ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೊರೊನಾ ಸೋಂಕಿನ ಕಣ್ಣಾಮುಚ್ಚಾಲೆ ಇದು ಸ್ವಯಂ ಎಚ್ಚರಿಕೆಯ ಸಮಯ

Last Updated 22 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಚೀನಾ, ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಉಲ್ಬಣಗೊಳ್ಳುತ್ತಿರುವುದು ಭಾರತಕ್ಕೆ ಮುನ್ನೆಚ್ಚರಿಕೆಯಂತಿದೆ. ಚೀನಾದಲ್ಲಿ ಕೊರೊನಾ ಬಾಧೆಯಿಂದ ಆಸ್ಪತ್ರೆಗಳಿಗೆದಾಖಲಾಗುತ್ತಿರುವವರ ಸಂಖ್ಯೆ ಹಾಗೂ ಸಾವುನೋವಿನ ಸುದ್ದಿಗಳು ಆತಂಕ ಹುಟ್ಟಿಸುವಂತಿದ್ದು, ಎರಡನೇ ಅಲೆಯ ಸಂದರ್ಭದಲ್ಲಿ ಭಾರತ ಎದುರಿಸಿದ್ದ ಸಂಕಷ್ಟವನ್ನು ನೆನಪಿಸುವಂತಿವೆ. ನೆರೆಯ ದೇಶದಲ್ಲಿನ ಆರೋಗ್ಯ ಕ್ಷೇತ್ರದ ಏದುಸಿರು, ಮುಂಜಾಗ್ರತಾ ಕ್ರಮಗಳನ್ನು ನಮ್ಮಲ್ಲಿಯೂ ಕೈಗೊಳ್ಳುವ ಅನಿವಾರ್ಯವನ್ನು ಸೃಷ್ಟಿಸಿದೆ. ಕೋವಿಡ್‌ನ ಈವರೆಗಿನ ಅಲೆಗಳನ್ನು ಎದುರಿಸಿದ ಅನುಭವ ಈಗ ನಮ್ಮ ಜೊತೆಗಿದೆ. ಕೋವಿಡ್‌ ವ್ಯಾಕ್ಸಿನ್‌ ಅನ್ನು ಹೆಚ್ಚಿನ ನಾಗರಿಕರು ಪಡೆದಿರುವುದರಿಂದಾಗಿ, ಈ ಸಲ ಕೊರೊನಾ ಸೋಂಕು ಹೆಚ್ಚಿನ ಉಪದ್ರವವನ್ನು ಉಂಟು ಮಾಡದಿರಬಹುದು.

ಪ್ರಸ್ತುತ, ದೇಶದಲ್ಲಿನ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,400ರ ಆಸುಪಾಸಿನಲ್ಲಿದೆ. ಈ ಸಂಖ್ಯೆ ಕೂಡ ಆತಂಕ ಹುಟ್ಟಿಸುವಂತಹದ್ದಲ್ಲ. ಆದರೆ, ಯಾವುದೇ ಅಪಾಯಕ್ಕೆ ಆಸ್ಪದ ಕೊಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಕೊರೊನಾದ ಹಿಂದಿನ ಅಲೆಗಳು ಕಲಿಸಿರುವ ಪಾಠವನ್ನು ಯಾರೂ ಸುಲಭವಾಗಿ ಮರೆಯುವಂತಿಲ್ಲ. ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟ ತೀವ್ರವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ನಮ್ಮ ಎಣಿಕೆಗಳನ್ನೆಲ್ಲ ಬುಡಮೇಲು ಮಾಡುವಂತೆ ಕೊರೊನಾ ರೂಪಾಂತರ ತಳಿಗಳು ವರ್ತಿಸುವುದರಿಂದ, ಸಂಭಾವ್ಯ ಬಿಕ್ಕಟ್ಟನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ನಡೆಸುವುದು ಅನಿವಾರ್ಯ. ಪ್ರಸಕ್ತ ಶೀತಗಾಳಿಯ ವಾತಾವರಣವೂ ಕೊರೊನಾ ಸೋಂಕು ಹರಡಲು ಅನುಕೂಲಕರವಾಗಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಜನ ಗುಂಪುಗೂಡುವ ಸಾಧ್ಯತೆಯಿದೆ. ರಾಜ್ಯದಲ್ಲಿ ಜನವರಿಯಿಂದ ಜಾತ್ರೆಗಳ ಋತು ಆರಂಭವಾಗುತ್ತದೆ. ಚುನಾವಣಾ ವರ್ಷವಾಗಿರುವುದರಿಂದ, ರಾಜಕೀಯ ಸಭೆ–ಸಮಾವೇಶಗಳೂ ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತವೆ. ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ. ಲಕ್ಷಾಂತರ ಜನ ಭಾಗವಹಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ಮೊದಲ ವಾರದಲ್ಲಿ ಆಯೋಜನೆಗೊಂಡಿದೆ.

ಈ ಎಲ್ಲ ಚಟುವಟಿಕೆಗಳೂ ಸೋಂಕಿಗೆ ಆಹ್ವಾನ ಕೊಡುವಂತೆಯೇ ಇವೆ. ಕಳೆದ ಎರಡು– ಮೂರು ವರ್ಷಗಳಿಂದ ಸಾರ್ವಜನಿಕ ಸಂಭ್ರಮಗಳು ಕೋವಿಡ್‌ ಕಾರಣದಿಂದಾಗಿ ಕೇವಲ ಔಪಚಾರಿಕ ಆಚರಣೆಗೆ ಸೀಮಿತವಾಗಿದ್ದವು. ಧಾರ್ಮಿಕ–ಸಾಂಸ್ಕೃತಿಕ ಆಚರಣೆಗಳು ಇದೀಗ ಅದ್ಧೂರಿಯಾಗಿ ನಡೆಯುವ ಸಾಧ್ಯತೆಗಳಿವೆ. ಅವುಗಳಿಗೆ ಕಡಿವಾಣ ಹಾಕಬೇಕೆನ್ನುವುದು ಪ್ರಾಯೋಗಿಕವಾಗಿ ಸರಿಯಾದ ಯೋಚನೆಯಲ್ಲ. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಾರ್ಯಕ್ರಮಗಳನ್ನು ಆಚರಿಸುವುದು ಜಾಣತನ. ಮಾಸ್ಕ್‌ ಕಡ್ಡಾಯವಾಗಿ ಧರಿಸುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ಪಾಲಿಸುವುದು ಮತ್ತೆ ನಮ್ಮ ದೈನಂದಿನ ಜೀವನದ ಭಾಗವಾಗಬೇಕಾಗಿದೆ. ಕೊರೊನಾ ಮಾತ್ರವಲ್ಲ, ಸುಲಭವಾಗಿ ಹರಡುವ ನೆಗಡಿ, ಕೆಮ್ಮಿನಂತಹ ಸೋಂಕುಗಳನ್ನು ತಡೆಗಟ್ಟಲೂ ಮಾಸ್ಕ್‌ ಬಳಕೆ ಅನುಕೂಲಕರ.

ಚೀನಾದಲ್ಲಿ ವ್ಯಾಪಕವಾಗಿರುವ ಓಮೈಕ್ರಾನ್‌ನ ಉಪತಳಿ ‘ಬಿಎಫ್‌.7’ ಸೋಂಕಿನ ಪ್ರಕರಣಗಳು ಭಾರತದಲ್ಲಿ ವಿರಳವಾಗಿಯಾದರೂ ಕಾಣಿಸಿಕೊಂಡಿವೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಹೊಸ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಹೊಸ ಕೋವಿಡ್‌ ಪ್ರಕರಣಗಳನ್ನುಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೈಯೆಲ್ಲ ಕಣ್ಣಾಗಿ ನಿರ್ವಹಿಸಬೇಕಾಗಿದೆ. ಅರ್ಹರ ಪೈಕಿಶೇ 27ರಿಂದ 28ರಷ್ಟು ಮಂದಿ ಮಾತ್ರ ಬೂಸ್ಟರ್‌ ಲಸಿಕೆ ಪಡೆದಿದ್ದಾರೆ. ಲಸಿಕೆಯ ಸುರಕ್ಷತಾ ವಲಯದಿಂದ ದೂರ ಉಳಿದವರೂ ಲಸಿಕೆ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಬೇಕು. ವಿದೇಶಗಳಿಂದ ಬರುವ ಪ್ರಯಾಣಿಕರನ್ನು, ವಿಶೇಷವಾಗಿ ಸೋಂಕು ಉಲ್ಬಣಗೊಂಡಿರುವ ಪ್ರದೇಶಗಳಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು.

ಅಗತ್ಯ ಔಷಧಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದರ ಜೊತೆಗೆ, ವೈದ್ಯಕೀಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸುವುದಕ್ಕೆ ಆದ್ಯತೆ ನೀಡಬೇಕು. ಜನಸಾಮಾನ್ಯರ ಬದುಕನ್ನು ಬುಡಮೇಲು ಮಾಡುವ ಮತ್ತೊಂದು ಲಾಕ್‌ಡೌನ್‌ಗೆ ಯಾವ ಅವಕಾಶವನ್ನೂ ಸರ್ಕಾರ ಕಲ್ಪಿಸಬಾರದು. ಕೊರೊನಾ ವಿರುದ್ಧದ ಹೋರಾಟ ಸಾಮುದಾಯಿಕವಾದುದಾದರೂ, ವೈಯಕ್ತಿಕ ಬದ್ಧತೆಯಿಲ್ಲದೆ ಆ ಹೋರಾಟ ಫಲಪ್ರದ ಆಗಲಾರದು.ಸೋಂಕನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಉದಾಸೀನ ಮಾಡದೆ ಪಾಲಿಸುವುದು ಅಗತ್ಯ. ಕೊರೊನಾ ನಿಯಂತ್ರಣದ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳ ಪಾತ್ರ ಮಹತ್ವದ್ದು. ರಾಜಕೀಯ ಸಮಾವೇಶಗಳನ್ನು ನಡೆಸುವಲ್ಲಿ ರಾಜಕೀಯ ಪಕ್ಷಗಳು ಹೊಣೆಗೇಡಿತನ ಪ್ರದರ್ಶಿಸಿರುವುದನ್ನು ಕೊರೊನಾದ ಹಿಂದಿನ ಅಲೆಗಳಲ್ಲಿ ನೋಡಿದ್ದೇವೆ. ಅವಿವೇಕದ ಮಾದರಿಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಎಲ್ಲರ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT