ಭಾನುವಾರ, ಮಾರ್ಚ್ 29, 2020
19 °C

ಸಂಪಾದಕೀಯ| ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಬೇಕು ಬದ್ಧತೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಘಟ್ಟಗಳು. ಈ ಎರಡೂ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳು, ಮುಂದಿನ ಕಲಿಕೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ, ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಗಂಭೀರವಾಗಿ ಪರಿಗಣಿಸುತ್ತಾರೆ. ಪರೀಕ್ಷೆ ನಡೆಸುವವರಿಗೂ ಈ ಪರೀಕ್ಷೆಗಳನ್ನು ಸುಸೂತ್ರವಾಗಿ ಆಯೋಜಿಸುವುದು ಸವಾಲಿನ ಕೆಲಸ. ಎಸ್ಎಸ್ಎಲ್‌ಸಿಯ ಈ ಸಲದ ಪೂರ್ವಸಿದ್ಧತಾ ಪರೀಕ್ಷೆಯ ಕೆಲವು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತಳಮಳ ಮೂಡಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್‌ 27ರಿಂದ ಆರಂಭವಾಗಲಿದೆ. ಆ ಸಂದರ್ಭದಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ವಿದ್ಯಾರ್ಥಿಗಳ ಕೊರಳಿಗೆ ಇಲ್ಲಸಲ್ಲದ ರಗಳೆ ಸುತ್ತಿಕೊಳ್ಳುತ್ತದೆ ಎಂಬ ಕಳವಳ ಪೋಷಕರಲ್ಲಿ ಇದೆ. ಈ ಹಿಂದೆ ನಡೆದ ಸೋರಿಕೆ ಪ್ರಕರಣಗಳು ಇಂತಹ ಅನುಮಾನ ಮೂಡಲು ಕಾರಣವಾಗಿವೆ. ಸ್ಮಾರ್ಟ್‌ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಈ ರೀತಿಯ ಸೋರಿಕೆಗೆ ಬಳಕೆಯಾಗಿದ್ದವು. ಈ ವರ್ಷದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ‘ಹಲೋ ಆ್ಯಪ್‌’ನಲ್ಲಿ ಸೋರಿಕೆಯಾಗಿವೆ. ಕೆಲವು ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೇ ಇಂತಹ ಸೋರಿಕೆಯ ಹಿಂದೆ ಇರುವುದು ಕಳವಳಕಾರಿ ವಿದ್ಯಮಾನ. ಈ ಬಗೆಯ ಸೋರಿಕೆಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೇ ಎಸ್ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗೆ ಸಂಬಂಧಿಸಿ ಕೆಲವು ಬಿಗಿ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ದ್ವಿತೀಯ ಪಿಯು ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರನ್ನು ಬಿಟ್ಟು ಉಳಿದ ಯಾರೂ ಮೊಬೈಲ್‌ ಫೋನ್‌ ಇರಿಸಿಕೊಳ್ಳಬಾರದು ಎಂಬ ನಿಯಮ ರೂಪಿಸಲಾಗಿದೆ. ಪ್ರಾಂಶುಪಾಲರು ಕೂಡ ‘ಬೇಸಿಕ್’ ಮೊಬೈಲ್ ಫೋನ್ ಮಾತ್ರ ಇರಿಸಿಕೊಳ್ಳಬಹುದು. ‘ಬೇಸಿಕ್ ಕ್ಯಾಲ್‌ಕ್ಯುಲೇಟರ್’ ಅಲ್ಲದೆ ಬೇರೆ ಯಾವ ವಿದ್ಯುನ್ಮಾನ ಸಾಧನವನ್ನೂ ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಕೂಡದು ಎಂದು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.  ಪ್ರಶ್ನೆಪತ್ರಿಕೆ ಸೋರಿಕೆ, ಮೊಬೈಲ್‌ ಫೋನ್‌ ಬಳಕೆ, ನಕಲು ಮಾಡುವುದು, ಬದಲಿ ವ್ಯಕ್ತಿ ಪರೀಕ್ಷೆ ಬರೆಯುವುದು ಇವೇ ಮೊದಲಾದ ಅಕ್ರಮಗಳಲ್ಲಿ ತೊಡಗಿದವರಿಗೆ ಗರಿಷ್ಠ ಐದು ವರ್ಷಗಳವರೆಗೆ ಜೈಲುಶಿಕ್ಷೆ, ₹ 5 ಲಕ್ಷದವರೆಗೆ ದಂಡ ವಿಧಿಸುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ನೀಡಿರುವ ಎಚ್ಚರಿಕೆಯು ಅಕ್ರಮ ತಡೆಗೆ ನೆರವಾಗಬಹುದು.

ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿಯೂ ಯಾವುದೇ ಬಗೆಯ ಅಕ್ರಮ ನಡೆಯದಂತೆ ಸಂಬಂಧಪಟ್ಟ ಮಂಡಳಿಯು ನೋಡಿಕೊಳ್ಳಬೇಕು. ಈ ದಿಸೆಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಆತಂಕಪಡುವ ಅಗತ್ಯ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಈ ಭರವಸೆಯು ಅಷ್ಟೇ ಬದ್ಧತೆಯಿಂದ ಕೃತಿಗೆ ಇಳಿದರೆ, ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಲ್ಲಿ ಸಾರ್ಥಕಭಾವ ಮೂಡುತ್ತದೆ. ಶಾಲೆಗಳ ಫಲಿತಾಂಶ ಪ್ರಮಾಣ ಹೆಚ್ಚಿಸುವುದಕ್ಕಾಗಿ ಕೆಲವು ಶಾಲಾ ಆಡಳಿತ ಮಂಡಳಿಗಳೇ ಸಾಮೂಹಿಕ ನಕಲಿಗೆ ಸಹಕರಿಸುವ ಪ್ರವೃತ್ತಿ ಇದೆ ಎಂಬ ಮಾತು ಇದೆ. ಅದಕ್ಕೆ ತಡೆಯೊಡ್ಡಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ವದಂತಿ ಹಬ್ಬಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ವದಂತಿಗಳು ಇಲ್ಲಸಲ್ಲದ ಗೊಂದಲಕ್ಕೆ ಕಾರಣವಾಗುವುದರಿಂದ ಅವುಗಳನ್ನು ನಿಗ್ರಹಿಸುವ ಉಪಕ್ರಮ ಅಗತ್ಯ. ಪೂರ್ವಸಿದ್ಧತಾ ಪರೀಕ್ಷೆಯಲ್ಲಿಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಪ್ರಕರಣವನ್ನು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕು. ಅಕ್ರಮ ನಿಗ್ರಹಕ್ಕೆ ಎಲ್ಲ ಬಗೆಯ ಬಿಗಿ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳು ನಿರಾಳವಾಗಿ ಪರೀಕ್ಷೆ ಬರೆಯಲು ಅನುವಾಗಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು