಕೆ ಯಾವ ಭರವಸೆಯೂ ಇಲ್ಲ.
ಎರಡನೆಯದು: ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿಗೆ ಗೌರವವಿಲ್ಲ. ಈ ನಿಲುವನ್ನು ರಾಜಕೀಯ ಪಕ್ಷವೊಂದು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅದಕ್ಕಾಗಿ ಬಿಜೆಪಿ, ಪರೋಕ್ಷವಾಗಿ ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸುವ ಕೆಲಸ ಮಾಡುತ್ತಿದೆ.

ಸಚಿವ ಸ್ಥಾನದಲ್ಲಿ ಇರುವವರೇ ‘ಸಂವಿಧಾನವನ್ನು ತಿದ್ದುವುದಕ್ಕೇ ನಾವು ಅಧಿಕಾರಕ್ಕೆ ಬಂದಿರುವುದು’ ಎಂಬರ್ಥದ ಮಾತುಗಳನ್ನು ಆಡುವುದು ಈ ತಂತ್ರದ ಭಾಗವೇ. ಈಗ ಮೋದಿ, ಶಾ ಮತ್ತಿತರರು ಮಾಡುತ್ತಿರುವುದೂ ಅದನ್ನೇ. ಭಾರತೀಯ ಸಂವಿಧಾನ ನಮ್ಮ ದೇಶದ ಸಾಂಸ್ಕೃತಿಕ ಬಹುತ್ವವನ್ನು ಗುರುತಿಸಿದೆ. ಬಿಜೆಪಿಯು ಸೈದ್ಧಾಂತಿಕವಾಗಿ ಇದನ್ನು ವಿರೋಧಿಸುತ್ತದೆ. ರಾಷ್ಟ್ರೀಯತೆಗೆ ಸಂಬಂಧಿಸಿ ಏಕ ಧರ್ಮ, ಏಕ ಭಾಷೆ, ಏಕ ರಾಷ್ಟ್ರ ಎಂಬಂಥ ಐರೋಪ್ಯ ಪರಿಕಲ್ಪನೆಯನ್ನು ಬಿಜೆಪಿ ಹೊಂದಿದೆ. ಧರ್ಮಾಧಾರಿತ ರಾಷ್ಟ್ರವನ್ನು ನಿರ್ಮಿಸುವ ಕನಸನ್ನು ಅದರ ಮಾತೃಸಂಸ್ಥೆ ಬಿತ್ತುತ್ತಲೇ ಬಂದಿದೆ.

ಚುನಾವಣೆಗಳ ಸಂದರ್ಭದಲ್ಲಿ ಜನರನ್ನು ಕೋಮುಗಳನ್ನಾಗಿ ವಿಭಜಿಸುವ ತಂತ್ರದ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಆದರೆ ಕಳೆದ ಐದು ವರ್ಷಗಳ ಬಿಜೆಪಿಯ ಆಡಳಿತಾವಧಿಯಲ್ಲಿ ದುರ್ಬಲಗೊಂಡಿರುವ ಸಾಂವಿಧಾನಿಕ ಸಂಸ್ಥೆಗಳಲ್ಲಿ ಚುನಾವಣಾ ಆಯೋಗವೂ ಸೇರಿಕೊಂಡಂತೆ ಕಾಣಿಸುತ್ತದೆ. 2019ರ ಚುನಾವಣೆ ಘೋಷಣೆಯಾದ ದಿನದಿಂದಲೂ ಆಯೋಗದ ವೈಫಲ್ಯ ಮತ್ತೆ ಮತ್ತೆ ಕಾಣಿಸುತ್ತಿದೆ. ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳ ಒತ್ತಡದಿಂದಾಗಿ ಆಗೀಗ ಎಚ್ಚೆತ್ತುಕೊಂಡಂತೆ ಕಂಡರೂ ಕೋಮುವಾದಿ ಚುನಾವಣಾ ಪ್ರಚಾರವನ್ನು ತಡೆಯಲು ಅದಿನ್ನೂ ಸಫಲವಾಗಿಲ್ಲ.

ಬರಹ ಇಷ್ಟವಾಯಿತೆ?

 • 48

  Happy
 • 3

  Amused
 • 1

  Sad
 • 1

  Frustrated
 • 9

  Angry

Comments:

0 comments

Write the first review for this !