ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜನಸಂಖ್ಯೆ ಹೆಚ್ಚಳದ ಸವಾಲು– ರಾಜಕೀಯ ಅಸ್ತ್ರವಾಗಿ ಬಳಕೆ ಬೇಡ

Last Updated 18 ಜುಲೈ 2022, 19:40 IST
ಅಕ್ಷರ ಗಾತ್ರ

ಹೆಚ್ಚಿನ ಜನಸಂಖ್ಯೆಯಿಂದ ದೊರೆಯಬಹುದಾದ ಅನುಕೂಲಗಳನ್ನು, ಆ ಅವಕಾಶಗಳು ಮರೆಯಾಗುವ ಮುನ್ನವೇ ಪಡೆದುಕೊಳ್ಳುವುದು ಈಗ ನಮ್ಮ ಮುಂದಿರುವ ಸವಾಲು

***

ಭಾರತವು ಚೀನಾವನ್ನು ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿ 2023ರಲ್ಲಿಯೇ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆ ವಿಭಾಗವು ಅಂದಾಜಿಸಿದೆ. ಈ ಮೊದಲಿನ ಅಂದಾಜಿಗಿಂತ ನಾಲ್ಕು ವರ್ಷ ಮೊದಲೇ ಭಾರತವು ಗರಿಷ್ಠ ಜನಸಂಖ್ಯೆಯ ದೇಶವಾಗಲಿದೆ ಎಂದು ವರದಿ ಹೇಳಿದೆ. ಇದು, ದೇಶದ ಜನಸಂಖ್ಯೆ ಹೆಚ್ಚಳದ ಸವಾಲಿನ ಮೇಲೆ ಗಮನ ಕೇಂದ್ರೀಕರಣವಾಗುವಂತೆ ಮಾಡಿದೆ. ಭಾರತದ ಜನಸಂಖ್ಯೆಯು ಮುಂದಿನ ವರ್ಷ 142.9 ಕೋಟಿ ಆಗಲಿದ್ದು, ಚೀನಾದ ಜನಸಂಖ್ಯೆಯು 142.6 ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯಲ್ಲಿ ಚೀನಾವನ್ನು ಭಾರತವು ಹಿಂದಿಕ್ಕಲು ಭಾರತದ ಜನಸಂಖ್ಯೆಯಲ್ಲಿ ಆಗಲಿರುವ ಭಾರಿ ಏರಿಕೆಯೇನೂ ಕಾರಣವಲ್ಲ. ಚೀನಾದ ಜನಸಂಖ್ಯೆ ಗಣನೀಯವಾಗಿ ಇಳಿಕೆ ಆಗಿರುವುದು ಅದಕ್ಕೆ ಕಾರಣ. 2050ರವರೆಗೂ ಭಾರತದ ಜನಸಂಖ್ಯೆ ಏರುಗತಿಯಲ್ಲೇ ಇರಲಿದೆ. ಆ ಹೊತ್ತಿಗೆ ಭಾರತದ ಜನಸಂಖ್ಯೆಯು 166.8 ಕೋಟಿಗೆ ತಲುಪಲಿದೆ. ಆ ಸಂದರ್ಭದಲ್ಲಿ ಚೀನಾದ ಜನಸಂಖ್ಯೆಯು 131.7 ಕೋಟಿಯಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಜಗತ್ತಿನ ಜನಸಂಖ್ಯೆಯು ಏರಿಕೆಯಾಗಿದೆ. ಜಗತ್ತಿನ ಒಟ್ಟು ಜನಸಂಖ್ಯೆಯು ಈ ವರ್ಷದ ನವೆಂಬರ್‌ ಹೊತ್ತಿಗೆ 800 ಕೋಟಿಗೆ ಏರಲಿದೆ.

ಮಕ್ಕಳನ್ನು ಪಡೆಯುವ ಒಟ್ಟು ಫಲವಂತಿಕೆ ದರವನ್ನು (ಟಿಎಫ್‌ಆರ್‌) ಇಳಿಕೆ ಮಾಡಿರುವುದಕ್ಕೆ ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗವು ಭಾರತವನ್ನು ಶ್ಲಾಘಿಸಿದೆ. ಒಟ್ಟು ಫಲವಂತಿಕೆ ದರವು ಸಂತಾನೋತ್ಪತ್ತಿ ವಯೋಮಾನದ ಪ್ರತಿಯೊಬ್ಬ ಮಹಿಳೆಯು ಮಕ್ಕಳನ್ನು ಪಡೆಯುವ ಸರಾಸರಿ ಸಾಮರ್ಥ್ಯದ ಸೂಚ್ಯಂಕ. ಜನಸಂಖ್ಯೆಯನ್ನು ಈಗ ಇರುವ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಲು ಬೇಕಾದ ಟಿಎಫ್‌ಆರ್‌ 2.1 ಆಗಿದೆ. ಆದರೆ, ಭಾರತದ ಈಗಿನ ಟಿಎಫ್‌ಆರ್‌ 2.0 ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌) ಇತ್ತೀಚಿನ ವರದಿ ಹೇಳಿದೆ. 1950ರ ದಶಕದಲ್ಲಿ ಭಾರತದಲ್ಲಿನ ಒಟ್ಟು ಫಲವಂತಿಕೆ ದರವು 6ರಷ್ಟು ಇತ್ತು. ಯಾವುದೇ ಬಲವಂತದ ಕ್ರಮಗಳನ್ನು ಜನರ ಮೇಲೆ ಹೇರದೆಯೇ ಈ ದರವನ್ನು ಈಗಿನ 2ಕ್ಕೆ ಇಳಿಸಲಾಗಿದೆ. ಕೆಲವು ರಾಜ್ಯಗಳಲ್ಲಿನ ಫಲವಂತಿಕೆಯ ಸರಾಸರಿ ದರವನ್ನು ಕೆಳಕ್ಕೆ ತರಬೇಕಾಗಿದೆ. ಆ ರಾಜ್ಯಗಳೆಂದರೆ ಉತ್ತರಪ‍್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಈ ಮೂರು ರಾಜ್ಯಗಳೂ ಸೇರಿವೆ. ಜನರಿಗೆ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ ಸೇವೆ, ವಸತಿ, ಉದ್ಯೋಗ ಒದಗಿಸುವುದೇ ಫಲವಂತಿಕೆಯ ಸರಾಸರಿ ದರವನ್ನು ಕಡಿಮೆ ಮಾಡುವುದಕ್ಕೆ ಇರುವ ಮಾರ್ಗ ಎಂಬುದನ್ನು ಭಾರತದ ಅನುಭವವೇ ತೋರಿಸಿಕೊಟ್ಟಿದೆ. ಅತ್ಯುತ್ತಮ ಫಲಿತಾಂಶ ಪಡೆಯುವುದಕ್ಕಾಗಿ ಈ ಎಲ್ಲ ಸೌಲಭ್ಯಗಳನ್ನು ಒದಗಿಸುವಾಗ ಮಹಿಳೆಯರು ಮತ್ತು ಮಕ್ಕಳ ಮೇಲೆ ಗಮನ ಕೇಂದ್ರೀಕರಿಸ
ಬೇಕು. ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಆರ್ಥಿಕ ಪ್ರಗತಿ ದರ ಕಡಿಮೆ ಇದೆ ಎಂಬುದು ಕೂಡ ಗಮನಾರ್ಹ. ಜನಸಂಖ್ಯೆ ಹೆಚ್ಚಳವು ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯಿಂದಾಗಿ ಜನಸಂಖ್ಯೆಯು ತನ್ನಿಂತಾನೇ ಕುಗ್ಗುತ್ತದೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಜನಸಂಖ್ಯೆ ಬೆಳವಣಿಗೆಯನ್ನು ಸಮಾಜದ ಕೆಲವು ವರ್ಗಗಳ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಲು ಯತ್ನಿಸಿರುವುದು ದುರದೃಷ್ಟಕರ. ಕೆಲವು ಸಮುದಾಯಗಳ ಜನಸಂಖ್ಯೆಯ ಹೆಚ್ಚಳವು ‘ಜನಸಂಖ್ಯಾ ಅಸಮತೋಲನ’ಕ್ಕೆ ಕಾರಣವಾಗಬಹುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಹೇಳಿದ್ದಾರೆ. ಜನಸಂಖ್ಯಾ ಹೆಚ್ಚಳವನ್ನು ಕೆಲವು ವರ್ಗಗಳ ವಿರುದ್ಧ ಬಳಸಿಕೊಳ್ಳುವ ಪ್ರಯತ್ನವಾಗಿ ಇದನ್ನು ನೋಡಬಹುದು. ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು, ಜನಸಂಖ್ಯಾ ಸ್ಫೋಟಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ. ದೇಶದಲ್ಲಿ ಜನಸಂಖ್ಯಾ ಸ್ಫೋಟವಾಗಲೀ ಜನಸಂಖ್ಯಾ ಅಸಮತೋಲನವಾಗಲೀ ಇಲ್ಲ. ಇಲ್ಲಿ ಇರುವುದು ರಾಜ್ಯಗಳ ನಡುವೆ ಅಸಮತೋಲನ ಮಾತ್ರ. ಮುಸ್ಲಿಂ ಸಮುದಾಯದ ಮಹಿಳೆಯರ ಫಲವಂತಿಕೆಯ ಸರಾಸರಿ ದರವು ಇತರ ಸಮುದಾಯಗಳಿಗೆ ಹೋಲಿಸಿದರೆ ಕಳೆದ ಎರಡು ದಶಕಗಳಲ್ಲಿ ಗಮನಾರ್ಹವಾಗಿ ತಗ್ಗಿದೆ. ಆದರೆ, ಸಾಮಾನ್ಯವಾಗಿ ಇದಕ್ಕೆ ವ್ಯತಿರಿಕ್ತವಾದ ಗ್ರಹಿಕೆ ಜನರಲ್ಲಿ ಇದೆ. ಮುಸ್ಲಿಮರ ಫಲವಂತಿಕೆಯ ಸರಾಸರಿ ದರವು 1992–93ರಲ್ಲಿ 4.4ರಷ್ಟು ಇತ್ತು. ಇದು 2019–20ರಲ್ಲಿ 2.3ಕ್ಕೆ ಇಳಿದಿತ್ತು. ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿ ಅವಕಾಶಗಳನ್ನು ಎಲ್ಲ ಸಮುದಾಯಗಳಿಗೆ ಒದಗಿಸುವುದು ಈಗಿನ ಅಗತ್ಯವಾಗಿದೆ. ಹೆಚ್ಚಿನ ಜನಸಂಖ್ಯೆಯಿಂದ ದೊರೆಯಬಹುದಾದ ಅನುಕೂಲಗಳನ್ನು, ಆ ಅವಕಾಶಗಳು ಮರೆಯಾಗುವ ಮುನ್ನ ಪಡೆದುಕೊಳ್ಳುವುದೇ ಈಗ ನಮ್ಮ ಮುಂದೆ ಇರುವ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT